ಕಡಲು ಪಾಲಾಗುವ ಭೀತಿಯಲ್ಲಿ ಬಾರ್ಜ್
Team Udayavani, Jun 6, 2017, 10:58 AM IST
ಉಳ್ಳಾಲ/ಮಂಗಳೂರು: ಉಳ್ಳಾಲದ ಸಮುದ್ರ ನಡುವೆ ಅವಘಡಕ್ಕೆ ಸಿಲುಕಿರುವ ಕಡಲ್ಕೊರೆತ ತಡೆಗೋಡೆ ಕಾಮಗಾರಿಯ ಬಾರ್ಜ್ ಬಹುತೇಕ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದು, ಯಾವುದೇ ಕ್ಷಣದಲ್ಲಿ ಸಮುದ್ರ ದೊಳಗಡೆ ಮುಳುಗಡೆಯಾಗುವ ಭೀತಿ ತಲೆದೋರಿದೆ.
ಆಂಧ್ರ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್‌ನ ಹಿಂಭಾಗ ಶೇ. 30ರಷ್ಟು ನೀರಿ ನೊಳಗೆ ಮುಳುಗಡೆಯಾಗಿದ್ದು, ಸಮಯ ಕಳೆಯುತ್ತಿದ್ದಂತೆ ಅದರ ಒಂದೊಂದು ಭಾಗವೂ ಜಲಾವೃತವಾಗುತ್ತಿದೆ. ರವಿವಾರಕ್ಕೆ ಹೋಲಿಸಿದರೆ ಸೋಮವಾರ ಸಂಜೆಯ ವೇಳೆಗೆ ಬಾರ್ಜ್‌ನ ಹಿಂಬದಿ ಸಂಪೂರ್ಣ ಹಿಂದಕ್ಕೆ ವಾಲಿಕೊಂಡಿದ್ದು ಯಾವುದೇ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಂಡು ನೀರಿನೊಳಗೆ ಮಗುಚಿ ಬೀಳುವ ಸಾಧ್ಯತೆಯಿದೆ. ಬಾರ್ಜ್ ಸದ್ಯಕ್ಕೆ ವಾಲಿ ಕೊಂಡಿ ರುವ ಕಾರಣ ಅದರೊಳಗೆ ಇರುವ ಒಂದೊಂದೇ ವಸ್ತುಗಳು ಸಮುದ್ರದಲ್ಲಿ ತೇಲಿಕೊಂಡು ಹೋಗಲು ಶುರು ಮಾಡಿವೆ.
ಅದರೊಳಗಿರುವ ನೀರಿನ ಪ್ಲಾಸ್ಟಿಕ್ ಟ್ಯಾಂಕ್ ಸಹಿತ ಹಲವು ಸಾಮಗ್ರಿಗಳು ತೇಲಾಡುತ್ತಿವೆ. ಬಾರ್ಜ್‌ನಲ್ಲಿ ಕಾಮಗಾರಿ ಕೈಗೊಳ್ಳುವ ವೇಳೆ ಓಡಾಡುತ್ತಿದ್ದ ಜಾಗ ಕೂಡ ಸೋಮವಾರ ನೀರಿನಲ್ಲಿ ಮುಳುಗಡೆಯಾಗಿದೆ. ಇದರ ಪರಿಣಾಮ ಬಾರ್ಜ್‌ನೊಳಗೆ ಅಳವಡಿಸಿರುವ ಕ್ರೇನ್ ಕೂಡ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ತೂಫಾನ್ ಸೃಷ್ಟಿಯಾದರೆ…
ಇನ್ನೊಂದೆಡೆ ಸೋಮವಾರ ಸಂಜೆ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಿರುವ ಕಾರಣ ಕಡಲು ಕೂಡ ಪ್ರಕ್ಷುಬ್ಧಗೊಂಡಿದ್ದು ಅಲೆಗಳ ಅಬ್ಬರಕ್ಕೆ ಬಾರ್ಜ್ ಮತ್ತಷ್ಟು ಜೋರಾಗಿ ಅಲ್ಲಾಡುತ್ತಿದೆ. ಒಂದುವೇಳೆ ಸೋಮವಾರ ರಾತ್ರಿ ಕಡಲಿನಲ್ಲಿ ತೂಫಾನ್ ಸೃಷ್ಟಿಯಾದರೆ ಬಾರ್ಜ್ ಮುಳುಗಡೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಉಳ್ಳಾಲದ ಕಡಲ ತೀರದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಬಾರ್ಜ್ ಕ್ಷಣದಿಂದ ಕ್ಷಣಕ್ಕೆ ಮುಳುಗುವ ಹಂತ ತಲುಪಿದರೂ ತುರ್ತು ಕಾರ್ಯಾಚರಣೆ ನಡೆಸಿ ಅದನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟವರು ಇಲ್ಲಿವರೆಗೆ ಯಾವುದೇ ಅಗತ್ಯ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
ಬೇಜವಾಬ್ದಾರಿ ಹೇಳಿಕೆ
ಬಾರ್ಜ್ ಮುಳುಗಡೆಯಾಗುತ್ತಿದ್ದರೂ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಬಂದ ಬಳಿಕವಷ್ಟೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಅಷ್ಟೇ ಅಲ್ಲ, ಬಾರ್ಜ್ ತೆರವು ಸಂಬಂಧ ಧರ್ತಿ ಕಂಪೆನಿಯವರನ್ನು ಸ್ಥಳಕ್ಕೆ ತತ್‌ಕ್ಷಣ ಕರೆಯಿಸಿಕೊಳ್ಳುವ ಬಗ್ಗೆ ಇಲ್ಲಿವರೆಗೆ ಯಾವುದೇ ತೀರ್ಮಾನ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಬಾರ್ಜ್ ಪ್ರಕರಣ ಹಾಗೂ ಘಟನೆ ಬಳಿಕದ ಕಂಪೆನಿಯ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಕಂಪೆನಿಯವರು ಆಸಕ್ತಿಯೇ ಇಲ್ಲದವರಂತೆ ವರ್ತಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಬಾರ್ಜ್‌ನಲ್ಲಿದ್ದ 27 ಮಂದಿ ಕಾರ್ಮಿಕರನ್ನು ರವಿವಾರ ರಕ್ಷಿಸಲಾಗಿತ್ತು.
35 ವರ್ಷ ಹಳೆಯ ಬಾರ್ಜ್
ಮೂಲಗಳ ಪ್ರಕಾರ, ನೆದರ್‌ಲ್ಯಾಂಡ್ ದೇಶದ ತಂತ್ರಜ್ಞಾನ ಹೊಂದಿರುವ ಈ ಬಾರ್ಜ್ ಅನ್ನು 1982ರಲ್ಲಿ ನಿರ್ಮಿಸಲಾಗಿದ್ದು, ಸುಮಾರು 35 ವರ್ಷದಷ್ಟು ಹಳೆಯದಾಗಿದೆ. ಬಾರ್ಜ್ ಇಷ್ಟೊಂದು ಹಳೆದಾಗಿರುವ ಕಾರಣ 2015ರಲ್ಲಿ ಇದನ್ನು ಒಮೆಗಾ ಶಿಪ್ಪಿಂಗ್ ಕಂಪೆನಿ ಮೂಲಕ ಸುಮಾರು 3 ದಶಲಕ್ಷ ಡಾಲರ್‌ಗೆ ಮಾರಾಟಕ್ಕೆ ಇಡಲಾಗಿತ್ತು. ಆದರೆ ಯಾರೂ ಕೂಡ ಅದನ್ನು ಕೊಂಡುಕೊಳ್ಳುವುದಕ್ಕೆ ಮುಂದೆ ಬಂದಿರಲಿಲ್ಲ. ಬಳಿಕ ಅಂದರೆ, 9 ತಿಂಗಳ ಹಿಂದೆಯಷ್ಟೇ ಈ ಬಾರ್ಜ್ ಅನ್ನು ಮುಂಬಯಿನಿಂದ ಉಳ್ಳಾಲದಲ್ಲಿ ಸಮುದ್ರದೊಳಗೆ ತಡೆಗೋಡೆ ನಿರ್ಮಾಣಕ್ಕೆ ಟಗ್ ಮೂಲಕ ಕರೆತರಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿದ್ದರೂ ಬಾರ್ಜ್ ಅನ್ನು ತೆರವುಗೊಳಿಸದೆ ಇದ್ದುದರಿಂದ ಈಗ ಮುಳುಗುವ ಅಪಾಯಕ್ಕೆ ಎದುರಾಗಿದೆ.
ಒಂದು ವೇಳೆ ಬಾರ್ಜ್ ಈಗ ಮುಳುಗಡೆಯಾದರೆ ಅದಕ್ಕೆ ಅದರ ಮಾಲಕತ್ವದ ಧರ್ತಿ ಕಂಪೆನಿಯೇ ನೇರ ಹೊಣೆ. ಆದರೆ ಕಂಪೆನಿಯು ಉದ್ದೇಶಪೂರ್ವಕವಾಗಿಯೇ ಬಾರ್ಜ್ ಅನ್ನು ಸಮುದ್ರದ ನಡುವೆ ಬಿಟ್ಟು ಅದರಲ್ಲಿದ್ದ ಕಾರ್ಮಿಕರ ಪ್ರಾಣದ ಮೇಲೆ ಚೆಲ್ಲಾಟವಾಡಿದೆ ಎಂಬ ಆರೋಪವೂ ಕೇಳಿ ಬಂದಿದೆ. ಏಕೆಂದರೆ ಈ ಬಾರ್ಜ್ ಅನ್ನು ಕಾಮಗಾರಿ ಮುಗಿದ ಬಳಿಕ ಮತ್ತೆ ಮುಂಬಯಿಗೆ ಕೊಂಡೊಯ್ಯಬೇಕಾದರೆ ಲಕ್ಷಾಂತರ ರೂ. ಖರ್ಚು ಮಾಡಬೇಕು.
ಈ ಕಾರಣಕ್ಕೆ ಇಷ್ಟೊಂದು ಹಳೇ ಬಾರ್ಜ್ ಅನ್ನು ತಾಂತ್ರಿಕ ದೋಷದ ನೆಪವೊಡ್ಡಿ ಸಮುದ್ರದೊಳಗೆಯೇ ಮುಳುಗುವಂತೆ ಮಾಡಿ ಆ ಮೂಲಕ ಅದಕ್ಕೆ ವಿಮೆ ಕ್ಲೈಮ್ ಮಾಡುವ ಹುನ್ನಾರ ಕೂಡ ಇದರ ಹಿಂದೆ ಅಡಗಿದೆ ಎಂಬ ಆರೋಪವೂ ಇದೆ. ಇದಕ್ಕೆ ಬಂದರು ಇಲಾಖೆ ಕೈವಾಡವೂ ಇರುವ ಬಗ್ಗೆ ಅನುಮಾನ ಮೂಡಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಧರ್ತಿ ಕಂಪೆನಿಯು ಈ ಬಾರ್ಜ್ ಅನ್ನು ಬಾಡಿಗೆಗೆ ಪಡೆದುಕೊಂಡು ಬಂದಿದ್ದು, ವಿಮೆ ಮೊತ್ತ ಪಡೆಯುವುದಕ್ಕೆ ಬಾರ್ಜ್ ಮುಳುಗಿಸುವುದರಿಂದ ಧರ್ತಿ ಕಂಪನಿಗೇ ಏನೂ ಲಾಭವಿಲ್ಲ ಎಂಬ ಮಾತೂ ಕೇಳಿ ಬಂದಿದೆ. ಒಟ್ಟಿನಲ್ಲಿ ಈ ಬಾರ್ಜ್ ಮುಳುಗಡೆ ಪ್ರಕರಣವು ಸಾಕಷ್ಟು ಸಂಶಯಕ್ಕೆ ಎಡೆಮಾಡಿರುವುದು ಮಾತ್ರ ನಿಜ.
ಕಂಪೆನಿಯ ನಿರ್ಲಕ್ಷ
ಆದರೆ ಬಹಳ ದೊಡ್ಡ ಗಾತ್ರದ ಬಾರ್ಜ್ ಮಾತ್ರ ಇನ್ನೂ ಸಮುದ್ರದಲ್ಲೇ ಯಾವುದೇ ಕ್ಷಣದಲ್ಲಿಯೂ ಮುಳುಗಡೆಯಾಗುವ ಸ್ಥಿತಿಯಲ್ಲಿದೆ. ಆಶ್ಚರ್ಯ ಅಂದರೆ ಯಾವುದೇ ಹಂತದಲ್ಲಿ ಮುಳುಗಡೆಯಾಗಬಹುದಾದ ಕೋಟ್ಯಂತರ ರೂ. ಮೌಲ್ಯದ ಈ ಬಾರ್ಜ್ ಅನ್ನು ಸುರಕ್ಷಿತವಾಗಿ ದಡ ಸೇರಿಸುವುದಕ್ಕೆ ಘಟನೆ ಸಂಭವಿಸಿ ನಾಲ್ಕು ದಿನ ಕಳೆದಿದ್ದರೂ ಧರ್ತಿ ಕಂಪೆನಿಯ ಕಡೆಯಿಂದ ಯಾವೊಬ್ಬ ಅಧಿಕಾರಿಯೂ ಇನ್ನೂ ಘಟನಾ ಸ್ಥಳಕ್ಕೆ ಆಗಮಿಸಿಲ್ಲ. ಕಂಪೆನಿಯ ಈ ರೀತಿಯ ನಿರ್ಲಕ್ಷ é ಇದೀಗ ಹಲವು ರೀತಿಯ ಅನುಮಾನ ಹಾಗೂ ವ್ಯಾಖ್ಯಾನಗಳಿಗೆ ಎಡೆ ಮಾಡಿದೆ.
ಅನಾಥವಾಯ್ತು ಬಾರ್ಜ್ !
ಕರಾವಳಿ ಭಾಗದಲ್ಲಿ ಸೋಮವಾರ ಸಂಜೆಯ ವೇಳೆ ಮುಂಗಾರು ಚುರುಕಾಗಿದ್ದು, ಮಂಗಳೂರು, ಉಳ್ಳಾಲ ಸೇರಿದಂತೆ ಕಡಲು ತೀರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಕಡಲು ಕೂಡ ಪ್ರಕ್ಷುಬ್ಧœಗೊಂಡಿದ್ದು, ಅಲೆಗಳ ಅಬ್ಬರ ಕೂಡ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಿರುವಾಗ, ಆ್ಯಂಕರ್ ಕಡಿದುಕೊಂಡು ಅಲ್ಲಾಡುತ್ತಿರುವ ಈ ಬಾರ್ಜ್ ಸಂಪೂರ್ಣ ಸಮುದ್ರದೊಳಗಡೆ ಮುಳುಗಡೆಯಾಗುವುದಕ್ಕೆ ಇನ್ನು ಬಹಳ ಸಮಯ ಬೇಕಾಗಿಲ್ಲ.
ಏಕೆಂದರೆ, ಸದ್ಯಕ್ಕೆ ಈ ಗಜಗಾತ್ರದ ಬಾರ್ಜ್ ಅಲೆಗಳ ಅಬ್ಬರ ಕಡಿಮೆಗೊಳಿಸುವುದಕ್ಕೆ ಸಮುದ್ರದೊಳಗಡೆ ನಿರ್ಮಾಣ ಮಾಡಿರುವ ತಡೆಗೋಡೆಯಾದ ರೀಫ್‌ಗೆ ತಾಗಿಕೊಂಡು ನಿಂತಿದೆ. ಅಲೆಗಳ ಅಬ್ಬರ ಹೆಚ್ಚಾಗುತ್ತಿದ್ದಂತೆ ಬಾರ್ಜ್ ಕೂಡ ಜೋರಾಗಿ ಅಲ್ಲಾಡಬಹುದು. ಆಗ, ಬಾರ್ಜ್ ಭಾರಕ್ಕೆ ಈಗಷ್ಟೇ ನಿರ್ಮಾಣಗೊಂಡಿರುವ ಈ ರೀಫ್ ಕೂಡ ಕುಸಿದು ಹೋಗಿ, ಬಾರ್ಜ್ ಸಂಪೂರ್ಣವಾಗಿ ಸಮುದ್ರದೊಳಗೆ ಮುಳುಗಿ ಹೋಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಈಗಾಗಲೇ ನಿಯಂತ್ರಣ ಕಳೆದುಕೊಂಡಿರುವ ಕಾರಣ ಬಾರ್ಜ್‌ನ ಒಂದು ಬದಿಯಲ್ಲಿ ರಂಧ್ರ ಸೃಷ್ಟಿಯಾಗಿ ನೀರು ಕೂಡ ಒಳನುಗ್ಗುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿದ್ದರೂ, ಬಾರ್ಜ್ ಅನ್ನು ರಕ್ಷಿಸಿ ದಡ ಸೇರಿಸುವುದಕ್ಕೆ ಧರ್ತಿ ಕಂಪೆನಿ ಮುಂದಾಗುತ್ತಿಲ್ಲ ಎನ್ನುವುದು ಗಮನಾರ್ಹ.
ಬಾರ್ಜ್‌ನಲ್ಲಿ ಏನೆಲ್ಲ ಇದೆ?
ಮೂಲಗಳ ಪ್ರಕಾರ ಇದೊಂದು ಸುಧಾರಿತ ಬಾರ್ಜ್ ಆಗಿದ್ದು, ಒಟ್ಟು 65 ಮೀಟರ್ ಉದ್ದವನ್ನು ಹೊಂದಿದೆ. ಜತೆಗೆ ಬೀಮ್ 32 ಮೀಟರ್ ಇದ್ದು, 4.50 ಮೀಟರ್ ಆಳಮಟ್ಟವನ್ನು ಹೊಂದಿದೆ. ಈ ನಡುವೆ 2,964 ಟನ್‌ಗಳಷ್ಟು ಭಾರವನ್ನೂ ಹೊಂದಿದೆ ಎನ್ನಲಾಗಿದೆ. ಈ ಬಾರ್ಜ್‌ನಲ್ಲಿ ದೊಡ್ಡ ಗಾತ್ರದ ಒಂದು ಕ್ರೇನ್ ಅಳವಡಿಕೆಯಾಗಿದ್ದು, ಸಮುದ್ರದಲ್ಲಿ ಸಂಚರಿಸುವುದಕ್ಕೆ ಬೇಕಾಗುವ ಎಲ್ಲ ಸಂಪರ್ಕ ಸಾಧನ ವ್ಯವಸ್ಥೆಯೂ ಇದೆ. ಅಷ್ಟೇ ಅಲ್ಲ ಈ ಬಾರ್ಜ್ ಏಕಕಾಲಕ್ಕೆ ಸುಮಾರು 65 ಮಂದಿ ಕಾರ್ಮಿಕರು ನಿಂತು ಕೆಲಸ ಮಾಡುವಷ್ಟು ವಿಶಾಲವೂ ಆಗಿದೆ. ಇದಲ್ಲದೆ ಒಂದು ಅಡುಗೆ ಕೋಣೆ ಹಾಗೂ ಒಂದು ಸ್ನಾನದ ಕೋಣೆ ವ್ಯವಸ್ಥೆಯನ್ನೂ ಹೊಂದಿದೆ. ಒಂದು ರಕ್ಷಣಾ ಬೋಟ್ ಹಾಗೂ 85 ಮಂದಿಗೆ ಬೇಕಾಗುವಷ್ಟು ಲೈಫ್ ಜಾಕೆಟ್ ಸೌಲಭ್ಯವನ್ನೂ ಈ ಬಾರ್ಜ್ ಹೊಂದಿದೆ.
ತೈಲ ಸೋರಿಕೆ; ಇಂದು ಬಾರ್ಜ್ ಪರಿಶೀಲನೆ
ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಅವರು ಉದಯವಾಣಿ ಜತೆಗೆ ಮಾತನಾಡಿ, ಉಳ್ಳಾಲದಲ್ಲಿ ಮುಳುಗಡೆ ಭೀತಿಯಲ್ಲಿರುವ ಬಾರ್ಜ್‌ನ ದುರ್ಘಟನೆಗೆ ಸಂಬಂಧಿಸಿ ಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ತಂಡವೊಂದನ್ನು ಈಗಾಗಲೇ ನೇಮಿಸಿದ್ದು, 15 ದಿನಗಳೊಳಗೆ ವರದಿ ನೀಡುವಂತೆ ಸೂಚಿಸಿದೆ. ಇದರಂತೆ ಮಂಗಳವಾರ ತಂಡವು ಸ್ಥಳ ತನಿಖೆ ನಡೆಸಲಿದೆ. ಸಹಾಯಕ ಆಯುಕ್ತರು, ಎಡಿಬಿ ಯೋಜನೆಯ ಜಂಟಿ ನಿರ್ದೇಶಕರು, ಕೋಸ್ಟ್ ಗಾರ್ಡ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈ ತಂಡದಲ್ಲಿದ್ದಾರೆ. ನೀರಿನಲ್ಲಿ ಬಾರ್ಜ್ ಮುಳುಗಡೆಯಿಂದ ತೈಲ/ರಾಸಾಯನಿಕ ನೀರಿಗೆ ಸೋರಿಕೆಯಾಗುತ್ತಿದೆಯೇ ಎಂಬುದನ್ನು ವಿಶೇಷವಾಗಿ ಪರಿಶೀಲನೆ ನಡೆಸಿ ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಾರ್ಜ್ ತೆರವಿಗೆ ಸಂಬಂಧಿಸಿ ಕಂಪೆನಿಯವರು ಇದರ ಜವಾಬ್ದಾರಿ ಹೊರಲಿದ್ದಾರೆ ಎಂದು ತಿಳಿಸಿದ್ದಾರೆ.
ಬಾರ್ಜ್ ಸ್ಥಳಾಂತರ ಯತ್ನದ ವೇಳೆ ಸಂಭವಿಸಿತ್ತು ಅವಘಡ !
ಉಳ್ಳಾಲ ಕಡಲ ತೀರದಲ್ಲಿ ಕಾಮಗಾರಿ ಪೂರ್ಣಗೊಂಡು ನಿಲುಗಡೆಯಾಗಿದ್ದ ಬಾರ್ಜ್ ಅನ್ನು ಶನಿವಾರವೇ ಮೂರು ಟಗ್ ಬಳಸಿ ಸಮುದ್ರದ ಮಧ್ಯಭಾಗಕ್ಕೆ ಎಳೆದು ತಂದು ನಿಲ್ಲಿಸಲು ಪ್ರಯತ್ನಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ನವ ಮಂಗಳೂರು ಬಂದರು ಬಳಿ ಇದ್ದ ಬೇರೆ ಕಂಪೆನಿಯ ಮೂರು ಟಗ್‌ಗಳನ್ನು ಬಾರ್ಜ್ ಅನ್ನು ಎಳೆಯುವುದಕ್ಕೆ ಸ್ಥಳಕ್ಕೆ ಕರೆತರಲಾಗಿತ್ತು. ಬಾರ್ಜ್ ಅನ್ನು ಎಳೆದುಕೊಂಡು ಹೋಗಿ ಸಮುದ್ರದ ತೀರದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಮತ್ತೆ ಆ್ಯಂಕರ್ ಹಾಕಿ ನಿಲ್ಲಿಸುವುದು. ಬಳಿಕ ಜೂ. 6ರಂದು ಮುಂಬಯಿಯಿಂದ ತನ್ನದೇ ಕಂಪೆನಿಯ ಟಗ್ ಮೂಲಕ ಕೊಂಡೊಯ್ಯುವುದಕ್ಕೆ ಯೋಚಿಸಲಾಗಿತ್ತು.
ಶನಿವಾರ ಮಧ್ಯಾಹ್ನ 12ರಿಂದ ಅಪರಾಹ್ನ 3 ಗಂಟೆವರೆಗೆ ಟಗ್ ಸಹಾಯದಿಂದ ಬಾರ್ಜನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಲಾಗಿತ್ತು. ಬಾರ್ಜ್ ಸುಮಾರು 300 ಮೀಟರ್ ದೂರಕ್ಕೆ ಬಂದಿತ್ತು. ಬಳಿಕ ಅದರ ಮೋಟರ್ ಆನ್ ಮಾಡಿ ಮುಂದಕ್ಕೆ ಚಲಿಸುತ್ತಿದ್ದಂತೆ ಒಂದು ಭಾಗವು ಸಮುದ್ರದೊಳಗೆ ನಿರ್ಮಿಸಿರುವ ತಡೆಗೋಡೆ(ರೀಫ್)ಗೆ ಅಪ್ಪಳಿಸಿ ಅಲ್ಲೇ ಸ್ಥಗಿತಗೊಂಡಿತು. ಅಷ್ಟೇ ಅಲ್ಲ, ಬಾರ್ಜ್ ಎಳೆಯುವುದಕ್ಕೆ ತಂದಿದ್ದ ಟಗ್‌ನ ಹಗ್ಗ ಕೂಡ ತುಂಡಾಗಿ ಹೋಗಿತ್ತು. ಮುಂದೆ ಎಷ್ಟೇ ಪ್ರಯತ್ನ ಪಟ್ಟರೂ ಬಾರ್ಜನ್ನು ಸಮುದ್ರದ ಮಧ್ಯಭಾಗಕ್ಕೆ ಎಳೆದು ತಂದು ನಿಲ್ಲಿಸಲು ಸಾಧ್ಯವಾಗಲಿಲ್ಲ.
ಖಾಸಗಿ ಟಗ್‌ನವರು ಬಾರ್ಜನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಶನಿವಾರ ಸಂಜೆ ವೇಳೆಗೆ ಬಾರ್ಜ್ ನಿಯಂತ್ರಣ ಕಳೆದುಕೊಂಡು ಒಳಗೆ ನೀರು ಬರಲು ಆರಂಭವಾದಾಗ ಅನ್ಯಮಾರ್ಗವಿಲ್ಲದೆ ತಮ್ಮನ್ನು ರಕ್ಷಿಸುವಂತೆ ಕೋರಿ ಅದರಲ್ಲಿದ್ದ ಕಾರ್ಮಿಕರು ಕರಾವಳಿ ತಟ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಮೀನುಗಾರರು ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.