Coastal Karnataka: ವಿವಿಧ ಸುಬ್ರಹ್ಮಣ್ಯ ಸ್ವಾಮಿ ದೇಗುಲಗಳಲ್ಲಿ ಷಷ್ಠಿ ಮಹೋತ್ಸವ ಸಂಭ್ರಮ
ನಾಗಾಲಯಗಳಲ್ಲಿಯೂ ಪೂಜೆ, ಬಲಿ ಉತ್ಸವ, ರಥೋತ್ಸವ, ಅನ್ನಸಂತರ್ಪಣೆ
Team Udayavani, Dec 8, 2024, 12:20 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ವಿವಿಧ ಸುಬ್ರಹ್ಮಣ್ಯ ದೇವಾಲಯ ಮತ್ತು ನಾಗ ಸಾನ್ನಿಧ್ಯವಿರುವ ದೇಗುಲ ಗಳಲ್ಲಿ ಶನಿವಾರ ಷಷ್ಠಿ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.
ನಾಗಾರಾಧನ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಷಷ್ಠಿ ಬ್ರಹ್ಮರಥೋತ್ಸವ ವಿಜೃಂಭಣೆ ಯಿಂದ ನೆರವೇರಿತು. ನಾಗಾಲಯಗಳಲ್ಲಿಯೂ ಪೂಜೆ ಪುರಸ್ಕಾರಾದಿಗಳು ನೆರವೇರಿತು. ದೇವರಿಗೆ ವಿಶೇಷ ಪೂಜೆ, ಬಲಿ ಉತ್ಸವ, ರಥೋತ್ಸವ, ಅನ್ನಸಂತರ್ಪಣೆ ಇತ್ಯಾದಿ ನೆರವೇರಿತು. ವಾರಾಂತ್ಯವೂ ಆಗಿರುವ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕುಡುಪು ಕ್ಷೇತ್ರದಲ್ಲಿ ಭಕ್ತರಿಂದ ಶ್ರೀ ದೇವರಿಗೆ 15 ಸಾವಿರಕ್ಕೂ ಅಧಿಕ ತಂಬಿಲ ಹಾಗೂ 6 ಸಾವಿರಕ್ಕೂ ಹೆಚ್ಚು ಪಂಚಾಮೃತ ಸೇವೆ ಸಮರ್ಪಣೆಗೊಂಡಿತು.
ಉಡುಪಿಯಲ್ಲಿ ಪುತ್ತಿಗೆ ಉಭಯ ಶ್ರೀಗಳಿಂದ ವಿಶೇಷ ಪೂಜೆ
ಶ್ರೀಕೃಷ್ಣಮಠದಲ್ಲಿ ಶ್ರೀವಾದಿರಾಜ ಸ್ವಾಮಿ ಗಳಿಂದ ಪ್ರತಿಷ್ಠಾಪಿತವಾದ ಸುಬ್ರಹ್ಮಣ್ಯ ದೇವರಿಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಥೋತ್ಸವ, ಅನ್ನಸಂತರ್ಪಣೆ ಜರಗಿತು. ಉಡುಪಿ ಸುತ್ತಲಿನ ನಾಲ್ಕು ನಾಗಾಲಯಗಳಾದ ಮುಚ್ಲುಕೋಡು, ಮಾಂಗೋಡು, ತಾಂಗೋಡು, ಅರಿತೋಡು, ಪಡುಬಿದ್ರಿ ಪಾದೆಬೆಟ್ಟು, ಸಾಂತೂರು, ನೀಲಾವರದ ಪಂಚಮಿಕಾನ, ಕುಂದಾಪುರ ತಾಲೂಕಿನ ಕಾಳಾವರ, ಉಳೂರು, ತೆಕ್ಕಟ್ಟೆ, ಅಮಾಸೆಬೈಲಿನ ಕಡವಾಸೆ, ಕಾರ್ಕಳ ಸೂಡ ದೇವಸ್ಥಾನಗಳಲ್ಲೂ ಪೂಜೆ, ರಥೋತ್ಸವ ಜರಗಿತು.
ಮಂಜೇಶ್ವರದಲ್ಲಿ ಚಂಪಾಷಷ್ಠಿ ಉತ್ಸವ
ಹದಿನೆಂಟು ಪೇಟೆಯ ದೇಗುಲ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಠಿ ಉತ್ಸವ ಸಂಪನ್ನಗೊಂಡಿತು.
ದೇಗುಲದ ರಥಬೀದಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಶ್ರೀ ಭದ್ರ ನರಸಿಂಹ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ರಥಾರೂಢರಾಗಿ ಭಕ್ತರಿಗೆ ದರ್ಶನ ನೀಡಿದ್ದು, ಲಕ್ಷಾಂತರ ಭಕ್ತರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಸಂಜೆ ಭದ್ರ ನರಸಿಂಹ ಹಾಗೂ ಸುಬ್ರಹ್ಮಣ್ಯ ದೇವರು ಬೆಳ್ಳಿ ಪಲ್ಲಕಿಯಲ್ಲಿ ಭುಜ ಸೇವೆಯ ಮೂಲಕ ರಥಾರೂಢವಾಗಿದ್ದು, ವೈಭವಪೂರ್ಣವಾಗಿ ತೇರು ಉತ್ಸವ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.