ಬಿ.ಸಿ. ರೋಡ್ ವಾಹನ ನಿಲುಗಡೆ ಸಮಸ್ಯೆ
Team Udayavani, Nov 5, 2017, 3:56 PM IST
ಬಂಟ್ವಾಳ: ನಗರವಾಗಿ ಬೆಳೆಯುತ್ತಿರುವ ತಾ| ಕೇಂದ್ರ ಬಿ.ಸಿ.ರೋಡ್‌ನಲ್ಲಿ ಸರಿಯಾದ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ತೊಡಕಾಗಿ ಪರಿಣಮಿಸತೊಡಗಿದೆ.
ಇಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳಿದ್ದರೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕಾಗಿಯೇ ಸುತ್ತಮುತ್ತಲಿನ ಗ್ರಾಮದವರು ಅರ್ಧ ಗಂಟೆ ದೂರದ ಮಂಗಳೂರಿನತ್ತ ಸಾಗುತ್ತಿದ್ದಾರೆ. ಇದರಿಂದ ಬಿ.ಸಿ.ರೋಡ್‌ನ ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ಬೀಳಲಾರಂಭಿಸಿದೆ. ಇದರತ್ತ ಸ್ಥಳೀಯ ಆಡಳಿತ ಮತ್ತು ಸಂಚಾರಿ ಪೊಲೀಸರು ನಿರ್ದಿಷ್ಟ ಕ್ರಮವನ್ನು ಕಟ್ಟುನಿಟ್ಟಾಗಿ ಇನ್ನಾದರೂ ಜಾರಿಗೊಳಿಸಿ ಯಾರು ಎಂದು ನಾಗರಿಕರು, ವ್ಯಾಪಾರಸ್ಥರು ನಿರೀಕ್ಷಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸದಂತಾಗಿವೆ.
ಅವರದ್ದೇ ವಾಹನ
ಹಲವು ಅಂಗಡಿಗಳ ಎದುರು ಅವರ ವಾಹನಗಳನ್ನು ಹೊರತು ಪಡಿಸಿದರೆ ಇತರ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಲು ಜಾಗವೇ ಇರುವುದಿಲ್ಲ. ಒಂದುವೇಳೆ ಆಚೀಚೆ ಜಾಗ ಹೊಂದಿಸಿಇಟ್ಟರೆ ಸಂಚಾರ ಪೊಲೀಸರು ಪ್ರಶ್ನಿಸುತ್ತಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪರಿಹಾರ ಯಾರ ಹೊಣೆ
ಪ್ರಸ್ತುತ ಬಿ.ಸಿ.ರೋಡ್ ಮೇಲ್ಸೇತುವೆ ಕೆಳಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಬದಿಯಲ್ಲಿ ಆಟೋರಿಕ್ಷಾ ಸಾಲಿರುತ್ತದೆ. ಇನ್ನೊಂದು ಬದಿಯಲ್ಲಿ ಖಾಸಗಿ ಸರ್ವಿಸ್ ಕಾರುಗಳು ನಿಂತರೆ, ಅವಕಾಶ ಸಿಕ್ಕಿದಲ್ಲಿ ಸರ್ವಿಸ್ ಟ್ಯಾಕ್ಸಿ, ಅಟೋಗಳು ನಿಲ್ಲುತ್ತವೆ. ಆದರೆ ನಾಗರಿಕರ ವಾಹನ ನಿಲುಗಡೆಗೆ ಜಾಗವೇ ಇಲ್ಲದಂತಾಗಿದೆ. ಒಂದೂವರೆ ವರ್ಷದ ಹಿಂದೆ ಜಿಲ್ಲಾಧಿಕಾರಿ ಡಾ| ಕೆ. ಜಿ. ಜಗದೀಶ್ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ನಡೆಸಿದ್ದರು. ಆದರೆ ಅದು ಕನಸಾಗಿಯೇ ಉಳಿದಿದೆ.
ಬಿ.ಸಿ.ರೋಡ್ ನಗರವನ್ನು ಬಿ.ಸಿ.ರೋಡ್ ಮುಖ್ಯ ವೃತ್ತದ ಪ್ರದೇಶ, ರೈಲ್ವೇ ಸ್ಟೇಶನ್ ಪ್ರದೇಶ, ಕೈಕಂಬ ಪ್ರದೇಶ, ಬಿ.ಸಿ.ರೋಡ್ ನಗರ ಕೇಂದ್ರ ಎಂದು ವಾಹನ ನಿಲುಗಡೆಗಾಗಿ ವಿಂಗಡಿಸಿದರೆ ಅನುಕೂಲವಾಗಲಿದೆ. ಇದರಿಂದ ನಗರ ಕೇಂದ್ರಕ್ಕೆ ಬರುವ ವಾಹನಗಳು ವಿಂಗಡಣೆಗೊಳ್ಳುವುದರಿಂದ ನಗರದೊಳಗೆ ಹೆಚ್ಚಿನ ಒತ್ತಡ ಬೀಳಲಾರದು ಎಂದು ಅಂದಾಜಿಸಲಾಗಿದೆ.
ಇರುವುದೊಂದೆ ದಾರಿ
ಪುರಸಭೆ ವ್ಯಾಪ್ತಿಯ ಕೈಕುಂಜೆ ಸಂಪರ್ಕ ರಸ್ತೆಯ ಎರಡು ಬದಿಗಳಲ್ಲಿ ಒಂದು ಫರ್ಲಾಂಗ್ ಉದ್ದಕ್ಕೆ ವಾಹನ ನಿಲುಗಡೆ, ಪಾರ್ಕಿಂಗ್ ನಿರ್ಮಾಣಕ್ಕೆ ಸ್ಥಳಾವಕಾಶ ಇದೆ. ಅದನ್ನು ಯೋಜಿತವಾಗಿ ಬಳಸಿಕೊಳ್ಳುವತ್ತ ಯೋಚಿಸಬೇಕಿದೆ. ಒಂದು ಬದಿಯಲ್ಲಿ ಎಪಿಎಂಸಿ ಕಚೇರಿ ತನಕ, ಇನ್ನೊಂದು ಬದಿ ತೋಟಗಾರಿಕೆ ಇಲಾಖೆಯ ತನಕ ಲಭ್ಯ ಜಮೀನನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಇಲ್ಲಿನ ಆಶ್ರಮ ಶಾಲೆಯ ಎದುರಿನ ಮೈದಾನವನ್ನು ಬಳಸಿಕೊಂಡರೆ 60 ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬಹುದು. ಬಿ.ಸಿ.ರೋಡ್ ರೈಲ್ವೇ ಸ್ಟೇಶನ್ ರಸ್ತೆಯನ್ನು ಬಳಸಿಕೊಳ್ಳಲೂ ಅವಕಾಶವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಯೋಜನೆಗೆ ಕ್ರಮ
ಬಿ.ಸಿ. ರೋಡ್‌ನ ಪಾರ್ಕಿಂಗ್ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಲ್ಪಿಸುವ ಯೋಜನೆ ರೂಪಿತವಾಗುತ್ತಿದೆ. ಅದನ್ನು ನಮ್ಮ ಆಡಳಿತದ ಅವಧಿಯಲ್ಲಿ ಅನುಷ್ಠಾನ ಮಾಡುವ ಚಿಂತನೆ ಇದೆ. ಪಾರ್ಕಿಂಗ್ ಸಮಸ್ಯೆ ಇತರ ಅನೇಕ ವಿಚಾರಗಳ ಜತೆ ತಳುಕು ಹಾಕಿಕೊಂಡಿದ್ದು ಅದಕ್ಕೊಂದು ವೈಜ್ಞಾನಿಕ ಕ್ರಮದಿಂದ ಇದಕ್ಕೆ ಪರಿಹಾರ ಹುಡುಕಬೇಕಿದೆ.
– ಪಿ. ರಾಮಕೃಷ್ಣ ಆಳ್ವ, ಅಧ್ಯಕ್ಷರು ,
ಬಂಟ್ವಾಳ ಪುರಸಭೆ
ಸೂಕ್ತ ಪರಿಹಾರ ರೂಪಿಸಿ
ಎಲ್ಲರಿಗೂ ಬಿ.ಸಿ.ರೋಡ್ ನಗರ ಕೇಂದ್ರದಲ್ಲಿ ಪಾರ್ಕಿಂಗ್ ಬೇಕು ಎಂದರೆ ಸಾಧ್ಯವಾಗದು. ಕೆಎಸ್‌ಆರ್‌ಟಿಸಿ, ಸರ್ವಿಸ್ ಬಸ್‌ಗೆ ಯಾವ ರೀತಿ ಬಸ್ ನಿಲ್ದಾಣ ಮಾಡಿರುವಂತೆ ಕಾರು, ಟೆಂಪೋ, ರಿಕ್ಷಾ , ದ್ವಿಚಕ್ರ ವಾಹನಗಳ ನಿಲುಗಡೆಗೂ ನಿಲ್ದಾಣ ರೂಪಿಸಿದರೆ ಸಮಸ್ಯೆ ಪರಿಹಾರ ಆದೀತು.
– ಬಿ.ಎಂ. ಪ್ರಭಾಕರ ದೈವಗುಡ್ಡೆ
ಸಂಚಾಲಕರು, ದ.ಕ.ಜಿಲ್ಲಾ ಟೂರಿಸ್ಟ್
ಕಾರು , ವ್ಯಾನ್ ಚಾಲಕರ ಸಂಘ
ಆರ್ಥಿಕ ಚಟುವಟಿಕೆಗೆ ಧಕ್ಕೆ: ಸ್ಥಳೀಯರ ಆತಂಕ
ಒಂದು ಕಾಲದಲ್ಲಿ ಬಂಟ್ವಾಳ ಪೇಟೆ ಭರ್ಜರಿ ವ್ಯಾಪಾರ ವ್ಯವಹಾರದ ಕೇಂದ್ರವಾಗಿತ್ತು. ಪೇಟೆಯ ಹೊರ ಬದಿಯಲ್ಲಿ ಬೈಪಾಸ್ ಆಗುತ್ತಲೇ ನಗರದ ವ್ಯವಹಾರ ಬಿ.ಸಿ.ರೋಡಿಗೆ ಸ್ಥಳಾಂತರವಾಯಿತು. ಮೇಲ್ಸೇತುವೆ ಈಗ ಜನರನ್ನು ನೇರವಾಗಿ ಮಂಗಳೂರಿಗೆ ಕಳುಹಿಸುತ್ತಿದೆ. ಈಗ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಹುಡುಕದಿದ್ದರೆ ಆರ್ಥಿಕ ಚಟುವಟಿಕೆಗಳಿಗೆ ತೀವ್ರ ಧಕ್ಕೆಯಾದೀತೆಂಬ ಆತಂಕ ಸ್ಥಳೀಯರದ್ದು
ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.