ಲಾಬಿಗೆ ಮಣಿದು ಬಸ್ ನಿಲ್ದಾಣ ಎತ್ತಂಗಡಿ
Team Udayavani, Dec 8, 2017, 12:24 PM IST
ಸುರತ್ಕಲ್ : ಹೆದ್ದಾರಿ 66ರ ನಂತೂರಿನಿಂದ ಸುರತ್ಕಲ್ ವರೆಗೆ ಬಸ್ ಬೇ ಹಾಗೂ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇದಕ್ಕೆ ಹೆದ್ದಾರಿ ಬದಿಯ ಕಟ್ಟಡ ಹಾಗೂ ಮನೆ ಮಾಲಕರಿಂದ ವಿವಿಧ ರೀತಿಯಲ್ಲಿ ಅಡಚಣೆಗಳು ಎದುರಾಗುತ್ತವೆ. ಕೆಲವು ಬಸ್‌ಬೇ ಮತ್ತು ನಿಲ್ದಾಣಗಳನ್ನು ಸ್ಥಳಾಂತರಿಸಲು ಒತ್ತಡ ಹೆಚ್ಚಾಗುತ್ತಿದೆ.
ಕೆಲವೆಡೆ ಸಂಘ ಸಂಸ್ಥೆಗಳು ಕೊಡುಗೆಯಾಗಿ ನೀಡಿದ ಬಸ್ ನಿಲ್ದಾಣಗಳಿದ್ದು, ಈಗ ಹೆದ್ದಾರಿ ಇಲಾಖೆ ಅದೇ ಜಾಗದಲ್ಲಿ ಬಸ್ ಬೇ ಸಹಿತ ನಿಲ್ದಾಣ ನಿರ್ಮಾಣ ಮಾಡುತ್ತಿದೆ. ಆದರೆ ವ್ಯಾಪಾರಕ್ಕೆ ಅಡ್ಡಿಯಾಗುತ್ತದೆ ಹಾಗೂ ಇತರ ಕೆಲವು ಕಾರಣಗಳನ್ನು ಮುಂದಿಟ್ಟು ಪ್ರಭಾವಿಗಳಿಂದ ಒತ್ತಡ ತಂದು ಅವುಗಳ ಸ್ಥಾನ ಪಲ್ಲಟ ಪ್ರಯತ್ನ ನಡೆಯುತ್ತಿದೆ.
ವಿದ್ಯಾದಾಯಿನೀ ಬಳಿ ನಿರ್ಮಿಸಲಾದ ಬಸ್ ನಿಲ್ದಾಣ ಕಾಮಗಾರಿಯನ್ನು ಈಗ ಸ್ಥಗಿತಗೊಳಿಸಲಾಗಿದೆ. ಹೊಸಬೆಟ್ಟು ಬಳಿ ಬಸ್ ಬೇಯಿಂದ ದೂರದಲ್ಲಿ ನಿಲ್ದಾಣ ನಿರ್ಮಿಸಲಾಗುತ್ತಿದೆ. ಚಿತ್ರಾಪುರದ ನಿಲ್ದಾಣ ಮಳೆಗಾಲದಲ್ಲಿ ಕೆರೆಯಂತಾಗುತ್ತದೆ. ರಸ್ತೆಯ ಇನ್ನೊಂದು ಭಾಗದಲ್ಲಿ ಹಿಂದಿದ್ದ ಜಾಗದಲ್ಲಿ ನಿಲ್ದಾಣ ನಿರ್ಮಿಸಲು ಉದ್ಯಮಿಯೊಬ್ಬರು ತಗಾದೆ ತೆಗೆದಿದ್ದಾರೆ. ಹೀಗಾಗಿ ಬಸ್ ನಿಲ್ದಾಣಗಳ ನಿರ್ಮಾಣ ಹೆದ್ದಾರಿ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಯಾಣಿಕರಿಗೆ ಬಸ್ ನಿಲ್ದಾಣ ಅತಿ ಅವಶ್ಯವಾಗಿದ್ದು, ನಾಗರಿಕ ಹೋರಾಟ ಸಮಿತಿ ಸಹಿತ ವಿವಿಧ ಸಂಘ ಸಂಸ್ಥೆಗಳು ಆಗ್ರಹಿಸುತ್ತಲೇ ಬಂದಿವೆ. ಈಗ ಕಾಮಗಾರಿಗೆ ಪ್ರಭಾವಿಗಳು ತಡೆಯೊಡ್ಡುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.