ಬಿಸಿಲಿನ ತಾಪಕ್ಕೆ ಹೊತ್ತಿ ಉರಿಯುವ ಕಾರುಗಳು !
Team Udayavani, Feb 21, 2019, 4:35 AM IST
ಮಹಾನಗರ : ಮಂಗಳೂರು, ಪುತ್ತೂರು, ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಕಾರುಗಳಲ್ಲಿ ಚಲಿಸುತ್ತಿರಬೇಕಾದರೆ ಹಠಾತ್ ಬೆಂಕಿ ಕಾಣಿ ಸಿ ಕೊಂಡು ಅಪಾಯಕ್ಕೆ ಸಿಲುಕುವ ದುರ್ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಕರಾವಳಿ ಭಾಗದಲ್ಲಿ ಈ ರೀತಿ ಕಾರುಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರ ಣ ಇಲ್ಲಿನ ಉರಿ ಬಿಸಿಲು ಅಥವಾ ಏರಿಕೆಯಾಗುತ್ತಿರುವ ತಾಪಮಾನ ಎನ್ನುವುದು ಈಗ ಬೆಳಕಿಗೆ ಬಂದಿದೆ.
ಬೇಸಗೆ ಶುರುವಾಗುತ್ತಿದ್ದಂತೆ ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುವುದು ವಾಡಿಕೆ. ಜನವರಿಯಿಂದ ಮೇ ತಿಂಗಳ ವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಬಿಸಿಲಿನ ತೀವ್ರತೆ ಜಾಸ್ತಿಯಿದ್ದು, ಎಲ್ಲೆಡೆ ಉರಿ ಸೆಕೆ ಅನುಭವವಾಗುತ್ತಿದೆ. ಅದರಲ್ಲಿಯೂ ಮಧ್ಯಾಹ್ನ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳುವುದಕ್ಕೆ ಅಸಾಧ್ಯ ಎಂಬಂಥ ಪರಿ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ, ರಸ್ತೆಯಲ್ಲಿ ಕಾರುಗಳಲ್ಲಿ ಬಿಸಿಲಿನ ತಾಪದ ಕಿರಿಕಿರಿ ತಪ್ಪಿಸುವುದಕ್ಕೆ ಎಸಿ ಆನ್ ಮಾಡಿಕೊಂಡು ಪ್ರಯಾಣಿಸುತ್ತಿರಬೇಕಾದರೆ ಸ್ವಲ್ಪ ಮಟ್ಟಿನ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಏಕೆಂದರೆ, ಈ ರೀತಿಯ ರಣ ಬಿಸಿಲಿನ ತಾಪಕ್ಕೆ ವಾಹನಗಳು ಕೂಡ ಬಿಸಿಯಾಗಿ ಬೆಂಕಿ ಹತ್ತಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಅದ್ದರಿಂದ ಬಿಸಿಲಿಗೆ ಕಾದ ಕಬ್ಬಿಣದಂತೆ ಆಗಿರುವ ಡಾಂಬರು ರಸ್ತೆಗಳಲ್ಲಿ ಕಾರುಗಳಲ್ಲಿ ಚಲಿಸುವಾಗ ಅಥವಾ ಉರಿ ಬಿಸಿಲಿನಲ್ಲಿ ಗಂಟೆಗಳ ಕಾಲ ವಾಹನಗಳನ್ನು ಪಾರ್ಕಿಂಗ್ ಮಾಡಿ ಅನಂತರ ಅದನ್ನು ಚಲಾಯಿಸಿಕೊಂಡು ಹೋಗುವಾಗ ಬೆಂಕಿ ಆಕಸ್ಮಿಕದ ಬಗ್ಗೆ ಎಚ್ಚರದಿಂದ ಇರುವುದು ಉತ್ತಮ ಎನ್ನುವುದಕ್ಕೆ ಜಿಲ್ಲೆಯಲ್ಲಿ ಇತ್ತೀಚೆಗೆ ರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರುಗಳೇ ಸಾಕ್ಷಿ.
ಇನ್ನೊಂದೆಡೆ, ‘ಸುದಿನ’ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಗೆ ಕಾಲದಲ್ಲಿಯೇ ಹೆಚ್ಚಾಗಿ ಕಾರುಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನಿರಬಹುದು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಿದೆ. ಅದರಂತೆ, ಈ ಬಗ್ಗೆ ವಾಹನ ಮೆಕ್ಯಾನಿಕಲ್ ತಜ್ಞರನ್ನು ವಿಚಾರಿಸಿದಾಗ, ‘ಕರಾವಳಿ ಭಾಗದಲ್ಲಿ ಕಾರುಗಳಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಇಲ್ಲಿನ ಅತಿಯಾದ ಉರಿ ಬಿಸಿಲು ಒಂದು ಕಾರಣ ಎಂಬುದು ತಿಳಿದು ಬಂದಿದೆ.
ಕಾರಣ ಏನು?
ಸಾಮಾನ್ಯವಾಗಿ ಕಾರು ಸೇರಿದಂತೆ ಯಾವುದೇ ವಾಹನಗಳು ಮೂರರಿಂದ ನಾಲ್ಕು ಕಿಲೋ ಮೀಟರ್‌ವರೆಗೆ ಚಲಿಸಿದ ಕೂಡಲೇ ಎಂಜಿನ್ ಬಿಸಿಯಾಗಲು ಪ್ರಾರಂಭವಾಗುತ್ತದೆ. ಆನಂತರ ಹೆಚ್ಚಿನ ದೂರಕ್ಕೆ ಸತತವಾಗಿ ಚಲಿಸುತ್ತಿದ್ದಂತೆ ಎಂಜಿನ್ ಗಳು ಸಹಜವಾಗಿಯೇ ಬಿಸಿಯಾಗಿರುತ್ತವೆ.
ಇನ್ನೊಂದೆಡೆ, ಮಧ್ಯಾಹ್ನದ ವೇಳೆಗೆ ಡಾಂಬರು ರಸ್ತೆಗಳು ಹೆಚ್ಚು ಬಿಸಿಯಾಗಿರುತ್ತವೆ. ಈ ವೇಳೆ, ರಸ್ತೆಯಲ್ಲಿ ಬಹಳ ವೇಗವಾಗಿ ಕಾರುಗಳು ಚಲಿಸುತ್ತಿರುವಾಗ, ಏಕಾಏಕಿ ಬ್ರೇಕ್ ಹಾಕಿದರೆ ಬೆಂಕಿಯ ಕಿಡಿ ಸೃಷ್ಟಿಯಾಗುತ್ತವೆ. ಇಂಥ ಸಂದರ್ಭದಲ್ಲಿ ವಾಹನದಲ್ಲಿ ಏನಾದರೂ ಇಂಧನ ಸೋರಿಕೆಯಾಗುತ್ತಿದ್ದರೆ ಕೂಡಲೇ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ವಾಹನ ಎಂಜಿನ್ ತಜ್ಞರ ಅಭಿಪ್ರಾಯ.
ಇನ್ನೊಂದೆಡೆ, ಕಳಪೆ ಗುಣಮಟ್ಟದ ವೈಯರಿಂಗ್ ಅಳವಡಿಕೆ, ಮಾನ್ಯತೆ ಇಲ್ಲದ ಕಳಪೆ ಇಂಧನ ಸರಬರಾಜು ಪೈಪ್ ಗಳನ್ನು ವಾಹನಗಳಲ್ಲಿ ಜೋಡಣೆ ಮಾಡಿದ್ದರೆ, ಅದು ಬಿಸಿಲಿನ ತೀವ್ರತೆಗೆ ಕರಗುವ ಸಾಧ್ಯತೆಯಿದೆ. ಆಗ, ಪೆಟ್ರೋಲ್ ಅಥವಾ ಡೀಸೆಲ್ ಸೋರಿಕೆಯಾಗಿ ಬೆಂಕಿಗೆ ಕಾರಣವಾಗಬಹುದು.
ಒಂದು ವೇಳೆ, ವಿದ್ಯುತ್ ಸರಬರಾಜಿಗೆ ಅಳವಡಿಸಿರುವ ಕಳಪೆ ಗುಣಮಟ್ಟದ ವೈಯರ್‌ನ ಕವಚ ಕರಗಿ ಹೋದರೆ, ಶಾರ್ಟ್‌ಸರ್ಕ್ನೂಟ್ ಕೂಡ ಆಗಿ ಬೆಂಕಿ ಕಾಣಿಸಿಕೊಳ್ಳಬಹುದು. ಬಿಸಿಲಿನ ತೀವ್ರತೆ ಜಾಸ್ತಿ ಇದ್ದ ಕಡೆಗಳಲ್ಲಿ ಈ ರೀತಿಯ ತಾಂತ್ರಿಕ ದೋಷ ಅಥವಾ ಕಳಪೆ ರೀತಿಯ ವಾಹನ ರಿಪೇರಿಯಿಂದ ಕಾರುಗಳಲ್ಲಿ ಅಥವಾ ಬೇರೆ ಮಾದರಿ ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ವಾಹನಗಳನ್ನು ಗ್ಯಾರೇಜ್‌ಗಳಿಗೆ ಸರ್ವಿಸ್ ಗೆ ಇಡುವಾಗ ಅಥವಾ ಇಂಧನ ಸರಬರಾಜು ಪೈಪ್ ಬದಲಾವಣೆ ಅಥವಾ ವೈಯರಿಂಗ್ ಬದಲಿಸುವಾಗ, ಅದರ ಗುಣಮಟ್ಟದ ಕಡೆಗೆ ಗಮನಹರಿಸುವುದು ಉತ್ತಮ ಎನ್ನುತ್ತಾರೆ ಮಂಗಳೂರಿನ ವೆಹಿಕಲ್ ಮೆಕ್ಯಾನಿಕ್ ರಾಜೇಶ್.
ಕೆಲವೊಂದು ಕಾರುಗಳು ಗ್ಯಾಸ್ ಇಂಧನದಿಂದ ಚಲಿಸುತ್ತವೆ. ಬಿಸಿಲಿನ ತಾಪ ಹೆಚ್ಚಾದಂತೆ ಗ್ಯಾಸ್‌ನಿಂದ ಎಂಜಿನ್‌ಗೆ ಬರುವ ಕಾಪರ್ ಪೈಪ್ ಸಡಿಲಗೊಳ್ಳಬಹುದು. ಇದರಿಂದ ಗ್ಯಾಸ್ ಲೀಕೇಜ್ ಆಗಿ ಬೆಂಕಿ ತಗಲಬಹುದು. ಕಾರುಗಳಲ್ಲಿ ಓವರ್ ಲೋಡ್ ಹಾಕುವುದರಿಂದ ಎಂಜಿನ್ ಹೀಟ್ ಆಗಿ ವಯರ್ ಕರಗುತ್ತದೆ. ಅಲ್ಲದೆ, ಓವರ್‌ಲೋಡ್‌ನಿಂದ ಟಯರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಳ್ಳುತ್ತದೆ.
ಜಿಲ್ಲೆಯಲ್ಲಿ ಹಲವು ಬೆಂಕಿ ಪ್ರಕರಣ
ಮುಡಿಪು ಸಮೀಪದ ಹೂ ಹಾಕುವ ಕಲ್ಲು ಬಳಿ ಇತ್ತೀಚೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿತ್ತು. ಕಾರಿನ ಒಳಗಡೆ ಇದ್ದವರು ಕಾರು ನಿಲ್ಲಿಸಿ ಹೊರಗಡೆ ಹಾರಿದ ಪರಿಣಾಮ ಪ್ರಾಣಾಪಾಯ ಸಂಭವಿಸಲಿಲ್ಲ. ಅದೇ ರೀತಿ ಕಳೆದ ವರ್ಷ ಮೇ 17ರಂದು ಮಂಗಳೂರಿನ ಜ್ಯೋತಿ ವೃತ್ತ ಬಳಿ ಕಾರಿಗೆ ಬೆಂಕಿ ತಗುಲಿತ್ತು. 2017ರ ಡಿಸೆಂಬರ್ ತಿಂಗಳಿನಲ್ಲಿ ನಗರದ ಬೆಸೆಂಟ್ ಜಂಕ್ಷನ್ ಬಳಿ ಕಾರೊಂದಕ್ಕೆ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋಗಿತ್ತು. ಜು. 1ರಂದು ಕಾವೂರಿನ ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರು ಬೆಂಕಿಗೆ ಆಹುತಿಯಾಗಿತ್ತು.
ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ಸಂಟ್ಯಾರಿನಲ್ಲಿ ಜೂನ್ 9ರಂದು ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ನಡೆದಿತ್ತು. ಬೆಂಕಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಇನ್ನು, ಕಳೆದ ವರ್ಷ ನವೆಂಬರ್ 29ರಂದು ಬೆಳ್ತಂಗಡಿ ತಾಲೂಕಿನ ಕಡಬದ ಕುಟ್ರಾಪ್ಪಾಡಿ ಇದೇ ರೀತಿಯ ಘಟನೆ ನಡೆದಿತ್ತು. ಕಾರು ಚಲಿಸುತ್ತಿದ್ದ ವೇಳೆ ಕಾರಿನ ಎಂಜಿನ್‌ನಲ್ಲಿ ಸಣ್ಣ ಬೆಂಕಿ ಕಾಣಿಸಿ ಕಾರು ಭಸ್ಮವಾಗಿತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿರಲಿಲ್ಲ. ಕಳೆದ ಜುಲೈ 9 ರಂದು ಪುತ್ತೂರು ತಾಲೂಕಿನ ಅಂಕತ್ತಡ್ಕ ಬಳಿ ಮಂಗಳೂರಿನ ಕಡೆಗೆ ಬರುತ್ತಿದ್ದ ಕಾರಿನ ಸೈಲೆನ್ಸರ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತತ್‌ಕ್ಷಣ ಬೆಂಕಿ ತಗುಲಿ ಇಡೀ ಕಾರು ಬೂದಿಯಾಗಿತ್ತು.
ರಿಪೇರಿ ವೇಳೆ ಗಮನಹರಿಸಿ
ವಾಹನಗಳ ರಿಪೇರಿ ಸಮಯದಲ್ಲಿ ಮಾಲಕರು ಹಣದ ಆಸೆಗೆ ಕಳಪೆ ಗುಣಮಟ್ಟದ ವಾಹನಗಳ ಬಿಡಿ ಭಾಗಗಳನ್ನು ಅಳವಡಿಸುವುದು ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ವಾಹನಗಳ ಬಿಡಿಭಾಗಗಳನ್ನು ಅಳವಡಿಸಬೇಕು.
– ಪ್ರದೀಪ್ ಭಟ್,
ಮೆಕ್ಯಾನಿಕಲ್ ಎಂಜಿನಿಯರ್
ಹಳೆ ಕಾರುಗಳಲ್ಲಿ ಜಾಸ್ತಿ
ಕರಾವಳಿಯ ಇತ್ತೀಚಿನ ಬಿಸಿಲಿನಿಂದಾಗಿ ಕಾರಿಗೆ ಬೆಂಕಿ ತಗುಲುವ ಸಂಭವ ಜಾಸ್ತಿ. ಕೆಲವೊಂದು ಬಾರಿ ಶಾರ್ಟ್ ಸರ್ಕ್ನೂಟ್‌ನಿಂದಲೂ ಬೆಂಕಿ ತಗಲಬಹುದು. ಹೆಚ್ಚಾಗಿ ಹಳೆಯ ಕಾರುಗಳಲ್ಲಿ ಅಪಾ ಯದ¬ ಈ ಬಗ್ಗೆ ವಾಹನ ಸವಾರರು ಎಚ್ಚರಿಕೆಯಿಂದ ಇರುವುದು ಉತ್ತಮ.
– ರಾಜೇಶ್,
ಕಾರು ಮೆಕ್ಯಾನಿಕ್
ಮುನ್ನೆಚ್ಚರಿಕೆ ವಹಿಸಿ
ವಾಹನ ಚಾಲನೆ ವೇಳೆ ಸುಟ್ಟ ವಾಸನೆ ಬಂದರೆ ಕೂಡಲೇ ಗಾಡಿ ನಿಲ್ಲಿಸಿ.
ಒಣ ಹುಲ್ಲು, ಕಸವಿರುವ ಒಣ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವುದು ತಪ್ಪಿಸಿ.
ಸುಮಾರು 5,000 ಕಿ.ಮೀ. ಕ್ರಮಿಸಿದ ಕೂಡಲೇ ಕಾರು ಸರ್ವಿಸ್ ಮಾಡಿ.
ಬೆಂಕಿ ತಗುಲಿರುವುದು ಗೊತ್ತಾದ ತತ್‌ಕ್ಷಣ ಗಾಡಿಯಿಂದ ಹೊರ ಬನ್ನಿ.
ಇಂಧನ ಸೋರಿಕೆ ತಪ್ಪಿಸಲು ಟ್ಯಾಂಕ್ ಮುಚ್ಚಳ ಬಿಗಿಯಾಗಿ ಹಾಕಿ.
ಕಾರಿನೊಳಗೆ ಬೀಡಿ, ಸಿಗರೇಟ್ ಸೇದಬೇಡಿ.
ಬಿಸಿಲಿನಲ್ಲಿ ಹೆಚ್ಚು ಹೊತ್ತು ವಾಹನ ಪಾರ್ಕಿಂಗ್ ಮಾಡಬೇಡಿ.
ಚಲಿಸುವ ವೇಳೆ ಎಂಜಿನ್ ಜಾಸ್ತಿ ಬಿಸಿಯಾಗಿರುವುದು ಅನುಭವಕ್ಕೆ ಬಂದರೆ ಸ್ವಲ್ವ ಹೊತ್ತು ನಿಲ್ಲಿಸಿ.
ರಿಪೇರಿ ವೇಳೆ, ಕಳಪೆ ದರ್ಜೆ ಬ್ಯಾಟರಿ, ವೈಯರ್, ಇಂಧನ ಪೈಪ್ ಅಳವಡಿಕೆಯಾಗದಂತೆ ಗಮನಿಸಿ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.