‘600 ಗಿಡಕ್ಕೆ 500 ರೂ. ಪರಿಹಾರ ಅಸಮರ್ಥನೀಯ’
Team Udayavani, Sep 19, 2018, 11:49 AM IST
ಬಂಟ್ವಾಳ: ರೈತರ ಕೃಷಿ ಹಾನಿಯಲ್ಲಿ ಸರಕಾರದ ಪರಿಹಾರ ವಿತರಣೆ ನಮಗೆ ಅವಮಾನ ಮಾಡುವಂತಿದೆ. ಆರು ನೂರು ಅಡಿಕೆ ಗಿಡ ಹಾನಿ ಆಗಿರುವ ರೈತರಿಗೆ ಐದು ನೂರು ರೂ. ಪರಿಹಾರ ವಿತರಿಸಿದ ಕ್ರಮವನ್ನು ಸಮರ್ಥಿಸಿಕೊಳ್ಳಲಾಗದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಸೆ. 17ರಂದು ತಾ.ಪಂ. ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಅವರು, ತನ್ನ ಕ್ಷೇತ್ರದಲ್ಲಿ ಮನೆ ಸಂಪೂರ್ಣ ಹಾನಿಗೊಳಗಾಗಿ ಒಂದು ಲಕ್ಷಕ್ಕೂ ಅಧಿಕ ನಷ್ಟದ ಪರಿಹಾರ ಶಿಫಾರಸು ಆಗಿದ್ದರೂ ಬಂಟ್ವಾಳ ತಹಶೀಲ್ದಾರ್ ಕೇವಲ 5,000 ರೂ. ಮಂಜೂರಾತಿ ನೀಡಿದ್ದಾರೆ. ಇದನ್ನು ಸಮರ್ಥಿಸಿಕೊಳ್ಳುವಂತಿಲ್ಲ ಎಂಬ ವಿಚಾರ ಪ್ರಸ್ತಾವಿಸಿದಾಗ ಶಾಸಕರು ಈ ಪ್ರತಿಕ್ರಿಯೆ ನೀಡಿದರು.
ಸರಕಾರದ ಸಾಮಾನ್ಯ ನಿಯಮಾನುಸಾರ 5,000 ರೂ. ಪರಿಹಾರ ನೀಡಿದ್ದಾಗಿ ತಹಶೀಲ್ದಾರ್ ಹೇಳಿದಾಗ, ಜಿ.ಪಂ. ಸದಸ್ಯೆ, ‘ನೀವು ಮಾನವೀಯ ನೆಲೆಯಲ್ಲಿ ಪರಿಸ್ಥಿತಿಯನ್ನು ಗಮನಿಸಿ. ಬಡವರಿಗೆ ಸಹಾಯ ಮಾಡಿದಾಗ ನಿಮಗೆ ಯಾವುದೇ ಸಮಸ್ಯೆ ಬಾರದು’ ಎಂದರು. ಶಾಸಕರು ಇದನ್ನು ಬೆಂಬಲಿಸಿ, ಯಾವುದೇ ಅಧಿಕಾರಿಯ ತಪ್ಪಿಲ್ಲದೆ ಅವರ ಮೇಲೆ ಆಕ್ಷೇಪ ಬಂದರೆ ಕೊನೆಯ ತನಕ ಅವರ ಜತೆ ಇರುವುದಾಗಿ ಹೇಳಿದರು. ಅಧಿಕಾರಿಗಳು ಸರಕಾರದ ಸಾಮಾನ್ಯ ನಿಯಮದಂತೆ ಪರಿಹಾರ ನೀಡುವ ಬದಲು ಪ್ರಾಕೃತಿಕ ವಿಕೋಪದಲ್ಲಿ ಪರಿಹಾರ ವಿತರಣೆ ಮಾಡಿದರೆ 95 ಸಾವಿರ ರೂ. ನೀಡಲು ಸಾಧ್ಯವಿದೆ ಎಂದು ಅಂಕಿಅಂಶ ಸಹಿತ ಶಾಸಕರು ವಿವರಿಸಿದರು.
ಪ್ರಕೃತಿ ವಿಕೋಪದಡಿ ಬಂದಿರುವ ಹಣದಲ್ಲಿ ಖರ್ಚಾಗಿ ಎಷ್ಟು ಉಳಿದಿದೆ ಎಂದು ಪ್ರಶ್ನಿಸಿದಾಗ, 70 ಲಕ್ಷ ರೂ. ಉಳಿದಿದೆ ಎಂದು ತಹಶೀಲ್ದಾರ್ ವಿವರಿಸಿದರು. ‘ಇಷ್ಟೊಂದು ಹಣ ಉಳಿದಿರುವಾಗ ನೀವು ಯಾಕೆ ಮಾನವೀಯ ನೆಲೆಯಲ್ಲಿ ಅದನ್ನು ಅರ್ಹರಿಗೆ ನೀಡಬಾರದು’ ಎಂದಾಗ ಸಭೆಯಲ್ಲಿ ಒಂದಷ್ಟು ಹೊತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಪ್ರಶ್ನೋತ್ತರ ಮಾತುಕತೆ ನಡೆದು ಅಂತಿಮವಾಗಿ ಉಳಿಕೆ ಹಣವನ್ನು ಸರಕಾರಕ್ಕೆ ಕಟ್ಟುವುದಾಗಿ ತಹಶೀಲ್ದಾರ್ ತಿಳಿಸಿದರು.
ಇದಕ್ಕೆ ಆಕ್ಷೇಪಿಸಿದ ಜನಪ್ರತಿನಿಧಿಗಳು, ‘ಇದು ಸರಿಯಾದ ಉತ್ತರ ಅಲ್ಲ. ತಹಶೀಲ್ದಾರ್ ಅದನ್ನು ಪೂರ್ಣ ಉಪಯೋಗಿಸುವುದು ಹೇಗೆ ಎಂದು ಚಿಂತಿಸಿ ಕ್ರಮ ಕೈಗೊಳ್ಳಬೇಕು. ವೆಚ್ಚವಾಗದ ಹಣವನ್ನು ಹಿಂದಕ್ಕೆ ಕಟ್ಟುವುದು ಸುಲಭ. ಅದಕ್ಕೆ ತಹಶೀಲ್ದಾರ್ ಬೇಕಾಗಿಲ್ಲ’ ಎಂಬಿತ್ಯಾದಿ ಆಕ್ಷೇಪದ ಮಾತುಗಳು ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ರವೀಂದ್ರ ಕಂಬಳಿ, ಮಮತಾ ಅವರಿಂದ ವ್ಯಕ್ತವಾಯಿತು.
ತಹಶೀಲ್ದಾರ್ ಪುರಂದರ ಹೆಗ್ಡೆ ಇದೇ ಸಂದರ್ಭದಲ್ಲಿ ಪ್ರಮುಖ ಇನ್ನೊಂದು ಪ್ರಶ್ನೆಗೆ ಉತ್ತರಿಸಿ 94 ಸಿಯಲ್ಲಿ 20,789 ಮತ್ತು ಸಿಸಿಯಲ್ಲಿ 4,233 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಿಸಿಯಲ್ಲಿ 2,330, ಸಿಯಲ್ಲಿ 2,906 ಅರ್ಜಿಗಳ ವಿಲೇವಾರಿ ಬಾಕಿ ಇದೆ. ಸೆ.16ರ ತನಕ ಅರ್ಜಿ ಸ್ವೀಕಾರ ನಡೆದಿತ್ತು. ಹಾಗಾಗಿ ವಿಲೇವಾರಿ ತಡವಾಗಿದೆ ಎಂದು ವಿವರಿಸಿದರು.
ಸದಸ್ಯ ಎ.ಪಿ. ಅಬ್ದುಲ್ಲ ಮಾತನಾಡಿ, ಕುಮ್ಕಿ ಜಮೀನಿಗೆ ಹಕ್ಕುಪತ್ರ ಸಿಕ್ಕಿಲ್ಲ. ಶ್ಮಶಾನ ಮತ್ತು ಸರಕಾರದ ಜಮೀನುಗಳ ಬಗ್ಗೆ ಸ್ಪಷ್ಟವಾದ ನೀತಿ ಏನು ಎಂದು ಪ್ರಶ್ನಿಸಿದರು.
ಮಂಚಿ: ವೈದ್ಯರಿಲ್ಲ
ಮಂಚಿ ಆರೋಗ್ಯ ಕೇಂದ್ರ ಸಹಿತ ಒಟ್ಟು ನಾಲ್ಕು ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರತ ವೈದ್ಯಾಧಿಕಾರಿಗಳು ಇಲ್ಲ. ಮಂಚಿಗೆ ಖಾಸಗಿ ವೈದ್ಯಕೀಯ ಸಂಸ್ಥೆಯ ವೈದ್ಯಾಧಿಕಾರಿಗಳು ವಾರಕ್ಕೆ ಮೂರು ದಿನ ಬರುತ್ತಿದ್ದಾರೆ. ಉಳಿದ ಉಪ ಕೇಂದ್ರಗಳಿಗೆ ಇತರ ಆರೋಗ್ಯ ಕೇಂದ್ರಗಳ ವೈದ್ಯರು ಎರವಲು ಸೇವೆಯಲ್ಲಿ ಬರುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದರು. ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ , ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಹಶೀಲ್ದಾರ್ ಉಪಸ್ಥಿತರಿದ್ದರು. ತಾ.ಪಂ. ಇಒ ರಾಜಣ್ಣ ಸ್ವಾಗತಿಸಿ ವಂದಿಸಿದರು.
ಮೋಜಣಿ ಮಾಡಿಸಿ
ನರಿಕೊಂಬು ಗ್ರಾಮವನ್ನು ಮೋಜನಿ ಮಾಡಬೇಕು ಎಂದು ಕೆಡಿಸಿ ಸದಸ್ಯ ಉಮೇಶ ಬೋಳಂತೂರು ಆಗ್ರಹಿಸಿದರು. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಪ್ರಶ್ನಿಸುತ್ತಿದ್ದೇನೆ ಎಂದರು. ಇದಕ್ಕೆ ಸರ್ವೆ ಇಲಾಖೆ ಅಧಿಕಾರಿ ಉತ್ತರಿಸಿ, ಬಂಟ್ವಾಳ ತಾಲೂಕಿನ 83 ಗ್ರಾಮಗಳನ್ನು ತಲಾ ಹತ್ತರ ಪಟ್ಟಿಯಲ್ಲಿ ವಿಂಗಡಿಸಿಕೊಂಡು ಮೋಜನಿ ಮಾಡಲಾಗುತ್ತಿದೆ. ಈಗಾಗಲೇ ಸುಮಾರು ಒಂದೂವರೆ ವರ್ಷದಲ್ಲಿ ಮೂವತ್ತು ಗ್ರಾಮಗಳನ್ನು ಮೋಜನಿ ಕ್ರಿಯೆಗೆ ಒಳಪಡಿಸಿದೆ. ಜಿಲ್ಲಾಧಿಕಾರಿಗಳಿಂದ ಶಿಫಾರಸುಗೊಂಡು ಬರುವ ಗ್ರಾಮಗಳನ್ನು ಮೋಜನಿ ಮಾಡಲಾಗುವುದು. ಗ್ರಾಮಾಂತರ ಪ್ರದೇಶಗಳನ್ನು ಮೊದಲು ನಗರವನ್ನು ನಂತರದ ಹಂತದಲ್ಲಿ ಮೋಜನಿಗೆ ಸ್ವೀಕರಿಸಲಾಗುತ್ತದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.