ಒಂಟಿ ಮಹಿಳೆಯರ ಮೇಲೆ ಚಿನ್ನ ಕಳ್ಳರ ಕಣ್ಣು
ನಿರ್ಜನ ಪರಿಸರದಲ್ಲಿ ಖದೀಮರ ತಂಡ ಸಕ್ರಿಯ: ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ
Team Udayavani, Dec 14, 2020, 12:46 PM IST
ಸಾಂದರ್ಭಿಕ ಚಿತ್ರ
ಮಹಾನಗರ, ಡಿ. 13: ನಗರ ಹಾಗೂ ಆಸುಪಾಸಿನಲ್ಲಿ ಮೈಮೇಲೆ ಚಿನ್ನಾ ಭರಣ ಧರಿಸಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಚಿನ್ನ ಖದೀಮರು ಟಾರ್ಗೆಟ್ ಮಾಡುತ್ತಿದ್ದು, ಅಂತಹ ಪ್ರಕರಣಗಳು ಈಗ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲೇ ಆರು ಕಡೆಗಳಲ್ಲಿ ಒಂಟಿ ಮಹಿಳೆಯರಿಂದ ಒಟ್ಟು ಸುಮಾರು 7.4 ಲ.ರೂ. ಮೌಲ್ಯದ ಚಿನ್ನವನ್ನು ಸುಲಿಗೆ ಮಾಡಲಾಗಿದೆ.
ಹಿಂಬಾಲಿಸಿಕೊಂಡು ಬಂದ :
ನ. 18ರಂದು ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಮಹಿಳೆಯೋ ರ್ವರು ಕೆಲಸ ಮುಗಿಸಿ ಪಂಜುಮೊಗರಿಗೆ ಹೋಗುತ್ತಿದ್ದಾಗ ಸಂಜೆ 7 ಗಂಟೆಯ ಸುಮಾರಿಗೆ ರಾಘವೇಂದ್ರ ಮಠದ ಬಳಿ ಓರ್ವ ವ್ಯಕ್ತಿ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ. ಇದನ್ನು ಗಮನಿಸಿ ಭಯಗೊಂಡ ಮಹಿಳೆ ತನ್ನ ತಾಯಿಗೆ ಕರೆ ಮಾಡಿದರು. ಆದರೆ ಸ್ವಲ್ಪ ಸಮಯದಲ್ಲಿ ಆ ವ್ಯಕ್ತಿ ಬೈಕ್ ನಿಲ್ಲಿಸಿ ಮಹಿಳೆಯ ಹಿಂದೆ ಬಂದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 80,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಹೋಗಿದ್ದಾನೆ.
ಬೈಕ್ ರಿಪೇರಿಯ ನಟನೆ ! :
ಇನ್ನೊಂದು ಘಟನೆ ಕೂಡ ನಡೆದದ್ದು ನ.18ರಂದೇ. ಸಂಜೆ 6.20ರ ವೇಳೆಗೆ ಕೆಪಿಟಿ ಸಮೀಪದ ಆರ್‌ಟಿಒ ಮೈದಾನ ಬಳಿ ವ್ಯಾಸ ನಗರದಲ್ಲಿರುವ ರಸ್ತೆಯಲ್ಲಿ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಓರ್ವ ಅಪರಿಚಿತ ವ್ಯಕ್ತಿ ಬೈಕ್ ನಿಲ್ಲಿಸಿ ರಿಪೇರಿ ಮಾಡುವಂತೆ ನಟಿಸುತ್ತಿದ್ದ. ಮಹಿಳೆ ಆತನನ್ನು ದಾಟಿ ಮುಂದಕ್ಕೆ ಹೋದಾಗ ಹಿಂದಿನಿಂದ ಬಂದು ಮಹಿಳೆಯ ಕುತ್ತಿಗೆ ಯಲ್ಲಿದ್ದ ಕರಿಮಣಿಸರ, ಪಕಲ ಸರ ಸಹಿತ ಒಟ್ಟು 1.54 ಲ.ರೂ. ಮೌಲ್ಯದ ಚಿನ್ನಾ ಭರಣಗಳನ್ನು ಕಿತ್ತುಕೊಂಡು ಹೋಗಿದ್ದಾನೆ.
ಮರೋಳಿಯಲ್ಲಿಯೂ ಪುನರಾವರ್ತನೆ :
ಶಾಂತಿನಗರ ಸಮೀಪ ನ. 18 ರಂದು ಸಂಭ ವಿಸಿದ ರೀತಿಯ ಘಟ ನೆಯೇ ಮರುದಿನ ಮರೋಳಿ ಸಮೀಪ ಪುನರಾವರ್ತನೆ ಗೊಂಡಿತ್ತು. ನ. 19ರಂದು ಮಧ್ಯಾಹ್ನ 1.20ರ ವೇಳೆಗೆ ಮಹಿಳೆಯೋರ್ವರು ತನ್ನ ಮೊಮ್ಮಗನೊಂದಿಗೆ ರಿಕ್ಷಾದಲ್ಲಿ ಬಂದು ಮರೋಳಿ ಭಾರತ್ ಪ್ರಿಂಟರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ಬಂದು ಬೈಕ್‌ನ್ನು ದೂರಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಬಂದು ಮಹಿಳೆಯ ಕುತ್ತಿಗೆಗೆ ಕೈ ಹಾಕಿ 20 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಮಾಡಿದ್ದಾನೆ.
ದಾರಿ ಕೇಳುವ ನೆಪ :
ಡಿ. 9ರಂದು ಪಡುಪಣಂಬೂರು ಸಮೀಪ ಮಹಿಳೆಯೋರ್ವರು ಅಪರಾಹ್ನ 3.30ರ ವೇಳೆಗೆ ವಿಶ್ವಕರ್ಮ ಕಾಂಪೌಂಡ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಅಪರಿಚಿತರು ಒಂದು ಬೈಕ್‌ನಲ್ಲಿ ಹಿಂದುಗಡೆಯಿಂದ ಬಂದರು. ದಾರಿ ಕೇಳುವ ನಾಟಕ ಮಾಡಿ ಬೈಕ್‌ನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದ ವ್ಯಕ್ತಿ ಮಹಿಳೆಯ ಕುತ್ತಿಗೆಯಲ್ಲಿದ್ದ 1,20,000 ರೂ. ಮೌಲ್ಯದ ಸರವನ್ನು ಎಗರಿಸಿದ್ದಾನೆ.
ಮನೆಯೊಳಗೇ ಬಂದ ಸುಲಿಗೆಕೋರ ! :
ಡಿ. 9ರಂದು ಬೆಳಗ್ಗೆ ನಗರದ ಮಧ್ಯ ಭಾಗದಲ್ಲೇ ಮನೆಗೆ ನುಗ್ಗಿ ಸುಲಿಗೆ ಮಾಡಿದ ಘಟನೆ ಬಲ್ಮಠ ಕಲ್ಪನಾ ರಸ್ತೆಯಲ್ಲಿ ನಡೆದಿದೆ. ಇಲ್ಲಿಯೂ ಒಂಟಿ ಮಹಿಳೆಯೇ ಟಾರ್ಗೆಟ್. ಮಹಿಳೆ ಮನೆಯ ಹೊರಭಾಗದಲ್ಲಿದ್ದಾಗ ಸುಲಿಗೆಕೋರ ಮನೆಯ ಹಿಂಬಾಗಿಲನ್ನು ಮುರಿದು ಮನೆಯೊಳಗೆ ಸೇರಿ ಕೋಣೆ ಜಾಲಾಡಿ ಚಿನ್ನಾಭರಣ ದೋಚಿ ಅನಂತರ ಒಳಬಂದ ಮಹಿಳೆಯ ಮೈಮೇಲಿದ್ದ ಚಿನ್ನಾಭಾರಣಗಳನ್ನು ಕೂಡ ದೋಚಿ ಪರಾರಿಯಾಗಿದ್ದಾನೆ.
ಪೊಲೀಸರ ಸೂಚನೆಗಳು :
- ನಿರ್ಜನ ಪ್ರದೇಶದ ಮೂಲಕ ನಡೆದುಕೊಂಡು ಹೋಗುವಾಗ ಅಥವಾ ಒಂಟಿಯಾಗಿ ಇರುವಾಗ ಚಿನ್ನಾಭರಣ ಧರಿಸದಿರುವುದು ಉತ್ತಮ.
- ಅಪರಿಚಿತರೊಂದಿಗೆ ಮಾತನಾಡು ವಾಗ ಸಾಕಷ್ಟು ಎಚ್ಚರ ವಹಿಸಬೇಕು.
- ಚಿನ್ನಾಭರಣ ಧರಿಸಿದ್ದರೂ ಅದನ್ನು ವೇಲ್ ಅಥವಾ ಸೆರಗಿನಲ್ಲಿ ಮುಚ್ಚಿಕೊಂಡಿ ರುವುದು ಉತ್ತಮ.
- ತುರ್ತು ಸಂದರ್ಭ ಜನರು 110 ಅಥವಾ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಬೇಕು.
ಪೊಲೀಸ್ ವಿಶೇಷ ನಿಗಾ :
ಸರ ಕಳವು ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದಿನ ಪ್ರಕರಣಗಳಲ್ಲಿಕೆಲವರನ್ನು ಬಂಧಿಸಲಾಗಿದ್ದು, ಉಳಿದಕೆಲವರ ಸುಳಿವು ಲಭ್ಯ ವಾಗಿದೆ.ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಕೆಲಸಗಳು ಕೂಡ ನಿರಂತರವಾಗಿನಡೆಯುತ್ತಿದೆ. ಒಂಟಿ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು. –ವಿನಯ್ ಎ.ಗಾಂವ್ಕರ್, ಡಿಸಿಪಿ, ಅಪರಾಧ ಮತ್ತು ಸಂಚಾರ ನಿಯಂತ್ರಣ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.