ಬಿಪಿಎಲ್ ಕಾರ್ಡ್:ಅರ್ಜಿಗಳತ್ವರಿತ ವಿಲೇವಾರಿಗೆತಾ.ಪಂ.ಅಧ್ಯಕ್ಷರಸೂಚನೆ
Team Udayavani, Sep 19, 2018, 11:25 AM IST
ಮಹಾನಗರ: ಬಿಪಿಎಲ್ ಕಾರ್ಡ್‌ಗಾಗಿ ಸಲ್ಲಿಸಿದ ಅರ್ಜಿಗಳು 2017ರಿಂದ ವಿಲೇವಾರಿಯಾಗದೆ ಬಾಕಿಯಾಗಿವೆ. ಕೆಲವು ನಿಯಮಗಳಲ್ಲಿ ಉಂಟಾದ ಬದಲಾವಣೆಗಳಿಂದ ಈ ಸಮಸ್ಯೆ ಎದುರಾಗಿದೆ. ಪ್ರಸ್ತುತ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ತ್ವರಿತ ಗತಿಯಲ್ಲಿ ನಿರ್ವಹಿಸಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.
ಚೇಳಾಯಿರು ಗ್ರಾಮ ಪಂಚಾಯತ್‌ನಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿ ಅರ್ಜಿ ಸಲ್ಲಿಸಿ 2 ವರ್ಷವಾದರೂ ಪಡಿತರ ಕಾರ್ಡ್ ನೀಡಿಲ್ಲ ಎಂದು ಸದಸ್ಯೆ ವಜ್ರಾಕ್ಷಿ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. 2017ರಲ್ಲಿ 2,733 ಮತ್ತು 2018ರಲ್ಲಿ 1,522 ಅರ್ಜಿಗಳು ಬಂದಿವೆ. ಒಟ್ಟು 4,255 ಅರ್ಜಿಗಳು ವಿಲೇವಾರಿ ಆಗಿಲ್ಲ. ಮೊದಲ ಹಂತದಲ್ಲಿ 2017ರ ಫೆಬ್ರವರಿಯಿಂದ ಜೂನ್ ಅವಧಿಯಲ್ಲಿ ಸಲ್ಲಿಸಲಾದ ಅರ್ಜಿ ವಿಲೇವಾರಿ ಮಾಡಲಾಗುತ್ತಿದ್ದು, ಅಗತ್ಯ ದಾಖಲೆ ಪತ್ರ ಒದಗಿಸುವಂತೆ ಅರ್ಜಿದಾರರಿಗೆ ಫೋನ್ ಮೂಲಕ ಸೂಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮತದಾರ ಚೀಟಿ ತಿದ್ದುಪಡಿ
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಮತದಾರ ಗುರುತಿನ ಚೀಟಿ ತಿದ್ದುಪಡಿಯಿದ್ದಲ್ಲಿ ತಾಲೂಕು ಕಚೇರಿಗೆ ಭೇಟಿ ನೀಡಬಹುದು. ಅಲ್ಲಿ ಮೂರು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ತಿದ್ದುಪಡಿ ಬಗ್ಗೆ ಲಿಖಿತವಾಗಿ ನೀಡಿದರೆ ಸ್ಥಳದಲ್ಲೇ ಸರಿಪಡಿಸಿ ರಶೀದಿ ನೀಡುತ್ತಾರೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮತದಾರರ ಪಟ್ಟಿಯನ್ನು ಅ. 31ರಂದು ಪ್ರಕಟಿಸಲಾಗುತ್ತದೆ. ಬಳಿಕ ಮಾರ್ಚ್ ವರೆಗೆ ಸೇರ್ಪಡೆಗೆ, ತಿದ್ದುಪಡಿಗೆ ಅವಕಾಶವಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ಮಾಹಿತಿ ನೀಡಿದರು.
ಸೆಪ್ಟಂಬರ್ ಅಂತ್ಯದೊಳಗೆ ವಿಲೇವಾರಿ
94ಸಿ ಮತ್ತು 94ಸಿಸಿ ಅಡಿ ಸಲ್ಲಿಸಿದ ಅರ್ಜಿಗಳನ್ನು ಪಿಡಿಒಗಳೇ ತಿರಸ್ಕರಿಸುತ್ತಿದ್ದಾರೆ. ರಸ್ತೆ ಇಲ್ಲ ಎಂಬ ನೆಪವೊಡ್ಡಿ ಆ ಪ್ರದೇಶದಲ್ಲಿ ಹಕ್ಕುಪತ್ರ ನೀಡಲಾಗದು ಎಂಬ ನೆಪ ಹೇಳುತ್ತಿದ್ದಾರೆ ಎಂದು ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೌಕರ್ ಆಲಿ ಹೇಳಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್, 94 ಸಿ ಮತ್ತು 94 ಸಿಸಿ ಅಡಿ ಈಗಾಗಲೇ 20,748 ಅರ್ಜಿಗಳು ಸ್ವೀಕೃತ ಆಗಿವೆ. 4,626 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿದ್ದು, ಸೆಪ್ಟಂಬರ್ ಅಂತ್ಯದೊಳಗೆ ವಿಲೇವಾರಿ ಮಾಡಲಾಗುವುದು. ಯಾವುದೇ ಅರ್ಜಿಯನ್ನು ತಿರಿಸ್ಕರಿಸಬಾರದು ಎಂದು ಸೂಚನೆ ಇರುವುದರಿಂದ ತಿರಸ್ಕೃತ ಅರ್ಜಿಗಳ ಮರುಪರಿಶೀಲನೆ ನಡೆಯುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸ್ಥಾಯೀ ಸಮಿತಿ ಸದಸ್ಯ ಜನಾರ್ದನ ಗೌಡ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾನಂದ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ನರೋನ್ಹಾ, ಯು.ಪಿ.ಇಬ್ರಾಹಿಂ, ಮೂಡಬಿದಿರೆ ತಹಶೀಲ್ದಾರ್ ರಶ್ಮೀ ಮೊದಲಾದವರು ಭಾಗವಹಿಸಿದ್ದರು.
ಆಧಾರ್ ತಿದ್ದುಪಡಿ ಆಗುತ್ತಿಲ್ಲ
ಗ್ರಾಮ ಪಂಚಾಯತ್‌ನಲ್ಲಿ ಆಧಾರ್ ತಿದ್ದುಪಡಿ, ನೋಂದಣಿಗೆ ಸಮಸ್ಯೆಯಾಗುತ್ತಿದ್ದು, ಜನರಿಗೆ ಇದರಿಂದ ದರೆಯಾಗುತ್ತಿದೆ. ಆಧಾರ್ ತಿದ್ದುಪಡಿಗಾಗಿ ಸರಕಾರ ಮಾಡಿರುವ ನೂತನ ವ್ಯವಸ್ಥೆ ಯಾವುದೇ ಪಂಚಾಯತ್‌ನಲ್ಲಿ ಕಾರ್ಯಾಚರಿಸುತ್ತಿಲ್ಲ ಎಂದು ಸದಸ್ಯರು ದೂರಿದರು. ಪ್ರತಿನಿತ್ಯ ಸರ್ವರ್ ಸಮಸ್ಯೆ ಕಾಡುತ್ತಿದೆ. ಸರಕಾರ ಎಲ್ಲ ಕೆಲಸಗಳನ್ನು ಪಂಚಾಯತ್ ಮೇಲೆ ಹಾಕುವುದರಿಂದ ಇಲ್ಲಿ ಕೆಲಸ ಮಾಡುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು ಒತ್ತಡದಿಂದ ಕೆಲಸ ನಿರ್ವಹಿಸುವಂತಾಗಿದೆ ಎಂದು ನಾಮನಿರ್ದೇಶಿತ ಸದಸ್ಯರಾಗಿರುವ ಪಂಚಾಯತ್ ಅಧ್ಯಕ್ಷರು ಸಭೆಯಲ್ಲಿ ವಿವರಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಮಹಮ್ಮದ್ ಮೋನು, ತಮ್ಮ ವ್ಯಾಪ್ತಿಯ ಗುರುಪುರ, ಪಾವೂರು, ಕೊಣಾಜೆ ಹಾಗೂ ಮಂಜನಾಡಿ ಗ್ರಾ.ಪಂ. ನಲ್ಲಿ ಆಧಾರ್ ತಿದ್ದುಪಡಿ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಭ್ರಷ್ಟಾಚಾರದ ಆರೋಪ ಚರ್ಚೆ
ರವಿಶಂಕರ ಸೋಮೇಶ್ವರ ಅವರು ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ಸತ್ಯವೇನೆಂಬುದು ತಿಳಿಸಬೇಕು ಎಂದರು. ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯೆ ಸುರೇಖಾ ಸಹಿತ ಕೆಲವರು ಸದಸ್ಯರು ರವಿಶಂಕರ ಆಗ್ರಹವನ್ನು ಬೆಂಬಲಿಸಿದರು. ಅಡ್ಯಾರ್ ಗ್ರಾ.ಪಂ. ನಿರ್ಣಯ ಪ್ರತಿ ಇಲ್ಲದೇ ಇರುವುದರಿಂದ ಕ್ರಿಯಾ ಯೋಜನೆಗೆ ಅನುಮತಿ ನೀಡಿರಲಿಲ್ಲ. ಈ ಕುರಿತು ತುಸು ಗೊಂದಲವಾಗಿದೆ ಎಂದು ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು ಸಮಜಾಯಿಷಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.