ಬರಿಮಾರು ಚರ್ಚ್: ಧರ್ಮಗುರುಗಳಿಂದ ಕೃಷಿಕ್ರಾಂತಿ ಸಾಕ್ಷಾತ್ಕಾರ
ನಾಲ್ಕು ಎಕ್ರೆಯಲ್ಲಿ ಸಾವಯವ ಕೃಷಿ ;ಆದಾಯದ ಮೂಲವಾದ ವಿವಿಧ ತರಕಾರಿಗಳು
Team Udayavani, Jul 15, 2019, 5:17 AM IST
ಬರಿಮಾರು ಸಂತ ಜೋಸೆಫರ ಚರ್ಚ್ ಆವರಣದಲ್ಲಿರುವ ಕೃಷಿ ತೋಟ.
ವಿಟ್ಲ: ಸೂರಿಕುಮೇರು ಸಮೀಪದ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬರಿಮಾರು ಸಂತ ಜೋಸೆಫರ ಚರ್ಚ್‌ನಲ್ಲಿ ಕೃಷಿಕ್ರಾಂತಿ ಸಾಕ್ಷಾತ್ಕಾರಗೊಂಡಿದೆ. ಚರ್ಚ್ ಧರ್ಮ ಗುರು ವಂ| ಗ್ರೆಗರಿ ಪಿರೇರಾ ಅವರು ಕಳೆದ ಒಂದು ವರ್ಷದಲ್ಲಿ ಕೃಷಿಯ ನಿಜವಾದ ಖುಷಿಯನ್ನು ತೋರಿಸಿಕೊಟ್ಟಿದ್ದಾರೆ.
ಸೊಪ್ಪು-ಗೆಣಸು ಇತ್ಯಾದಿ
2018ರ ಜೂ. 3ರಂದು ಬರಿಮಾರ್ ಚರ್ಚ್‌ನ ಧರ್ಮಗುರುಗಳಾಗಿ ನಿಯು ಕ್ತಿಗೊಂಡ ಬಳಿಕ ಚರ್ಚ್ ಜಮೀನಿನಲ್ಲಿ ಇವರ ಮಾರ್ಗದರ್ಶನದಲ್ಲಿ ಪಪ್ಪಾಯಿ, ನುಗ್ಗೆ, ಹರಿವೆ ಸೊಪ್ಪು, ಗೆಣಸು, ಕುಂಬಳಕಾಯಿ, ಗೇರು ಗಿಡಗಳನ್ನು ಬೆಳೆಸಲಾಯಿತು. ಅವುಗಳು ಇದೀಗ ಆದಾಯದ ಮೂಲವಾಗಿವೆ.
ಪೂಜೆಯೂ ತೋಟವೂ
ಧರ್ಮಗುರುಗಳು ಬಿಡುವಿನ ಹೊತ್ತಿ ನಲ್ಲಿ ತೋಟಕ್ಕಿಳಿದು ಕೆಲಸ ಮಾಡುತ್ತಾರೆ. ತೋಟದಲ್ಲಿ ಕೆಲಸ ಮಾಡುವ ಫ್ರ್ಯಾಂಕಿ ಡಿ’ಸೋಜಾ, ಬಾಬಣ್ಣ, ಪ್ರಕಾಶ್, ಸೇಸಪ್ಪ, ಐರಿನ್, ಲಲಿತಾ, ಚಿನ್ನಮ್ಮ, ಪ್ರಮೋದ್, ವಿನೋದ್, ಮೋಹನ್ ನಾಯ್ಕರ ಜತೆಗೆ ಧರ್ಮಗುರುಗಳೂ ಮಣ್ಣು, ಕೆಸರು, ಗೊಬ್ಬರ ಹಾಗೂ ಗಿಡಗಳ ಬಂಧುವಾಗಿದ್ದಾರೆ.
ಬರಿಮಾರು ಚರ್ಚ್ ಆವರಣದಲ್ಲಿ ಬೆಳೆದ ಸಾವಯವ ಕೃಷಿಗೆ ಭಾರೀ ಬೇಡಿಕೆ ಇದೆ. ಪಪ್ಪಾಯಿ, ಗೆಣಸು, ಸುವರ್ಣ ಗೆಡ್ಡೆ, ಹರಿವೆ ಸೊಪ್ಪು, ಕುಂಬಳಕಾಯಿಗೆ ಸ್ಥಳೀಯವಾಗಿ ಗ್ರಾಹಕರಿದ್ದಾರೆ. ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ, ಧರ್ಮಗುರುಗಳ ತರಬೇತಿ ಕೇಂದ್ರ ಜೆಪ್ಪು ಸೆಮಿನರಿ, ಬಜೊjàಡಿಯ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮುಖ್ಯ
ಕಚೇರಿಗೂ ಬರಿಮಾರು ಚರ್ಚ್‌ನ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ದೊರಕುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ. ಪ್ರತೀ ವಾರ ನಡೆಯುವ ಪೂಜೆ ಬಳಿಕದ ಧಾರ್ಮಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ನೀಡ ಲಾಗುವ ಉಚಿತ ಉಪಾಹಾರಕ್ಕೂ ಸಾವಯವ ಕೃಷಿಯ ಉತ್ಪನ್ನ ಆಧಾರವಾಗಿದೆ. 1 ವರ್ಷದಲ್ಲಿ ಕೃಷಿಯಿಂದ ಚರ್ಚ್ ರೂ. ಒಂದೂವರೆ ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದೆ. ಧರ್ಮಗುರುಗಳ ಸಮಾಜ ಪ್ರೀತಿಯ ಕಾರ್ಯಗಳ ಹಂಬಲಕ್ಕೆ
ಚರ್ಚ್‌ನ ಪಾಲನ ಸಮಿತಿಯೂ ಬೆಂಬಲವಾಗಿ ನಿಂತಿದೆ.
ಕೃಷಿ ಇವರ ಜೀವಾಳ
ಮೇರಮಜಲು ಗ್ರಾಮದ ಕೃಷಿ ಕುಟುಂಬದ ವಂ| ಗ್ರೆಗರಿ ಪಿರೇರಾ 1981ರಲ್ಲಿ ಗುರುದೀಕ್ಷೆ ಪಡೆದರು. 2 ವರ್ಷ ಮೊಡಂಕಾಪು ಚರ್ಚ್, 7 ವರ್ಷ ನಾರಂಪಾಡಿ, 7 ವರ್ಷ ವೇಣೂರು, 14 ವರ್ಷ ಉಡುಪಿಯ ಬೆಳ್ವೆ ಎಸ್ಟೇಟ್ ಚರ್ಚ್ ಹಾಗೂ ಅಲ್ಲಿಪಾದೆ ಚರ್ಚ್ ನಲ್ಲಿ 7 ವರ್ಷ ಸಹಿತ ಒಟ್ಟು 37 ವರ್ಷ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿ, ಶತಮಾನೋತ್ತರ ಬೆಳ್ಳಿಹಬ್ಬ ಸಂಭ್ರಮದ ಬರಿಮಾರು ಚರ್ಚ್ ಗೆ 25ನೇ ಧರ್ಮಗುರುಗಳಾಗಿ 2018ರ ಜೂನ್‌ನಿಂದ ನಿಯುಕ್ತಿಗೊಂಡಿದ್ದಾರೆ. ಕೃಷಿ ಆಸಕ್ತಿಗೆ ತಕ್ಕಂತೆ ಸೇವೆ ಸಲ್ಲಿಸಿ ನಾರಂಪಾಡಿಯಲ್ಲಿ “ಕುಂಬಳಕಾಯಿ ಫಾದರ್’, ಬೆಳ್ವೆಯಲ್ಲಿ “ಅಡಿಕೆ ಫಾದರ್’ ಆಗಿ ಹೆಸರು ಪಡೆದರು. ಅಲ್ಲಿಪಾದೆಯಲ್ಲಿ ಶಾಲೆ ಆರಂಭಿಸಿದ ಕೀರ್ತಿ ಇವರದು.
ಸಾವಯವ ಕೃಷಿ
ಚರ್ಚ್ ಜಮೀನಿನ ನಾಲ್ಕು ಎಕ್ರೆ ಪ್ರದೇಶದಲ್ಲಿ ಸಾವಯವ ಕೃಷಿಗೆ ಸಂಕಲ್ಪ ತೊಟ್ಟ ಧರ್ಮಗುರು ವಂ| ಗ್ರೆಗರಿ ಪಿರೇರಾ ಅವರು ಹಿಂದೆ ಅಲ್ಲಿದ್ದ ರಬ್ಬರ್ ಗಿಡಗಳನ್ನೆಲ್ಲ ತೆಗೆಸಿ ಪಪ್ಪಾಯಿ ಕೃಷಿ ಆರಂಭಿಸಿದರು. ಜತೆಗೆ ಸುವರ್ಣ ಗೆಡ್ಡೆ, ನುಗ್ಗೆ, ಹರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸಿನ ಬಳ್ಳಿ ಹೀಗೆ ಒಂದರ ಮೇಲೊಂದರಂತೆ ಚಿಗುರೊಡೆಯುತ್ತಾ ಬಂತು.
ಇದೀಗ ನೂರಕ್ಕೂ ಹೆಚ್ಚು
ಪಪ್ಪಾಯಿ ಗಿಡಗಳು, 120 ನುಗ್ಗೆಮರ, ಸುಮಾರು 1 ಸಾವಿರ ಸುವರ್ಣ ಗೆಡ್ಡೆಯ ಗಿಡಗಳು ಚರ್ಚ್ ಆವರಣದಲ್ಲಿವೆ. ಈ ವರ್ಷ ಮತ್ತೆ ಹೊಸದಾಗಿ 160 ಗೇರು ಗಿಡಗಳನ್ನು ನೆಡಲಾಗಿದ್ದು, ಎಲ್ಲ ಬಗೆಯ ಕೃಷಿಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.
ಕ್ರಿಯಾಶೀಲ ಧರ್ಮಗುರು
ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂದರ್ಭದಲ್ಲಿಯೇ ಕ್ರಿಯಾಶೀಲ ಧರ್ಮಗುರುವನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ನೇಮಿಸಿ ರುವುದು ನಮ್ಮ ಭಾಗ್ಯ. ಅವರ ಕೆಲಸಗಳಿಗೆ ಪಾಲನ ಸಮಿತಿ, ಎಲ್ಲ ಕ್ರೈಸ್ತರು ಸಹಕಾರ ನೀಡುತ್ತಿದ್ದೇವೆ.
- ರೋಷನ್ ಬೊನಿಫಾಸ್ ಮಾರ್ಟಿಸ್, ಉಪಾಧ್ಯಕ್ಷರು, ಚರ್ಚ್ ಪಾಲನ ಸಮಿತಿ, ಬರಿಮಾರು
- ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.