ಬಾಲ್ಯವಿವಾಹ: ಎಫ್‌ಐಆರ್ ಕಡ್ಡಾಯ
Team Udayavani, Oct 12, 2018, 12:03 PM IST
ಪುತ್ತೂರು: ಬಾಲ್ಯ ವಿವಾಹ ನಡೆಸಲು ಯತ್ನಿಸುವ ಸಂದರ್ಭದಲ್ಲಿ ಈ ಹಿಂದೆ ಕೈಗೊಳ್ಳುತ್ತಿದ್ದ ಮುಚ್ಚಳಿಕೆ ಕ್ರಮ ಅಸಿಂಧು ಆಗುತ್ತದೆ. ಸಂಬಂಧಪಟ್ಟವರ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಲು ಸೂಚನೆಯಿದೆ ಎಂದು ಸಿಡಿಪಿಒ ಶಾಂತಿ ಹೆಗ್ಡೆ ತಿಳಿಸಿದ್ದಾರೆ. ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ವಿವಿಧ ರಕ್ಷಣಾ ಸಮಿತಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ, ಮಾದಕ ವಸ್ತು ಸೇವನೆ ನಿಷೇಧ ಸಮಿತಿ, ಮಕ್ಕಳ ಮಾರಾಟ ಮತ್ತು ಸಾಗಾಟ ವಿರುದ್ಧ ಪ್ರಚಾರಾಂದೋಲನ ಸಮಿತಿ, ಸ್ತ್ರೀಶಕ್ತಿ ಯೋಜನೆ ಸಮನ್ವಯ ಸಮಿತಿ, ಬಾಲ್ಯ ವಿವಾಹ ತಡೆ ಸಮಿತಿ, ವರದಕ್ಷಿಣೆ ಕಾಯಿದೆ ನಿಷೇಧ ಸಮಿತಿ, ಕೌಟುಂಬಿಕ ದೌರ್ಜನ್ಯ ಸಮಿತಿಗಳ ಪ್ರಗತಿ ವಿಮರ್ಶೆ, ಚರ್ಚೆ ನಡೆಯಿತು.
ಬಾಲ್ಯ ವಿವಾಹದ ಪಿಡುಗನ್ನು ತಡೆ ಯುವ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿ ಕಠಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಅಂತಹ ಪ್ರಕರಣಗಳನ್ನು ಬರೀ ಮುಚ್ಚಳಿಕೆ ಬರೆಸುವ ಮೂಲಕ ಲಘುವಾಗಿ ಪರಿಗಣಿಸದೆ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ ಎಂದರು.
40 ಮಂದಿ ತಂಡಕ್ಕೆ ತರಬೇತಿ
ಬಾಲ್ಯ ವಿವಾಹ ತಡೆಯುವ ಜವಾಬ್ದಾರಿ ಸಿಡಿಪಿಒಗೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲ ತಾಲೂಕು, ಗ್ರಾಮ ಮಟ್ಟದ ಅಧಿಕಾರಿಗಳೂ ಬಾಲ್ಯ ವಿವಾಹ ತಡೆ ಸಮಿತಿ ವ್ಯಾಪ್ತಿಗೆ ಬರುತ್ತಿದ್ದು, ಜವಾಬ್ದಾರಿಯನ್ನೂ ಹೊಂದಿ ದ್ದಾರೆ. ಮದುವೆ ಮಂಟಪಗಳು, ಪ್ರಿಂಟಿಂಗ್ ಅಂಗಡಿಗಳು ಸಹಿತ ವಿವಾಹಕ್ಕೆ ಸಂಬಂಧಪಟ್ಟ ಎಲ್ಲರೂ ಸೇರಿದ 40 ಮಂದಿಯ ತಂಡಕ್ಕೆ ಶೀಘ್ರ ತರಬೇತಿ ನೀಡಲಾಗುತ್ತದೆ. ಇದಕ್ಕೆ ದಿನಾಂಕ ನಿಗದಿಪಡಿಸಲಿದ್ದೇವೆ ಎಂದು ಹೇಳಿದರು.
ಜೊಹರಾ ನಿಸಾರ್ ಅಹಮ್ಮದ್ ಮಾತನಾಡಿ, ಬಾಲ್ಯ ವಿವಾಹ ನಿಷೇಧದ ನಿಟ್ಟಿನಲ್ಲಿ ಇರುವ ಕಾನೂನುಗಳು, ಶಿಕ್ಷೆಯ ಕುರಿತು ಎಲ್ಲ ಸಂಸ್ಥೆಗಳಿಗೂ ನೋಟಿಸ್ ನೀಡಬೇಕು. ಮಸೀದಿಗಳನ್ನೂ ಪರಿಗಣಿಸಬೇಕು. ಈ ಪ್ರಕ್ರಿಯೆಯನ್ನು ಗ್ರಾ.ಪಂ. ಮಟ್ಟದಲ್ಲಿ ಮಾಡಿದರೆ ಉತ್ತಮ. ಸಭೆಗೆ ಮದ್ರಸಗಳ ಗುರುಗಳನ್ನೂ ಕರೆಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಡಿಪಿಒ ಮಾತನಾಡಿ, ಬಾಲ್ಯ ವಿವಾಹದ ಕುರಿತು ಮಾಹಿತಿ ಇಲ್ಲ ಎನ್ನುವುದೇ ತಪ್ಪು ಎಂದರು. ಜಿಲ್ಲಾ ಸಂಯೋಜಕ ವಜೀರ್ ಮಾತನಾಡಿ, ಮಸೀದಿಗಳ ಸಹಿತ ಎಲ್ಲ ಸಂಸ್ಥೆಗಳಿಗೂ ಬಾಲ್ಯ ವಿವಾಹ ತಡೆಯ ನಿಟ್ಟಿನಲ್ಲಿ ನೋಟಿಸ್ ನೀಡಲಾಗಿದೆ ಎಂದರು.
ಶಾಲಾ ವಾಹನಗಳಲ್ಲಿ ಸುರಕ್ಷೆ
ಶಾಲಾ ವಾಹನಗಳಲ್ಲಿ ಸುರಕ್ಷಾ ನೀತಿಯಂತೆ ಮಹಿಳಾ ಸಿಬಂದಿಯೂ ಇರಬೇಕು. ಆದರೆ ಕೆಲವು ಶಾಲೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಜಿಲ್ಲಾ ಸಂಯೋಜಕ ವಜೀರ್ ಹೇಳಿದರು. ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯಲು ಇರುವ ನಿಯಮಗಳ ಪಾಲನೆ ಕುರಿತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅನಂತ ಶಂಕರ್ ಅವರು ಎಸ್‌ಐ ಅಜೇಯ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಈ ಕುರಿತು ಎಲ್ಲ ಶಾಲೆಗಳಿಗೆ ನೋಟಿಸ್ ನೀಡಬೇಕು ಎಂದು ಜೊಹರಾ ನಿಸಾರ್ ಹೇಳಿದರು. ವಿಶೇಷ ಅಭಿಯಾನ ಹಮ್ಮಿಕೊಳ್ಳುವುದಾಗಿ ಇನ್ಸ್ ಪೆಕ್ಟರ್ ಅಜೇಯ್ ಕುಮಾರ್ ಭರವಸೆ ನೀಡಿದರು.
ಬಾಂಡ್ ಬಾಕಿ
2008-09ರಲ್ಲಿ ತಾಲೂಕಿನ 52 ಭಾಗ್ಯಲಕ್ಷ್ಮಿ ಬಾಂಡ್ ಗಳು ಬಾಕಿಯಾಗಿದ್ದು, ತಾಂತ್ರಿಕ ತೊಂದರೆಯಿಂದ ಉಂಟಾಗಿರುವ ಈ ಸಮಸ್ಯೆಯ ಕುರಿತು ಪತ್ರ ವ್ಯವಹಾರ ನಡೆಸದಂತೆ ಸರಕಾರ ಸೂಚನೆ ನೀಡಿದೆ ಎಂದು ಸಿಡಿಪಿಒ ಶಾಂತಿ ಹೆಗ್ಡೆ ಹೇಳಿದರು. ರಾಜ್ಯದೆಲ್ಲೆಡೆ ಈ ಅವಧಿಯ ಬಾಂಡ್ ನೀಡಿಕೆಯಲ್ಲಿ ಸಮಸ್ಯೆಯಾಗಿದ್ದು, ಶಾಸಕ ಸಂಜೀವ ಮಠಂದೂರು ಅವರೂ ಸರಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಹಶೀಲ್ದಾರ್ ಅನಂತ ಶಂಕರ್, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ತಾ.ಪಂ.ನ ಶಿವಪ್ರಕಾಶ್, ನ್ಯಾಯವಾದಿ ದಿವ್ಯರಾಜ್, ಜಿಲ್ಲಾ ಸಂಯೋಜಕ ವಜೀರ್ ಉಪಸ್ಥಿತರಿದ್ದರು.
28 ಪ್ರಕರಣ
ತಾಲೂಕಿನಲ್ಲಿ 4 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಸಾಂತ್ವನ ಕೇಂದ್ರದಲ್ಲಿ 3 ತಿಂಗಳಲ್ಲಿ 28 ಪ್ರಕರಣಗಳು ದಾಖಲಾಗಿದ್ದು, 26 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕೇಂದ್ರದ ಅಧಿಕಾರಿ ತಿಳಿಸಿದರು. ಇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ರಕ್ಷಣಾ ಅಧಿಕಾರಿಯನ್ನು ನೇಮಕ ಮಾಡಲು ಸ್ಥಳೀಯಾಡಳಿತಗಳ ಮೂಲಕ ಸರಕಾರಕ್ಕೆ ಒತ್ತಾಯಿಸಬೇಕು ಎಂದು ಸಿಡಿಪಿಒ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.