Heavy Rain;ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಮುಂದುವರಿದ ವರ್ಷಧಾರೆ
Team Udayavani, Jul 25, 2023, 6:23 AM IST
ಮಂಗಳೂರು/ಉಡುಪಿ/ಕಾಸರಗೋಡು/ಮಡಿಕೇರಿ: ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಸೋಮವಾರವೂ ಗಾಳಿ ಸಹಿತ ಬಿರುಸಿನ ಮಳೆಯಾಗಿದ್ದು, ಘಟ್ಟದ ತಪ್ಪಲಿನಲ್ಲೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ತೋಟ, ಗದ್ದೆ, ಮನೆಗಳು ಜಲಾವೃತಗೊಂಡಿವೆ.
ದ.ಕ. ಜಿಲ್ಲೆಯ ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಸುಬ್ರಹ್ಮಣ್ಯ, ಕಡಬ ಸೇರಿದಂತೆ ಎಲ್ಲ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಸೇತುವೆ, ರಸ್ತೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಮರಗಳು, ರೆಂಬೆ-ಕೊಂಬೆಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ.
ಮಂಗಳೂರು ಬೋಳೂರಿನ ಮಾತಾ ಅಮೃತಾನಂದಮಯೀ ಶಾಲೆಯ ಹಿಂಭಾಗದ ಪರಪ್ಪು ಪ್ರದೇಶದಲ್ಲಿ ಫಲ್ಗುಣಿ ನದಿಯ ನೀರಿನ ಏರಿಕೆಯಿಂದಾಗಿ ಕಾಲನಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಲ್ಲಿರುವ ಸುಮಾರು 40ರಷ್ಟು ಮನೆಗಳು ಜಲಾವೃತಗೊಂಡಿವೆ. ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಯಾವುದೇ ಮನೆಯವರು ಸ್ಥಳಾಂತರಗೊಂಡಿಲ್ಲ. ರಾತ್ರಿ ವೇಳೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ನೆರವಾಗಲು ತಂಡವನ್ನು ನಿಯೋಜಿಸಲಾಗಿದೆ.
ಮಳೆ ಹಾನಿ ವಿವರ
ದ.ಕ. ಜಿಲ್ಲೆಯಲ್ಲಿ ಒಂದು ಮನೆಗೆ ತೀವ್ರ ಹಾನಿಯಾಗಿದ್ದು, 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 226 ವಿದ್ಯುತ್ ಕಂಬಗಳು, 4 ಟ್ರಾನ್ಸ್ ಫಾರ್ಮರ್, 9.40 ಕಿ.ಮೀ.ನಷ್ಟು ವಿದ್ಯುತ್ ಲೈನ್‌ಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಿದ 6 ಸೇತುವೆಗಳು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಗೆ ಸಂಬಂಧಿಸಿದ 4 ಸೇತುವೆಗಳಿಗೆ ಹಾನಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ:
ಇಬ್ಬರ ಸಾವು, ಓರ್ವ ನೀರುಪಾಲು
ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 2 ದಿನಗಳಿಂದ ಸುರಿಯು ತ್ತಿರುವ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿ, ಓರ್ವ ನೀರುಪಾಲಾಗಿ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. 50 ಮನೆಗಳಿಗೆ ಹಾನಿಯಾಗಿದೆ.
ಜು. 25ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂಜಾಗ್ರತೆ ನಿಟ್ಟಿ ನಲ್ಲಿ ಜಿಲ್ಲಾಡಳಿತ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ. ಗಾಳಿ ಮಳೆಗೆ ಕಾಪು ತಾಲೂಕಿನಲ್ಲಿ 4, ಉಡುಪಿ 11, ಬೈಂದೂರು 10, ಕುಂದಾಪುರ 10, ಬ್ರಹ್ಮಾವರ 9, ಕಾರ್ಕಳ ತಾಲೂಕಿನಲ್ಲಿ 3 ಮನೆಗಳಿಗೆ ಹಾನಿ ಸಂಭವಿಸಿದೆ. ಬೈಂದೂರು 1, ಬ್ರಹ್ಮಾವರ ತಾಲೂಕಿನಲ್ಲಿ 2 ಕೊಟ್ಟಿಗೆಗೆ ಹಾನಿಯಾಗಿದೆ.
ರವಿವಾರ ತಡರಾತ್ರಿ, ಸೋಮವಾರ ಉಡುಪಿ ತಾಲೂಕಿನಾದ್ಯಂತ ನಿರಂತರ ಮಳೆ ಸುರಿದಿದೆ. ಮುಂಜಾನೆ ಕೆಲಕಾಲ ಬಿಟ್ಟುಬಿಟ್ಟು ಮಳೆಯಾಗಿದ್ದು ಮಧ್ಯಾಹ್ನ ಅನಂತರ ಬಿರುಸುಗೊಂಡಿತು. ಸೋಮವಾರ ಬೆಳಗ್ಗೆ ನೆರೆ ಪ್ರಮಾಣ ಇಳಿಮುಖ ವಾಗಿತ್ತು. ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆ ಮುಂದುವರಿದ್ದು, ಇದರಿಂದ ವಾಹನಗಳ ಅಪಘಾತಕ್ಕೂ ಕಾರಣವಾಗುತ್ತಿದೆ. ಬಯಲು, ತಗ್ಗು ಪ್ರದೇಶಗಳಲ್ಲಿ ಕೃತಕ ಕೆರೆ ಆವರಿಸಿದೆ.
ಜಿಲ್ಲೆಯ ಪ್ರಮುಖ ನದಿಗಳಾದ ಸ್ವರ್ಣಾ, ಸೀತಾ, ಶಾಂಭವಿ ನದಿ, ಚಕ್ರ, ಎಡಮಾವಿನ ಹೊಳೆ, ಸೌಪರ್ಣಿಕಾ, ಹಾಲಾಡಿ ಹೊಳೆಗಳು ಮೈದುಂಬಿ ಹರಿಯುತ್ತಿವೆ.
ಕುಂದಾಪುರ, ಬೈಂದೂರು ತಾಲೂಕುಗಳಲ್ಲಿ ಮುಂದುವರಿದ ಮಳೆಯಬ್ಬರ
ಮನೆಗಳಿಗೆ ಹಾನಿ, ತಗ್ಗರ್ಸೆಯಲ್ಲಿ ಕಿರುಸೇತುವೆ ನೀರುಪಾಲು
ಕುಂದಾಪುರ: ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಸೋಮವಾರವೂ ಮಳೆಯಬ್ಬರ ಮುಂದುವರಿದಿದ್ದು, ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿದೆ. ಎರಡೂ ತಾಲೂಕುಗಳ 19 ಮನೆಗಳು ಹಾಗೂ 1 ಜಾನುವಾರು ಕೊಟ್ಟಿಗೆಗೆ ಹಾನಿಯಾಗಿ, ಅಪಾರ ನಷ್ಟ ಸಂಭವಿಸಿದೆ. ಕೆಲವೆಡೆ ಅಡಿಕೆ ಮರಗಳು ಧರಾಶಾಯಿಯಾಗಿವೆ.
ಮಲೆನಾಡು ಪ್ರದೇಶದಲ್ಲೂ ನಿರಂತರ ಮಳೆಯಾಗುತ್ತಿರುವುದರಿಂದ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ನಾವುಂದ ಗ್ರಾಮದ ಸಾಲುºಡ, ಅರೆಹೊಳೆ ಪ್ರದೇಶದಲ್ಲಿ ನೆರೆ ಏರುತ್ತಲೇ ಇದೆ. ಸೋಮವಾರ ನೆರೆ ನೀರು ಮತ್ತಷ್ಟು ಹೆಚ್ಚಳವಾಗಿದೆ. ಸಾಲುºಡ, ಅರೆಹೊಳೆ, ಬಡಾಕೆರೆ, ನಾಡದ ಕಡೆR, ಮರವಂತೆ, ಪಡುಕೋಣೆ, ತೆಂಗಿನಗುಂಡಿ, ಸೇನಾಪುರ, ಕುಂಬಾರಮಕ್ಕಿ, ಕಟ್ಟು, ಹಕ್ಲಾಡಿ ಗ್ರಾಮದ ಬಟ್ಟೆಕುದ್ರು, ಯಳೂರು, ತೊಪುÉ ಪ್ರದೇಶಗಳಲ್ಲಿನ ನಾಟಿ ಮಾಡಿರುವ ನೂರಾರು ಎಕರೆ ಗದ್ದೆಗಳು ಸಂಪೂರ್ಣ ಮುಳುಗಿವೆ.
ದೋಣಿಯಲ್ಲೇ ಸಂಚಾರ
ಅರೆಹೊಳೆ – ಸಾಲುºಡ- ನಾವುಂದ ಸಂಪರ್ಕ ರಸ್ತೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. 80ಕ್ಕೂ ಹೆಚ್ಚು ಮನೆಗಳ ಜನರು ಸಂಚಾರಕ್ಕೆ ದೋಣಿಯನ್ನು ಆಶ್ರಯಿಸುವಂತಾಗಿದೆ.
ಶಾಸಕರ ಭೇಟಿ
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಾನುವಾರುಗಳ ಸ್ಥಳಾಂತರ, ಕಾಳಜಿ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಭಾರೀ ಮಳೆಯ ಪರಿಣಾಮ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮದ ನೀರೋಡಿಯ ಕಿರು ಸೇತುವೆ ಕೊಚ್ಚಿ ಹೋಗಿದೆ.
ಕಳೆದ ವರ್ಷ ಪಟ್ಟಣ ಪಂಚಾಯತ್ ವತಿಯಿಂದ 3 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ಪ್ರತೀ ದಿನ ಈ ರಸ್ತೆಯ ಮೂಲಕವೇ ತೆರಳುತ್ತಿದ್ದ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ದಾರಿ ಕಾಣದಾಗಿದ್ದಾರೆ. ಜಿಲ್ಲಾಡಳಿತ, ಸ್ಥಳೀಯ ಪಂಚಾಯತ್ ಶೀಘ್ರ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಭಾಗಶಃ ಕೊಚ್ಚಿ ಹೋದ
ಲಿಂಗೊಟ್ಟು ಕಿಂಡಿ ಅಣೆಕಟ್ಟು
ಪುಂಜಾಲಕಟ್ಟೆ: ನೀರು ಉಕ್ಕಿ ಹರಿದ ಪರಿಣಾಮ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಲಿಂಗೊಟ್ಟಿನಲ್ಲಿರುವ ಕಿಂಡಿ ಅಣೆಕಟ್ಟಿನ ಒಂದು ಭಾಗ ಜು. 23ರಂದು ಸಂಪೂರ್ಣ ಕೊಚ್ಚಿ ಹೋಗಿದೆ. ಅಣೆಕಟ್ಟಿನ ಮೇಲೆ ಕಿರು ಸೇತುವೆಯಿದ್ದು ಉಕ್ಕಿನಡಿ ಹಾಗೂ ಲಿಂಗೊಟ್ಟು ಪರಿಸರದ ಜನರು ನಿತ್ಯ ಸಂಚರಿಸುತ್ತಿದ್ದರು. ಅಣೆಕಟ್ಟಿನ ಅರ್ಧ ಭಾಗ ಕೊಚ್ಚಿ ಹೋಗಿದ್ದು ಎರಡು ಭಾಗದ ಸಂಪರ್ಕ ಕಡಿದುಹೋಗಿದೆ. ಹತ್ತಿರದ ಅಡಿಕೆ ತೋಟದ ಮಣ್ಣು ಕೊರೆದು 75ಕ್ಕೂ ಅಧಿಕ ಅಡಿಕೆ ಗಿಡಗಳು ನೀರಲ್ಲಿ ಕೊಚ್ಚಿಹೋಗಿವೆ.
ಕಂದಾಯ ಇಲಾಖಾಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಇನ್ನಷ್ಟು ಮಣ್ಣು ಕೊಚ್ಚಿ ಹೋಗುತ್ತಿರುವ ಕಾರಣ ತೋಡಿನ ಸಮೀಪ ತೆರಳದಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ.
ಬಿಸಿಲೆ ಘಾಟಿ ರಸ್ತೆಯ ಹಲವೆಡೆ ಕುಸಿತ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕೆಲವು ನದಿಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಮನೆ ಹಾಗೂ ರಸ್ತೆಗಳಿಗೆ ನುಗ್ಗಿವೆ. ಕೆಲವು ಮನೆಯವ ರನ್ನು ಸ್ಥಳಾಂತರಿಸಲಾಗಿದೆ. ಬಿಸಿಲೆ ಘಾಟಿ ರಸ್ತೆಯ ಹಲವೆಡೆ ಗುಡ್ಡ ಕುಸಿತವಾಗಿದೆ.
ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ಹೊಳೆ ತುಂಬಿ ಹರಿಯುತ್ತಿದ್ದು ಏನೆಕಲ್ಲು ಸಮೀಪದ ಕಲ್ಕುದಿ ಬಳಿ ಕಲ್ಲಾಜೆ ಹೊಳೆಯ ನೀರು ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಗೆ ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಮೀಪದ 2 ಮನೆಗಳು ಜಲಾವೃತಗೊಂಡಿವೆ. ದೇವರಹಳ್ಳಿ ಯಶೋಧರ ಮತ್ತು ತಿರುಮಲೇಶ್ವರ ಹೊಸೋಕುಲ್ ಅವರ ಮೆನೆಯನ್ನೂ ಕಲ್ಲಾಜೆ ಹೊಳೆಯ ನೀರು ಆವರಿಸಿದೆ. ಏನೆಕಲ್ಲು ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ನೆರೆ ನೀರು ನುಗ್ಗಿದೆ. ಸುಬ್ರಹ್ಮಣ್ಯ ಭಾಗದ ನೂಚಿಲ ಭಾಗದಲ್ಲೂ ಹಲವೆಡೆ ತೋಟಕ್ಕೆ ನೀರು ನುಗ್ಗಿದೆ. ಕುಮಾರಧಾರಾ ನದಿಯಲ್ಲೂ ರಾತ್ರಿ ವೇಳೆ ನೆರೆ ನೀರು ಏರಿಕೆ ಆಗಿದೆ.
ವಿದ್ಯಾರ್ಥಿಗಳಿಗೆ ಸಂಕಷ್ಟ
ಸುಬ್ರಹ್ಮಣ್ಯ ಭಾಗದಲ್ಲಿ ಸೋಮವಾರ ಅಂಗನವಾಡಿ, ಶಾಲೆಗಳು, ಪಿಯುಸಿ ವರೆಗಿನ ಮಕ್ಕಳಿಗೆ ರಜೆ ಸಾರಲಾಗಿತ್ತು. ಪದವಿ ಮಕ್ಕಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿರು ವುದರಿಂದ ಕಾಲೇಜಿಗೆ ಬರಬೇಕಾಗಿದ್ದು ಅನಿವಾರ್ಯವಾಗಿತ್ತು. ಕುಮಾರಧಾರಾ ಬಳಿ ಹೆದ್ದಾರಿ ಜಲಾವೃತಗೊಂಡಿದ್ದ ಹಿನ್ನಲೆಯಲ್ಲಿ ಆ ಭಾಗದ ವಿದ್ಯಾರ್ಥಿಗಳು ಪರ್ವತಮುಖೀ ಬಳಿಯಿಂದ ಒಳರಸ್ತೆಯಲ್ಲಿ ಸೊಂಟದ ವರೆಗೆ ಜಲಾವೃತಗೊಂಡಿದ್ದ ರಸ್ತೆಯಲ್ಲೇ ಅಪಾಯಕಾರಿಯಾಗಿ ನಡೆದುಕೊಂಡು ಪರೀಕ್ಷೆ ಬರೆದಿದ್ದಾರೆ. ಮಂಗಳೂರು ವಿವಿ ಪರೀಕ್ಷೆ ಮುಂದೂಡದ ಕಾರಣ ಮಕ್ಕಳು ಸಂಕಷ್ಟ ಅನುಭವಿಸುವಂತಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಕಾಸರಗೋಡು: ಗಾಳಿ, ಮಳೆ; ಮನೆ ಕುಸಿತ
ಕಾಸರಗೋಡು: ಭಾರೀ ಮಳೆ, ಗಾಳಿಯಿಂದಾಗಿ ಮೀಂಜ ಪಂಚಾಯತ್‌ನ ದುರ್ಗಿಪಳ್ಳ ನಾಟೆಕಲ್ ನಿವಾಸಿ ಮೊಹಮ್ಮದ್ ಅವರ ಹೆಂಚಿನ ಛಾವಣಿಯ ಮನೆ ಸಂಪೂರ್ಣ ಕುಸಿದಿದೆ.
ಈ ವೇಳೆ ಮೊಹಮ್ಮದ್ ಅವರ ಪತ್ನಿ, ಮಕ್ಕಳು ಶಬ್ದ ಕೇಳಿ ಹೊರಗೆ ಓಡಿದ್ದರಿಂದ ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ. 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಸ್ಥಳಕ್ಕೆ ಕಡಂಬಾರ್ ವಿಲೇಜ್ ಆಫೀಸರ್ ಅಶೋಕ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ವಾರ್ಡ್ ಪ್ರತಿನಿಧಿ ರೇಖಾ ಶರತ್ ಭೇಟಿ ನೀಡಿದರು.
ತುಂಬಿ ಹರಿವ ನದಿಗಳು
ಭಾರೀ ಮಳೆಗೆ ಜಿಲ್ಲೆಯ ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ನದಿ ತೀರದ ಜನರು ಜಾಗ್ರತೆಯಿಂದ ಇರುವಂತೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದುರ್ಗ, ವೆಳ್ಳರಿಕುಂಡು
ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ
ಕಾಸರಗೋಡು, ಜು. 22: ನಿರಂತರ ಮಳೆಯ ಕಾರಣದಿಂದ ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕುಗಳ ಶಾಲೆಗಳಿಗೆ ಜು. 25ರ ಮಂಗಳವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಇಂಬಶೇಖರ್ ಆದೇಶಿಸಿದ್ದಾರೆ. ಮಂಗಳವಾರ ನಡೆಯಲಿರುವ ಪಿಎಸ್‌ಪಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಕೊಡಗು: ಮಳೆಯ ಅಬ್ಬರಕ್ಕೆ ಜನಜೀವನ ತತ್ತರ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿ ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಜು. 25ರಂದು ಕೂಡ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಶಾಲಾ, ಕಾಲೇಜು ಹಾಗೂ ಅಂಗನವಾಡಿ ಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ವ್ಯಾಪ್ತಿಯಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಅಪಾಯ ಮಟ್ಟದಲ್ಲಿ ಕಾವೇರಿ ನದಿ
ಭಾಗಮಂಡಲ ತ್ರಿವೇಣಿ ಸಂಗಮ ದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳ ವಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರಿದಿರುವುದರಿಂದ ಅಲ್ಲಲ್ಲಿ ಮರ ಬಿದ್ದು ಮನೆ ಹಾಗೂ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ಇಲ್ಲಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹದ ನೀರು ಭಗಂಡೇಶ್ವರ ದೇಗುಲದ ಮೆಟ್ಟಿಲುಗಳನ್ನು ಆವರಿಸಿದೆ. ದಕ್ಷಿಣ ಕೊಡಗಿನ ಲಕ್ಷ್ಣಣ ತೀರ್ಥ ನದಿಯ ಪ್ರವಾಹದಿಂದ ಬಾಳೆಲೆ ವ್ಯಾಪ್ತಿಯಲ್ಲಿ ಜನಜೀವನ ದುಸ್ತರ ವಾಗಿದೆ. ಕುಶಾಲನಗರದ ಕೆಲವು ಬಡಾವಣೆೆಗಳು ಹಾರಂಗಿಯಿಂದ ಹೊರ ಬಿಡುತ್ತಿರುವ ನೀರಿನಿಂದ ಪ್ರವಾಹದ ಆತಂಕಕ್ಕೆ ಸಿಲುಕಿವೆ. ಕುಶಾಲನಗರ ಸಮೀಪದ ಕಣಿವೆ ತೂಗು ಸೇತುವೆ ಬಳಿ ಕಾವೇರಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ವಿವಿಧೆಡೆ ಹಾನಿ
ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟಿನ ಸೇತುವೆ ಬಳಿ ನೀರಿನ ಹರಿವು ಹೆಚ್ಚಾಗಿದೆ. ಕಿಂಡಿ ಅಣೆಕಟ್ಟಿನಲ್ಲಿ ಮಳೆಯ ನೀರು ಸರಾಗವಾಗಿ ಹರಿಯುತ್ತಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆಯಿಂದ ತಡೆಗೋಡೆ, ಮರ, ವಿದ್ಯುತ್ ಕಂಬಗಳು ಬಿದ್ದಿವೆ. ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯು ಕೊಟ್ಟಮುಡಿ ಜಂಕ್ಷನ್ ಬಳಿ ಜಲಾವೃತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.