Budget 2024: ಕರಾವಳಿ ಕರ್ನಾಟಕದ ಕೈಗಾರಿಕೆಗೂ ಆಶಾಕಿರಣ
Team Udayavani, Jul 24, 2024, 7:20 AM IST
ಮಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಾರಿಯ ಕೇಂದ್ರ ಬಜೆಟ್ ವಿಕಸಿತ ಭಾರತಕ್ಕೊಂದು ಮಾರ್ಗನಕ್ಷೆಯಾಗಿ ಗೋಚರಿಸುವಂತಿದೆ. ಮುಖ್ಯವಾಗಿ ಅನ್ನದಾತ, ಮಹಿಳೆ, ಬಡವರು, ಯುವಕರನ್ನು ತಮ್ಮ ಬಜೆಟ್‌ನಲ್ಲಿ ಆದ್ಯತೆಯಾಗಿ ಪರಿಗಣಿಸಿರುವಂತಿದೆ.
ಉದ್ಯೋಗ, ಕೌಶಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಮಧ್ಯಮ ವರ್ಗಗಳನ್ನು ಅವರು ತಮ್ಮ ಯೋಜನೆಗಳಲ್ಲಿ ಹೆಚ್ಚಾಗಿ ಸೇರಿಸಿಕೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಭಾಗಕ್ಕೇನು ಸಿಕ್ಕಿದೆ ಎಂದು ನೋಡಿದರೆ ಮುಖ್ಯವಾಗಿ ಕೈಗಾರಿಕ ವಲಯದಲ್ಲಿ ಹಲವು ವಿಚಾರಗಳು ಕಂಡುಬರುತ್ತವೆ.
ಸಣ್ಣ ಕೈಗಾರಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಕರಾವಳಿಯಲ್ಲೂ ಇದು ನೆರವಾಗುವಂತಿದೆ.
ಉದ್ಯೋಗ ಮತ್ತು ಕೌಶಲಾಭಿವೃದ್ಧಿ ವಿಚಾರದಲ್ಲಿ ನೋಡಿದರೆ, ಹೊಸಬರಿಗೆ ಒಂದು ತಿಂಗಳ ವೇತನವನ್ನು ಮೂರು ಕಂತುಗಳಲ್ಲಿ ನೀಡುತ್ತಾರೆ. ಎಲ್ಲ ಹೊಸ ಉದ್ಯೋಗಿಗಳಿಗೆ ಉದ್ಯೋಗದಾತ ನೀಡುವ ಭವಿಷ್ಯನಿಧಿ ಸಲ್ಲಿಕೆಯಲ್ಲಿ 3,000 ರೂ. ವರೆಗೆ/ಮಾಸಕ್ಕೆ 2 ವರ್ಷ ಕಾಲ ನೀಡಲಾಗುವುದು ಉತ್ತಮ. ಕೈಗಾರಿಕೆಗಳೊಂದಿಗೆ ಮಾತುಕತೆ ನಡೆಸಿ, ವೃತ್ತಿನಿರತ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಿಸುವುದು ನೆರವಾಗಲಿದೆ. ಐಟಿಐಗಳ ಸುಧಾರಣೆ, ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗುವಂತೆ ಕೋರ್ಸ್‌ಗಳ ಅಂಶಗಳನ್ನು ರೂಪಿಸುವುದು ಕೂಡ ಇದರಲ್ಲಿದೆ. ಈ ಎಲ್ಲ ಕ್ರಮಗಳಿಂದ ಉತ್ಪಾದಕತೆ ಹೆಚ್ಚುವುದು, ಉದ್ಯೋಗ ಪರಿಸ್ಥಿತಿ ಸುಧಾರಣೆಯಾಗುವುದು.
ಮುದ್ರಾ ಯೋಜನೆಯ ತರುಣ್ ವಿಭಾಗದಲ್ಲಿ ಸಾಲ ನೀಡಿಕೆಯ ಗರಿಷ್ಠ ಮಿತಿಯನ್ನು 10ರಿಂದ 20 ಲಕ್ಷ ರೂ.ಗೆ ಏರಿಸಿರುವುದು ಉದ್ಯಮಶೀಲತೆಗೆ ದೊಡ್ಡ ಕೊಡುಗೆ. ಕೈಗಾರಿಕ ಕಾರ್ಮಿಕರಿಗೆ ಪಿಪಿಪಿ ಆಧಾರದಲ್ಲಿ ಬಾಡಿಗೆ ಮನೆ ಒದಗಿಸುವುದು, ಎಂಎಸ್‌ಎಂಇ ಸಾಲಕ್ಕೆ ಹೊಸ ರೀತಿಯ ಪರಿಶೀಲನ ಮಾದರಿ, ಎಂಎಸ್‌ಎಂಇಗಳಿಗೆ ತುರ್ತು ಸನ್ನಿವೇಶಗಳಲ್ಲಿ ಸಾಲದ ನೆರವು ನೀಡುವುದು, ಟ್ರಿಬ್ಯುನಲ್ ಮತ್ತು ಮೇಲ್ಮನವಿ ಟ್ರಿಬ್ಯುನಲ್ ರಚನೆ ಮೂಲಕ ದಿವಾಳಿತನದ ಪರಿಹಾರ ಒದಗಿಸಲಾಗುತ್ತದೆ.
ಇನ್ನು ಇ-ಕಾಮರ್ಸ್ ರಫ್ತು ಹಬ್ ರಚನೆ ಮಾಡುವುದಕ್ಕೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಸಣ್ಣ ಹಾಗೂ ಗುಡಿ ಕೈಗಾರಿಕೆಗಳಲ್ಲಿನ ಕೌಶಲದಾರರು ತಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದಕ್ಕೆ ಪಿಪಿಪಿ-ಆಧಾರದಲ್ಲಿ ರಫ್ತು ಹಬ್‌ಗಳನ್ನು ರಚಿಸುವುದಕ್ಕೆ ಒತ್ತು ಕೊಟ್ಟಿದ್ದಾರೆ, ಇದು ಕಾರ್ಯರೂಪಕ್ಕೆ ಬಂದರೆ ಉತ್ತಮ.
ಸಾಗರೋತ್ತರ ರಫ್ತಿಗೆ ಒತ್ತು
ಸಿಗಡಿ ಹಾಗೂ ಮೀನು ಆಹಾರಕ್ಕೆ ಇರುವ ಸುಂಕವನ್ನು ಶೇ.5ರಷ್ಟು ಇಳಿಕೆ ಮಾಡಿದ್ದರಿಂದ ಸಾಗರೋತ್ತರ ರಫ್ತು ವಿಚಾರದಲ್ಲಿ ನಮ್ಮ ಉದ್ದಿಮೆಗಳಿಗೆ ಒತ್ತು ಕೊಟ್ಟಂತಾಗಿದೆ. ಅದೇ ರೀತಿ ನಬಾರ್ಡ್ ಮೂಲಕ ಸಿಗಡಿ ಫಾರ್ಮಿಂಗ್‌ಗೆ ಹಣಕಾಸು ನೆರವು ಕೊಡುವ ನಿರೀಕ್ಷೆ ಇದೆ.
ನೌಕಾಯಾನ ಉದ್ಯಮದಲ್ಲಿ ಲೀಸಿಂಗ್ ಹಾಗೂ ಸುಧಾರಣೆಗೆ ಹೆಚ್ಚಿನ ಒತ್ತು ಕೊಡುವುದಾಗಿ ತಿಳಿಸಲಾಗಿದೆ. ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಹೆಚ್ಚಿನ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ಜಿಡಿಪಿಯ ಶೇ 3.4ನ್ನು ಎಂದರೆ 11,11,111 ಕೋಟಿ ರೂ. ಮೊತ್ತವನ್ನು ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ನಮ್ಮ ಕರಾವಳಿ ಪ್ರದೇಶವನ್ನು ಒಳನಾಡಿಗೆ ಜೋಡಿಸಿಕೊಂಡರೆ ಬಹುತೇಕ ಸಮಸ್ಯೆಗಳೂ ಬಗೆಹರಿಯಬಹುದು.
-ಅಜಿತ್ ಕಾಮತ್, ಅಧ್ಯಕ್ಷರು, ಭಾರತೀಯ
ಕೈಗಾರಿಕೆಗಳ ಮಹಾಒಕ್ಕೂಟ, ಮಂಗಳೂರು ಶಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.