ಟ್ರಾಫಿಕ್ ಜಾಮ್ ಆಗದಂತೆ ಕ್ರಾಸಿಂಗ್‌ಗೆ ತಡೆ
ಬಿ.ಸಿ.ರೋಡ್ ಬಸ್ ನಿಲ್ದಾಣದ ಬಳಿ ಬ್ಯಾರಿಕೇಡ್ ಅಳವಡಿಸಿದ ಪೊಲೀಸ್ ಇಲಾಖೆ
Team Udayavani, May 26, 2022, 9:32 AM IST
ಬಂಟ್ವಾಳ: ಟ್ರಾಫಿಕ್ ಜಾಮ್ ಹಾಗೂ ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳ ಅಡ್ಡಾದಿಡ್ಡಿ ಓಡಾಟವನ್ನು ನಿಯಂತ್ರಿಸುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಬಿ.ಸಿ.ರೋಡ್‌ನ ಬಸ್ ನಿಲ್ದಾಣದ ಬಳಿಯ ಹೆದ್ದಾರಿ ಕ್ರಾಸಿಂಗ್ ಬ್ಯಾರಿಕೇಡ್‌ಗಳನ್ನು ಇಟ್ಟಿದೆ. ಪೊಲೀಸರ ಕಾಳಜಿ ಉತ್ತಮ ವಾಗಿದ್ದರೂ, ಈ ಪ್ರಯತ್ನ ಇನ್ನಷ್ಟು ಟ್ರಾಫಿಕ್ ಜಾಮ್‌ಗೆ ಕಾರಣ ವಾಗಲಿದೆಯೇ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಈಗ ಅಳವಡಿಸಿದ ಬ್ಯಾರಿಕೇಡ್ ನಿಂದಾಗಿ ಬಿ.ಸಿ.ರೋಡ್ ನಾರಾಯಣ ಗುರು ವೃತ್ತದ ಭಾಗದಿಂದ ಆಗಮಿಸುವ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಬಂದು ಬಸ್ ನಿಲ್ದಾಣ ಅಥವಾ ಹೆದ್ದಾರಿಯ ಮತ್ತೂಂದು ದಿಕ್ಕಿಗೆ ಸಂಚರಿಸಬೇಕಾದರೆ ಬಸ್ ನಿಲ್ದಾಣದ ಬಳಿಯಿದ್ದ ಕ್ರಾಸಿಂಗ್ ಬದಲು ಕೈಕುಂಜೆ ಕ್ರಾಸ್ ಬಳಿಯಲ್ಲಿ ಹೆದ್ದಾರಿಗೆ ಸೇರಬೇಕಿದೆ.
ಈ ಹಿಂದೆ ಬಿ.ಸಿ.ರೋಡ್‌ನ ಎರಡು ಭಾಗಗಳಲ್ಲಿ ಕ್ರಾಸಿಂಗ್ ಮಾಡಬೇಕಾದ ವಾಹನಗಳು ಕೈಕುಂಜೆ ಕ್ರಾಸ್ ಬಳಿಯಲ್ಲೇ ಬಲಕ್ಕೆ ತಿರುಗಬೇಕಾದ ಕಾರಣ ಅಲ್ಲೇ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಮತ್ತೂಂದೆಡೆ ನಾರಾಯಣ ಗುರು ವೃತ್ತದ ಭಾಗದಿಂದ ಆಗಮಿಸಿ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ವಾಹನಗಳು ಕೈಕುಂಜೆ ಕ್ರಾಸ್ ಬಳಿಯಲ್ಲಿ ತಿರುಗುವುದು ಅಷ್ಟು ಸುಲಭದ ಮಾತಲ್ಲ.
ಅಧಿಕ ಹೊತ್ತು ಬಸ್‌ಗಳು ನಿಲ್ಲದಂತೆ ಕ್ರಮ
ಈ ರೀತಿ ಬ್ಯಾರಿಕೇಡ್ ಇಟ್ಟು ವಾಹನ ಸಂಚಾರ ನಿಯಂತ್ರಿಸುವ ಬದಲು ಕಾನೂನು ಉಲ್ಲಂಘಿಸಿ ವಿರುದ್ಧ ಧಿಕ್ಕಿನಲ್ಲಿ ಸಂಚರಿಸುವ ವಾಹನದ ವಿರುದ್ಧ ಕ್ರಮ ಜರಗಿಸುವ ಜತೆಗೆ ಬಸ್ ನಿಲ್ದಾಣದಲ್ಲಿ ನಿಂತ ಬಸ್‌ಗಳು ಮತ್ತೆ ಹೆದ್ದಾರಿಗೆ ಬಂದು ಮತ್ತೆ ನಿಂತು ಪ್ರಯಾಣಿಕರನ್ನು ಹತ್ತಿಸುವುದಕ್ಕೆ ಅವಕಾಶ ನೀಡದೆ ಇದ್ದರೆ ಒಂದಷ್ಟು ವಾಹನಗಳು ಸರಾಗವಾಗಿ ತೆರಳುವುದಕ್ಕೆ ಅನುಕೂಲವಾಗುತ್ತದೆ.
ಇನ್ನು ಮಂಗಳೂರಿನಿಂದ ಆಗಮಿಸಿದ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಒಂದರ ಹಿಂದೆ ಒಂದು ಸಾಲಾಗಿ ನಿಂತು ಪ್ರಯಾಣಿಕರನ್ನು ಕರೆಯುವ ಬದಲು ಬಸ್‌ಗಳು ನಿಲ್ದಾಣದ ಬಳಿ ನಿಂತು ಪ್ರಯಾಣಿಕರನ್ನು ಇಳಿಸಿ-ಹತ್ತಿಸಿಕೊಂಡು ತೆರಳಿದರೆ ಒಂದಷ್ಟು ಟ್ರಾಫಿಕ್ ಜಾಮ್‌ಗೆ ಕಡಿವಾಣ ಬೀಳಲಿದೆ. ಅದೇ ರೀತಿ ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಧರ್ಮಸ್ಥಳ ಭಾಗದಿಂದ ಆಗಮಿಸಿ ಮಂಗಳೂರು ಭಾಗಕ್ಕೆ ತೆರಳುವ ಬಸ್‌ಗಳು ಕೂಡ ಸರ್ವಿಸ್ ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಕರೆಯುವ ಬದಲು ಪ್ರಯಾಣಿಕರನ್ನು ಇಳಿಸಿ-ಹತ್ತಿಸಿಕೊಂಡು ನೇರವಾಗಿ ತೆರಳಿದರೆ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂಬ ಅಭಿಪ್ರಾಯಗಳು ಕೂಡ ಕೇಳಿಬರುತ್ತಿದೆ.
ಸಮಸ್ಯೆಯ ಸಾಧ್ಯತೆ
ವಾಹನದೊತ್ತಡ ಇರುವ ಹೆದ್ದಾರಿಯಲ್ಲಿ ಕಡಿಮೆ ಅಂತರದಲ್ಲಿ ಬಸ್ ಅನ್ನು ಸಂಪೂರ್ಣ ಎಡಕ್ಕೆ ತಂದು ನಿಲ್ದಾಣಕ್ಕೆ ಇಳಿಸುವುದು ದೊಡ್ಡ ಸಾಹಸ ವಾಗಲಿದೆ. ಇದರಿಂದಲೂ ಒಂದಷ್ಟು ಹೊತ್ತು ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಲ್ದಾಣದಿಂದ ಕೈಕಂಬ ಭಾಗಕ್ಕೆ ತೆರಳುವ ವಾಹನಗಳು ನಿಲ್ದಾಣದ ಬಳಿ ಕ್ರಾಸಿಂಗ್‌ಗೆ ಅವಕಾಶವಿಲ್ಲದೆ ನಾರಾಯಣ ಗುರು ವೃತ್ತದ ಬಳಿ ಬಂದೇ ತಿರುಗಿಸಿ ಕೈಕಂಬ ಭಾಗಕ್ಕೆ ತೆರಳಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.