ಬೆಳ್ತಂಗಡಿ,ಬಂಟ್ವಾಳ ತಾಲೂಕು:ಖಾಸಗಿ ವೈದ್ಯರ ಮುಷ್ಕರ,ಮನವಿ
Team Udayavani, Nov 4, 2017, 11:08 AM IST
ಬೆಳ್ತಂಗಡಿ/ಬಂಟ್ವಾಳ: ಬೆಳ್ತಂಗಡಿ ತಾಲೂಕಿನಾದ್ಯಂತ ನ. 3 ರಂದು ಖಾಸಗಿ ವೈದ್ಯರು ಗೈರು ಹಾಜರಾಗುವ ಮೂಲಕ ಮುಷ್ಕರದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ಪ್ರಸ್ತಾವಿತ ತಿದ್ದುಪಡಿಯಲ್ಲಿನ ಕೆಲ ಅಂಶಗಳನ್ನು ಕೈಬಿಡುವಂತೆ ಒತ್ತಾಯಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಬಂಟ್ವಾಳದಲ್ಲಿ ಐಎಂಎ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿ ಅವರಿಗೆ ಮಂಗಳೂರಲ್ಲಿ ಮನವಿ ಸಲ್ಲಿಸಿದರು.
ವೈದ್ಯರು ರೋಗಿಯ ಬಳಿ ಕಾಯಿಲೆ ಕುರಿತು ಹೇಳಿದ್ದು ಅರ್ಥವಾಗದಿದ್ದರೆ, ವೈದ್ಯರು ಚಿಕಿತ್ಸೆ ತತ್‌ಕ್ಷಣ ಕೊಡದೇ ಕಾಯಿಸಿದರೆ, ವೈದ್ಯರು 50 ರೂ.ಗಿಂತ ಹೆಚ್ಚು ಸಂದರ್ಶನ ಫೀಸ್ ಪಡೆದರೆ ಅವರ ವಿರುದ್ಧ ಕ್ರಮ ಜರಗಿಸಬಹುದಾಗಿದೆ. ಇಂತಹ ಅನೇಕ ತಿದ್ದುಪಡಿಗಳಿದ್ದು, ಜಿಲ್ಲಾ ಮಟ್ಟದಲ್ಲಿ ವೈದ್ಯರ ವಿರುದ್ಧದ ಆಪಾದನೆಯ ವಿಚಾರಣೆಗೆ ಸಮಿತಿಯ ನೇಮಕವಾಗುತ್ತದೆ. ಇದರಲ್ಲಿ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಜನಪ್ರತಿನಿಧಿ, ಇತರರು ಇದ್ದರೆ ಅಂತಹವರು ವೈದ್ಯಕೀಯ ವಿಚಾರದ ವಿಚಾರಣೆ ಹೇಗೆ ನಡೆಸುತ್ತಾರೆ ಎಂದು ವೈದ್ಯರು ಪ್ರಶ್ನಿಸಿದ್ದಾರೆ.
ತಾಲೂಕಿನ ಖಾಸಗಿ ಆಸ್ಪತ್ರೆಗಳ ವೈದ್ಯರು ರಜೆ ಹಾಕುವ ಮೂಲಕ, ಕ್ಲಿನಿಕ್ ಮುಚ್ಚುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ತುರ್ತು ಚಿಕಿತ್ಸೆ ನಿರಾಕರಿಸಿಲ್ಲ. ಉಳಿದಂತೆ ಸರಕಾರಿ ಆಸ್ಪತ್ರೆಯ ಸೇವೆ ಅಬಾಧಿತವಾಗಿತ್ತು
ಬಂಟ್ವಾಳ
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ಕೆಲವು ಅಂಶಗಳ ಕೈಬಿಡುವಂತೆ ಆಗ್ರಹಿಸಿ ಐಎಂಎ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿ ಅವರಿಗೆ ಮಂಗಳೂರಿನಲ್ಲಿ ನ. 3ರಂದು ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಡಾ| ಅಶ್ವನಿ ಬಾಳಿಗ, ಡಾ| ರಾಘವೇಂದ್ರ ಭಟ್, ಡಾ| ಕೆ. ಆರ್. ಕಾಮತ್, ಡಾ| ಮುಕುಂದ ಮಂಗಳೂರು, ಡಾ| ಗಣೇಶ್ ಪ್ರಸಾದ್ ಮುದ್ರಾಜೆ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆ, ಡೆಂಟಲ್ ಕ್ಲಿನಿಕ್, ಲ್ಯಾಬ್, ಆಯುಷ್ ವೈದ್ಯರು, ಖಾಸಗಿ ವೈದ್ಯಕೀಯ ಸೇವೆ ನೀಡುತ್ತಿರುವ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ ಒಳರೋಗಿಗಳಾಗಿ ದಾಖಲಾಗಿರುವವರಿಗೆ ಎಂದಿನಂತೆ ಸೇವೆ ಲಭ್ಯವಾಗಿದ್ದು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ವೈದ್ಯರ ಅನುಪಸ್ಥಿತಿ ಬಗ್ಗೆ ಮೊದಲೇ ತಿಳಿಸಲಾಗಿದೆ ಎಂದು ಮಾಹಿತಿ ತಿಳಿಸಿದೆ.
ಸಂಘದ ಪದಾಧಿಕಾರಿಗಳು ಬಂದ್ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಅಲೋಪತಿ, ಡೆಂಟಲ್, ಯುನಾನಿ, ಆಯುರ್ವೇದಿಕ್ ವೈದ್ಯರೂ ಬಂದ್‌ಗೆ ಬೆಂಬಲ ಸೂಚಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.