ಬಿಜೆಪಿ ಶುಭ್ರವಾಗಿ ಹೊಳೆಯುತ್ತಿದೆ: ಶೋಭಾ ಕರಂದ್ಲಾಜೆ
Team Udayavani, Jun 24, 2019, 5:54 AM IST
ಪುತ್ತೂರು : ಭಾರತೀಯ ಜನತಾ ಪಾರ್ಟಿ ಹರಿಯುತ್ತಿರುವ ನೀರಿ ನಂತೆ. ಈ ಕಾರಣದಿಂದ ಶುಭ್ರವಾಗಿ ಹೊಳೆ ಯುತ್ತಿದೆ. ಇಬ್ಬರು ಸಂಸದರು ಮಾತ್ರ ಇದ್ದಾರೆ ಎಂದು ಹೀಯಾಳಿಸುತ್ತಿದ್ದವರ ಮಧ್ಯೆ ದೇಶವನ್ನೇ ಆಳುವಂಥ ಬಹುಮತ ದೊಂದಿಗೆ ಸದೃಢವಾಗಿ ಬೆಳೆದಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರವಿವಾರ ತೆಂಕಿಲ ಒಕ್ಕಲಿಗ ಸಮುದಾಯ ಭವನದಲ್ಲಿ ಮತದಾರರು ಕಾರ್ಯಕರ್ತರು ಹಾಗೂ ಸಂಸತ್ ಜನಪ್ರತಿನಿಧಿಗಳಿಗೆ ಆಯೋಜಿಸಿದ ಅಭಿನಂದನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದೇ ಒಂದು ಭ್ರಷ್ಟಾಚಾರವಿಲ್ಲದ ಆಡಳಿತ ನಡೆಸಿದ, ದೇಶದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ಯೋಜನೆಗಳನ್ನು ನೀಡಿದ ನರೇಂದ್ರ ಮೋದಿ ಸರಕಾರಕ್ಕೆ ಜನತೆ ಮತ್ತೂಮ್ಮೆ ಅವಕಾಶ ನೀಡಿದ್ದಾರೆ. ಭಿಕ್ಷುಕರು, ಹಾವಾಡಿಗರ ದೇಶ ಎನ್ನುತ್ತಿದ್ದ ವಿದೇಶಿಗರು ಇಂದು ಭಾರತದ ಪ್ರಧಾನಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದ್ದಾರೆ. ಪ್ರಪಂಚದ ಪ್ರಭಾವಶಾಲಿ ಪ್ರಧಾನಿ ಭಾರತದವರು ಎನ್ನುವ ಹೆಮ್ಮೆಗೆ ಪಾತ್ರವಾಗಿದ್ದೇವೆ ಎಂದರು.
ರಾಜ್ಯ ಅನುಷ್ಠಾನ ಮಾಡುತ್ತಿಲ್ಲ
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ಸರಕಾರದ ಯೋಜನೆ, ಸಾಧನೆಗಳನ್ನು ರಾಜ್ಯ ಸರಕಾರ ಅನುಷ್ಠಾನಕ್ಕೆ ತರುತ್ತಿಲ್ಲ. ಕೃಷಿ ಸಮ್ಮಾನ್‌ನಂತಹ ಮಹತ್ವದ ಯೋಜನೆಯ ಫಲಾನುಭವಿಗಳನ್ನೂ ಸಮರ್ಪಕವಾಗಿ ಗುರುತಿಸಿಲ್ಲ. ಈಗ ಶಾಲೆಗಳಿಗೆ ತೆರಳಿ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪುತ್ತೂರಿನ ಹೆಗ್ಗಳಿಕೆ
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಮೂವರು ಸಂಸದರನ್ನು ಬೆಳೆಸಿ ದೇಶಕ್ಕೆ ಕೊಡುಗೆ ನೀಡಿದ ಹೆಗ್ಗಳಿಕೆ ಪುತ್ತೂ ರಿಗೆ ಇದೆ. ಶ್ರೇಷ್ಠ ಸಾಧಕ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನವಾದ ಇಂದು ಅವರ ಚಿಂತನೆ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿ ಬೆಳೆಯುತ್ತಿದೆ. ಜನರ ಪರಿಕಲ್ಪನೆಗಳಿಗೆ ಚ್ಯುತಿ ಬಾರದಂತೆ ಉತ್ತಮ ಆಡಳಿತ ನೀಡಲು ಈ ಭಾಗದ ಸಂಸದರು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಸಂಸದರಿಗೆ ಅಭಿನಂದನೆ
ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು. ಸಂಘ ಸಂಸ್ಥೆಗಳು, ಕಾರ್ಯಕರ್ತರು, ಮತದಾರರು ಹಾರ ಹಾಕಿ ಸಂಸದರನ್ನು ಅಭಿನಂದಿಸಿದರು. ಅನ್ಯ ಕಾರ್ಯ ನಿಮಿತ್ತ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಗೈರಾಗಿದ್ದರು.
ಬಿಜೆಪಿ ಅಧ್ಯಕ್ಷರಾಗಿದ್ದ ಮೊಗೆರೋಡಿ ಬಾಲಕೃಷ್ಣ ರೈ, ಗೋಪಾಲಕೃಷ್ಣ ಹೇರಳೆ ಅವರನ್ನು ಗೌರವಿಸಲಾಯಿತು. ವಿಧಾನಸಭಾ ಕ್ಷೇತ್ರದ 220 ಬೂತ್‌ಗಳ ಅಧ್ಯಕ್ಷರನ್ನು ಅಭಿನಂದಿಸಲಾಯಿತು.
ಸೈನ್ಯವನ್ನು ಸ್ವಾವಲಂಬಿ ಮಾಡಿದ ಸಾಧನೆ ಮೋದಿ ಸರಕಾರಕ್ಕೆ ಸಲ್ಲುತ್ತದೆ. ಅಡಿಕೆ ಪವಿತ್ರವಾದುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತಿಪಾದಿಸಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಅಡಿಕೆ ಪರ ಸರಕಾರದ ಕಡೆಯಿಂದ ಸಮರ್ಥ ವಾದ ಮಾಡುವ ಭರವಸೆ ನೀಡಿದ್ದಾರೆ. ಅಡಿಕೆ ಹಾಗೂ ಕರಿಮೆಣಸಿನ ಬೆಲೆ ಸ್ಥಿರತೆಗಾಗಿ ಆಮದು ಶುಲ್ಕ ತಗ್ಗಿಸಲು ಕ್ರಮ ಕೈಗೊಂಡಿದ್ದು, ರೈತರಿಗೆ ನ್ಯಾಯ ಒದಗಿಸಲು ಬದ್ಧರಿದ್ದೇವೆ. ರೈಲ್ವೇಗೆ ಸಂಬಂಧಿಸಿದ ಅಭಿವೃದ್ಧಿ, ಕಸ್ತೂರಿರಂಗನ್ ವರದಿ ಸಂಬಂಧ ನಿರಂತರ ಹೋರಾಟ ನಡೆಸುವುದಾಗಿ ಶೋಭಾ ಭರವಸೆ ನೀಡಿದರು.
ಸಮ್ಮಿಶ್ರ ಸರಕಾರಕ್ಕೆ ಜನರ ಕುರಿತ ಕಾಳಜಿಯೇ ಇಲ್ಲ. ಕೇಂದ್ರ ಕೊಟ್ಟ ಹಣವನ್ನೂ ಜನರ ಕಲ್ಯಾಣಕ್ಕೆ ಬಳಸಿಕೊಳ್ಳುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯದಲ್ಲಿ ಆರೋಗ್ಯ ಕರ್ನಾಟಕದ ಜತೆಗೆ ಸೇರಿಸಿ ವಂಚಿಸಲಾಗಿದೆ. ರೋಗಿಗಳು ಸರಕಾರಿ ಆಸ್ಪತ್ರೆಗೆ ಹೋಗಿ ಮತ್ತೆ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಅಧಿವೇಶನದಲ್ಲಿ ಬಲವಾದ ಪ್ರತಿರೋಧ ವ್ಯಕ್ತಪಡಿಸಲಿದ್ದೇವೆ ಎಂದು ಶೋಭಾ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.