ರಾಜನಂತೆ ಮೆರೆದು ಬಡವಾಯಿತು ‘ಬಲ್ನಾಡು ಬದನೆ’
Team Udayavani, Feb 23, 2018, 12:33 PM IST
ಪುತ್ತೂರು: ವರ್ಷಗಳ ಹಿಂದೆ 15ಕ್ಕೂ ಹೆಚ್ಚು ಎಕ್ರೆಯಲ್ಲಿ ಬದನೆ ಬೆಳೆದ ಊರು ಪುತ್ತೂರು ತಾಲೂಕಿನ ಬಲ್ನಾಡು. ಅವಿಭಜಿತ ದ.ಕ. ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ‘ಬಲ್ನಾಡು ಬದನೆ’ ಎಂದರೆ ವಿಶೇಷ ಗೌರವ. ವಾರದಲ್ಲಿ 50 ಕ್ವಿಂಟಲ್ ಗೂ ಮಿಕ್ಕಿ ಮಾರಾಟವಾಗುತ್ತಿದ್ದ ಬಲ್ನಾಡು ಬದನೆ ಬೆಳೆ ಇಂದು ಅಕ್ಷರಶಃ ನೆಲಕಚ್ಚುವ ಸ್ಥಿತಿಗೆ ತಲುಪಿದೆ.
ಬಲ್ನಾಡು ಗ್ರಾಮದಲ್ಲಿ ಉಳ್ಳಾಳ್ತಿ ದೈವಸ್ಥಾನ ಸಮೀಪದ ರೈತರು 10 ಸಾವಿರಕ್ಕೂ ಮಿಕ್ಕಿ ಬದನೆ ಗಿಡಗಳನ್ನು ನೆಡುತ್ತಿದ್ದರು. ಒಬ್ಬ ಬೆಳೆಗಾರ ವಾರ್ಷಿಕ 1 ಲಕ್ಷ ರೂ.ಗೂ ಮಿಕ್ಕಿ ಆದಾಯ ಗಳಿಸಿದ್ದಿದೆ. ಪೇಟೆಂಟ್ ಇಲ್ಲದಿದ್ದರೂ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ತಲಾ 1ರಿಂದ 2 ಕೆ.ಜಿ. ತೂಗುವ ಬಲ್ನಾಡು ಬದನೆ ಜನಪ್ರಿಯವಾಗಿತ್ತು. ಆದರೆ, ಸದ್ಯ ಬಲ್ನಾಡು ಬದನೆ ನೆಲೆ ಕಳೆದು ಕೊಳ್ಳುತ್ತಿದೆ. ಬೆಳೆಯುವ ಪ್ರದೇಶವೂ 1-2 ಎಕ್ರೆಗೆ ಸೀಮಿತವಾಗಿದೆ.
ಏನಾಯಿತು ಬದನೆಗೆ?
ಸಭೆ, ಸಮಾರಂಭಗಳಲ್ಲಿ ಸಾಂಬಾರು ತಯಾರಿಸಲು ಬಳಕೆಯಾಗುವ ಬದನೆಗೆ ಬಿ.ಟಿ. ಬದನೆ ಬಂದ ಬಳಿಕ ಸಾಕಷ್ಟು ಪೆಟ್ಟು ಬಿದ್ದಿದೆ. ಈ ಮಧ್ಯೆ ಚಿಕ್ಕಮಗಳೂರು ಭಾಗದಿಂದ ಬಲ್ನಾಡು ಬದನೆ ಯಂತಹ ತಳಿ ಕರಾವಳಿ ಭಾಗಕ್ಕೆ ಆವಕವಾಗುತ್ತಿದ್ದು, ಈ ಬದನೆಯ ಒಳಭಾಗದಲ್ಲಿ ಹುಳಗಳು ಕಾಣಿಸುತ್ತಿವೆ. ಸಹಜವಾಗಿಯೇ ಬದನೆಯ ಮಾರಾಟಕ್ಕೂ ಪೆಟ್ಟು ಬಿದ್ದಿದೆ.
ಕೆಡ್ವಾಸದ ಅವಧಿಯಲ್ಲಿ ಎಲ್ಲಾ ಗುಣ ಮಟ್ಟದ ಬದನೆ ಕನಿಷ್ಠ 30-40 ರೂ. ತನಕ ಮಾರಾಟವಾಗುತ್ತಿತ್ತು. ಈ ವರ್ಷ 10 ರೂ. ದಾಟಲೇ ಇಲ್ಲ. ಬೇಡಿಕೆಯೂ ಕಡಿಮೆಯಾಗಿತ್ತು. ಮೌಡ್ಯದ ಕಾರಣದಿಂದ ಸಾಂಪ್ರದಾಯಿಕ ಆಚರಣೆಗಳೂ ಇಲ್ಲದೆ ಬದನೆಕಾಯಿ ಮಾರಾಟಕ್ಕೆ ಹಿನ್ನಡೆಯಾಗಿದೆ. ಕೆ.ಜಿ.ಗೆ 20ರಿಂದ 25 ರೂ. ಲಭಿಸಿದರೆ ಮಾತ್ರ ಬದನೆ ಕೃಷಿಯಲ್ಲಿ ಲಾಭ ನಿರೀಕ್ಷೆ ಮಾಡಬಹುದು ಎಂಬುದು ಅಭಿಪ್ರಾಯ.
ಮಾರುಕಟ್ಟೆ ಸಮಸ್ಯೆ
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಊರಿನ ತರಕಾರಿಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಸಮಸ್ಯೆ. ಸಣ್ಣ ಪ್ರಮಾಣದಲ್ಲಿ ತರಕಾರಿ ಬೆಳೆದವರು ಸ್ಥಳೀಯ ಅಂಗಡಿ ಮುಂಗಟ್ಟುಗಳಿಗೆ, ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಬೆಳೆಯುವವರಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಊರಿನ ತರಕಾರಿಗೆ ಘಟ್ಟದ ತರಕಾರಿಗಿಂತ ದ್ವಿಗುಣ ದರವಿದ್ದರೂ ಮಧ್ಯವರ್ತಿಗಳ ಹಾವಳಿ ಮಧ್ಯೆ ಬೆಳೆಗಾರರಿಗೆ ಲಭಿಸುವುದು ಬಿಡಿಗಾಸು.
ಸರಕಾರಕ್ಕೆ ಕಾಳಜಿ ಇಲ್ಲ
ತರಕಾರಿ ಬೆಳೆಗೆ ಬೆಂಬಲ ಬೆಲೆ ನೀಡುವಂತಹ ಪ್ರೋತ್ಸಾಹದಾಯಕ ಕೆಲಸ ಸರಕಾರದಿಂದ ಆಗುತ್ತಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಇದ್ದರೂ ಕರಾವಳಿ ಭಾಗದಲ್ಲಿ ಈ ಮಾರುಕಟ್ಟೆ ವ್ಯವಸ್ಥೆ ವಾಣಿಜ್ಯ ಬೆಳೆ ಅಡಿಕೆಗೆ ಸೀಮಿತವಾಗಿದೆ.
ಸುರಿದು ಬಂದರು!
ಸುಮಾರು 1,250 ಬಲ್ನಾಡು ಬದನೆ ಗಿಡಗಳನ್ನು ನೆಟ್ಟಿರುವ ಸುಬ್ರಹ್ಮಣ್ಯ ಬಲಾ°ಡು ಅವರು ಈ ವಾರದ ಪುತ್ತೂರು ಸಂತೆಗೆ 4.50 ಕ್ವಿಂಟಲ್ ಬದನೆಯನ್ನು ಮಾರಾಟಕ್ಕೆ ಒಯ್ದಿದ್ದಾರೆ. ಸಾಮಾನ್ಯವಾಗಿ ಮುಂಜಾನೆ 4ರಿಂದ 7 ಗಂಟೆಯೊಳಗೆ ವ್ಯವಹಾರ ಕುದುರಿ ಮಾರಾಟವಾದರೆ ಈ ವಾರ ಕೆ.ಜಿ.ಗೆ 10 ರೂ.ಗೂ ಕೇಳಲಿಲ್ಲ. ಹೀಗಾಗಿ, ಬೇಸತ್ತು ಅಷ್ಟೂ ಬದನೆಯನ್ನು ಸಂತೆಯಲ್ಲಿ ಬಿಟ್ಟು ಬಂದಿದ್ದಾರೆ. 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದವರು ಈಗ ಬೇಸರಗೊಂಡು, ಬೆಳೆಯ ಪೋಷಣೆಯನ್ನೇ ಕೈಬಿಟ್ಟಿದ್ದಾರೆ.
ಪ್ರೋತ್ಸಾಹ ಬೇಕು
ಬೇಡಿಕೆ, ಪ್ರೋತ್ಸಾಹವಿದ್ದರೆ ಮಾತ್ರ ಬೆಳೆಗಾರರನಿಗೆ ಆಸಕ್ತಿ ಉಳಿಯಲು ಸಾಧ್ಯ. ಮಾರುಕಟ್ಟೆ ವ್ಯವಸ್ಥೆಗೆ ಸಂಬಂಧಿಸಿದಂತೆ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಧ್ಯವರ್ತಿಗಳಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ.
– ಮಾಧವ ಗೌಡ ಕಾಂತಿಲ,
ಪ್ರಗತಿಪರ ಕೃಷಿಕರು
ಬ್ರ್ಯಾಂಡ್ ಮಾಡಬೇಕು
ಇಲಾಖೆಯಿಂದ ತರಕಾರಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಆದರೆ ಸರಕಾರ ಫಾರ್ಮರ್ ಪ್ರಾಡಕ್ಟ್ ಆರ್ಗನೈಸೇಶನ್ (ಎಫ್‌ಪಿಒ)
ಯೋಜನೆ ಜಾರಿಗೊಳಿಸಿದ್ದು, ತರಕಾರಿ ಬೆಳೆಗಾರರು ಒಂದಷ್ಟು ಮಂದಿ ಒಟ್ಟು ಸೇವೆ ಉತ್ಪಾದಕ ಸಂಸ್ಥೆ ರಚಿಸಿಕೊಂಡು ಸಹಕಾರಿ ನಿಯಮದಂತೆ ನೋಂದಣಿ ಮಾಡಿಕೊಂಡರೆ ಇಲಾಖೆಯಿಂದಲೂ ಶೇ. 90ರಷ್ಟು ಲಭಿಸುತ್ತದೆ. ತಮ್ಮ ತರಕಾರಿಯನ್ನು ಬ್ರ್ಯಾಂಡ್ ಮಾಡಲು, ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಕಟಪಾಡಿ ‘ಮಟ್ಟು ಗುಳ್ಳ’ವನ್ನೂ ಇದೇ ರೀತಿ ಮಾಡಿದ ಕಾರಣ
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
– ದಿನೇಶ್, ಹಿರಿಯ ಸಹಾಯಕ
ತೋಟಗಾರಿಕಾ ನಿರ್ದೇಶಕರು
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.