ರಾಂ ರಹೀಂ ಕೇಸನ್ನು ಮೊದಲು ತನಿಖೆ ಮಾಡಿದ ಸಿಬಿಐ ಅಧಿಕಾರಿ ಉಪ್ಪಳದವರು!
Team Udayavani, Aug 29, 2017, 1:56 PM IST
ಕಾಸರಗೋಡು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಶಿಕ್ಷಗೊಳಗಾಗಿರುವ ಡೇರಾ ಸಚ್ಚಾ ಸೌಧ ಮುಖಂಡ ಬಾಬಾ ರಾಂ ರಹೀಂ ಸಿಂಗ್ ಕೇಸನ್ನು ಮೊದಲು ತನಿಖೆ ಮಾಡಿದ್ದು ಕಾಸರಗೋಡು ಜಿಲ್ಲೆಯ ಉಪ್ಪಳ ಮೂಲದ ಸಿಬಿಐ ಅಧಿಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರಸ್ತುತ ನಿವೃತ್ತರಾಗಿರುವ ಎಂ. ನಾರಾಯಣನ್ ಅವರೇ ಈ ಅಧಿಕಾರಿ.
2007ರಲ್ಲಿ ಪಂಜಾಬ್ – ಹರಿಯಾಣ ಹೈಕೋರ್ಟಿನ ಆದೇಶದ ಮೇರೆಗೆ ಕೇಸನ್ನು ಸಿಬಿಐಗೊಪ್ಪಿಸುವ ತನಕ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ರಾಜಕೀಯ ಒತ್ತಡದಿಂದಾಗಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಿಬಿಐಗೆ ಹಸ್ತಾಂತರವಾದ ಅನಂತರವೂ ಒತ್ತಡ ಮುಂದುವರಿದಿತ್ತು. ನ್ಯಾಯಾಲಯದ ಆದೇಶವಿದ್ದುದರಿಂದ ನಾರಾಯಣನ್ ಎದೆಗುಂದದೆ ತನಿಖೆ ಮುಂದುವರಿಸಿದರು.
ನಾರಾಯಣನ್ ಅವರಿಗೆ ಇಬ್ಬರು ಮೇಲಧಿಕಾರಿಗಳು ರಾಂ ರಹೀಮನ ಕೇಸಿನ ಕಡತ ಒಪ್ಪಿಸಿ ಆದಷ್ಟು ಬೇಗ ಕೇಸನ್ನು ‘ಮುಗಿಸಿಬಿಡಿ’ ಎಂದು ಹೇಳಿದ್ದರು. ಕೇಸಿನ ತನಿಖೆ ಪ್ರಾರಂಭಿಸಿದ ಬಳಿಕ ರಾಂ ರಹೀಂನನ್ನು ವಿಚಾರಣೆಗೆ ಗುರಿಪಡಿಸುವ ಸಲುವಾಗಿ ನಾರಾಯಣನ್ ತಂಡ ಸಿರ್ಸಾದಲ್ಲಿರುವ ಆಶ್ರಮಕ್ಕೆ ಹೋದಾಗ ಬಾಬಾ ಅವರಿಗೆ ಬರೀ ಅರ್ಧ ತಾಸಿನ ಕಾಲಾವಕಾಶ ನೀಡಿದ.
ಇದಕ್ಕೆ ಸಮ್ಮತಿಸಿ ಒಳ ಹೋದ ಸಿಬಿಐ ತಂಡಕ್ಕೆ ಆಶ್ಚರ್ಯ ಕಾದಿತ್ತು. ಬಾಬಾ ರಾಂ ರಹೀಂನ ಗುಹೆಯಾವ ಪಂಚತಾರಾ ಹೊಟೇಲಿನ ಕೊಠಡಿಗೂ ಕಡಿಮೆಯಿರಲಿಲ್ಲ. ಎಲ್ಲ ಆಧುನಿಕ ಐಷಾರಾಮಗಳು ಅಲ್ಲಿದ್ದವು. ಅರ್ಧ ತಾಸು ಎಂದು ಹೇಳಿದ್ದ ರಾಂ ರಹೀಂನನ್ನು ನಾರಾಯಣನ್ ಇದೇ ಗುಹೆಯೊಳಗೆ ಬರೋಬ್ಬರಿ ಮೂರು ತಾಸಿಗೂ ಹೆಚ್ಚು ಹೊತ್ತು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ರಾಂ ರಹೀಂನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿದೆ ಎನ್ನುವುದು ಅವರಿಗೆ ಮನವರಿಕೆಯಾಗಿತ್ತಂತೆ. ತನಿಖೆಯುದ್ದಕ್ಕೂ ನಾರಾಯಣನ್ ಮೇಲೆ ವಿವಿಧೆಡೆಗಳಿಂದ ವಿಪರೀತ ಒತ್ತಡ ಇತ್ತು. ಆದರೆ ಯಾವುದಕ್ಕೂ ಸೊಪ್ಪು ಹಾಕದೆ ತನಿಖೆ ಮುಂದುವರಿಸಿದ ಪರಿಣಾಮವಾಗಿ ತಡವಾಗಿಯಾದರೂ ರಾಂ ರಹೀಂ ಕಂಬಿ ಎಣಿಸುವಂತಾಗಿದೆ. ಅತ್ಯಾಚಾರದ ದೂರು ದಾಖಲಿಸಿದ ಮಹಿಳೆಯನ್ನು ಪತ್ತೆಹಚ್ಚಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು ಈ ಪ್ರಕರಣದ ತನಿಖೆಯ ಪ್ರಮುಖ ಘಟ್ಟ ಎಂದು ನಾರಾಯಣನ್ ನೆನಪಿಸಿಕೊಂಡಿದ್ದಾರೆ.
ಉ. ಭಾರತದ ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬವಾಗಿ ನಡೆಯುವುದರಿಂದ 15 ವರ್ಷಗಳ ಬಳಿಕ ತೀರ್ಪು ಹೊರಬಂದಿರುವುದು ಆಶ್ಚರ್ಯವಾಗಿಲ್ಲ. ಕೊನೆಗೂ ನಾವು ನಡೆಸಿದ ತನಿಖೆಗೆ ತಕ್ಕ ಪ್ರತಿಫಲ ಸಿಕ್ಕಿದ ಸಮಾಧಾನವಿದೆ ಎಂದು ನಾರಾಯಣನ್ ಪ್ರತಿಕ್ರಿಯಿಸಿದ್ದಾರೆ. ಕೇಸು ಮುಗಿಸಿ ಬಿಡಲು ಹೇಳಿದ ಮೇಲಧಿಕಾರಿಗಳನ್ನು ದೂರಿ ಫಲವಿಲ್ಲ. ಅವರ ಮೇಲೆ ಕೂಡ ಭಾರೀ ರಾಜಕೀಯ ಒತ್ತಡವಿತ್ತು. ಒತ್ತಡದಲ್ಲೇ ಕೆಲಸ ಮಾಡುವುದು ನಮಗೆ ಅನುಭವವಾಗಿರುತ್ತದೆ. ಮೊಬೈಲ್ ಇಲ್ಲದ ಕಾಲದಲ್ಲಿ ಭಯೋತ್ಪಾದನೆ ಕೇಸು ತನಿಖೆ ಮಾಡುವ ಸಂದರ್ಭದಲ್ಲಿ 2-3 ತಿಂಗಳು ಮನೆಗೆ ಹೋಗದಿದ್ದರೆ ಹೆಂಡತಿಗೆ ನಾನು ಬದುಕಿರುವ ಬಗ್ಗೆ ಅನುಮಾನ ಬರುತ್ತಿತ್ತು. ನನಗಾಗಿ ಅವಳು ಪ್ರಾರ್ಥನೆ ಮಾಡುತ್ತಿದ್ದಳು ಎಂದು ನಾರಾಯಣನ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಉಪ್ಪಳ ಸಮೀಪ ಮುಳಿಂಜದವರಾದ ನಾರಾಯಣನ್ 1970ರಲ್ಲಿ ವಿದ್ಯಾನಗರ ಸರಕಾರಿ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದ ಬಳಿಕ ಸಿಬಿಐಗೆ ಸೇರಿದರು. ನಿವೃತ್ತಿಯ ಬಳಿಕ ಅವರು ದಿಲ್ಲಿಯಲ್ಲಿ ಖಾಯಂ ವಾಸವಾಗಿದ್ದಾರೆ. ಆದರೆ ರಾಂ ರಹೀಂನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸುವಾಗ ಅವರು ಹುಟ್ಟೂರಲ್ಲಿದ್ದರು. 2009ರಲ್ಲಿ ಸಿಬಿಐ ಜಂಟಿ ನಿರ್ದೇಶಕರಾಗಿ ಪದೋನ್ನತಿ ಪಡೆದು ನಿವೃತ್ತರಾಗಿರುವ ನಾರಾಯಣನ್ ಸೇವೆಯುದ್ದಕ್ಕೂ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಪ್ರಕರಣ, ಬಾಬರಿ ಕಟ್ಟಡ ನೆಲಸಮ, ಕಂದಹಾರ್ ವಿಮಾನ ಅಪಹರಣ, ಪಂಜಾಬ್ ಹಾಗೂ ಜಮ್ಮು- ಕಾಶ್ಮೀರದ ಭಯೋತ್ಪಾದನೆ ಪ್ರಕರಣಗಳು ಸೇರಿದಂತೆ ಹಲವು ಹೈಪ್ರೊಫೈಲ್ ಪ್ರಕರಣಗಳ ತನಿಖೆ ನಡೆಸಿದ ಹಿರಿಮೆ ಅವರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.