ಸೇನಾಧಿಕಾರಿ ಆಗುವುದಾಗಿ ನೋಟ್‌ಬುಕ್ಕಲ್ಲಿ ಬರೆದಿದ್ದವ ಈಗ ಕ್ಯಾಪ್ಟನ್
Team Udayavani, Feb 12, 2018, 10:04 AM IST
ಮಂಗಳೂರು: ಠಾಕುಠೀಕಾದ ಸಮವಸ್ತ್ರ, ಶಿಸ್ತು, ಸಾಹಸದ ಚಟುವಟಿಕೆಗಳನ್ನು ಕಂಡು ಆತನಿಗೆ ಎನ್‌ಸಿಸಿ ಸೇರಬೇಕು ಎಂಬ ಹಂಬಲ. ಆದರೆ ಅವಕಾಶ ಸಿಗದಾಗ ಅದಕ್ಕಾಗಿ ತಂದೆ ಬಳಿ ಹಠ ಮಾಡಿದ್ದ. ಕೊನೆಗೆ ಅಧ್ಯಾಪಕರನ್ನು ಮಾತನಾಡಿ ಅವಕಾಶ ಕೊಡಿಸಲಾಗಿತ್ತು. ಇಂತಹ ಹುಡುಗ, ಸೇನಾಧಿಕಾರಿಯಾಬೇಕು ಎಂದು ತನ್ನ ನೋಟ್‌ಬುಕ್‌ನಲ್ಲೇ ಬರೆದುಕೊಂಡಿದ್ದ. ಇಂಥ ಕನಸು ಕಂಡು, ಅದನ್ನು ನನಸಾಗಿಸಿದವರು, ರಜನೀಶ್ ಸಿದ್ಧಿ ಲೈನ್ಕಜೆ. ಅವರೀಗ ಭೂಸೇನೆಯಲ್ಲಿ ಕ್ಯಾಪ್ಟನ್!
ವೀರರ ನಾಡು ಕೊಡಗಿನ ಸಂಪಾಜೆಯವರಾದ ಲೈನ್ಕಜೆ ರಾಮಚಂದ್ರ- ಲಕ್ಷ್ಮೀ ದಂಪತಿ ಪುತ್ರ ರಜನೀಶ್ ಬಹುಮುಖ ಪ್ರತಿಭೆಯವರು. ಉತ್ತಮ ಚಿತ್ರ ಕಲಾವಿದರಾಗಿದ್ದು, ನೀನಾಸಂನಲ್ಲಿ ತರಬೇತಿ ಪಡೆದ ನಾಟಕ ಕಲಾವಿದರೂ ಹೌದು. ಆದರೆ ದೇಶಸೇವೆಯ ಉತ್ಸಾಹ ಅವರನ್ನು ಭೂಸೇನೆ ಕ್ಯಾಪ್ಟನ್ ಆಗಿಸಿದ್ದು 2014ರಲ್ಲಿ ಲೆಫ್ಟಿನೆಂಟ್ ಆಗಿ ನಿಯುಕ್ತಿ ಯಾಗಿದ್ದರು. ಬೆಳಗಾವಿಯಲ್ಲಿ ಕಮಾಂಡೋ ತರಬೇತಿ ಪಡೆದು, ಪ್ರಸಕ್ತ ಪಂಜಾಬ್‌ನಲ್ಲಿ ಆರ್ಮಿಮೆಕನೈಸ್ಡ್ ಇನ್‌ಫೆಂಟ್ರಿಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಜಮ್ಮು - ಕಾಶ್ಮೀರಕ್ಕೆ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಒ.ಟಿ.ಎ. ಚೆನ್ನೈಯಲ್ಲಿ ತಂದೆ- ತಾಯಿ, ತಂಗಿಯೊಂದಿಗೆ ಕ್ಯಾ| ರಜನೀಶ್.
ಚುಕ್ಕಿ ಚಿತ್ರದ ಪ್ರತಿಭೆ
ಸುಳ್ಯದ ಸ್ನೇಹ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸುಳ್ಯ ಸರಕಾರಿ ಪ.ಪೂ. ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಕಲೆ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು. ಬಳಿಕ ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿದ್ದು, ಆಗಲೇ ಸಂತ ಅಲೋಶಿಯಸ್ ಕಾಲೇಜಿನ ಆಶ್ರಯದಲ್ಲಿ ಎನ್ ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರ ಚುಕ್ಕಿಚಿತ್ರ ಬರೆದು ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಬದುಕಿದ್ದೇ ಪವಾಡ..!
ಸುಮಾರು 20 ವರ್ಷಗಳ ಹಿಂದಿನ ಕಥೆ. ಆಗ ರಜನೀಶ್ ನಾಲ್ಕನೇ ತರಗತಿಯ ಬಾಲಕ. ಸುಳ್ಯದಿಂದ ಸಂಜೆ ಶಾಲೆ ಮುಗಿಸಿ ಬರುತ್ತಿದ್ದ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ತಂದೆ ಕಲ್ಲುಗುಂಡಿಯಲ್ಲಿ ಕಾಯುತ್ತಿದ್ದರು. ವ್ಯಾನ್ ಇಳಿದು ರಸ್ತೆ ದಾಟುತ್ತಿದ್ದ ಬಾಲಕ, ವೇಗವಾಗಿ ಬಂದ ಬಸ್ಸಿನಡಿಗೆ ಬಿದ್ದಿದ್ದ. ಆ ಹೊತ್ತಿಗೆ ಬಾಲಕನ ಇನ್ನಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪವಾಡಸದೃಶವಾಗಿ ಅವರು ಬದುಕಿದ್ದರು. ಅಚ್ಚರಿ ಎಂದರೆ, ನ.21ರ ಅದೇ ದಿನ ಅವರ ಬರ್ತ್‌ಡೇ ಕೂಡ ಆಗಿತ್ತು.
ಸೈಕ್ಲಿಂಗ್ ಹವ್ಯಾಸ
ಕ್ಯಾ| ರಜನೀಶ್ ಸೈಕ್ಲಿಂಗ್ ಹವ್ಯಾಸ ಹೊಂದಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಮಂಗಳೂರು ಸೈಕ್ಲಿಂಗ್ ಕ್ಲಬ್ ಸದಸ್ಯರಾಗಿದ್ದರು. ಸೈಕಲ್‌ನಲ್ಲೇ ರಾಜ್ಯ ಸುತ್ತಿದ್ದಾರೆ. ಕಳೆದ ಜೂನ್ ನಲ್ಲಿ ಅತಿ ದುರ್ಗಮ ಹಾದಿಯ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಗೆ ಸೈಕಲ್‌ನಲ್ಲಿ ಒಬ್ಬರೇ ಸವಾರಿ ಮಾಡಿದ್ದಾರೆ. ಸಮುದ್ರ ಮಟ್ಟದಿಂದ 14 ಸಾವಿರ ಎತ್ತರದ ಪ್ರದೇಶದಲ್ಲಿ 501 ಕಿ.ಮೀ. ಸಾಗಿದ್ದಾರೆ. ಬಿಡುವಿನ ವೇಳೆ ಚಿತ್ರಗಳನ್ನೂ ಬಿಡಿಸುತ್ತಾರೆ. ಈಗಾಗಲೇ ಹಲವು ಚಿತ್ರಗಳು ಬಹುಮಾನಗಳನ್ನೂ ಪಡೆದಿವೆ.
ಸಾಧಕ ಕುಟುಂಬ
ರಜನೀಶ್ ಅವರ ಅಜ್ಜ ಅಂಗ್ರಿ ನರಸಿಂಹ ಭಟ್ 1942ರಲ್ಲಿ ಶಾರ್ಪ್ ಶೂಟರ್ ಗೌರವವನ್ನು ಬ್ರಿಟಿಷ್ ಸರಕಾರದಿಂದ
ಪಡೆದಿದ್ದರು. ರಜನೀಶ್ ಅವರ ತಂದೆ ನ್ಯಾಯವಾದಿಯಾಗಿದ್ದು ಖ್ಯಾತ ಪುಸ್ತಕ ಸಂಗ್ರಾಹಕರು, ಹವ್ಯಾಸಿ ಬರಹಗಾರ, ಸಾವಯವ ಕೃಷಿಕರು. 1875ರಷ್ಟು ಹಳೆಯ ಪುಸ್ತಕದ ಜತೆಗೆ 18 ಕಪಾಟು ಪುಸ್ತಕಗಳಿವೆ. ಇವರು ಪ್ರಸಕ್ತ ಮಂಗಳೂರಲ್ಲಿ ವಾಸವಿದ್ದಾರೆ.
ಹೆಗಲು ಕೊಡುವ ಸಹೋದ್ಯೋಗಿಗಳು
ಮೊದಲೆಲ್ಲ ದಕ್ಷಿಣ ಭಾರತೀಯರು ಸೇನೆಗೆ ಸೇರಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಸೇನೆಗೆ ಸೇರಲು ಬಹಳಷ್ಟು ಮಂದಿಗೆ ಇಚ್ಛೆ ಇದೆ. ಸರಿಯಾದ ಮಾರ್ಗದರ್ಶನ ಹಾಗೂ ಹೆತ್ತವರ ಪ್ರೋತ್ಸಾಹ ಸಿಕ್ಕಿದರೆ ಉತ್ತಮ. ಇಲ್ಲಿ ಯಾವುದೇ ಕಷ್ಟದ ಸಂದರ್ಭದಲ್ಲೂ ಹೆಗಲು ಕೊಟ್ಟು ನಿಲ್ಲುವ ಸೈನಿಕ ಸಹೋದ್ಯೋಗಿಗಳಿದ್ದಾರೆ. ನಾವು ಒಂದು ಕುಟುಂಬದಂತೆ ಕರ್ತವ್ಯ ನಿರ್ವಹಿಸುತ್ತೇವೆ.
-ಕ್ಯಾ| ರಜನೀಶ್ ಸಿದ್ಧಿ ಲೈನ್ಕಜೆ
ಹೆಮ್ಮೆಯ ವಿಚಾರ
ನಮ್ಮ ಮಕ್ಕಳನ್ನು ಸಮಾಜದ ಮಗು ಎಂದು ತಿಳಿದು, ಇಂತಹ ಅವಕಾಶಗಳಿಗೆ ಪ್ರೋತ್ಸಾಹ ನೀಡುವುದು ಹೆಮ್ಮೆಯ ವಿಚಾರ. ಮಕ್ಕಳಿಗೆ ಎಳವೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದರೆ, ಆ ಮಗು ಸಮಾಜದ ಮಗುವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ.
-ಲೈನ್ಕಜೆ ರಾಮಚಂದ್ರ, ಕ್ಯಾ| ರಜನೀಶ್ ತಂದೆ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.