ಸಾಮಾಜಿಕ ಮೌಲ್ಯ ಪಡೆಯಲು ಶಿಬಿರ ಸಹಕಾರಿ: ನಿರ್ಮಲ್ ಕುಮಾರ್
Team Udayavani, Apr 20, 2018, 12:22 PM IST
ಮಹಾನಗರ: ನಗರದ ಯಾಂತ್ರೀಕೃತ ಬದುಕಿನಲ್ಲಿ ಬಾಲ್ಯದ ಮುಗ್ಧತೆ ಕಳೆದುಕೊಳ್ಳುತ್ತಿರುವ ಮಕ್ಕಳಿಗೆ ಮನೋರಂಜನೆ, ಜೀವನ ಶಿಕ್ಷಣ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪಡೆಯುವಲ್ಲಿ ಶಿಬಿರಗಳು ಉಪಯುಕ್ತವಾಗಿವೆ. ಈ ನಿಟ್ಟಿನಲ್ಲಿ ಜೈನ್ ಮಿಲನ್ ಪ್ರಯತ್ನ ಶ್ಲಾಘನೀಯ ಎಂದು ಕರ್ಣಾಟಕ ಬ್ಯಾಂಕ್ ಉಪ ಮಹಾಪ್ರಬಂಧಕ ನಿರ್ಮಲ್ ಕುಮಾರ್ ಹೆಗ್ಡೆ ಹೇಳಿದರು.
ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆದ ಭಾರತೀಯ ಜೈನ್ ಮಿಲನ್ ಮಂಗಳೂರು ಮತ್ತು ಮಂಗಳೂರು ಯುವ ಜೈನ್ ಮಿಲನ್ ಜಂಟಿ ಆಶ್ರಯದಲ್ಲಿ ನಗರದ ಸುತ್ತಮುತ್ತಲಿನ ಪರಿಸರದ ಜೈನ ಸಮಾಜದ ಮಕ್ಕಳಿಗೆ ನಡೆದ ಬೌದ್ಧಿಕ ಹಾಗೂ ಮಾನಸಿಕ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನೊಳಗೊಂಡ ಮೂರು ದಿನಗಳ ಬೇಸಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ| ವೃಷಭರಾಜ್ ಜೈನ್ ಮಾತನಾಡಿ, ಪೋಷಕರಿಗೆ ಹಾಗೂ
ಮಕ್ಕಳಿಗೆ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಆಪ್ತಸಲಹೆ, ತರಬೇತಿ ಹಾಗೂ ಸಂವಹನ ಕಲೆಯ ಮಹತ್ವವನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಲಯದ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಅವರು ಕರಾವಳಿ ಜಿಲ್ಲೆಗಳ ಜೈನ್ ಮಿಲನ್‌ಗಳ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ನ್ಯಾಯವಾದಿ ರವಿವರ್ಮ, ಮಯೂರ ಕೀರ್ತಿ, ಯುವ ಉದ್ಯಮಿ ದರ್ಶನ್ ಜೈನ್, ಯುವಮಿಲನ್‌ನ ವಲಯದ ನಿರ್ದೇಶಕ ಜಿತೇಶ್ ಜೈನ್, ವಿಕಾಸ್ ಜೈನ್, ಉದ್ಯಮಿ ಹಿತೇಂದ್ರ ಕೊಟ್ಟಾರಿ, ಮಂಗಳೂರು ಜೈನ್ ಮಿಲನ್ ನ ಅಧ್ಯಕ್ಷ ಸುಕುಮಾರ್ ಬಲ್ಲಾಳ್ ಎನ್., ಕಾರ್ಯದರ್ಶಿ ಅರಿಂಜಯ ಜೈನ್, ಯುವ ಮಿಲನ್ ಅಧ್ಯಕ್ಷ ಪವನ್ ಮಂಜೇಶ್ವರ, ಕಾರ್ಯದರ್ಶಿ ಶ್ರೀವೀರ್ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ ಸಚಿನ್ ಜೈನ್ ವಂದಿಸಿದರು.
ವಿವಿಧ ತರಬೇತಿ
ಮೂರು ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದ 56 ಮಕ್ಕಳು ವ್ಯಕ್ತಿತ್ವ ವಿಕಸನ ತರಬೇತಿ, ಗಾಳಿಪಟ ತಯಾರಿ ಹಾಗೂ ಪಣಂಬೂರಿನ ಬೀಚಿನಲ್ಲಿ ಗಾಳಿಪಟ ಹಾರಾಡಿಸುವ ಪ್ರಾತ್ಯಕ್ಷಿಕೆ, ಪಿಲಿಕುಳದ ಗುತ್ತಿನಮನೆ, ಪ್ರಾಣಿಸಂಗ್ರಹಾಲಯ ಮತ್ತು ಪ್ಲಾನೆಟೋರಿಯಂಗೆ ಭೇಟಿ, ಡ್ರಾಯಿಂಗ್ ತರಬೇತಿ, ಕ್ಲೇ ಮಾಡೆಲಿಂಗ್, ಮಿಮಿಕ್ರಿ, ಸಂವಹನ ಕಲೆಯ ತರಬೇತಿಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.