ಸಿಎಂ ಸಿದ್ದರಾಮಯ್ಯ ಮೂರ್ಖ; ಕಮಿಷನ್ ಏಜೆಂಟ್
Team Udayavani, Nov 10, 2017, 6:05 AM IST
ಮುಂದಿನ ವಿಧಾನಸಭೆ ಚುನಾವಣೆ ಮುಂದಿಟ್ಟು ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರಿವರ್ತನಾ ಯಾತ್ರೆ ಈಗ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿದೆ. ಯಾತ್ರೆ ಕುರಿತಾಗಿ ಬುಧವಾರ ಸಿಎಂ ಸಿದ್ದರಾಮಯ್ಯ ಕೆಜೆಪಿ ರ್ಯಾಲಿ ಎಂದು ಟೀಕಿಸಿದ್ದು, “ಜೈಲಿಗೆ ಹೋಗಿ ಬಂದ ಯಡಿಯೂರಪ್ಪನವರು ಮಾನ- ಮರ್ಯಾದೆ ಇದ್ದರೆ ಸಾರ್ವಜನಿಕ ವಾಗಿ ಮುಖವೆತ್ತಿ ತಿರುಗಾಡ ಬಾರದು’ ಎಂದು ಹೇಳಿದ್ದರು. ಈ ವಾಗ್ಧಾಳಿ ಬಗ್ಗೆ ಯಡಿಯೂರಪ್ಪ ನವರು ಉದಯವಾಣಿ ಯೊಂದಿಗೆ ಮಾತ ನಾಡುತ್ತ ತಿರುಗೇಟು ನೀಡಿದರು. ಅತೀ ಖಾರ ವಾಗಿಯೂ ಉತ್ತರಿಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಮಾನವಿದ್ದರೆ ಸಾರ್ವಜನಿಕವಾಗಿ ಮುಖವೆತ್ತಿ ತಿರುಗಬಾರದು ಎಂದು ಸಿಎಂ ನಿಮ್ಮ ವಿರುದ್ಧ ಟೀಕಿಸಿರುವುದಕ್ಕೆ ಏನಂತೀರಿ?
ನೋಡಿ, ಅವರೊಬ್ಬ ಮೂರ್ಖ. ಪರಿವರ್ತನಾ ಯಾತ್ರೆಯಲ್ಲಿ ನಮಗೆ ಸಿಗುತ್ತಿರುವ ಜನಬೆಂಬಲ ಸಹಿಸಲು ಆಗದೆ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಜನರಿಗೆ ಸುಳ್ಳು ಭರವಸೆ ಕೊಟ್ಟು ದಾರಿ ತಪ್ಪಿಸಿದ್ದು ಅದನ್ನು ಮರೆಮಾಚಲು ಆರೋಪ ಮಾಡುತ್ತಿದ್ದಾರೆ.
ಇದು ಬಿಜೆಪಿಯದ್ದಲ್ಲ, ಕೆಜೆಪಿ ಯಾತ್ರೆ. ಶೋಭಾ, ಪುಟ್ಟಸ್ವಾಮಿ ಬಿಟ್ಟರೆ ಇದರಲ್ಲಿ ಬೇರೆ ಯಾರೂ ಇಲ್ಲ ಎಂದು ಸಿಎಂ ಹೇಳಿದ್ದಾರಲ್ಲ?
ಯಾರು ಹೇಳಿದ್ದು? ರ್ಯಾಲಿಗೆ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡರು ಬಂದಿಲ್ಲವೇ? ಯಾತ್ರೆ ಯಲ್ಲಿ ನಾವೆಲ್ಲ ಒಟ್ಟಾಗಿ ಹೋಗುತ್ತಿದ್ದೇವೆ. ನಾವು ರಾಜ್ಯದ ಜನರ ಒಳಿತಿಗಾಗಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಯಾರೋ ಒಬ್ಬ ಮುಖ್ಯಮಂತ್ರಿ ಬಾಯಿಗೆ ಬಂದಂತೆ ಟೀಕಿಸಿದ ಮಾತ್ರಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.
ಸಿದ್ದರಾಮಯ್ಯ ಸರಕಾರದ ನಾಲ್ಕೂವರೆ ವರ್ಷದ ಆಡಳಿತವನ್ನು ಹೇಗೆ ವಿಶ್ಲೇಷಿಸುವಿರಿ?
ಎಸ್‌ಸಿ/ಎಸ್‌ಟಿ ಅನುದಾನದಲ್ಲಿ ಶೇ. 40ರಷ್ಟು ಕೂಡ ಖರ್ಚು ಮಾಡಿಲ್ಲ. ಕೃಷ್ಣೆ ಮೇಲೆ ಆಣೆ ಮಾಡಿ ಪ್ರತಿವರ್ಷ 10 ಸಾವಿರದಂತೆ ನಾಲ್ಕು ವರ್ಷ 40 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ ಮಾಡಿದ್ದು ಬರೀ 12 ಸಾವಿರ ಕೋಟಿ ರೂ. ಯಾವುದನ್ನು ಮುಟ್ಟಿದರೂ ಬರೀ ಹಗರಣ, ಹಣ ಲೂಟಿ. ನಾನೇ ಮುಂದಿನ ಸಿಎಂ ಎಂದು ಹೇಳಿ ತಿರುಗಿದ ಮಾತ್ರಕ್ಕೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅದನ್ನು ಜನತೆ ತೀರ್ಮಾನಿಸುತ್ತಾರೆ.
ಯಡಿಯೂರಪ್ಪನವರಲ್ಲಿ ಹಿಂದಿನ ಉತ್ಸಾಹವಿಲ್ಲ, ವರ್ಚಸ್ಸು ಕಳೆದುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ..?
ನೋಡಿ, ನಿರಂತರವಾಗಿ 85 ದಿನ 224 ಕ್ಷೇತ್ರ ಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. 18ರ ಯುವಕ ನಂತೆ ರಾಜ್ಯದೆಲ್ಲೆಡೆ ಪಕ್ಷ ಸಂಘಟನೆ ಕಾರ್ಯ ನಡೆಸುತ್ತಿದ್ದೇನೆ.
ಬಿಜೆಪಿ ನಾಯಕರು ಐಟಿ ಅಧಿಕಾರಿಗಳ ಮೂಲಕ ಸಚಿವ ಡಿ.ಕೆ. ಶಿವಕುಮಾರ್‌ಗೆ ಗಾಳ ಹಾಕುವ ಯತ್ನ ನಡೆಸಿರುವುದಾಗಿ ಸಿಎಂ ಆರೋಪಿಸಿದ್ದಾರಲ್ಲ?
ಬಾಲಿಶ ಹೇಳಿಕೆ ಕೊಟ್ಟು ಮುಖ್ಯಮಂತ್ರಿಗಳೇ ತಮ್ಮ ಪಕ್ಷದ ಪ್ರಮುಖ ನಾಯಕನನ್ನು ಮುಗಿಸುವ ಪ್ರಯತ್ನವಿದು. ಶಿವಕುಮಾರ್ ಅವರನ್ನು ಬಲಿಪಶು ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ.
ಸಿದ್ದರಾಮಯ್ಯಗೆ ಮೋದಿ ಮೇಲೆ ಸಿಟ್ಟು ಯಾಕೆ ?
ಪ್ರಧಾನಿ ಮೋದಿ ಕಪ್ಪು ಹಣ ತಡೆಗೆ ನೋಟು ಬ್ಯಾನ್ ಮಾಡಿದರು ಎಂಬ ಕಾರಣಕ್ಕೆ ಇರಬಹುದು. ಏಕೆಂದರೆ ಕಾಂಗ್ರೆಸ್ ಮುಖಂಡರಲ್ಲೇ ಕಪ್ಪು ಹಣ ಜಾಸ್ತಿಯಿತ್ತು. ಅವರೆಲ್ಲರ ಬಣ್ಣ ಬಯಲಾಗಬಹುದು ಎಂಬ ಭಯಕ್ಕೆ ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಬಚ್ಚಾ. ಏನೇನೋ ಮಾತನಾಡುತ್ತಿದ್ದಾರೆ.
ವಿಪಕ್ಷವಾಗಿ ಸರಕಾರದ ವೈಫಲ್ಯ ಜನರ ಮುಂದಿಡುವಲ್ಲಿ ಬಿಜೆಪಿ ವಿಫಲವಾಗಿದೆಯೇ?
ರಾಜ್ಯಾದ್ಯಂತ ಸರಕಾರದ ವೈಫಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಕೇಂದ್ರ ಸರಕಾರದ ಸಾಧನೆ, ರಾಜ್ಯ ಸರಕಾರದ ವೈಫಲ್ಯ-ಹಗರಣ ಹಾಗೂ ಹಿಂದಿನ ನಮ್ಮ ಸರಕಾರದ ಸಾಧನೆ ಮುಂದಿಡುತ್ತಿದ್ದೇವೆ. ಸಿದ್ದರಾಮಯ್ಯನವರ ಈ ಭಂಡ ಸರಕಾರಕ್ಕೆ ಎಷ್ಟೇ ಹೋರಾಟ ಮಾಡಿದರೂ ಯಾವುದೇ ಕಳಕಳಿ ಅಥವಾ ಭಯವಿಲ್ಲ. ಮೂರು ತಿಂಗಳು ಕಳೆದರೆ ಅವರೇ ಮನೆಗೆ ಹೋಗುತ್ತಾರೆ.
ಸಿಎಂ ಕೂಡ ಯಾತ್ರೆ ಹೊರಡುತ್ತಿದ್ದಾರೆ ಅಲ್ಲವೇ?
ಕಾಂಗ್ರೆಸ್ ಒಡೆದ ಮನೆ. ಅವರೇ ರಾಜ್ಯ ಪ್ರವಾಸ ಹೊರಟಾಗ ಜನಬೆಂಬಲ, ಪಕ್ಷದ ನಾಯಕರ ಬೆಂಬಲ ಎಷ್ಟಿದೆ ಎಂದು ತಿಳಿಯುತ್ತದೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಸಿದ್ದರಾಮಯ್ಯನವರ ಜತೆಗೆ ಹೋಗುವುದಿಲ್ಲ ನೋಡಿ.
ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷಗಳ ಸಂಖ್ಯೆ ಹೆಚ್ಚು ತ್ತಿರುವುದು ಪ್ರಮುಖ ಪಕ್ಷಗಳಿಗೆ ಎಚ್ಚರಿಕೆಯೇ?
ಪ್ರಾದೇಶಿಕ ಪಕ್ಷಗಳ ಹೆಚ್ಚಳದಿಂದ ಬಿಜೆಪಿಗೆ ಜಾಸ್ತಿ ಲಾಭ ವಾಗಲಿದೆ. ಈ ರೀತಿ ಬೆಳವಣಿಗೆಗಳು ಚುನಾವಣೆ ಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಕ್ಕೆ ಬಿಜೆಪಿಗೆ ನೆರವಾಗಲಿವೆ.
ದ.ಕ.ದಲ್ಲಿ ನಿಮ್ಮ ಯಾತ್ರೆಗೆ ಬೆಂಬಲ ಹೇಗಿದೆ?
ಬೆಂಗಳೂರಿಂದ ಹೊರಟ ಮೇಲೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ಪಕ್ಷದ ಪ್ರಾಬಲ್ಯ ಕಡಿಮೆಯಿರುವ ಹಾಸನದಂಥ ಜಿಲ್ಲೆಯಲ್ಲಿಯೂ ಉತ್ತಮ ಬೆಂಬಲ ಲಭಿಸಿದೆ. ಮಂಗಳೂರಲ್ಲಿಯೂ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುವುದರಲ್ಲಿ ಅನುಮಾನವೇ ಇಲ್ಲ.
ಯಾತ್ರೆ ಅಥವಾ ಟಿಪ್ಪು ಜಯಂತಿ ವಿರುದ್ಧದ ಪ್ರತಿಭಟನೆಯನ್ನು ಪೊಲೀಸರು ತಡೆದರೆ ?
ಯಾತ್ರೆ ಅಥವಾ ಟಿಪ್ಪು ಜಯಂತಿ ವಿರುದ್ಧದ ಪ್ರತಿ ಭಟನೆ ತಡೆಯಲು ಬಂದರೆ ಸುಮ್ಮನಿರುವುದಿಲ್ಲ. ಶಾಂತ ರೀತಿ ಯಲ್ಲಿ ಪರಿವರ್ತನಾ ರ್ಯಾಲಿ ಮಾಡುತ್ತಿರ ಬೇಕಾದರೆ, ಅದನ್ನು ಸಹಿಸಿಕೊಳ್ಳುವುದಕ್ಕೆ ಆಗದೆ ನೇರವಾಗಿ ಸಿಎಂ ಅವರೇ ವಿಫಲಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಹಲವು ಜನಪರ ಯೋಜನೆ ನೀಡಿದ್ದರೂ ನೀವು ಸಿದ್ದರಾಮಯ್ಯ ದೊಡ್ಡ ಭ್ರಷ್ಟ ಎನ್ನುತ್ತೀರಲ್ಲ?
ಸಿಎಂ ಅವರು ಕಮಿಷನ್ ಏಜೆಂಟ್‌ನಂತೆ ನಡೆದು ಕೊಳ್ಳುತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಇಷ್ಟೊಂದು ಹಗರಣ ಮಾಡಿದ ಭ್ರಷ್ಟ ಸರಕಾರ ವನ್ನು ನಾನೆಂದೂ ನೋಡಿಲ್ಲ. ಮಕ್ಕಳಿಗೆ ಕೊಡುವ ಲಾಪ್‌ಟಾಪ್‌ನಲ್ಲಿಯೂ ಅವ್ಯವಹಾರ ನಡೆಸಿದ್ದಾರೆ. ಹೀಗಿರುವಾಗ, ಎಲ್ಲಿಯ ಪ್ರಧಾನಿ ಮೋದಿ, ಎಲ್ಲಿಯ ಸಿಎಂ ಸಿದ್ದರಾಮಯ್ಯ? ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
– ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.