ಕರಾವಳಿ ಉತ್ಸವ: ಇಂದಿನಿಂದ ಸಾಂಸ್ಕೃತಿಕ ಸಂಭ್ರಮ
Team Udayavani, Dec 22, 2017, 9:50 AM IST
ಮಹಾನಗರ: ಕರಾವಳಿಯ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುವುದರೊಂದಿಗೆ ಹೊರ ಜಿಲ್ಲೆಗಳ ಸಂಸ್ಕೃತಿ, ಜನಪದ ರಂಗವನ್ನು ಇಲ್ಲಿನವರಿಗೆ ಪರಿಚಯಿಸುವ ಕರಾವಳಿ ಉತ್ಸವ ಡಿ.22ರಿಂದ 31ರವರೆಗೆ ನಗರದ ಲಾಲ್‌ಬಾಗ್, ಕದ್ರಿ ಪಾರ್ಕ್ ನಲ್ಲಿ ಜರಗಲಿದೆ.
ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ
ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಸಾಂಸ್ಕೃತಿಕ ಮೆರವಣಿಗೆಯು ಡಿ. 22ರಂದು ಮಧ್ಯಾಹ್ನ 3.30ಕ್ಕೆ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ನಡೆಯಲಿದೆ. ಸುಮಾರು 80ಕ್ಕೂ ಹೆಚ್ಚು ಸಾಂಸ್ಕೃತಿಕ ತಂಡಗಳಿಂದ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ. ಮಹಿಳಾ ವೀರಗಾಸೆ, ಚಿಕ್ಕ ಮಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ಬದಿಯಡ್ಕದ ತ್ರಯಂಬಕಂ, ಕಾಸರಗೋಡಿನ ದುಡಿ ಇನದನ ತಂಡಗಳಿವೆ.
ಜತೆಗೆ ಕನ್ನಡ ಭುವನೇಶ್ವರಿಯ ಟ್ಯಾಬ್ಲೋ, ಹುಲಿವೇಷ, ತಾಲೀಮು, ಶಂಖದಾಸರು, ಜಾನಪದ ಗೊಂಬೆ, ಕೊರಗರ ಗಜಮೇಳ ಮರಕಾಲು, ಹುಲಿವೇಷ ತಂಡಗಳು ಮೆರವಣಿಗೆಯಲ್ಲಿ ಇರಲಿವೆ. ಬೆಡಿಗರ್ನಾಲ್, ವಿವಿಧ ದೇವಸ್ಥಾನಗಳಿಂದ ಸಾಂಪ್ರದಾಯಿಕ ವಾದನದೊಂದಿಗೆ ತಟ್ಟೀರಾಯ, ಬೇತಾಳ ಮೆರವಣಿಗೆಗೆ ಮೆರುಗು ನೀಡಲಿವೆ. ವಿವಿಧ ವಿದ್ಯಾಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‌ಸಿಸಿ, ಸ್ಕೌಟ್‌ಗೈಡ್ಸ್ , ಭಾರತ ಸೇವಾದಳ, ಬ್ಯಾಂಕ್, ಅಂಚೆ ಕಚೇರಿಗಳು ಕೂಡ ಪಾಲ್ಗೊಳ್ಳಲಿವೆ
ಮೆರವಣಿಗೆಯು ಎ.ಬಿ. ಶೆಟ್ಟಿ ವೃತ್ತ, ನೆಹರೂ ಮೈದಾನ ರಸ್ತೆ, ಗಡಿಯಾರ ಗೋಪುರ, ಯು.ಪಿ. ಮಲ್ಯ ರಸ್ತೆ, ಹಂಪನಕಟ್ಟೆ ವೃತ್ತ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ಬಿಷಪ್ ಹೌಸ್, ಮಂಜೇಶ್ವರ ಗೋವಿಂದ ಪೈ ವೃತ್ತ, ಪಿವಿಎಸ್ ಜಂಕ್ಷನ್, ಮಹಾತ್ಮಾಗಾಂಧಿ ರಸ್ತೆ, ಬಲ್ಲಾಳ್‌ಬಾಗ್, ಮಹಾನಗರ ಪಾಲಿಕೆ ಮೂಲಕ ಸಾಗಿ ಕರಾವಳಿ ಉತ್ಸವ ಮೈದಾನ ತಲುಪಲಿದೆ.
ಉಪಾಹಾರ ವಿತರಣೆ
ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಉಪ್ಪಿಟ್ಟು, ಅವಲಕ್ಕಿ, ಬಾದಾಮಿ ಹಾಲು, ಲಾಡು, ಕಿತ್ತಳೆ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ಬಳಿಕ ಮೈದಾನದಲ್ಲಿ ಉಪಾಹಾರ ವ್ಯವಸ್ಥೆ ಇರುತ್ತದೆ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ತಿಳಿಸಿದ್ದಾರೆ.
5,000 ವಿದ್ಯಾರ್ಥಿಗಳು ಭಾಗಿ
ಸುಮಾರು 5 ಸಾವಿರ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತಿ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರಾವಳಿ ಉತ್ಸವ ವಸ್ತು ಪ್ರದರ್ಶನ ಮಂಟಪದ ಹೊರ ಆವರಣ ಮೈದಾನದಲ್ಲಿ ಸಂಜೆ 5.30ರಿಂದ 7ರವರೆಗೆ ರಾಜ್ಯದ ವಿವಿಧೆಡೆಗಳಿಂದ ಬರುವ ಕಲಾ ತಂಡಗಳು ವಿಶೇಷ ಪ್ರದರ್ಶನ ನೀಡಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ