ಗಡಿನಾಡ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ಕೊರತೆ
Team Udayavani, Jul 9, 2018, 9:14 AM IST
ಪುತ್ತೂರು: ಸಾರಿಗೆ ಎನ್ನುವುದು ಜನರ ಜೀವನಾಡಿ. ಗ್ರಾಮೀಣ ಭಾಗದಲ್ಲಿ ಈ ಜೀವನಾಡಿ ಸಮರ್ಪಕವಾಗಿಲ್ಲ. ಗಡಿನಾಡಿನಲ್ಲಿ ಶಾಲಾ-ಕಾಲೇಜಿಗೆ ತೆರಳಲು ಸೂಕ್ತ ಸಮಯದಲ್ಲಿ ಬಸ್ ವ್ಯವಸ್ಥೆ ಇಲ್ಲದೇ ಗಡಿನಾಡಿನ ವಿದ್ಯಾರ್ಥಿಗಳು ದಿನನಿತ್ಯ ಸಂಕಷ್ಟ ಪಡುವಂತಾಗಿದೆ. ಸರಕಾರಿ ಬಸ್ ಪಾಸ್ ಸೌಲಭ್ಯ ಇದ್ದರೂ ವಿದ್ಯಾರ್ಥಿಗಳಿಗೆ ಬಸ್‌ಗೆ ಕಾಯುವುದೇ ಒಂದು ಚಿಂತೆಯಾಗಿದೆ.
ವಿಟ್ಲ, ಮಂಜೇಶ್ವರ, ಪಕಳಕುಂಜ, ಸಾಲೆತ್ತೂರು, ಬುಲೇರಿಕಟ್ಟೆ, ಪುಣಚ, ಅಡ್ಯನಡ್ಕ, ಅಡ್ಕಸ್ಥಳ, ಕೇರಳ ರಾಜ್ಯದ ಅಡ್ಕಸ್ಥಳ, ಪೆರ್ಲ, ಬದಿಯಡ್ಕ ಮೊದಲಾದ ಕಡೆಗಳಿಂದ ಪುತ್ತೂರು ನಗರ ಸೇರಿದಂತೆ ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿದ್ದಾರೆ. ಶೇ. 50ರಷ್ಟು ವಿದ್ಯಾರ್ಥಿಗಳು ಗಡಿನಾಡಿನಿಂದ ಬರುತ್ತಿದ್ದಾರೆ. ಅವರಿಗೆ ಸೂಕ್ತವಾದ ಬಸ್ ಸೌಲಭ್ಯ ಇಲ್ಲದೆ ಅವರ ಶೈಕ್ಷಣಿಕ ಬದುಕಿನಲ್ಲಿ ಒತ್ತಡದಲ್ಲಿಯೇ ಶಿಕ್ಷಣ ಪೂರೈಸುವಂತಾಗಿದೆ. ಇದೊಂದು ಬಹುದೊಡ್ಡ ಸಮಸ್ಯೆಯಾಗಿದೆ. ಬೆಳಗ್ಗೆ ಹಾಗೂ ಸಂಜೆ ಸೀಮಿತ ಬಸ್ ಗಳು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ.
ಒಡಂಬಡಿಕೆಯಂತೆ ಬಸ್ ಸಂಚಾರವಂತೆ
ಪುತ್ತೂರು ಡಿಪೋದಿಂದ ಬೆಳಗ್ಗೆ ಹಾಗೂ ಸಂಜೆ ಕೇರಳ ಭಾಗಕ್ಕೆ ಹೋಗುವ ಬಸ್ಸಿನ ಸಂಖ್ಯೆ ಕಡಿಮೆ. ಸಂಜೆ 4 ಗಂಟೆಯಿಂದ ಕಾಸರಗೋಡು ಕಡೆಗೆ ಬಸ್ ಹೋದರೆ ಮರುದಿನ ವಾಪಾಸು ಬರುವುದು ಬೆಳಗ್ಗೆ. ಸಂಜೆ ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸಿದರೆ ಬೆಳಗ್ಗೆ ಉಂಟಾಗುತ್ತಿರುವ ಸಮಸ್ಯೆ ನೀಗುತ್ತದೆ. ಪ್ರಸ್ತುತವಾಗಿ 3 ಸರಕಾರಿ ಬಸ್ ಮಾತ್ರ ಸಂಚರಿಸುತ್ತಿದೆ. ಶಾಲಾ-ಕಾಲೇಜು ಬಿಡುವ ಹೊತ್ತಿಗೆ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸಿನ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ KSRTCಯಲ್ಲಿ ವಿಚಾರಿಸಿದರೆ ಕೇರಳ ರಾಜ್ಯದೊಂದಿಗೆ ಮಾಡಿಕೊಂಡ ಒಡಂಬಡಿಕೆ ಪ್ರಕಾರ ಸಂಜೆಯ ವೇಳೆ ಇಷ್ಟೇ ಬಸ್ಸುಗಳನ್ನು ಕಳುಹಿಸಲು ಅನುಮತಿ ಇದೆ ಎಂದು ಉತ್ತರಿಸಿದ್ದಾರೆ.
ಕೆಂಪು, ಕಪ್ಪು ಬೋರ್ಡ್ ತಂದಿಟ್ಟ ಸಮಸ್ಯೆ
ಮಂಜೇಶ್ವರ, ಕನ್ಯಾನ, ಅಡ್ಯನಡ್ಕ, ಅಡ್ಕಸ್ಥಳ, ಪೆರ್ಲ, ಬದಿಯಡ್ಕ ಹಾಗೂ ಕಾಸರಗೋಡಿನ ಕೆಲವು ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಹಾಗೂ ರಾಜ್ಯ ಸಾರಿಗೆ ಬಸ್‌ಗಳ ನೀತಿ ಗೊಂದಲದ ಗೂಡಾಗಿದೆ. ಈ ಮೇಲಿನ ಎಲ್ಲ ಭಾಗಗಳಿಗೆ ತೆರಳುವ ಬಸ್‌ಗಳು ಕರ್ನಾಟಕ ಗಡಿಯನ್ನು ದಾಟಿ ಕೇರಳವನ್ನು ಸಂಪರ್ಕಿಸುತ್ತದೆ. ಕೇರಳ ರಾಜ್ಯದ ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ರೆಡ್ ಬೋರ್ಡ್ ಹಾಗೂ ಬ್ಲ್ಯಾಕ್ ಬೋರ್ಡ್ ಎಂದು ಬಸ್ ಗಳನ್ನು ವಿಭಾಗಿಸಲಾಗಿದೆ. ಅಂತಾರಾಜ್ಯದ ವಿದ್ಯಾರ್ಥಿಗಳಿಗೆ ರೆಡ್ ಬೋರ್ಡ್‌ನಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಇದೆ. ಇತ್ತ ಗಡಿ ಪ್ರದೇಶದ ಮಕ್ಕಳಿಗೆ ರೆಡ್ ಬೋರ್ಡ್ ಬಸ್‌ಗಳ ಸೌಲಭ್ಯ ಇಲ್ಲ. ಗಡಿ ಪ್ರದೇಶದ ಮಕ್ಕಳು ಪಾಸ್ ಇದ್ದೂ ಕೆಂಪು ಬೋರ್ಡ್ ಬಸ್ ಹತ್ತಿದರೆ ಟಿಕೆಟ್ ತೆತ್ತು ಪ್ರಯಾಣಿಸಬೇಕು. ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಕೆಂಪು ಬೋರ್ಡ್‌ನಲ್ಲಿಯೂ ಪ್ರಯಾಣಿಸಬಹುದು ಎನ್ನುವ ಮೌಖೀಕ ಆದೇಶವಿದ್ದರೂ, ನಿರ್ವಾಹಕರು ಲಿಖೀತ ಆದೇಶ ಇಲ್ಲ ಎನ್ನುತ್ತಾರೆ. ರೂಟ್ ಬದಲಾವಣೆಗೊಂಡು ಹೊಸದಾಗಿ ಬರುತ್ತಿರುವ ನಿರ್ವಾಹಕರು ಕೆಂಪು ಬಸ್ ನಲ್ಲಿ ಅನುಮತಿ ನೀಡುತ್ತಿಲ್ಲ. ಇದರಿಂದ ಬಸ್ ಪಾಸ್ ಪ್ರಯೋಜನಕ್ಕೆ ಬಾರದಂತಾಗಿದೆ.
ಫುಟ್ ಬೋರ್ಡ್ ಪ್ರಯಾಣ ಅನಿವಾರ್ಯ
ಸರಕಾರಿ ಬಸ್ ಗಳ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುವುದು ನಿಯಮಾನುಸಾರ ತಪ್ಪು. ಆದರೆ ಈ ಭಾಗದಲ್ಲಿ ಫುಟ್ ಬೋರ್ಡ್ ಪ್ರಯಾಣವೇ ಮಾಮೂಲಾಗಿದೆ. ಸೀಮಿತ ಬಸ್ ಗಳಿರುವ ಕಾರಣ ಫುಟ್ ಬೋರ್ಡಿನಲ್ಲಿ ಬಾವಲಿಗಳಂತೆ ವಿದ್ಯಾರ್ಥಿಗಳು ನೇತಾಡುವುದು ಅನಿವಾರ್ಯವೂ ಆಗಿಬಿಟ್ಟಿದೆ. ಫುಟ್ ಬೋರ್ಡಿನಲ್ಲಿರುವವರು ಮಳೆಗಾಲದಲ್ಲಿ ಒದ್ದೆಯಾಗುತ್ತಾರೆ.
ದೂರು ಬಂದಿಲ್ಲ
ಬಸ್ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾಗುತ್ತಿದೆ ಎಂದಾದರೆ KSRTC ವಿಭಾಗಕ್ಕೆ ದೂರನ್ನು ಸಲ್ಲಿಸಬಹುದು. ಆನಂತರ ಪರೀಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದರ ಕುರಿತು ಯಾವುದೇ ದೂರುಗಳು ಬಂದಿಲ್ಲ. ವಿದ್ಯಾರ್ಥಿಗಳು ಈ ಸಂಬಂಧ ಮನವಿ ಮಾಡಿಕೊಂಡರೆ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳ ಮುಂದೆ ಪ್ರಸ್ತಾವ ಸಲ್ಲಿಸಲಾಗುವುದು.
– ನಾಗರಾಜ್ ಶಿರಾಲಿ, ಕೆಎಸ್ಸಾರ್ಟಿಸಿ ಡಿಸಿ, ಪುತ್ತೂರು ವಿಭಾಗ
ಯಾವ ಬಸ್ಸಲ್ಲಿ ಹೋಗೋದು?
ಸಂಜೆ ಅಂತಾರಾಜ್ಯ ಬಸ್ ಗಳು ಬಂದಾಗ ಎಲ್ಲ ವಿದ್ಯಾರ್ಥಿಗಳು ಬಸ್ ಪಾಸ್ ಇರುವ ಕಾರಣದಿಂದ ಹತ್ತುತ್ತಾರೆ. ಆದರೆ ಬಸ್ ನಿರ್ವಾಹಕರು ಅಂತಾರಾಜ್ಯ ಭಾಗದ ವಿದ್ಯಾರ್ಥಿಗಳು ಮಾತ್ರ ಹತ್ತಿದರೆ ಸಾಕು ಎಂದು ಹೇಳುತ್ತಾರೆ. ಮತ್ತೆ ಬರುವ ಕೆಲವೇ ಕೆಲವು ಬಸ್ ಗಳು ಪುತ್ತೂರು KSRTC ನಿಲ್ದಾಣದಿಂದ ಹೊರಡುವಾಗಲೇ ಫುಲ್ ಆಗಿರುತ್ತದೆ. ನಾವು ಯಾವ ಬಸ್ಸಲ್ಲಿ ಹೋಗೋದು? ನಮ್ಮ ಬಸ್ ಪಾಸ್ ಪ್ರಯೋಜನವಾಗುತ್ತಿಲ್ಲ.
– ಸವಿತಾ ರೈ, ಕಾಲೇಜು ವಿದ್ಯಾರ್ಥಿನಿ, ನೆಹರೂನಗರ
— ಕಾರ್ತಿಕ್ ಅಮೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.