ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ
ಕೋವಿಡ್ ಬಳಿಕ ಚೇತರಿಕೆಯತ್ತ ಉದ್ಯಮ
Team Udayavani, Oct 20, 2021, 5:51 AM IST
ಮಂಗಳೂರು: ಲಾಕ್‌ಡೌನ್‌ನಿಂದಾಗಿ ನೆಲಕಚ್ಚಿದ್ದ ಜವುಳಿ ಉದ್ಯಮ ಸದ್ಯಕ್ಕೆ ನಿಧಾನವಾಗಿ ಚೇತರಿಕೆಯ ಹಾದಿಯಲ್ಲಿದೆ. ಆದರೆ ಕೋವಿಡ್ ಮೊದಲ ಹಾಗೂ 2ನೇ ಅಲೆಯಲ್ಲಿನ ಲಾಕ್‌ಡೌನ್ ನೀಡಿರುವ ಬಲವಾದ ಆರ್ಥಿಕ ಹೊಡೆತ ಸರಿದೂಗಿಸಿಕೊಳ್ಳುವುದು ಮತ್ತು ಇತರ ಕೆಲವು ಸಂಕಷ್ಟಗಳನ್ನು ಎದುರಿಸುವುದು ಈಗ ಉದ್ಯಮದ ಮುಂದಿರುವ ಬಹುದೊಡ್ಡ ಸವಾಲು ಕೂಡ ಹೌದು.
ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ನವರಾತ್ರಿ ಆರಂಭದ ಅನಂತರ ಜವುಳಿ ಉದ್ಯಮದಲ್ಲಿ ಒಂದಷ್ಟು ವ್ಯಾಪಾರ-ವಹಿವಾಟು ಕಂಡುಬರುತ್ತಿದ್ದು, ವರ್ತಕರಲ್ಲಿ ಆಶಾಭಾವನೆ ಮೂಡಿಸಿದೆ¿ೂದರೂ ಗ್ರಾಹಕ ರಲ್ಲಿ ಖರೀದಿ ಆಸಕ್ತಿ ನಿರೀಕ್ಷಿತ ಮಟ್ಟದಲ್ಲಿ ಮೂಡಿಲ್ಲ ಎನ್ನುವ ಚಿಂತೆ ಕೂಡ ಕಾಡುತ್ತಿರುವುದು ವಾಸ್ತವ.
ಇತರ ಕೆಲವು ವಸ್ತುಗಳಂತೆ ವಸ್ತ್ರವೂ ಅಗತ್ಯ ವಸ್ತುವೇ ಆಗಿ ದ್ದರೂ ಅದನ್ನು ಅವಗಣಿಸಿದ್ದರಿಂದ ಉದ್ಯಮ ನೆಲಕಚ್ಚಿತು. ಇನ್ನು ಮೊದಲಿ ನಂತೆ ಆಗ ಬೇಕಾದರೆ ಏನಿಲ್ಲವೆಂದರೂ 4ರಿಂದ 5 ವರ್ಷಗಳು ಬೇಕು. ಅದು ಕೂಡ ಪೂರಕವಾದ ಮಾರುಕಟ್ಟೆ ವಾತಾವರಣ ಇದ್ದರೆ ಮಾತ್ರ ಎನ್ನುತ್ತಾರೆ ಜವುಳಿ ವ್ಯಾಪಾರಸ್ಥರು.
ವಿದ್ಯುತ್ ಬಿಲ್, ಸಾಲ ವಸೂಲಿ ನಿಂತಿಲ್ಲ!
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ವ್ಯಾಪಾ ರಸ್ಥರು ಉದ್ಯೋಗಿಗಳಿಗೆ ಕೈಯಿಂದಾದ ಸಹಾಯ ಮಾಡುತ್ತಿದ್ದರೆ ಅತ್ತ ಬ್ಯಾಂಕ್‌ನವರು ಸಾಲ ಮರು ಪಾವತಿಸಿ ಎಂದು ಕರೆ ಮಾಡುತ್ತಲೇ ಇದ್ದರು. ಸರಕಾರದ ಯಾವ ಸೂಚನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ವಿದ್ಯುತ್ ಬಿಲ್ ಕಟ್ಟುವಂತೆ ಮೆಸ್ಕಾಂನಿಂದ ಸೂಚನೆ ಬರುತ್ತಿತ್ತು. ಅಂಗಡಿ ತೆರೆಯದಿದ್ದರೂ ಕನಿಷ್ಠ ಮೊತ್ತ (ಮಿನಿಮಮ್ ಬಿಲ್) ಪಾವತಿಸಲೇ ಬೇಕಾಯಿತು ಎನ್ನುತ್ತಾರೆ ಜವುಳಿ ವರ್ತಕರ ಸಂಘದ ಅಧ್ಯಕ್ಷ ಹೆಬ್ರಿ ಯೋಗೀಶ್ ಭಟ್.
40,000ಕ್ಕೂ ಅಧಿಕ ಮಂದಿಗೆ ಉದ್ಯೋಗ
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಮಳಿಗೆಗಳು ಸೇರಿ ದಂತೆ 3,000ಕ್ಕೂ ಅಧಿಕ ಜವುಳಿ ಮಳಿಗೆಗಳಿವೆ. ಅವು ಗಳಲ್ಲಿ ಲಾಕ್‌ಡೌನ್‌ಗಿಂತ ಮೊದಲು ಒಟ್ಟು ಸುಮಾರು 40,000ಕ್ಕೂ ಅಧಿಕ ಮಂದಿ ಉದ್ಯೋಗಿ ಗಳಾಗಿದ್ದರು. ಲಾಕ್‌ಡೌನ್ ಬಳಿಕ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ
ಗ್ರಾಹಕರ ಅಭಿರುಚಿ ಬದಲಾವಣೆ?
ಈಗ ಗ್ರಾಹಕರು ಬಟ್ಟೆ ಮಳಿಗೆಗಳತ್ತ ಬರಲಾರಂಭಿಸಿದ್ದಾರೆ. ಆದರೆ ಶೇ. 95ರಷ್ಟು ಮಂದಿ ಸಾಮಾನ್ಯ ವಸ್ತ್ರಗಳನ್ನಷ್ಟೇ ಖರೀದಿಸು ತ್ತಿದ್ದಾರೆ. ಹೆಚ್ಚು ಮೌಲ್ಯದ ಮದುವೆ ಸೀರೆ, ಸೂಟಿಂಗ್ ಶರ್ಟಿಂಗ್ಸ್ ನಂಥವುಗಳ ಕಡೆಗೆ ಆಸಕ್ತಿ ತೋರುತ್ತಿಲ್ಲ. ಕೊರೊನಾದಿಂದಾಗಿ ಉಂಟಾಗಿರುವ ಆರ್ಥಿಕ ಪರಿಣಾಮ ಅವರ ಅಭಿರುಚಿಯನ್ನು ಬದಲಾಯಿಸಿದೆ. ಇದು ಕೂಡ ವಸ್ತ್ರ ಉದ್ಯಮಕ್ಕೆ ಹೊಡೆತ ನೀಡುತ್ತಿದೆ. ಸಾಮಾನ್ಯವಾಗಿ ಇಡೀ ವರ್ಷದ ವ್ಯಾಪಾರದಲ್ಲಿ ಶೇ. 75ರಷ್ಟು ವ್ಯಾಪಾರ “ಸೀಜನ್’ನಲ್ಲಿಯೇ ನಡೆಯುತ್ತದೆ. ಆದರೆ ಕೋವಿಡ್ ಕಾರಣಕ್ಕೆ ಕಳೆದೆರಡು ಸೀಜನ್‌ಗಳು ಸಿಕ್ಕಿಲ್ಲ ಎನ್ನುವುದು ವ್ಯಾಪಾರಸ್ಥರ ಅಭಿಪ್ರಾಯ.
ತೆರಿಗೆಯಲ್ಲೂ ದೊಡ್ಡ ಪಾಲು
ದೇಶದ ಆರ್ಥಿಕತೆಗೆ ಬಟ್ಟೆ ಉದ್ಯಮ ದೊಡ್ಡ ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಪಾವತಿಯಲ್ಲಿ ದೊಡ್ಡ ಪಾಲು ಈ ಉದ್ಯಮದ್ದು. ಉದ್ಯೋಗ ಒದಗಿಸುವಲ್ಲಿಯೂ ಈ ಉದ್ಯಮ ಮುಂಚೂಣಿಯಲ್ಲಿದೆ. ಆದರೆ ಸರಕಾರ ಮಾತ್ರ ಈ ಕ್ಷೇತ್ರವನ್ನು ಅವಗಣನೆ ಮಾಡುತ್ತಾ ಬಂದಿದೆ ಎಂಬುದು ವರ್ತಕರ ದೂರು.
ನಿಲುವು, ಹೇಳಿಕೆ ಸ್ಪಷ್ಟವಾಗಿರಲಿ
ಮೊದಲನೇ ಲಾಕ್‌ಡೌನ್ ಸಂದರ್ಭ ಸರಕಾರದ ನಿಲುವು ಸ್ಪಷ್ಟವಾಗಿತ್ತು. ಆದರೆ ಎರಡನೇ ಲಾಕ್‌ಡೌನ್‌ನಲ್ಲಿ ಗೊಂದಲಕಾರಿ ಹೇಳಿಕೆ ನೀಡಿತ್ತು. ಅಂದರೆ ಲಾಕ್‌ಡೌನ್ ಮಾಡುವುದಿಲ್ಲ ಎಂದು ಹೇಳಿದ್ದ ಕಾರಣಕ್ಕೆ ಜವುಳಿ ವರ್ತಕರು ತಮ್ಮ ಸೀಸನ್ ಅವಧಿಗೆ ಬೇಕಾದ ಸರಕುಗಳನ್ನು ತಂದಿಟ್ಟುಕೊಂಡಿದ್ದರು. ಆದರೆ ಸರಕಾರ ಲಾಕ್‌ಡೌನ್ ಘೋಷಿಸಿತು. ಇದು ನಷ್ಟ ಹೆಚ್ಚಲು ಕಾರಣವಾಯಿತು. ಮದುವೆಗಳಿಗೆ ಅವಕಾಶ ನೀಡಿದರೂ ಅದಕ್ಕೆ ಬೇಕಾದ ಬಟ್ಟೆ ಖರೀದಿಸಲು ಬಿಡಲಿಲ್ಲ. ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಸರಕಾರ ಬಟ್ಟೆ ಖರೀದಿಸಲು ಅವಕಾಶ ನೀಡದಿರುವುದು ತಪ್ಪು. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು. ದಿನಸಿ, ತರಕಾರಿಯಂತೆ ಬಟ್ಟೆ ಕೂಡ ಅಗತ್ಯ ವಸ್ತುವೆಂದು ಸರಕಾರ ಪರಿಗಣಿಸಬೇಕು ಎನ್ನುತ್ತಾರೆ ಕೆಲವು ಜವುಳಿ ವರ್ತಕರು.
ಪ್ರಮುಖ ಬೇಡಿಕೆಗಳು
01ಅಗತ್ಯ ವಸ್ತುಗಳ ಕಾಯಿದೆಯಡಿಯಲ್ಲಿ ಜವುಳಿ ಉದ್ಯಮವನ್ನೂ ಸೇರ್ಪಡೆಗೊಳಿಸಬೇಕು.
02ಮೇ ಮತ್ತು ಜೂನ್ ತಿಂಗಳ ಟರ್ಮ್ ಲೋನ್ ಬಡ್ಡಿಯನ್ನು ಮನ್ನಾ ಮಾಡಬೇಕು.
03ಎರಡು ತಿಂಗಳ ಮೆಸ್ಕಾಂ ಬಿಲ್‌ಗೆ ಸಹಾಯಧನ ನೀಡಬೇಕು.
04ಕಾರ್ಮಿಕರನ್ನು ಅಸಂಘ ಟಿತ ವಲಯಕ್ಕೆ ಸೇರಿಸ ಬೇಕು, ಕೋವಿಡ್ ಪರಿಹಾರ ಪ್ಯಾಕೇಜ್ ನೀಡಬೇಕು.
ಲಾಕ್‌ಡೌನ್‌ನಿಂದಾಗಿ ಜವುಳಿ ವರ್ತಕರು ಭಾರೀ ಸಂಕಷ್ಟಕ್ಕೊಳಗಾಗಿದ್ದಾರೆ. ಅಂಗಡಿಗಳನ್ನು ಮುಚ್ಚುವ ಸ್ಥಿತಿಗೆ ಬಂದಿದ್ದಾರೆ. ಮುಂದೆಯೂ ಉತ್ಪಾದನ ವೆಚ್ಚ, ಜಿಎಸ್‌ಟಿ ಏರಿಕೆಯ ಭೀತಿ ಈ ಉದ್ಯಮವನ್ನು ಕಾಡುತ್ತಿದೆ. ಹಾಗಾಗಿ ಸರಕಾರ ಕೂಡಲೇ ಗಮನ ಹರಿಸಿ ನೆರವಿಗೆ ಬರಬೇಕು. ಬಟ್ಟೆ ಉದ್ಯಮವನ್ನೂ ಅಗತ್ಯವಸ್ತುಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕು.
– ಹೆಬ್ರಿ ಯೋಗೀಶ್ ಭಟ್,
ಅಧ್ಯಕ್ಷರು, ದ.ಕ. ಮತ್ತು ಉಡುಪಿ ಜಿಲ್ಲಾ ಜವುಳಿ ವರ್ತಕರ ಸಂಘ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.