Budget 2024-25; ಕರಾವಳಿಯ ಬಜೆಟ್ ನಿರೀಕ್ಷೆಗಳು
Team Udayavani, Feb 12, 2024, 6:45 AM IST
ಸೋಮವಾರದಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಯಾವುದೇ ಬಜೆಟ್ ಮಂಡನೆ ಆಗುವಾಗ ನಮ್ಮ ಭಾಗಕ್ಕೆ ಏನು ಯೋಜನೆಗಳು, ಅನುದಾನಗಳು ಲಭ್ಯವಾಗುತ್ತವೆ ಎಂಬ ಕಾತರ ವ್ಯಕ್ತವಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಬೇಡಿಕೆಗಳು ಏನು ಎಂಬ ಬಗ್ಗೆ ಇಲ್ಲಿ ಗಮನ ಸೆಳೆಯಲಾಗಿದೆ.
ಮಂಗಳೂರಿಗೆ ಬೇಕು ಪ್ರಬಲ ಉತ್ತೇಜಕ ಯೋಜನೆ
ಮಂಗಳೂರು: ಇದುವರೆಗೆ ಎಲ್ಲ ರಾಜ್ಯ ಸರಕಾರಗಳೂ ಜಿಲ್ಲೆಗೆ ನೀಡಿರುವುದು ಸಣ್ಣ ಪುಟ್ಟ ಕೊಡುಗೆಗಳು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿ ದರೆ ಇಲ್ಲಿಗೆ ದೊಡ್ಡ ಮಟ್ಟಿನ ಬೂಸ್ಟ್ ನೀಡಬಲ್ಲಂತಹ ಯಾವುದೇ ಯೋಜನೆಯೂ ಬರುತ್ತಿಲ್ಲ ಎನ್ನುವುದು ಕರಾವಳಿಗರ ಪ್ರಮುಖ ಆಕ್ಷೇಪ.
ರಾಜ್ಯದಲ್ಲಿ ತೀವ್ರವಾಗಿ ಪ್ರಗತಿ ಸಾಧಿಸಬಲ್ಲ, ರಾಜ್ಯದ ಜಿಡಿಪಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿರುವ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿನ ಒಟ್ಟು ಆರ್ಥಿಕತೆಗೆ ದೊಡ್ಡ ಮಟ್ಟಿನ ಉತ್ತೇಜನ ನೀಡಿದರೆ ಇಲ್ಲಿಂದ ಅಷ್ಟೇ ಉತ್ತಮ ಪ್ರತಿಫಲವನ್ನು ಪಡೆಯಬಹುದು, ಆದರೆ ಯಾವುದೇ ಸರಕಾರ ಅಂತಹ ಧೈರ್ಯ ತೋರುತ್ತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ
ಆಗಬೇಕಾದ್ದೇನು?
01.ಸಿದ್ದರಾಮಯ್ಯ ಸರಕಾರ ಪ್ರಣಾಳಿಕೆಯಲ್ಲಿ ಕರಾವಳಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ, ಅದಕ್ಕೆ 2,500 ಕೋಟಿ ರೂ. ನೀಡುವುದಾಗಿ ಹೇಳಿತ್ತು (ಪ್ರಜಾಧ್ವನಿ ಯಾತ್ರೆ ಸಂದರ್ಭ). ಇದರಿಂದ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಬಜೆಟ್‌ನಲ್ಲಿ ಅದು ಬಂದಿಲ್ಲ. ಇದುವರೆಗೆ ಅಂತಹ ದೊಡ್ಡ ಮೊತ್ತವನ್ನೇನೂ ಘೋಷಿಸಿಲ್ಲ.
02.ಮಂಗಳೂರಿನಲ್ಲಿ ಜವುಳಿ ಪಾರ್ಕ್ ಇದು ವರೆಗೆ ಬಂದಿಲ್ಲ, ಅದದು ಸ್ಥಾಪಿಸಿ, 1 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವುದಾಗಿ ಕಾಂಗ್ರೆಸ್ ಹೇಳಿದ್ದ ಗ್ಯಾರಂಟಿ ಕಾರ್ಯಕ್ರಮ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅದು ಪ್ರಕಟಗೊಳ್ಳಬಹುದೇ ಎಂಬ ಕುತೂಹಲವಿದೆ.
03.ಮೀನುಗಾರರ ದೊಡ್ಡ ಬೇಡಿಕೆ ಇರುವುದು ಅಳಿವೆ ಬಾಗಿಲಿನಲ್ಲಿ ಸಮರ್ಪಕವಾಗಿ ಹೂಳೆತ್ತುವ ಮೂಲಕ ಬೋಟ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡುವುದು. ಈ ಬಾರಿಯಾದರೂ ಡ್ರೆಜ್ಜಿಂಗ್‌ಗೆ ಗರಿಷ್ಠ ಮೊತ್ತ ಸಿಗಬೇಕು.
04. ಇದುವರೆಗೆ ಈ ಸರಕಾರ ಕುಮ್ಕಿ ಹಕ್ಕು ನೀಡುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ, ಲಕ್ಷಾಂತರ ಮಂದಿ ಕೃಷಿಕರಿಗೆ ಇದರಿಂದ ಪ್ರಯೋಜನವಾಗ ಬಹುದು.
05.ಫಲ್ಗುಣಿ ಹಾಗೂ ನೇತ್ರಾವತಿ ನದಿ ಪಾತ್ರ ದಲ್ಲಿ ಬಾರ್ಜ್‌ಗಳ ಸೇವೆ ಆರಂಭ, ಮಂಗಳೂರು- ಕಾರವಾರ-ಗೋವಾ ಮುಂಬಯಿ ಜಲಮಾರ್ಗ ಸ್ಥಾಪನೆ, ಇತ್ಯಾದಿಗಳನ್ನು ಜಾರಿಗೊಳಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಹೇಳಿರುವುದು ಇದುವರೆಗೆ ಕಾರ್ಯಗತವಾಗಿಲ್ಲ. ಇವುಗಳನ್ನು ಜಾರಿಗೊಳಿಸಬೇಕು.
06ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟ ರಬ್ಬರ್ ಬೆಳೆಗಾರರಿಗೆ ಈ ಬಾರಿಯಾದರೂ ರಾಜ್ಯ ಸರಕಾರದಿಂದ ಬೆಂಬಲ ಬೆಲೆ ಸಿಕ್ಕಿದರೆ ಉತ್ತಮ ಎಂಬ ಬೇಡಿಕೆ ಕೇಳಿ ಬಂದಿದೆ.
ಐಟಿ ಪಾರ್ಕ್ ಬೇಕೇ ಬೇಕು
ಹಲವು ವರ್ಷಗಳಿಂದ ಬೇಡಿಕೆ ಆಗಿಯೇ ಉಳಿದಿರುವುದು ಐಟಿ ಪಾರ್ಕ್. ಮಂಗಳೂರಿ ನಲ್ಲಿ ಐಟಿ ಹಾಗೂ ತತ್ಸಂಬಂಧಿ ಕ್ಷೇತ್ರಗಳಿಗೆ ಸಾಕಷ್ಟು ಅವಕಾಶ ಇದೆ ಯಾದರೂ ಸೂಕ್ತವಾದ “ಪರಿಸರ’ ಆಗದಿರುವುದರಿಂದ ಇಲ್ಲಿಗೆ ಕಂಪೆನಿ ಗಳು ಬರುತ್ತಿಲ್ಲ ಎಂಬ ಆಪಾದನೆ ಇದೆ. ಹಾಗಾಗಿ ಇಲ್ಲಿಗೆ ಐಟಿ ಪಾರ್ಕ್ ನಿರ್ಮಾಣ ಮಾಡುವು ದಾಗಿ ಹಿಂದಿನ ಸರಕಾರವೂ ಹೇಳಿತ್ತಾದರೂ ಘೋಷಣೆ ಮಾಡಿಲ್ಲ. ಈ ಬಾರಿಯಾದರೂ ಆಗಬಹುದೇ ಎಂಬ ಕಳಕಳಿ ವ್ಯಕ್ತವಾಗಿದೆ.
ದಕ್ಷಿಣ ಕನ್ನಡದ ಪ್ರತಿಭಾಶಾಲಿ ಯುವಜನರ ಸಂಖ್ಯೆ ದೊಡ್ಡದು, ಪ್ರತಿವರ್ಷ 10 ಸಾವಿರ ಎಂಜಿನಿಯರ್‌ಗಳು, 30 ಸಾವಿರದಷ್ಟು ಇತರ ಪದವೀಧರರು ಸೃಷ್ಟಿಯಾಗುತ್ತಾರೆ. ಸರಕಾರ ಬಿಯಾಂಡ್ ಬೆಂಗಳೂರು ಯೋಜನೆಯಡಿ ಐಟಿ ಹಾಗೂ ಸಂಬಂಧಿ ಕ್ಷೇತ್ರದಲ್ಲಿ ಮಂಗಳೂರಿಗೆ ಆದ್ಯತೆ ಕೊಡಬೇಕು.
-ಪ್ರವೀಣ್ ಕಲ್ಬಾವಿ, ಸಿಐಐ, ಮಂಗಳೂರು ಅಧ್ಯಕ್ಷರು
ಕರಾವಳಿ ಅಭಿವೃದ್ಧಿಗೆಂದು ಸ್ಥಾಪಿಸಿರುವ ಪ್ರಾಧಿಕಾರಕ್ಕೆ ಶಕ್ತಿ ನೀಡುವ ಕೆಲಸವಾಗಬೇಕು, ಅದು ತೀರಾ ದುಃಸ್ಥಿತಿಯಲ್ಲಿದೆ, ಇಲ್ಲಿಯ ಮಾನವ ಸಂಪನ್ಮೂಲಕ್ಕೆ ಯೋಗ್ಯವಾದ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ವಾಗಬೇಕು, ಇಲ್ಲವಾದರೆ ಪ್ರತಿಭಾ ಪಲಾಯನ ನಿರಂತರವಾಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮವೂ ನಿರ್ಲಕ್ಷಿತ, ಅದಕ್ಕೆ ಚುರುಕು ತರಬೇಕು.
-ಪ್ರೊ|ಜಿ.ವಿ.ಜೋಷಿ, ಅರ್ಥಶಾಸ್ತ್ರಜ್ಞರು
ಉಡುಪಿ ಜಿಲ್ಲೆ
ಪ್ರವಾಸೋದ್ಯಮ, ಕೃಷಿ, ಮೀನುಗಾರಿಕೆ ಸಿಗಲಿ ಪ್ರೋತ್ಸಾಹ
ಉಡುಪಿ: ಸಮೃದ್ಧ ಕಡಲತೀರ, ಪಶ್ಚಿಮ ಘಟ್ಟದ ತಪ್ಪಲು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಜತೆಗೆ ಕೃಷಿ, ಮೀನುಗಾರಿಕೆಯನ್ನು ಒಳಗೊಂಡ ಉಡುಪಿ ಜಿಲ್ಲೆಯು ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.ಮಲ್ಪೆ, ಮರವಂತೆ, ಬೈಂದೂರು ಸೋಮೇಶ್ವರ, ಕಾಪು, ಪಡುಬಿದ್ರಿ ಬೀಚ್ ಸಹಿತ ಸಣ್ಣ ಬೀಚ್‌ಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಮತ್ತು ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನಿರ್ದಿಷ್ಟ ಪ್ರಮಾಣದ ಅನುದಾನ ಮೀಸಲಿಡಬೇಕು ಎಂಬ ಬೇಡಿಕೆಯಿದೆ.
01.ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮವಾಗಬೇಕು. ಶ್ರೀಕ್ಷೇತ್ರ ಕೊಲ್ಲೂರು, ಶ್ರೀ ಕೃಷ್ಣಮಠ, ಮಂದಾರ್ತಿ, ಕುಂಭಾಶಿ ಆನೆಗುಡ್ಡೆ, ಮಾರಣಕಟ್ಟೆ, ಕಮಲಶಿಲೆ, ಉಚ್ಚಿಲ, ಕಾರ್ಕಳದ ಗೋಮಟೇಶ್ವರ ಬೆಟ್ಟ ಸಹಿತ ವಿವಿಧ ದೇವಸ್ಥಾನ ಧಾರ್ಮಿಕ ಕ್ಷೇತ್ರಗಳು, ಕೂಡ್ಲು, ಜೋಮ್ಲು, ಬೆಳ್ಕಲ್‌ತೀರ್ಥ, ಅರಸಿನಗುಂಡಿ, ತೂದಳ್ಳಿ ಜಲಪಾತಗಳು ಜಿಲ್ಲೆಯಲ್ಲಿವೆ. ಬೀಚ್, ಧಾರ್ಮಿಕ ಕ್ಷೇತ್ರ ಹಾಗೂ ಜಲಪಾತಗಳನ್ನು ಪ್ರವಾಸಿಗರು ಸುಲಭವಾಗಿ ತಲುಪಲು ಅನುಕೂಲವಾಗುವಂತೆ ಟೂರಿಸಂ ಸಕೀìಟ್ ನಿರ್ಮಾಣ ಮಾಡಬೇಕು ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು.
02.ಶಿವಳ್ಳಿ ಕೈಗಾರಿಕೆ ಪ್ರದೇಶ, ಮೀಯಾರು, ಬೆಳಪು, ನಂದಿಕೂರು ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಆಗಬೇಕು. ಕೈಗಾರಿಕೆ ಪ್ರದೇಶಗಳನ್ನು ಸಂದಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಅಭಿವೃದ್ಧಿ ಮತ್ತು ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಬೇಕು. ಬೈಂದೂರಿನಲ್ಲಿ ವಿಮಾನ ನಿಲ್ದಾಣ/ ಲ್ಯಾಂಡಿಂಗ್ ಪ್ರಸ್ತಾವನೆಗೆ ಜೀವ ತುಂಬಬೇಕಿದೆ. ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಮಾಡಲು ಎಲ್ಲ ವ್ಯವಸ್ಥೆಯಿದೆ, ಮೂಲ ಅನುದಾನದೊಂದಿಗೆ ಕೃಷಿ ಕಾಲೇಜು, ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜು ಘೋಷಣೆಯಾಗಬೇಕು.
03. ವಾರಾಹಿ ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಮುಕ್ತಿ ನೀಡಬೇಕು. ಉಡುಪಿ ನಗರದ ಯುಜಿಡಿಗೆ 330 ಕೋ.ರೂ. ಪ್ರಸ್ತಾವನೆಗೆ ಅನುಮೋದನೆ ಸಿಗಬೇಕು. ಜಿಲ್ಲೆಗೊಂದು ಪೊಲೀಸ್ ತರಬೇತಿ ಅಕಾಡೆಮಿ ಆಗಬೇಕು. ರಾಜ್ಯ ವಿಪತ್ತು ನಿರ್ವಹಣ ಘಟಕ (ಎಸ್‌ಡಿಆರ್‌ಎಫ್)ವನ್ನು ಜಿಲ್ಲೆಯಲ್ಲಿ ಆರಂಭಿಸಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡಬೇಕು ಅಥವಾ ಅದನ್ನು ಕೈಗಾರಿಕೆ ಪ್ರದೇಶವಾಗಿ ಅಭಿವೃದ್ಧಿಪಡಿಸಬೇಕು. ಮಣಿಪಾಲದಲ್ಲಿ ಅಗ್ನಿಶಾಮಕ ಘಟಕ ಆರಂಭಿಸಬೇಕು.
04.ಮಲ್ಪೆ, ಗಂಗೊಳ್ಳಿ ಬಂದರು ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು. ಮೀನುಗಾರಿಕೆ ಡೀಸೆಲ್ ಕೋಟಾ 1.50 ಲಕ್ಷ ಕಿಲೋ ಲೀ.ನಿಂದ 2 ಲಕ್ಷ ಕಿಲೋ ಲೀ. ಏರಿಕೆ ಮಾಡಬೇಕು. ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ 3 ಲಕ್ಷದ ವರೆಗಿನ ಸಾಲವನ್ನು ಸಹಕಾರಿ ಬ್ಯಾಂಕ್ ಮೂಲಕ ನೀಡಬೇಕು. ಮೀನು, ಕೃಷಿ ಉತ್ಪನ್ನ ಶೇಖರಣೆಗೆ ಜಿಲ್ಲೆಯಲ್ಲೊಂದು ಶೀತಲೀಕರಣ ಘಟಕ ಸ್ಥಾಪಿಸಲು ವಿಶೇಷ ಅನುದಾನ ಒದಗಿಸಬೇಕು.
05. ಕೃಷಿ, ತೋಟಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಸಮಗ್ರತೆಯ ಆಧಾರದಲ್ಲಿ ಕರಾವಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಅದರಡಿ ಉಡುಪಿ ಜಿಲ್ಲೆಗೆ ನಿರ್ದಿಷ್ಟ ಪ್ರಮಾಣದ ಅನುದಾನ ಮೀಸಲಿಡಬೇಕು ಎಂಬ ಆಗ್ರಹವೂ ಇದೆ.
ಸಣ್ಣ ಕೈಗಾರಿಕೆಗೆಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೈಗಾರಿಕೆಗಳ ವಿದ್ಯುತ್ ತೆರಿಗೆಯನ್ನು ಶೇ. 5ರಿಂದ ಶೇ. 9ಕ್ಕೆ ಏರಿಸಲಾಗಿತ್ತು. ಇದನ್ನು ಕಡಿಮೆ ಮಾಡಬೇಕು. ಕೈಗಾರಿಕೆ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಅನುದಾನ ಬಿಡುಗಡೆ ಮಾಡಬೇಕು.
– ಹರೀಶ್ ಕುಂದರ್,
ಅಧ್ಯಕ್ಷ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.