ಮಂಗಳೂರಿನಲ್ಲಿ ಮೆದುಳು ನಿಷ್ಕ್ರಿಯ ಘೋಷಣೆ ವ್ಯವಸ್ಥೆ
Team Udayavani, Jan 8, 2019, 2:32 AM IST
ಮಂಗಳೂರು: ಇನ್ನು ಅಂಗಾಂಗ ದಾನ ಕುರಿತು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಕ್ಕೆ ಬೆಂಗಳೂರಿನಿಂದ ವೈದ್ಯರ ತಂಡ ಕರಾವಳಿಗೆ ದೌಡಾಯಿಸಬೇಕಾದ ಅಗತ್ಯವಿಲ್ಲ. ಈ ಪ್ರಕ್ರಿಯೆ ಸುಲಭ ಮತ್ತು ತ್ವರಿತವಾಗಿ ನಡೆಯಲು ‘ಮೆದುಳು ನಿಷ್ಕ್ರಿಯ ಘೋಷಣೆ’ ವ್ಯವಸ್ಥೆ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಂಗಾಂಗ ನಿಷ್ಕ್ರಿಯತೆ ಘೋಷಣೆಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸಲು ಬೆಂಗಳೂರಿನಿಂದ ತಂಡ ಆಗಮಿಸುವುದಕ್ಕೆ ಕನಿಷ್ಠ ನಾಲ್ಕು ತಾಸು ಬೇಕು. 3-4 ತಿಂಗಳ ಹಿಂದಷ್ಟೇ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯತೆ ಘೋಷಣೆಗೆ ಸರಕಾರದ ಜೀವ ಸಾರ್ಥಕತೆಯ ಸಮಿತಿ ರಚಿಸಲಾಗಿದೆ. ಇಬ್ಬರು ಸಂಯೋಜಕರು ಈ ಸಮಿತಿಯಲ್ಲಿದ್ದಾರೆ.
ಏನಿದು ಜೀವ ಸಾರ್ಥಕತೆ?
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೋರ್ವನ ಅಂಗಾಂಗ ದಾನ ಮಾಡುವುದಿದ್ದರೆ ಮೆದುಳು ನಿಷ್ಕ್ರಿಯತೆಯನ್ನು ಘೋಷಣೆ ಮಾಡಿ ಕಾನೂನು ಪ್ರಕ್ರಿಯೆಯ ಅನುಸಾರ ಅಂಗಾಂಗಗಳನ್ನು ತೆಗೆಯಬೇಕು. ಇದಕ್ಕಾಗಿ ಝೋನಲ್ ಕೋ- ಆರ್ಡಿನೇಶನ್ ಎಂಬ ಸಮಿತಿ ಕಾರ್ಯನಿರ್ವಹಿಸುತ್ತಿತ್ತು. ಅಂಗಾಂಗ ದಾನವನ್ನು ಕಾನೂನು ಚೌಕಟ್ಟಿನೊಳಗೆ ತರಲು ರಾಜ್ಯ ಸರಕಾರವು 2017ರಲ್ಲಿ ಜೀವ ಸಾರ್ಥಕತೆ ಎಂಬುದಾಗಿ ಮರು ನಾಮಕರಣ ಮಾಡಿತು. ಈಗ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯತೆ ಘೋಷಣೆಗೆ ಜೀವ ಸಾರ್ಥಕತೆ ಉಪ ಸಮಿತಿಯನ್ನು ರಚಿಸಲಾಗಿದೆ.
9 ಆಸ್ಪತ್ರೆಗಳಲ್ಲಿ ಘೋಷಣೆ
ಅಂಗಾಂಗ ದಾನಕ್ಕೂ ಮುನ್ನ ಮೃತ ವ್ಯಕ್ತಿಯ ಮೆದುಳು ನಿಷ್ಕ್ರಿಯತೆಯನ್ನು ಘೋಷಣೆ ಮಾಡಬೇಕು. ಅನಂತರವಷ್ಟೇ ಜೀವ ಸಾರ್ಥಕತೆ ತಂಡದವರು ಆ ಆಸ್ಪತ್ರೆಗೆ ತೆರಳಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸುತ್ತಾರೆ. ಈ ಘೋಷಣೆಯನ್ನು ಸರಕಾರದಿಂದ ಪರವಾನಿಗೆ ಪಡೆದ ಮಂಗಳೂರು ಮತ್ತು ಮಣಿಪಾಲದ 9 ಆಸ್ಪತ್ರೆಗಳಲ್ಲಿ ಮಾತ್ರ ಮಾಡಲು ಸಾಧ್ಯ. ಮಣಿಪಾಲ ಆಸ್ಪತ್ರೆ, ಮಂಗಳೂರು ಕೆಎಂಸಿ, ಇಂಡಿಯಾನ ಆಸ್ಪತ್ರೆ, ಫಾ| ಮುಲ್ಲರ್ ಆಸ್ಪತ್ರೆ ಕಂಕನಾಡಿ, ಯೇನಪೊಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲಬೈಲ್, ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಯೇನಪೊಯ ಆಸ್ಪತ್ರೆ ದೇರಳಕಟ್ಟೆ, ಎ.ಜೆ. ಆಸ್ಪತ್ರೆ ಕುಂಟಿಕಾನ ಹಾಗೂ ಯುನಿಟಿ ಆಸ್ಪತ್ರೆಗಳಲ್ಲಿ ಇದಕ್ಕೆ ಸಂಬಂಧಿಸಿದ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಇವು ತಮ್ಮ ಆಸ್ಪತ್ರೆಗಳಲ್ಲಿ ನಿಯಮಾನುಸಾರ 2 ಬಾರಿ ಮೆದುಳು ನಿಷ್ಕ್ರಿಯತೆ ಘೋಷಿಸಿದ ಬಳಿಕ ಜೀವ ಸಾರ್ಥಕತೆ ಮೆದುಳು ನಿಷ್ಕ್ರಿಯ ಘೋಷಣೆ ಸಮಿತಿಗೆ ತಿಳಿಸಬೇಕು ಎಂದು ಜೀವ ಸಾರ್ಥಕತೆ ದ.ಕ. ಜಿಲ್ಲಾ ಸಂಯೋಜಕಿ ಲವೀನಾ ಗ್ಲಾಡಿಸ್ ಡಿ’ಸೋಜಾ ತಿಳಿಸಿದ್ದಾರೆ. ಇನ್ನೋರ್ವ ಸಂಯೋಜಕಿಯಾಗಿ ಪದ್ಮಾವತಿ ಅವರಿದ್ದಾರೆ.
15 ಮಂದಿಗೆ ಜೋಡಣೆ
ಓರ್ವ ವ್ಯಕ್ತಿಯಿಂದ ಎಂಟು ವ್ಯಕ್ತಿಗಳ ಜೀವ ಉಳಿಸಲು ಸಾಧ್ಯ. ಮರಣೋತ್ತರ ದಾನ, ಲೈವ್ ರಿಲೇಟೆಡ್ (ಜೀವಂತ ಇರುವಾಗಲೇ ನೀಡುವಂತಹದು) ಹಾಗೂ ಸಂಬಂಧಿಕರಲ್ಲದವರ ದಾನ ಎಂಬ ಮೂರು ವಿಧಗಳಿವೆ. ಕಿಡ್ನಿಗೆ ಹೆಚ್ಚಿನ ಬೇಡಿಕೆ ಇದ್ದು, ಇದು ದಾನಿಯು ಜೀವಂತ ಇರುವಾಗಲೇ ದಾನ ಮಾಡುವಂಥದ್ದು. ಮಂಗಳೂರಿನಲ್ಲಿ ಐದು ವರ್ಷಗಳ ಅವಧಿಯಲ್ಲಿ ಸುಮಾರು 15 ಮಂದಿಯ ಅಂಗಾಂಗಗಳನ್ನು ಇತರರಿಗೆ ಜೋಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ| ಸಚ್ಚಿದಾನಂದ ರೈ ತಿಳಿಸಿದ್ದಾರೆ.
ನೋಂದಣಿ ಹೇಗೆ?
ಅಂಗಾಂಗ ದಾನದ ಇಚ್ಛೆಯುಳ್ಳವರು ಕುಟುಂಬಿಕರ ಅನುಮತಿ ಮತ್ತು ಕುಟುಂಬಿಕರೊಂದಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆ ವ್ಯಕ್ತಿ ಮೃತಪಟ್ಟಲ್ಲಿ ಅಥವಾ ಅಪಘಾತದಂತಹ ಸಂದರ್ಭಗಳಲ್ಲಿ ಬದುಕುಳಿಯುವ ಸಾಧ್ಯತೆ ಕಡಿಮೆ ಇದ್ದಾಗ ಕುಟುಂಬಿಕರು ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಬೇಕು. ನೋಂದಣಿಯಾಗದಿದ್ದಲ್ಲಿ ಸ್ಥಳದಲ್ಲಿಯೇ ಕುಟುಂಬದವರಿಗೆ ಕೌನ್ಸೆಲಿಂಗ್ ನಡೆಸಿ ಅಂಗಾಂಗ ದಾನದ ಬಗ್ಗೆ ತಿಳಿಸುವ ಪ್ರಯತ್ನವನ್ನು ಜೀವ ಸಾರ್ಥಕತೆ ತಂಡ ಮಾಡುತ್ತದೆ.
ಈ ಹಿಂದೆ ಮೆದುಳು ನಿಷ್ಕ್ರಿಯತೆ ಘೋಷಣೆ ಬಳಿಕದ ಪ್ರಕ್ರಿಯೆಗಳನ್ನು ನಡೆಸಲು ಬೆಂಗಳೂರಿನಿಂದ ತಂಡ ಬರಬೇಕಿತ್ತು. ಕೆಲವು ತಿಂಗಳುಗಳಿಂದ ಜೀವ ಸಾರ್ಥಕತೆ ಯೋಜನೆಯ ಉಪ ಸಮಿತಿಯು ಸರಕಾರಿ ವೆನಾÉಕ್ ಆಸ್ಪತ್ರೆಯಲ್ಲಿ ಆರಂಭವಾಗಿರುವುದರಿಂದ ಪ್ರಕ್ರಿಯೆಗಳು ಸುಲಭವಾಗಿವೆ.
– ಡಾ| ಜಿ.ಜಿ. ಲಕ್ಷ್ಮಣ ಪ್ರಭು, ಮುಖ್ಯಸ್ಥರು, ಯುರಾಲಜಿ ವಿಭಾಗ, ಕೆಎಂಸಿ ಮಂಗಳೂರು
— ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.