BUS ಕರಾವಳಿಯಲ್ಲೂ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್
Team Udayavani, Nov 1, 2023, 1:28 AM IST
ಮಂಗಳೂರು: ಬೆಂಗಳೂರಿನಲ್ಲಿ ಕಾರ್ಯಾಚರಿಸುವ ರೀತಿಯಲ್ಲಿ ಕರಾವಳಿ ಭಾಗದಲ್ಲೂ ಸದ್ಯದಲ್ಲೇ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿವೆ.
ಕೆಲವು ತಿಂಗಳ ಹಿಂದೆ ಮೊದಲನೇ ಹಂತದಲ್ಲಿ ನಿಗಮ ಸೇರಿದ್ದ ಇವಿ ಪ್ಲಸ್ ಬಸ್‌ಗಳ ಕಾರ್ಯಾಚರಣೆಯನ್ನು ಮೈಸೂರು, ವೀರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ರೂಟ್‌ಗಳಿಗೆ ಆದ್ಯತೆ ನೀಡಲಾಗಿತ್ತು. ಇದೀಗ ಸದ್ಯದಲ್ಲೇ ಎರಡನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಗೆ ರಾಜ್ಯ ಸರಕಾರ ಮುಂದಾಗಿದ್ದು, ಈ ವೇಳೆ ಮಂಗಳೂರು, ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೂ ಎಲೆಕ್ಟ್ರಿಕ್ ಬಸ್‌ಗಳು ಹಂಚಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಮೂಲಗಳ ಮಾಹಿತಿಯ ಪ್ರಕಾರ ಸುಮಾರು 40 ಎಲೆಕ್ಟ್ರಿಕ್ ಬಸ್‌ಗಳು ಕರಾವಳಿ ಭಾಗದಲ್ಲಿ ಕಾರ್ಯಾಚರಿಸಲಿವೆ. ಅದಕ್ಕೆ ಸಂಬಂಧಿಸಿ ಪೂರಕ ಕೆಲಸಗಳೂ ನಡೆಯುತ್ತಿವೆ. ಎಲೆಕ್ಟ್ರಿಕ್ ಬಸ್‌ಗಳ ಚಾರ್ಜ್‌ಗೆಂದು ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಈಗಾಗಲೇ ಮಂಗಳೂರಿನಲ್ಲಿ ಜಾಗ ಹುಡುಕಲಾಗುತ್ತಿದ್ದು ಕುಂಟಿಕಾನ ದಲ್ಲಿರುವ ಮೂರನೇ ಡಿಪೋದಲ್ಲಿ ಮತ್ತು ಬಿಜೈ ಡಿಪೋದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಅದರಂತೆ ಪುತ್ತೂರು ವಿಭಾಗದಲ್ಲಿಯೂ ಜಾಗ ಹುಡುಕಬೇಕಿದೆ.
ಪ್ರಸ್ತಾವಿತ ರೂಟ್‌ಗಳಾವುದು?
ಕರಾವಳಿಗೆ ಮೊದಲ ಹಂತದಲ್ಲಿ ಸುಮಾರು 40 ಎಲೆಕ್ಟ್ರಿಕಲ್ ಬಸ್‌ಗಳು ಆಗಮಿಸಬಹುದು. ಸಾಮಾನ್ಯವಾಗಿ ಬಸ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 250 ಕಿ.ಮೀ. ಸಂಚರಿಸುತ್ತದೆ. ಒಂದು ಬಸ್ ದಿನಕ್ಕೆ ಮೂರರಿಂದ ನಾಲ್ಕು ಟ್ರಿಪ್ ಸಂಚರಿಸಬಹುದು. ಅಂತಹ ರೂಟ್‌ಗಳನ್ನೇ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವುದಾದರೆ ಪ್ರಸ್ತಾವಿತ ರೂಟ್‌ಗಳ ಬಗ್ಗೆ ಮುಖ್ಯಕಚೇರಿಗೂ ಮಾಹಿತಿ ನೀಡಲಾಗಿದೆ. ಅದರಂತೆಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಉಡುಪಿ ಮಾರ್ಗವಾಗಿ ಮಣಿಪಾಲ, ಮಂಗಳೂರಿನಿಂದ ಧರ್ಮಸ್ಥಳಕ್ಕೆ, ಮಂಗಳೂರಿ ನಿಂದ ಕಾಸರಗೋಡು, ಮಂಗಳೂರು.
ಸಬ್ಸಿಡಿ ನೀಡಿದರೆ ನಾವೂ ರೆಡಿ
ಈ ಮಧ್ಯೆ ಖಾಸಗಿ ಬಸ್‌ಗಳನ್ನು ಕೂಡ “ಎಲೆಕ್ಟ್ರಿಕ್’ ಆಗಿ ಬದಲಾವಣೆಗೆ ಚಿಂತನೆ ನಡೆಸಲಾಗಿದೆ. “ಎಲೆಕ್ಟ್ರಿಕ್ ಬಸ್ ಖರೀದಿಗೆ ದುಬಾರಿ ಬಂಡವಾಳ ಹೂಡಿಕೆ ಮಾಡಬೇಕು. ಒಂದು ಬಸ್‌ಗೆ ಸುಮಾರು 1.3 ಕೋಟಿ ರೂ. ಇದೆ. ಒಂದು ವೇಳೆ ಇದಕ್ಕೆ ಸೂಕ್ತ ಸಬ್ಸಿಡಿ, ಸಹಕಾರ ಸಿಕ್ಕರೆ ಖಾಸಗಿಯವರೂ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ನಡೆಸಬಹುದು’ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಚಾತ್ರ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಎಲೆಕ್ಟ್ರಿಕ್ ಬಸ್ ಖರೀದಿಗೆ ಈ ಹಿಂದೆ ಕೇಂದ್ರ ಸರಕಾರದಿಂದ ಸಹಾಯ ಧನ ಸಿಗುತ್ತಿತ್ತು. ಆದರೆ ಸದ್ಯ ನಿಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಒಂದು ಸಾವಿರ ಬಸ್ ಖರೀದಿಗೆ ಖಾಸಗಿಯಾಗಿ ಟೆಂಡರ್ ಕರೆದು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಲಿದೆ. ಕಿ.ಮೀ.ಗೆ ತಕ್ಕಂತೆ ಅವರಿಗೆ ದರ ನಿಗದಿ ಮಾಡುತ್ತೇವೆ. ಆ ಬಸ್‌ಗಳಲ್ಲಿ ಆಯಾ ಟೆಂಡರ್ ವಹಿಸಿದ ಸಂಸ್ಥೆಯವರೇ ಚಾಲಕರನ್ನು ನೇಮಕ ಮಾಡುತ್ತಾರೆ. ನಿರ್ವಾಹಕರು ನಮ್ಮ ನಿಗಮದವರು ಇರುತ್ತಾರೆ. ಬಸ್ ನಿಗಮದ ಕೈಸೇರಿದ ಬಳಿಕ ಎಲ್ಲ ಜಿಲ್ಲೆಗಳಲ್ಲೂ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
– ರಾಮಲಿಂಗ ರೆಡ್ಡಿ, ಸಾರಿಗೆ ಸಚಿವರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.