ಗಡಿಪ್ರದೇಶದ ನೆಟ್ಟಣಿಗೆ ಮುಡ್ನೂರು (ಕರ್ನೂರು) ಸರಕಾರಿ ಶಾಲೆ
Team Udayavani, Jun 1, 2018, 12:54 PM IST
ಈಶ್ವರಮಂಗಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಕಸರತ್ತುಗಳ ನಡೆಯುತ್ತಾ ಬರುತ್ತಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ಸರಕಾರಿ ಶಾಲೆಗಳು ಮುನ್ನಡೆಯತ್ತಿದೆ. ಸರಕಾರ ವಿವಿಧ ಸವಲತ್ತುಗಳನ್ನು ನೀಡುತ್ತಿವೆ ಸರಿಯಾದ ರೀತಿಯಲ್ಲಿ ಅದನ್ನು ಉಪಯೋಗಿಸಿಕೊಂಡು ಮುಂದಡಿಯಿಟ್ಟರೆ ಪ್ರಾಥಮಿಕ ಶಾಲೆಗಳು ಶಾಶ್ವತವಾದ ಸ್ಥಾನವನ್ನು ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಬಹುದು ಎಂಬ ಅಂಶಗಳು ಶಾಲಾ ಪ್ರಾರಂಭೋತ್ಸವ ದಿನಗಳಲ್ಲಿ ಕಾಣಬಹುದಾಗಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಟ್ನೂರು (ಕರ್ನೂರು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಕೇವಲ 50ಮೀ. ಮುಂದು ಹೋದರೆ ಕೇರಳ ರಾಜ್ಯದ ಶಾಲೆಗಳು ಇವೆ. ಕೇರಳ-ಕರ್ನಾಟಕದಲ್ಲಿ ಗಡಿಭಾಗದಲ್ಲಿ ಮಲೆಯಾಳ-ಕನ್ನಡ ಭಾಷೆಗಳ ಸಂಗಮ ಪ್ರದೇಶವಾಗಿದೆ. ಜತೆಗೆ ಪ್ರಾದೇಶಿಕ ಭಾಷೆಗಳ ಸಮ್ಮಿಲನವಾಗಿದೆ. ಇಂತಂಹ ಪ್ರದೇಶದಲ್ಲಿ ಕನ್ನಡದ ಭಾಷಾಭಿಮಾನಕ್ಕೆ ಕಾರಣವಾದದ್ದು ಈ ಶಾಲೆಯ ಶಾಲಾ ಪ್ರಾರಂಭೋತ್ಸವ.
ಶಾಲೆ ಪ್ರಾರಂಭೋತ್ಸವದಲ್ಲಿ ಪಲ್ಲಕ್ಕಿ ಎಲ್ಲರ ಗಮನ ಸೆಳೆಯಿತು. ಸುಂದರವಾದ ಪಲ್ಲಕ್ಕಿಯನ್ನು ಬಣ್ಣ ಬಣ್ಣಗಳಿಂದ ಶೃಂಗಾರಿಸಲಾಗಿತ್ತು. ಕನ್ನಡದ ಅಕ್ಷರಮಾಲೆ, ಕಾಗುಣಿತ ಅಕ್ಷರಗಳು, ಸ್ವರ-ವ್ಯಂಜನ ಅಕ್ಷರಗಳನ್ನು ಅಂದವಾಗಿ ಬರೆಯಲಾಗಿತ್ತು. ವಿದ್ಯಾಸರಸ್ವತಿ ಭಾವಚಿತ್ರ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ವಹಿಸಿದ ಮಹಾತ್ಮ ಗಾಂಧೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ , ಅಂಬೇಡ್ಕರ್ ಭಾವಚಿತ್ರಗಳು, ಪಕ್ಷಿ,ಪ್ರಾಣಿ ಚಿತ್ರಗಳ ಸಹಿತ ಕಥೆಗಳು, ನುಡಿಮುತ್ತುಗಳು, ಪದಬಂಧ, ಚಿತ್ರ ಸಮೇಶ ಕಥೆಗಳು, ಪರಿಸರ ಸಂಬಂಧಿಸಿದ ಚಿತ್ರಗಳು ರಾರಾಜಿಸುತ್ತಿದ್ದವು. ಶಾಲೆಯ ವಿದ್ಯಾರ್ಥಿಗಳು ಈ ಪಲ್ಲಕ್ಕಿಯನ್ನು ಹೊತ್ತು ಕೊಂಡು ರಸ್ತೆಯುದ್ದಕ್ಕೂ 200ಮೀ. ನಡೆದುಕೊಂಡು ಹೋದರು.
ವಿದ್ಯಾರ್ಥಿ ಸಮೂಹದ ಬ್ಯಾಂಡ್ ಸೆಟ್ಟ, ಕನ್ನಡದ ಧ್ವಜ, ಶಾಲಾ ಬ್ಯಾನರ್ ಮುಂಚೂಣಿಯಲ್ಲಿತ್ತು. ಇವುಗಳ ಮಧ್ಯೆ ವಿದ್ಯಾರ್ಥಿಗಳು ಹೊತ್ತ ಅಕ್ಷರ ಪಲ್ಲಕ್ಕಿ ಹೆಜ್ಜೆ ಹಾಕಿತ್ತು. ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ವಿದ್ಯಾಭಿಮಾನಿಗಳು ಸಾಥ್ ನೀಡಿದರು. ಪುಸ್ತಕಗಳನ್ನು ವಿತರಿಸಲಾಯಿತು. ಮಧ್ಯಾಹ್ನದ ಬಿಸಿಊಟದೊಂದಿಗೆ ಶಾಲೆಯೊಂದಿಗೆ ನಿಕಟ ಸಂಬಂಧ ಇರುವ ಸತೀಶ್ ರೈ ಹಿತ್ಲುಮೂಲೆ ಪಾಯಸ ವ್ಯವಸ್ಥೆ ಮಾಡಿದ್ದು ಮಕ್ಕಳಲ್ಲಿ ವಿಶೇಷ ಸಂಭ್ರಮಕ್ಕೆ ಕಾರಣವಾಯಿತು.
ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ಇವೆ. ಇದರ ನಡುವೆ 1ನೇ ತರಗತಿಗೆ 7ನೇ ತರಗತಿ ವರೆಗೆ ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ 27 ಮಕ್ಕಳು ಸೇರ್ಪಡೆಯಾಗಿರುವುದು ಪ್ರಾರಂಭೋತ್ಸವದ ಮೆರಗು ಹೆಚ್ಚಿಸಿ ಸಾರ್ಥಕತೆ ಪಡೆದುಕೊಂಡಿತ್ತು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಚ್.ಸೂಫಿ ಶುಭ ಹಾರೈಸಿದರು. ಶಿಕ್ಷಕರಾದ ಮಹಾಬಲ ರೈ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಹೆತ್ತವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಸಾವಿತ್ರಿ ಕೆ. ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಶಿರ್ಲಾಲು ವಂದಿಸಿದರು. ಶಿಕ್ಷಕಿಯರಾದ ರೇಶ್ಮಾ, ದೀಪಾ, ಭವ್ಯಾ ಸಹಕರಿಸಿದರು.
ದಾಖಲಾತಿ ಹೆಚ್ಚಿದೆ
ಅಕ್ಷರ ನಮ್ಮ ಆಸ್ತಿ. ಅಕ್ಷರದಿಂದಲೇ ಮಕ್ಕಳ ಕಲಿಕೆ ಆರಂಭವಾಗುವುದು. ಪ್ರತಿ ಮಕ್ಕಳು ಪಲ್ಲಕ್ಕಿ ಏರುವ ಕನಸು ಕಾಣಲಿ. ಕೊನೆಗೆ ಅಕ್ಷರ ಪಲ್ಲಕ್ಕಿ ಇಂದು ಸಾಕಾರವಾಯಿತು. ವಿದ್ಯಾಭಿಮಾನಿಗಳ ಒಳ್ಳೆಯ ರೀತಿ ಸ್ಪಂದನೆ ಸಿಕ್ಕಿದೆ, ದಾಖಲಾತಿ ಹೆಚ್ಚಿದೆ.
– ಸಾವಿತ್ರಿ ಕೆ.,
ಶಾಲಾ ಮುಖ್ಯಗುರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.