ಬಂಟ್ವಾಳ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
1ನೇ ತರಗತಿಗೆ 102 ವಿದ್ಯಾರ್ಥಿಗಳು ಹೆಚ್ಚು ,1-10ನೇ ತರಗತಿಗೆ 98 ಮಂದಿ ಹೆಚ್ಚು
Team Udayavani, Nov 4, 2020, 12:47 PM IST
ಬಂಟ್ವಾಳ, ನ. 3: ಕೋವಿಡ್ ಬಳಿಕ ಸರಕಾರಿ ಶಾಲೆಗಳಿಗೆ ದಾಖಲಾತಿ ಏರಿಕೆಯಾಗಿದೆ. ಬಂಟ್ವಾಳ ತಾಲೂಕಿನಲ್ಲೂ ಈ ಬಾರಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಕುಸಿದರೆ ಸರಕಾರಿ ಶಾಲೆಯಲ್ಲಿ ಹೆಚ್ಚಾಗಿದೆ. 2020-21ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಗಳಲ್ಲಿ 1ನೇ ತರಗತಿಗೆ 2,478 ವಿದ್ಯಾರ್ಥಿಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 102 ವಿದ್ಯಾ ರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಿದ್ದಾರೆ. ಜತೆಗೆ 1ರಿಂದ 10ನೇ ತರಗತಿ ವರೆಗೂ ದಾಖಲಾತಿ ಹೆಚ್ಚಿದ್ದು, ಕಳೆದ ವರ್ಷಕ್ಕಿಂತ 98 ವಿದ್ಯಾರ್ಥಿಗಳು ಹೆಚ್ಚಿದ್ದಾರೆ.
ಸೆ. 23ರ ವರೆಗಿನ ಲೆಕ್ಕಾಚಾರದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸರಕಾರಿ ಶಾಲೆಗಳಲ್ಲೇ ದಾಖಲಾತಿ ಹೆಚ್ಚಿದೆ. ಎಲ್ಲ ರೀತಿಯ ಶಾಲೆಗಳ 1ನೇ ತರಗತಿಗೆ ಈ ವರ್ಷ 5,543 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದರೆ. ಕಳೆದ ವರ್ಷ 5,964 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ 421 ವಿದ್ಯಾರ್ಥಿಗಳುಕಡಿಮೆ ದಾಖಲಾದರೂ, ಸರಕಾರಿ ಶಾಲೆಗಳಲ್ಲಿ ಮಾತ್ರ ದಾಖಲಾತಿ ಹೆಚ್ಚಿದೆ. ಇದೀಗ ರಜೆ ಮುಗಿದ ಕಾರಣ ಇನ್ನೂ ಒಂದಷ್ಟು ವಿದ್ಯಾರ್ಥಿಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸುತ್ತವೆ.
ಅನುದಾನಿತ-ಖಾಸಗಿ ಇಳಿಕೆ : ಕಳೆದ ವರ್ಷ ಅನುದಾನಿತ ಶಾಲೆಗಳ 1ನೇ ತರಗತಿಗೆ 702 ವಿದ್ಯಾರ್ಥಿಗಳು ಸೇರ್ಪಡೆಯಾದರೆ, ಈ ಬಾರಿ 630 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗೆ ಕಳೆದ ವರ್ಷ 2,875 ವಿದ್ಯಾರ್ಥಿಗಳು ಸೇರಿದರೆ, ಈ ಬಾರಿ 2,435 ಮಂದಿ ಮಾತ್ರ ದಾಖಲಾಗಿದ್ದಾರೆ. 1ರಿಂದ 10ನೇ ತರಗತಿ ವರೆಗೆ ಅನುದಾನಿತ ಶಾಲೆಗಳಲ್ಲಿ ಈ ಬಾರಿ 9,936 ವಿದ್ಯಾರ್ಥಿಗಳಿದ್ದರೆ, ಕಳೆದ ವರ್ಷ 10,653 ವಿದ್ಯಾರ್ಥಿಗಳಿದ್ದರು. ಖಾಸಗಿ ಶಾಲೆಗಳಲ್ಲಿ ಈ ಬಾರಿ 24,188 ವಿದ್ಯಾರ್ಥಿಗಳಿದ್ದು, ಕಳೆದ ವರ್ಷ 24,912 ವಿದ್ಯಾರ್ಥಿಗಳಿದ್ದರು. ಎಲ್ಲ ರೀತಿಯ ಶಾಲೆಗಳು ಸೇರಿ ಕಳೆದ ವರ್ಷ 59,680 ವಿದ್ಯಾರ್ಥಿಗಳಿದ್ದರೆ, ಈ ವರ್ಷ 58,263 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಸರಕಾರಿ 23,297, ಅನುದಾನಿತ 9,936, ಖಾಸಗಿ 24,188, ಜವಹಾರ್ ನವೋದಯ 348, ಆಶ್ರಮ ಶಾಲೆ 130, ಮೊರಾರ್ಜಿ ದೇಸಾಯಿ 181, ಅಲ್ಪಸಂಖ್ಯಾಕ ಇಲಾಖೆ 183 ವಿದ್ಯಾರ್ಥಿಗಳಿದ್ದಾರೆ.
ಸರಕಾರಿ ಶಾಲೆಯತ್ತ ಹೆತ್ತವರ ಚಿತ್ತ :
ಬೆಳ್ತಂಗಡಿ: ಈ ವರ್ಷ ಸರಕಾರಿ ಶಾಲೆಯಲ್ಲಿ ದಾಖಲೀಕರಣ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಸರಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ದಾಖಲಾತಿ ಮಹತ್ತರ ಬದಲಾವಣೆ ಕಾಣದಿದ್ದರೂ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ದಾಖಲಾತಿ ಈ ವರ್ಷ ಏರಿಕೆ ಕಂಡಿರುವುದು ಶಿಕ್ಷಣ ಇಲಾಖೆಗೆ ಹರ್ಷ ತಂದಿದೆ.
ತಾಲೂಕಿನಲ್ಲಿ ಪ್ರಾಥಮಿಕ 179, ಪ್ರೌಢಶಾಲೆ 34 ಸೇರಿ 213 ಸರಕಾರಿ ಶಾಲೆಗಳಿವೆ. 2019-20ನೇ ಸಾಲಿನಲ್ಲಿ 1ರಿಂದ 7ನೇ ತರಗತಿಯಲ್ಲಿ 13,997 ಮಕ್ಕಳ ದಾಖಲಾತಿಯಿದ್ದು, 2020-21ನೇ ಸಾಲಿನಲ್ಲಿ 14,049 ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಪ್ರೌಢ ಶಾಲೆಯಲ್ಲಿ 2019-20 ನೇ ಸಾಲಿನಲ್ಲಿ 6,374 ವಿದ್ಯಾರ್ಥಿಗಳಿದ್ದು, 2020- 21ನೇ ಸಾಲಿನಲ್ಲಿ 6,514 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಂದರೆ ಪ್ರಾಥಮಿಕ ಶಾಲೆಯಲ್ಲಿ 52 ಹೆಚ್ಚು ವರಿ, ಪ್ರೌಢ ಶಾಲೆಯಲ್ಲಿ 140 ಹೆಚ್ಚುವರಿ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಎಲ್‌ಕೆಜಿ-56, ಯುಕೆಜಿ-41 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಸರಕಾರಿ ಶಾಲೆಗಳ ಅಂಕಿ ಅಂಶ :
ಸರಕಾರಿ ಶಾಲೆಗಳ 1ನೇ ತರಗತಿಗೆ ಈ ವರ್ಷ 2,478 ವಿದ್ಯಾರ್ಥಿಗಳು ದಾಖಲಾಗಿದ್ದು, ಕಳೆದ ವರ್ಷ 2,372 ಮಂದಿ ದಾಖಲಾಗಿದ್ದರು. 1ರಿಂದ 10ನೇ ತರಗತಿವರೆಗೆ ಈ ವರ್ಷ 23,297 ವಿದ್ಯಾರ್ಥಿಗಳಿದ್ದರೆ, ಕಳೆದ ವರ್ಷ 23,199 ವಿದ್ಯಾರ್ಥಿಗಳಿದ್ದರು. ಈ ವರ್ಷ 2ನೇ ತರಗತಿ 2,424(ಕಳೆದ ವರ್ಷ 2,300), 3ನೇ 2,347(1,805), 4ನೇ 1,841(2,245), 5ನೇ 2,303(2,431), 6ನೇ 2,370(2,404), 7ನೇ 2,391 (2,441), 8ನೇ 2,536(2,704), 9ನೇ 2,336(2,476), 10ನೇ 2,271(2,021) ವಿದ್ಯಾರ್ಥಿಗಳಿದ್ದಾರೆ. ಇಲ್ಲಿ 1ರಿಂದ 3ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ.
ಪುತ್ತೂರು, ಸುಳ್ಯದಲ್ಲೂ ದಾಖಲಾತಿ ಹೆಚ್ಚಳ: ಪುತ್ತೂರು, ನ. 3: ಈ ವರ್ಷ ಶಾಲಾರಂಭ ವಿಳಂಬಗೊಂಡಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪುತ್ತೂರು ತಾಲೂಕಿನಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಸ್ವಲ್ಪ ಹೆಚ್ಚಿದೆ. ಸುಳ್ಯದಲ್ಲಿ ವಸತಿಯುತ ಶಾಲೆಗಳ ಸಂಖ್ಯೆ ಹೆಚ್ಚಿರುವ ಕಾರಣ ಅಲ್ಲಿ ದಾಖಲಾತಿ ಕಡಿಮೆ ಇದೆ. ಆದರೂ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆ ಕಂಡಿದೆ. ತರಗತಿ ಪ್ರಾರಂಭದ ಬಳಿಕವಷ್ಟೇ ಮಕ್ಕಳ ಸಂಖ್ಯೆಯ ನಿಖರ ಅಂಕಿ ಅಂಶ ದೊರೆಯಲಿದೆ ಎಂದು ಉಭಯ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
ಒಂದನೇ ತರಗತಿಗೆ ಕಳೆದ ವರ್ಷಕ್ಕಿಂತ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿತ ಕಂಡಿಲ್ಲ ಎನ್ನುತ್ತಾರೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.
ಸುಳ್ಯದಲ್ಲಿ ವಸತಿಯುತ ಶಾಲೆಗಳಿದ್ದು, ಹೊರ ಜಿಲ್ಲೆಯ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆ ಇರುವುದರಿಂದ ಶೇಕಡಾವಾರು ಕಡಿಮೆ ಇದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ ಎನ್ನುತ್ತಾರೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ. ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದ್ದ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ದೇವರಹಳ್ಳಿ ಕಿ.ಪ್ರಾ. ಶಾಲೆಯು ಕಳೆದ ವರ್ಷ ಮುಚ್ಚಲ್ಪಟ್ಟಿತ್ತು. ಈ ಶೈಕ್ಷಣಿಕ ವರ್ಷಕ್ಕೆ 1ನೇ ಮತ್ತು 2ನೇ ತರಗತಿಗೆ ಒಟ್ಟು 6 ಮಕ್ಕಳ ದಾಖಲಾತಿ ಆಗಿ ಮುಚ್ಚಿದ ಶಾಲೆ ತೆರೆಯಲ್ಪಟ್ಟಿದೆ. 1963ರಲ್ಲಿ ಪ್ರಾರಂಭಗೊಂಡ ಈ ಶಾಲೆ ವಿದ್ಯಾರ್ಥಿಗಳ ಕೊರತೆ ಎದುರಿಸಿತ್ತು. ಮುಚ್ಚಿದ ಶಾಲೆಯನ್ನು ತೆರೆಯಲು ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ನೇತೃತ್ವದಲ್ಲಿ ಬಿಇಒ ಮಹಾದೇವ ಪ್ರಯತ್ನ ನಡೆಸಿದ್ದರು.
ಕಟೀಲು ಕಲಿತ ಶಾಲೆ ಪುನರಾರಂಭ : ಸಂಸದ ನಳಿನ್ ಕುಮಾರ್ ಕಟೀಲು ಪ್ರಾಥಮಿಕ ಶಿಕ್ಷಣ ಪಡೆದ ಸುಳ್ಯ ತಾಲೂಕಿನ ಮುಕ್ಕೂರು ಹಿ.ಪ್ರಾ. ಶಾಲೆಯಲ್ಲಿ 8ನೇ ತರಗತಿ ಈ ವರ್ಷದಿಂದ ಪುನಃ ಆರಂಭಗೊಳ್ಳಲಿದೆ. ಶಿಕ್ಷಕರ ಕೊರತೆಯಿಂದ ಈ ಹಿಂದಿನ 2 ವರ್ಷಗಳಲ್ಲಿ 7ನೇ ತರಗತಿ ತೇರ್ಗಡೆ ಹೊಂದಿ ವಿದ್ಯಾರ್ಥಿಗಳು ಟಿ.ಸಿ. ಪಡೆದು ಬೇರೆ ಶಾಲೆಗೆ ಸೇರುತ್ತಿದ್ದರು. ಈ ಬಗ್ಗೆ ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ಮುತುವರ್ಜಿ ವಹಿಸಿ ಅಗತ್ಯ ಶಿಕ್ಷಕರ ನೇಮಕಕ್ಕೆಕ್ರಮ ಕೈಗೊಂಡಿದ್ದರು. ಶಿಕ್ಷಕರ ಲಭ್ಯತೆಯ ಹಿನ್ನೆಲೆಯಲ್ಲಿ 2020-21 ನೇ ಸಾಲಿಗೆ 7ನೇ ತರಗತಿಯ 9 ವಿದ್ಯಾರ್ಥಿಗಳು 8ನೇ ತರಗತಿಗೆ ದಾಖಲು ಆಗಿದ್ದಾರೆ. ಈ ಶಾಲೆಯಲ್ಲಿ 5 ಮಂಜೂರಾದ ಹುದ್ದೆಗಳಲ್ಲಿ ಈ ಹಿಂದೆ 2 ಹುದ್ದೆಗಳಲ್ಲಿ ಶಿಕ್ಷಕರಿದ್ದು, ಈಗ ಹೆಚ್ಚುವರಿಯಾಗಿ ಇಬ್ಬರನ್ನು ನಿಯೋಜಿಸಲಾಗಿದೆ. ಒಟ್ಟು ನಾಲ್ಕು ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರಕಾರಿ ಶಾಲೆಗಳಿಗೆ ಆಗಮನ : ಖಾಸಗಿ ಶಾಲೆಗಳ ವಿದ್ಯಾರ್ಥಿಗಳೆ ಸರಕಾರಿ ಶಾಲೆಗಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಸೆ. 23ರ ವರೆಗೆ ತಾಲೂಕಿನ ಸರಕಾರಿ ಶಾಲೆಗಳ 1ನೇ ತರಗತಿಗೆ 2,478 ವಿದ್ಯಾರ್ಥಿಗಳು ದಾಖಲಾಗಿದ್ದರು. ಇದೀಗ ರಜೆ ಮುಗಿದ ಕಾರಣ ಒಂದಷ್ಟು ಮಂದಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ. –ಜ್ಞಾನೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.