ವಿಟ್ಲ : ಮಗನಿಗೆ ಗುಂಡು ಹಾರಿಸಿ, ತಂದೆ ಆತ್ಮಹತ್ಯೆ
Team Udayavani, Jan 15, 2017, 3:45 AM IST
ವಿಟ್ಲ: ಎಷ್ಟೋ ಮಂದಿ ಬದುಕುವು ದಕ್ಕಾಗಿ ಹೋರಾಟ ಮಾಡುತ್ತಿರುವಾಗ ವಿಟ್ಲದ ವ್ಯಕ್ತಿಯೋರ್ವರು ಸಾಕಷ್ಟು ಕೃಷಿ ಭೂಮಿ, ಮನೆ, ಧನಸಂಪತ್ತು ಇತ್ಯಾದಿಗಳನ್ನು ಹೊಂದಿಯೂ ನೆಮ್ಮದಿ ಕೆಡಿಸಿಕೊಂಡು, ಸಾಯುವುದಕ್ಕಾಗಿ ಹೋರಾಟ ನಡೆಸಿ, ಆತ್ಮಹತ್ಯೆಗೈದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ವಿಟ್ಲಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಕೃಷಿಕ ಇಂದ್ರ ಕುಮಾರ್(64) ಮನೆಯ ಮೆಟ್ಟಿಲಲ್ಲಿ ಕುಳಿತು ಪರವಾನಿಗೆಯಿರುವ ತನ್ನ ನಾಡಕೋವಿಯಲ್ಲೇ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಈ ಘಟನೆ ವಿಟ್ಲವನ್ನು ತಲ್ಲಣಗೊಳಿಸಿದೆ. ತನ್ನ ಕರುಳ ಕುಡಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಆತನ ಮೇಲೆ ಗುಂಡು ಹಾರಿಸಿ, ಆತ ಸಾವನ್ನಪ್ಪಿರಬಹುದೆಂದು ಊಹಿಸಿ, ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆದರೆ ಪುತ್ರ ಚಂದ್ರಹಾಸ ಸಣ್ಣಪುಟ್ಟ ಗಾಯಗೊಂಡು ಪಾರಾಗಿದ್ದಾರೆ.
ಘಟನೆ ಹೇಗಾಯಿತು ?
ಚಂದ್ರಹಾಸ ಅವರಿಗೆ ವಿಟ್ಲದಲ್ಲಿ ಜೀಪು ಬಾಡಿಗೆಗೆ ಓಡಿಸುವ ಕೆಲಸ. ಶುಕ್ರವಾರ ರಾತ್ರಿ 9.30ಕ್ಕೆ ಮನೆಗೆ ಆಗಮಿಸಿದ್ದು, ಊಟಕ್ಕೆ ಕುಳಿತಿದ್ದಾರೆ. ತಾಯಿ ಊಟ ಬಡಿಸುತ್ತಿದ್ದಾಗ, ಹೊರಗೆ ತಂದೆ ಬಂದೂಕನ್ನೆತ್ತಿದ ಶಬ್ದ ಚಂದ್ರಹಾಸನಿಗೆ ಕೇಳಿಸಿತು. ಅರ್ಧದಲ್ಲೇ ಊಟದಿಂದೆದ್ದು, ಒಳಗಿನ ಕಿಟಿಕಿಯಿಂದ ಸೂಕ್ಷ್ಮವಾಗಿ ಗಮನಿಸಿ, ಸ್ನಾನಕ್ಕೆ ತೆರಳಿದ್ದರು. ವಾಪಸ್ ಮನೆಯೊಳಗೆ ಪ್ರವೇಶಿಸುತ್ತಿದ್ದಾಗ ಚಂದ್ರಹಾಸ ಅವರ ಭುಜದಲ್ಲಿದ್ದ ಬಟ್ಟೆ ಕೆಳಗೆ ಜಾರಿತು. ಅದನ್ನು ಹೆಕ್ಕಲೆಂದು ಬಾಗುತ್ತಿದ್ದಂತೆ ಅಪ್ಪನ ಕೋವಿಯಿಂದ ಗುಂಡು ಸಿಡಿದಿದೆ. ಆತನ ಕಿವಿಗೆ ಅಪ್ಪಳಿಸಿದ ಭಾರೀ ಸದ್ದಿನಿಂದ ಕಂಗಾಲಾದರೂ ಸಾವರಿಸಿಕೊಂಡು ಮನೆಯ ಹೊರಗೆ ಓಡಿದರು. ಸ್ವಲ್ಪವೇ ಅಂತರದಲ್ಲಿ ಬಚಾವಾದ ಮಗ ಓಡುತ್ತಿರುವುದನ್ನು ಕಂಡು ಇಂದ್ರ ಕುಮಾರ್ ಹಿಂಬಾಲಿಸಿದ್ದರು. ಸುಮಾರು 150 ಮೀಟರ್ ದೂರದ ಮುಖ್ಯ ಗೇಟ್ ವರೆಗೆ ಓಡಿಸಿ, ಪಕ್ಕದ ಮನೆಯ ಗೇಟ್ ತೆರೆಯುವಂತೆ ಕೇಳುತ್ತಿದ್ದ ಪುತ್ರನ ಮೇಲೆ ಮತ್ತೂಂದು ಸುತ್ತಿನ ಗುಂಡು ಹಾರಿಸಿದ್ದರು. ಇತ್ತ ಅವರ ತಾಯಿ ಲಲಿತಾ ಅವರು ಮಗ ಚಂದ್ರಹಾಸನನ್ನು ಕೂಗಿಕರೆಯುತ್ತ ಅಳುತ್ತ ಹೊರಗೆ ತೆರಳಿದ್ದಾರೆ. ಮಗ ಪಕ್ಕದ ಮನೆಯ ಗೇಟ್ ತೆರೆಯುವುದನ್ನು ಕೈಬಿಟ್ಟು ಮುಖ್ಯ ರಸ್ತೆಯಲ್ಲಿ ಓಡಿದ್ದಾರೆ. ಈ ನಡುವೆ ಪೊಲೀಸರಿಗೆ ಮಾಹಿತಿ ದೊರೆತು, ತತ್‌ಕ್ಷಣ ಪೊಲೀಸರು ಅತ್ತಕಡೆ ಧಾವಿಸಿದ್ದಾರೆ ಚಂದ್ರಹಾಸ್ ಓಡಿ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಆತನನ್ನು ಜೀಪಿನಲ್ಲಿ ಕುಳ್ಳಿರಿಸಿ, ಮನೆಯತ್ತ ತೆರಳಿದರು. ಆಗ ಮನೆಯ ಮೆಟ್ಟಿಲಲ್ಲಿ ಇಂದ್ರಕುಮಾರ್ ನೆತ್ತರ ಮಡುವಿನಲ್ಲಿ ಬಿದ್ದಿದ್ದರು. ನಾಡಕೋವಿಯ ಮೇಲೆ ಬಿದ್ದಿದ್ದ ಅವರ ತಲೆ, ಮುಖ ಛಿದ್ರವಾಗಿತ್ತು.
ಜಗಳ ಇಂದು ನಿನ್ನೆಯದಲ್ಲ
ಸಾಮಾಜಿಕವಾಗಿ ಇಂದ್ರ ಕುಮಾರ್ ಚಿರಪರಿಚಿತರಾಗಿದ್ದರೂ ಎಲ್ಲರೊಡನೆ ಬೆರೆತು ಮಾತನಾಡುವವರಲ್ಲ. ಅವರ ಮೇಲೆ ಸಮಾಜಕಂಟಕನೆಂಬ ಅಭಿಪ್ರಾಯವೂ ಇಲ್ಲ. ಆದರೆ ಮನೆಯಲ್ಲಿ ಮಾತ್ರ ತಾನು ಹೇಳಿದ್ದೇ ನಡೆಯಬೇಕು ಎಂಬ ಸ್ವಭಾವದವರೆಂದು ಸ್ಥಳೀಯರ ಅಭಿಪ್ರಾಯ. ಸುಮಾರು 20 ವರ್ಷಗಳಿಂದ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ಮಾಡುವ ಇಂದ್ರ ಕುಮಾರ್ ತನ್ನ ಮನೆ ಮಂದಿ ಮೇಲೆ ಆಗಾಗ ಹರಿಹಾಯುತ್ತಲೇ ಇರುವ ಸ್ವಭಾವದವರೆನ್ನಲಾಗಿದೆ.
ಮಗನಿಗೆ ಕೊಲೆ ಬೆದರಿಕೆ
ಪುತ್ರನಿಗೆ ಆಗಾಗ ಬಂದೂಕು ತೋರಿಸಿ ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ ತಂದೆ ವಿರುದ್ಧ ಎರಡು ದಿನಗಳ ಹಿಂದೆ ವಿಟ್ಲ ಠಾಣೆ ಯಲ್ಲಿ ಚಂದ್ರಹಾಸ ದೂರು ದಾಖಲಿಸಿದ್ದರು. ಕೆಲವು ದಿನಗಳ ಹಿಂದೆ ಮಾತುಕತೆ ನಡೆದು ಈ ಪ್ರಕರಣ ಬಗೆಹರಿದಿತ್ತು. ಈ ನಡುವೆ ಪೊಲೀಸರು ಕೋವಿಯನ್ನು ಠಾಣೆಯಲ್ಲಿ ಹಾಜರುಪಡಿಸುವುದಕ್ಕೆ ತಿಳಿಸಿದ್ದರು.
ತನ್ನ ಪತ್ನಿ ಲಲಿತಾ ಬಂಧುಗಳ ಮನೆಗೆ ಕಾರ್ಯಕ್ರಮಕ್ಕೆ ಹೋಗುವ ವಿಚಾರದಲ್ಲಿ ಮಗ ಚಂದ್ರಹಾಸ ಬೆಂಬಲಿಸಿದರೆಂಬ ವಿಚಾರದಲ್ಲಿಯೂ ಒಂದು ದಿನ ಜಗಳ ತಾರಕಕ್ಕೇರಿದ್ದು, ಅದರ ವಿರುದ್ಧವೂ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಇಂತಹ ಹಲವು ರಾದ್ಧಾಂತಗಳು ಈ ಸನ್ನಿವೇಶಕ್ಕೆ ಕಾರಣವಾಯಿತೇ ?
ನಾಡಕೋವಿ ಕೈತಪ್ಪಿದಲ್ಲಿ ತನಗೆ ಭವಿಷ್ಯ ವಿಲ್ಲ ಎಂದು ತಿಳಿದುಕೊಂಡ ಇಂದ್ರ ಕುಮಾರ್ ಮಗನನ್ನು ಕೊಂದೇ ಹಾಜರು ಪಡಿಸಲು ತೀರ್ಮಾನಿಸಿದರೇ ? ಅಥವಾ ಬೆದರಿಸಲೆಂದು ಗುಂಡು ಹಾರಾಟ ನಡೆಸಿ, ಪತ್ನಿ ಅತ್ತಾಗ ಮಗ ಸತ್ತನೆಂದು ತಿಳಿದುಕೊಂಡು ಭಯಭೀತರಾಗಿ ತಾನೂ ಸಾಯುವುದೇ ಲೇಸು ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡರೇ? ಇತ್ಯಾದಿ ಸಂಶಯಗಳು ಪ್ರಶ್ನಾರ್ಥಕವಾಗಿಯೇ ಉಳಿದಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ, ಬಂಟ್ವಾಳ ಉಪ ವಿಭಾಗ ಸಹಾಯಕ ಅಧೀಕ್ಷಕ ರವೀಶ್, ವೃತ್ತ ನಿರೀಕ್ಷಕ ಮಂಜಯ್ಯ, ವಿಟ್ಲ ಠಾಣಾಧಿಕಾರಿ ನಾಗರಾಜ್ ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಆಗಮಿಸಿ ಬಂದೂಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇರಳಕಟ್ಟೆ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಮಹಾಬಲ ಶೆಟ್ಟಿ ಆಗಮಿಸಿ ದೇಹವನ್ನು ಪರಿಶೀಲಿಸಿದರು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ರಿಯೂ ಆತ್ಮಹತ್ಯೆ !
ಇಂದ್ರಕುಮಾರ್ ಅವರಿಗೆ ಒಟ್ಟು ಐವರು ಮಕ್ಕಳಿದ್ದು, ಹಿರಿಯ ಪುತ್ರ ಕೋಲಾರದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯದಲ್ಲಿದ್ದಾರೆ. ಎರಡನೆಯ ಪುತ್ರ ಚಂದ್ರಹಾಸ ಜೀಪು ಚಾಲಕ, ಪುತ್ರಿಯರಾದ ಕವಿತಾ ಅವರನ್ನು ಸುರತ್ಕಲ್, ಮಮತಾ ಅವರನ್ನು ಕಾಟುಕುಕ್ಕೆಗೆ ವಿವಾಹ ಮಾಡಿಕೊಡಲಾಗಿದೆ. ಹಿರಿಯ ಪುತ್ರಿ ಸುನಿತಾ ಅವರು ಸುಮಾರು ಇಪ್ಪತ್ತು ವರ್ಷದ ಹಿಂದೆ ಪ್ರೀತಿಸಿದಾತನ ಜತೆಗೆ ವಿವಾಹಕ್ಕೆ ಒಪ್ಪಿಗೆ ಸಿಗದೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಡು ಹಾರಿಸಿಕೊಂಡದ್ದು ಹೇಗೆ ?
ಇಂದ್ರಕುಮಾರ್ ಪುತ್ರನನ್ನು ಕೊಂದು ತಾನೂ ಸಾಯುವುದಾಗಿ ನಿರಂತರವಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಅದರಂತೆಯೇ ಶುಕ್ರವಾರ ಮಗನ ಮೇಲೆ ಎರಡು ಸುತ್ತು ಗುಂಡು ಹಾರಿಸಿ, ಆತ ಸತ್ತಿದ್ದಾನೆಂದು ತಿಳಿದು, ಬಳಿಕ ತಾನೂ ಕುತ್ತಿಗೆಗೆ ನಳಿಕೆ ಇಟ್ಟು ಕಾಲಿನಿಂದ ಟ್ರಿಗ್ಗರ್ ಒತ್ತಿ ಗುಂಡು ಹಾರಿಸಿಕೊಂಡಿರಬಹುದು. ಮೆಟ್ಟಿಲ ಮೇಲಿನ ಛಾವಣಿಯಲ್ಲಿ ರಕ್ತ, ಮಾಂಸದ ಗುರುತುಗಳು ಪತ್ತೆಯಾಗಿವೆ. ದೇರಳಕಟ್ಟೆಯಲ್ಲಿ ಶವಪರೀಕ್ಷೆಯ ಸಮಯದಲ್ಲಿ ಬಂದೂಕಿನಿಂದ ಹೊರಬಿದ್ದ ಗುಂಡಿನ ಕೆಲವು ಭಾಗಗಳು ತಲೆಯ ಭಾಗದಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.