ಉಳ್ಳಾಲ ಕಡಲತೀರದಲ್ಲಿ ಬೂತಾಯಿ ಸುಗ್ಗಿ !
Team Udayavani, Nov 23, 2017, 8:14 AM IST
ಉಳ್ಳಾಲ: ಇಲ್ಲಿನ ಕಡಲ ಕಿನಾರೆಯಲ್ಲಿ ಬುಧವಾರ ಬೂತಾಯಿ ಮೀನುಗಳ ಸುಗ್ಗಿ. ಅಪಾರ ಪ್ರಮಾಣ ದಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ಬಂದು ಬೀಳುತ್ತಿದ್ದು ಸ್ಥಳೀಯರು ಗೋಣಿ ಚೀಲಗಳಲ್ಲಿ ತುಂಬಿಸಿ ವಾಹನಗಳಲ್ಲಿ ಕೊಂಡೊಯ್ದರು !
ಕಳೆದ ಮೂರು ದಿನಗಳ ಹಿಂದೆ ಉಳ್ಳಾಲದ ಸೀಗ್ರೌಂಡ್, ಮೊಗವೀರ ಪಟ್ಣ, ಕೈಕೋ, ಕಿಲೆರಿಯಾ ನಗರ, ಸೋಮೇಶ್ವರದಲ್ಲಿ ಬೂತಾಯಿ ಮೀನು ಗಳು ಸಣ್ಣ ಪ್ರಮಾಣದಲ್ಲಿ ಸಮುದ್ರದ ದಡ ಸೇರಿದ್ದವು. ಮಂಗಳವಾರ ಯಾವುದೇ ಮೀನು ಪತ್ತೆಯಾಗಿರ ಲಿಲ್ಲ. ಆದರೆ ಬುಧವಾರ ದೊಡ್ಡ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಕಡಲತೀರಕ್ಕೆ ಬಂದಿದ್ದು ಜನರು ಮುಗಿಬಿದ್ದರು. ಕೆಲವರು ಮಾರಾಟ ಮಾಡಿದರೆ ಕೆಲವರು ಮನೆಯ ಪದಾರ್ಥಕ್ಕೆ ಬಳಸಿಕೊಂಡರು.
ದೊಡ್ಡ ಬಲೆಗೆ ಹೆದರಿ ದಡ ಸೇರುತ್ತವೆ
ಒಂದೇ ಜಾತಿಯ ಮೀನುಗಳು ಸಮುದ್ರದಲ್ಲಿ ಒಂದೆಡೆ ಗುಂಪಾಗಿ ಚಲಿಸುತ್ತವೆ. ಇದನ್ನು ಮೀನುಗಾರರು ಮೀನಿನ ತೆಪ್ಪ ಎಂದು ಕರೆಯುತ್ತಾರೆ. ಸಮುದ್ರದ ದಡದಿಂದ ನಾಲ್ಕು ಮಾರು ದೂರದಲ್ಲಿ ಬೂತಾಯಿಯಂತಹ ಸಣ್ಣ ಮೀನುಗಳು ಸಂಚರಿಸುವಾಗ ಪಸೀìನ್ ಬೋಟ್ ಸೇರಿದಂತೆ ಯಾಂತ್ರೀಕೃತ ದೋಣಿಗಳು ಬಳಸುವ ದೊಡ್ಡ ಬಲೆಯಿಂದ ತಪ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ಸಮುದ್ರದ ಬದಿಗೆ ಬಂದಾಗ ಸಮುದ್ರದ ಅಲೆಗಳಿಗೆ ಸಿಲುಕಿ ಈ ರೀತಿ ಸಾಮೂಹಿಕವಾಗಿ ದಡಕ್ಕೆ ಬಂದು ಬೀಳುತ್ತವೆ ಎನ್ನುತ್ತಾರೆ ಮೀನುಗಾರರಾದ ಮೊಗವೀರಪಟ್ಣದ ವಸಂತ ಅಮೀನ್. ಹಿಂದೆ ಬೇರೆ ಜಾತಿಯ ಮೀನುಗಳು ಈ ರೀತಿ ದಡಕ್ಕೆ ಬರುತ್ತಿದ್ದವು. ಆದರೆ ಪಸೀìನ್ ಬೋಟುಗಳ ಸಂಖ್ಯೆ ಹೆಚ್ಚಾದಂತೆ ಸಣ್ಣ ಮೀನುಗಳು ಮಾತ್ರ ದಡ ಸೇರುತ್ತಿವೆ ಎನ್ನುತ್ತಾರೆ ವಸಂತ್ ಅವರು.
ಬಲೆಯ ಸ್ಥಾನ ಪಲ್ಲಟ ಮಾಡುವ ಶಕ್ತಿಯಿರುತ್ತದೆ
ಬೂತಾಯಿ ಮೀನುಗಳು ಅಪಾಯ ಗ್ರಹಿಸುವ ಶಕ್ತಿ ಹೊಂದಿದ್ದು, ಗುಂಪಾಗಿ ಬಲೆಗೆ ಬಿದ್ದರೆ ಬಲೆಯನ್ನು ಸ್ಥಾನಪಲ್ಲಟ ಮಾಡುವ ಶಕ್ತಿಯನ್ನು ಹೊಂದಿರುತ್ತವೆ ಎನ್ನುತ್ತಾರೆ ಸ್ಥಳೀಯ ಮೀನುಗಾರ ಯೋಗೀಶ್ ಅವರು. ಇತ್ತೀಚಿನ ದಿನಗಳಲ್ಲಿ ಮಂಜೇಶ್ವರದಲ್ಲಿ ಮೀನುಗಾರರು ಸಮುದ್ರ ತೀರದಲ್ಲೇ ಬಲೆಗಳು ಹಾಕುವುದರಿಂದ ಅಲ್ಲಿಂದ ತಪ್ಪಿಸುವ ಯತ್ನದಲ್ಲಿ ಈ ರೀತಿ ಸಮುದ್ರದ ದಡಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಯೋಗೀಶ್ ಅವರು.
ಹಿಂದೆ ಪಲಿಕೆಯ ಮೂಲಕ ಮೀನಿನ ರಾಶಿ ಪತ್ತೆ
ಉಳ್ಳಾಲದಲ್ಲಿ ಈ ಹಿಂದೆಯೂ ಬೂತಾಯಿ ಮೀನುಗಳು ಇದೇ ರೀತಿ ಸಿಕ್ಕಿದ್ದವು ಎನ್ನುತ್ತಾರೆ ಸ್ಥಳೀಯ ಮೀನುಗಾರ ಪುಷ್ಪರಾಜ್. ಹಿಂದಿನ ದಿನಗಳಲ್ಲಿ ಸಮುದ್ರ ತೀರದಲ್ಲಿ ಕಸದ ರೀತಿಯಲ್ಲಿ ಪಲಿಕೆ ಬಿದ್ದರೆ ಆ ಪ್ರದೇಶದಲ್ಲಿ ಮೀನಿನ ನಿಧಿ ಇದೆ ಎಂದು ಹಿರಿಯರು ಹೇಳುತ್ತಿದ್ದರು. ಇತ್ತೀಚೆಗೆ ಪಲಿಕೆ ಬೀಳುವುದು ಕಡಿಮೆಯಾಗಿದೆ ಎನ್ನುತ್ತಾರೆ ಅವರು.
ಮೀನುಗಳು ಆಹಾರ ಹುಡುಕುತ್ತ ಸಾಗುವಾಗ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಪೆರುವಿನಂತಹ ದೇಶಗಳಲ್ಲಿ ಈ ರೀತಿಯ ಕ್ರಿಯೆ ನಡೆಯುತ್ತದೆ. ಸಾಗರ ತಳದಲ್ಲಿ ಉಷ್ಣಾಂಶ ಏರುಪೇರಾದರೂ ಮೀನುಗಳು ದಡಕ್ಕೆ ಬರುವ ಸಾಧ್ಯತೆ ಇದೆ. ಯಾವುದಕ್ಕೂ ಆ ಭಾಗದ ನೀರು ಮತ್ತು ಸಿಕ್ಕಿರುವ ಮೀನುಗಳ ಸಂಶೋಧನೆಯಿಂದ ಕಾರಣವನ್ನು ಅರಿಯಬಹುದು.
– ಪ್ರವೀಣ್ ರೈ, ಸಹಾಯಕ ಪ್ರಾಧ್ಯಾಪಕರು, ನಿಟ್ಟೆ ವಿ.ವಿ. ಸಂಶೋಧನಾ ವಿಭಾಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.