ಬೆಂಗ್ರೆ ಪ್ರದೇಶ: ಪೊಲೀಸ್ ಠಾಣೆ ಇಲ್ಲದಿರುವುದೇ ಕೊರತೆ
Team Udayavani, Mar 2, 2018, 11:07 AM IST
ಮಹಾನಗರ: ಮಂಗಳೂರಿನ ಪರ್ಯಾಯ ದ್ವೀಪ ಎನಿಸಿರುವ ಬೆಂಗ್ರೆಯಲ್ಲಿ ಹೆಚ್ಚಿನ ಜನವಸತಿ ಇದ್ದರೂ ಪೊಲೀಸ್ ಠಾಣೆಯನ್ನು ಒದಗಿಸದಿರುವುದೇ ದೊಡ್ಡ ಕೊರತೆಯಾಗಿ ಕಾಡತೊಡಗಿದೆ.
ಬೆಂಗ್ರೆ ದ್ವೀಪವು ಭೌಗೋಳಿಕವಾಗಿ ವಿಶಿಷ್ಟವಾಗಿದ್ದು, ಸುಲ್ತಾನ್ ಬತ್ತೇರಿಗೆ ಹೊಂದಿಕೊಂಡಂತಿದೆ. ತಣ್ಣೀರುಬಾವಿ ಬೀಚ್‌ನಿಂದಾಗಿ ಪ್ರವಾಸಿ ತಾಣವಾಗಿದೆ. ಭಾರತಿ ಶಿಪ್‌ಯಾರ್ಡ್‌ನಂತಹ ಬೃಹತ್ ಕೈಗಾರಿಕೆಯೂ ಇಲ್ಲಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರ ಸಹಿತ ಮೂರೂ ಸಮುದಾಯಗಳ ಜನರಿದ್ದು, ಎಲ್ಲರ ಪ್ರಾರ್ಥನಾ ಮಂದಿರಗಳಿವೆ. ಆದರೂ ಏನಾದರೂ ತುರ್ತು ಸಮಸ್ಯೆ, ಅಹಿತಕರ ಘಟನೆ ಘಟಿಸಿದರೂ 10 ಕಿ.ಮೀ ದೂರದ ಪಣಂಬೂರು ಠಾಣೆಗೆ ಬರಬೇಕಿದೆ. ಹೀಗಾಗಿ, ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಜನರಿಗೆ ಸೂಕ್ತ ಭದ್ರತೆ ಒದಗಿಸುವುದೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಇತ್ತೀಚಿನ ಸಮಸ್ಯೆ
ಜನವರಿ 22 ರಂದು ತಣ್ಣೀರುಬಾವಿಯ ಬೊಕ್ಕಪಟ್ಣ ಬೆಂಗ್ರೆಯಲ್ಲಿ ಅಮಾಯಕ ಶಿವರಾಜ್ ಕರ್ಕೇರ ಅವರ ಕೊಲೆ ನಡೆದಿತ್ತು. ಬಳಿಕ ಇತ್ತೀಚೆಗೆ ಉಡುಪಿಯ ಮಲ್ಪೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಿದ್ದ ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿತ್ತು. ಇದಾದ ಬಳಿಕ, ಬೆಂಗ್ರೆಯಲ್ಲಿ ಪೊಲೀಸ್ ಠಾಣೆ ಬೇಕು ಎನ್ನುವ ಕೂಗು ವ್ಯಕ್ತವಾಗಿದೆ. ಏಕೆಂದರೆ, ಬೆಂಗ್ರೆಯಲ್ಲಿ ಸುಮಾರು 2,500ಕ್ಕೂ ಅಧಿಕ ಮನೆಗಳಿದ್ದು, 12 ಸಾವಿರ ಜನ ಸಂಖ್ಯೆ ಇದೆ.
ಇಲ್ಲಿಯವರ ಮುಖ್ಯ ವೃತ್ತಿ ಮೀನುಗಾರಿಕೆ. ಇಲ್ಲಿಯೇ ವಾಸಿಸುತ್ತಿರುವವರಲ್ಲದೇ, ಉದ್ಯೋಗಕ್ಕಾಗಿ ನಿತ್ಯವೂ ಬಂದು ಹೋಗುವ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿಂದಿನಿಂದಲೂ ಇಲ್ಲಿ ಎಲ್ಲ ಸಮುದಾಯದವರ ನಡುವೆ ಸಾಮರಸ್ಯ ಇತ್ತು. ಆದರೆ, ಇತ್ತೀಚಿನ ಘಟನೆಗಳು ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಿವೆ.
ಸುಮಾರು ಏಳೆಂಟು ವರ್ಷಗಳ ಹಿಂದೆ ಬೆಂಗ್ರೆ ಪ್ರದೇಶವು ಹಳೆ ಬಂದರಿನ ಲ್ಲಿದ್ದ ಪೋರ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿತ್ತು. ಮಂಗಳೂರು ಪೊಲೀಸ್ ಕಮಿಷನರೇಟ್ ರಚನೆಯಾದ ಬಳಿಕ ಪೋರ್ಟ್ ಪೊಲೀಸ್ ಠಾಣೆಯನ್ನು ಬರ್ಖಾಸ್ತು ಮಾಡಿ ಅದರ ವ್ಯಾಪ್ತಿಯಲ್ಲಿದ್ದ ಬೆಂಗ್ರೆಯನ್ನು ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸಲಾಗಿತ್ತು.
ಸುತ್ತು ಬಳಸಿ ದಾರಿ
ಬೆಂಗ್ರೆ ತಲುಪಲು ಹಳೆ ಬಂದರಿನಿಂದ ದೋಣಿಯಲ್ಲಿ ಕೇವಲ 5 ರಿಂದ 10 ನಿಮಿಷದ ದಾರಿ. ಇಲ್ಲಿ ಪಲ್ಗುಣಿ (ಗುರುಪುರ ಹೊಳೆ) ನದಿ ಇರುವುದರಿಂದ ದೋಣಿ ಪಯಣ ಅನಿವಾರ್ಯ. ರಸ್ತೆ ಮಾರ್ಗವಾಗಿ ಕೂಳೂರು-ತಣ್ಣೀರುಬಾವಿ ಕ್ರಾಸ್ ಮೂಲಕ ವಾಹನದಲ್ಲಿ ಸಂಚರಿಸಬೇಕು. ಹೀಗೆ ಕ್ರಮಿಸಲು ಸುಮಾರು 30- 45 ನಿಮಿಷ ತಗಲುತ್ತದೆ. ಆದರೆ ರಸ್ತೆ ಸಂಪರ್ಕ ಇದೆ ಎಂಬ ಕಾರಣಕ್ಕಾಗಿ ಅಂದು ಬೆಂಗ್ರೆಯನ್ನು ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಸಲಾಗಿತ್ತು.
ಠಾಣೆಯಷ್ಟೇ ಅಲ್ಲ
ದೂರದ ಸಮಸ್ಯೆ ಬರೀ ಠಾಣೆಗಷ್ಟೇ ಇಲ್ಲ. ಬೆಂಕಿ ದುರಂತ ಸಂಭವಿಸಿದರೆ ಸುಮಾರು 15 ಕಿ.ಮೀ. ದೂರದ ಕದ್ರಿ ಅಗ್ನಿ ಶಾಮಕ ಠಾಣೆಯಿಂದ ವಾಹನ ತೆರಳಬೇಕು ಅಥವಾ ಪಣಂಬೂರಿನಲ್ಲಿರುವ ಕುದುರೆಮುಖ ಸಂಸ್ಥೆ, ನವ ಮಂಗಳೂರು ಬಂದರು, ಎಂಸಿಎಫ್ ಅಥವಾ ಎಂಆರ್ ಪಿಎಲ್‌ನಿಂದ ಅಗ್ನಿ ಶಾಮಕ ವಾಹನಗಳನ್ನೇ ಆಶ್ರಯಿಸಬೇಕಿದೆ.
ಪಣಂಬೂರು ಪೊಲೀಸ್ ಠಾಣೆಯಿಂದ ದೂರ ಇರುವ ಬೆಂಗ್ರೆಯಲ್ಲಿ ಪ್ರತ್ಯೇಕ ಠಾಣೆ ಬೇಕೆಂಬುದು ಬಹುಕಾಲದ ಬೇಡಿಕೆ. ಒಂದುವೇಳೆ ಸಾಧ್ಯವಾಗದಿದ್ದರೆ ಕನಿಷ್ಠ ಹೊರ ಠಾಣೆ (ಔಟ್ ಪೋಸ್ಟ್)ಯಾದರೂ ಬೇಕೆಂಬುದು ಜನರ ಬೇಡಿಕೆ.
ಹೊರ ಠಾಣೆ ಸ್ಥಾಪನೆ ಸಂಬಂಧ ಪ್ರಸ್ತಾವವನ್ನು ಒಂದು ವರ್ಷದ ಹಿಂದೆ ಮಂಗಳೂರು ಪೊಲೀಸ್ ಕಮಿಷನರೆಟ್ ವತಿಯಿಂದ ಸರಕಾರಕ್ಕೆ ಕಳುಹಿಸಲಾಗಿದೆ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದ ಮೇಲೆ ಒತ್ತಡ ತಂದು ಸಾಧ್ಯವಾಗಿಸಿದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರು.
ಠಾಣೆಯ ಸಿಬಂದಿ ಬಲ
ಒಟ್ಟು ಮಂಜೂರಾತಿ ಹುದ್ದೆಗಳು 62. ಪೊಲೀಸ್ ಇನ್ಸ್‌ಪೆಕ್ಟರ್- 1. ಪಿಎಸ್‌ಐ- 2. ಎಎಸ್‌ಐ- 4., ಹೆಡ್ ಕಾನ್ಸ್‌ಟೆಬಲ್- 10. ಕಾನ್ಸ್‌ಟೆಬಲ್- 45. (ಈಗಿರುವ ಸಿಬಂದಿ: 32).
ಸಿಬಂದಿ ಕೊರತೆ
ಪಣಂಬೂರು ಪೊಲೀಸ್ ಠಾಣೆಯ ವ್ಯಾಪ್ತಿ ವಿಶಾಲವಾಗಿದ್ದು, ಸಿಬಂದಿ ಕೊರತೆ ಇದೆ. ಒಟ್ಟು 62 ಮಂಜೂರಾತಿ ಹುದ್ದೆಗಳ ಪೈಕಿ ಆಧಿಕಾರಿಗಳನ್ನು ಹೊರತುಪಡಿಸಿ 45 ಮಂದಿ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳಿವೆ. ಈ ಪೈಕಿ 13 ಹುದ್ದೆಗಳು ಖಾಲಿ ಇವೆ. ಉಳಿದ 32 ಮಂದಿಯಲ್ಲಿ 5 ಮಂದಿ ಅನ್ಯ ಕಾರ್ಯನಿಮಿತ್ತ ತೆರಳಿದ್ದು, 28 ಮಂದಿ ಕಾನೂನು ಸುವ್ಯವಸ್ಥೆಗೆ ಲಭ್ಯರಿರುತ್ತಾರೆ. ಇಷ್ಟು ಸಿಬಂದಿಯಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟವೆಂಬಂತಾಗಿದೆ.
ವರ್ಷದ ಹಿಂದೆ ಪ್ರಸ್ತಾವನೆ ಸಲ್ಲಿಕೆ
ಬೆಂಗ್ರೆಯಲ್ಲಿ ಹೊರ ಠಾಣೆ ಸ್ಥಾಪಿಸುವ ಬಗ್ಗೆ ವರ್ಷದ ಹಿಂದೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ಅಲ್ಲದೇ, ದೇರಳಕಟ್ಟೆ, ಕಟೀಲು, ವಿಮಾನ ನಿಲ್ದಾಣದಲ್ಲೂ ನಿರ್ಮಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಬೆಂಗ್ರೆಯಲ್ಲಿ ಆದ್ಯತೆಯ ನೆಲೆಯಲ್ಲಿ ಹೊರ ಠಾಣೆ ಸ್ಥಾಪಿಸಲು ಒತ್ತಡ ತರಲಾಗುವುದು.
– ಟಿ.ಆರ್. ಸುರೇಶ್,
ನಗರ ಪೊಲೀಸ್ ಆಯುಕ್ತ
ಸಿ.ಸಿ. ಕೆಮರಾ ಅಳವಡಿಕೆ
ಬೆಂಗ್ರೆಯಲ್ಲಿ ಪೊಲೀಸ್ ಹೊರ ಠಾಣೆಯನ್ನು ಸ್ಥಾಪಿಸುವುದರೊಂದಿಗೆ ಕೆಮರಾಗಳನ್ನು ಅಳವಡಿಸಲೂ ಪ್ರಯತ್ನ ನಡೆದಿದೆ ಈ ದಿಶೆಯಲ್ಲಿ ಸರಕಾರದ ಮೇಲೆ ಒತ್ತಡ ತರುತ್ತೇನೆ. ಇನ್ನು ಮುಂದೆ ಇಲ್ಲಿ ಯಾವುದೇ ಗಲಾಟೆ, ಗದ್ದಲ ನಡೆಯಬಾರದು.
– ಜೆ.ಆರ್. ಲೋಬೋ, ಶಾಸಕ
ಪೊಲೀಸ್ ಔಟ್ ಪೋಸ್ಟ್ ಅತ್ಯಗತ್ಯ
‘ಇಲ್ಲಿ ಪೊಲೀಸ್ ಔಟ್‌ಪೋಸ್ಟ್ ತೀರಾ ಅಗತ್ಯ. ತೋಟ ಬೆಂಗ್ರೆ ಮತ್ತು ಕಸ್ಬಾ ಬೆಂಗ್ರೆಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವವರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿಗೆ ಹೊರಗಿನಿಂದ ಬಂದವರು ಗಾಂಜಾ ಮತ್ತು ಇತರ ಮಾದಕ ವಸ್ತುಗಳ ವ್ಯವಹಾರ ನಡೆಸಿ ಸಮಸ್ಯೆ ಸೃಷ್ಟಿಸುತ್ತಾರೆ. ಇದನ್ನು ನಿಯಂತ್ರಿಸಲು ಪೊಲೀಸ್ ಠಾಣೆ ಅವಶ್ಯ.
– ಮೋಹನ್ ಬೆಂಗ್ರೆ, ಅಧ್ಯಕ್ಷರು,
ಬೆಂಗ್ರೆ ಮಹಾಜನ ಸಭಾ, ತೋಟ ಬೆಂಗ್ರೆ
ಔಟ್ ಪೋಸ್ಟ್ ಸ್ಥಾಪನೆ ಆಗಲಿ
‘ಇಲ್ಲಿ ಪೊಲೀಸ್ ಔಟ್ ಪೋಸ್ಟ್ ಸ್ಥಾಪನೆಯಾಗ ಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಈ ಬಗ್ಗೆ ಪ್ರಸ್ತಾವನೆ ಕೂಡಾ ಸರಕಾರಕ್ಕೆ ಹೋಗಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ಅತಿ ಶೀಘ್ರದಲ್ಲಿ ಔಟ್ ಪೋಸ್ಟ್ ಸ್ಥಾಪನೆ ಆಗಬೇಕು’.
– ಅಸ್ಲಾಂ ಬೆಂಗ್ರೆ, ಅಧ್ಯಕ್ಷರು,
ಅಲಣ ಮದ್ರಸಾ ದೀನಿ
ಅಸೋಸಿಯೇಶನ್, ಕಸ್ಬಾ ಬೆಂಗ್ರೆ
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.