ಬಜಪೆ : ಬ್ಯಾಡಗಿ ಮೆಣಸು ಭಾರೀ ಖಾರ! ವಾರದಲ್ಲಿ 100 ರೂ. ಹೆಚ್ಚಳ
Team Udayavani, Aug 7, 2022, 4:11 PM IST
ಬಜಪೆ : ಹುಳಿ, ಉಪ್ಪು, ಖಾರ ಸರಿಯಾಗಿ ನಾಟದಿದ್ದರೆ ಪದಾರ್ಥಕ್ಕೆ ರುಚಿ ಇರುವುದಿಲ್ಲ. ಆದರೆ ಅಡುಗೆಗೆ ಖಾರದ ರುಚಿಯನ್ನು ನೀಡುವ ಬ್ಯಾಡಗಿ ಮೆಣಸಿಗೆ ಭಾರೀ ಬೆಲೆ ಏರಿಕೆಯ ಖಾರವೂ ಸೇರಿದೆ. ಕಳೆದ ಒಂದು ವಾರದಲ್ಲಿ ಕೆಜಿಗೆ 100 ರೂ. ಏರಿಕೆ ಕಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಬಳಕೆ ಮಾಡುವ ಬ್ಯಾಡಗಿ ಮೆಣಸಿಗೆ ಕಳೆದ ವಾರ ಕೆ.ಜಿ.ಗೆ 380-400 ಇದ್ದರೆ ಈಗ 450ರಿಂದ 500ರ ವರೆಗೆ ತಲುಪಿದೆ. ಚಿಲ್ಲರೆ ಮಾರಾಟಗಾರರು ಕೆಜಿಗೆ 520 ರೂ.ಗಳಂತೆ ಮಾರುತ್ತಿದ್ದಾರೆ. ಜತೆಗೆ ಕುಮ್ಟೆ ಹಾಗೂ ಡಬ್ಬಿ ಮೆಣಸೆಂದು ಕರೆಯಲ್ಪಡುವ ಕಾಶ್ಮೀರಿ ಮೆಣಸಿನ ದರವೂ ಏರಿಕೆ ಕಂಡಿದೆ.
ಹೊಟ್ಟೆ ಉರಿಸುವ ಶಿರಸಿ ಮೆಣಸು
ಮೆಣಸಿನ ಹುಡಿಗೆ ಹೆಚ್ಚು ಉಪಯೋಗಿಸುವ ಶಿರಸಿ, ಸಿದ್ದಾಪುರ ಮೆಣಸು ಹೆಚ್ಚಾಗಿ ಸಂತೆಯಲ್ಲಿ ಕಾಣಸಿಗುತ್ತದೆ. ಇದರ ಬೆಲೆ ಕೆಜಿಗೆ 300ರಿಂದ 350 ರೂ. ವರೆಗೆ ಇದೆ. ಇದರ ಖಾರ ಹೆಚ್ಚು. ಬ್ಯಾಡಗಿ ಮೆಣಸು ತುಟ್ಟಿಯೆಂಬ ಕಾರಣಕ್ಕೆ ಶಿರಸಿ, ಸಿದ್ದಾಪುರ ಮೆಣಸನ್ನು ಕೆಲವರು ಕೊಂಡು ಹೋಗಿ ಪದಾರ್ಥಕ್ಕೆ ಬಳಸಿ ಹೊಟ್ಟೆಯ ಉರಿಸಿಕೊಂಡವರೂ ಇದ್ದಾರೆ.
ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ
ಹಬ್ಬಗಳ ಮಾಸ ಆರಂಭವಾಗಿರುವುದರಿಂದ ಬೇಡಿಕೆ ಜಾಸ್ತಿಯಾಗುತ್ತಿದ್ದು, ಮೆಣಸಿನ ಪೂರೈಕೆ ಕಡಿಮೆಯಗುತ್ತಿದೆ. ಆದ್ದರಿಂದ ದರದಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಅತಿ ಮಳೆ: ಬೆಳೆ ನಷ್ಟ
ಮೆಣಸು ಬೆಳೆಯುವ ಪ್ರದೇಶದಲ್ಲಿ ಈ ಬಾರಿ ಅಧಿಕ ಮಳೆಯಾಗಿದ್ದರಿಂದ ಮೆಣಸಿನ ಬೆಳೆಗೆ ಭಾರೀ ಹಾನಿಯಾಗಿದೆ. ಹೆಚ್ಚು ದಾಸ್ತಾನು ಮಾಡಿದರೆ ಹಾಳಾಗುವ ಭಯ. ಬೆಲೆ ಏರಿಕೆಯಿಂದ ಗ್ರಾಹಕರ ಕೈಯೂ ಮುಂದೆ ಬಾರದೆ ಇರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹೊಡೆತ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.