ಸಿಎಂ ಹಸ್ತಕ್ಷೇಪ ಸರಿಯಲ್ಲ: ಮುತಾಲಿಕ್
Team Udayavani, Jul 18, 2017, 3:20 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಕ್ಷೇಪ ಮಾಡಬಾರದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಪ್ರಕರಣವೊಂದರ ವಿಚಾರಣೆಗಾಗಿ ಸೋಮವಾರ ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದ್ದ ಅವರು ಪತ್ರಕರ್ತರ ಜತೆ ಮಾತನಾಡಿದರು.
ಹಿಂದೂ ಮುಖಂಡರನ್ನು ಬಂಧಿಸುವಂತೆ ಮುಖ್ಯಮಂತ್ರಿಗಳು ಪ್ರಭಾವ ಬೀರುವುದು ಹಿಂದೂ ವಿರೋಧಿ ನೀತಿಯಾ
ಗಿದೆ. ಇದು ಕರ್ನಾಟಕದಲ್ಲಿ ಹಿಂದುತ್ವವನ್ನು ನಾಶ ಮಾಡುವ ವ್ಯವಸ್ಥಿತ ಸಂಚು ಎಂದು ಟೀಕಿಸಿದರು. ಮುಖ್ಯಮಂತ್ರಿಯ
ವರು ಇದರಲ್ಲಿ ಮೂಗು ತೂರಿಸಬಾರದಿತ್ತು ಎಂದರು.
ಸಾವಿನ ಮಾಹಿತಿ ವಿಳಂಬ ಅಕ್ಷಮ್ಯ
ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮಕ್ಕಾಗಿ ಶರತ್ ಮಡಿವಾಳ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ. ಕೇರಳದ ಹವ್ಯಾಸವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಸರಿಸುತ್ತಿರುವುದು ಅಪಾಯಕಾರಿ ಎಂದು ಮುತಾಲಿಕ್ ತಿಳಿಸಿದರು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಬಳಿ ಮಾಹಿತಿ ಇದ್ದರೆ ಪೊಲೀಸರಿಗೆ ನೀಡುವುದು ಸ್ವಾಮೀಜಿಗೆ ಬಿಟ್ಟ ವಿಚಾರ. ಸ್ವಾಮೀಜಿ ಯಾವ ನೆಲೆಯಲ್ಲಿ ತನ್ನ ಬಳಿ ಮಾಹಿತಿ ಇದೆ ಎಂದು ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಏನಾದರೂ ಸುಳಿವು ಸಿಕ್ಕಿರಲೂಬಹುದು ಎಂದರು.
ಎನ್‌ಐಎ ತನಿಖೆ ಅಗತ್ಯವಿಲ್ಲ: ಪ್ರತಿಯೊಂದನ್ನೂ ಎನ್‌ಐಎ ಅಥವಾ ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ರಾಜ್ಯದ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ಆದ್ದರಿಂದ ಶರತ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ ಎಂದರು.
ಸೇಡಿನ ಕ್ರಮ: ರಾಜ್ಯಕ್ಕೆ ಬೆಂಕಿ ಹಚ್ಚುವ ಬಗೆಗೆ ಬಿಜೆಪಿ ನಾಯಕರಾದ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು ಅವರು ಈ ಹಿಂದೆಯೂ ಸಾಕಷ್ಟು ಸಲ ಹೇಳಿಕೆ ಕೊಟ್ಟಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದರೆ ನಮ್ಮಂತಹ ಹಿಂದೂ ಮುಖಂಡರ ಮೇಲೆ ಕ್ರಮ ತೆಗೆದುಕೊಳ್ಳುತ್ತಿರುವುದು ಸೇಡಿನ ಕ್ರಮ ಮತ್ತು ಹಿಂದೂ ಸಂಘಟನೆಗಳನ್ನು ನಾಶ ಮಾಡುವ ಷಡ್ಯಂತ್ರ. ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದ ಮುತಾಲಿಕ್ ಕಾನೂನು ಎಲ್ಲರಿಗೂ ಸಮಾನವಾಗಿರಲಿ; ತಾರತಮ್ಯ ಬೇಡ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.