ತೆಂಗು-ಸೀಯಾಳ ಬೆಲೆ: ಹೊಸ ದಾಖಲೆ
Team Udayavani, Jan 6, 2018, 4:08 PM IST
ಪುತ್ತೂರು: ಕೋತಿ ಕಾಟ, ಸುರುಳಿ ರೋಗ, ಕೀಟಬಾಧೆಯಿಂದ ಫಸಲು ನಷ್ಟ ಅನುಭವಿಸಿದ್ದ ತೆಂಗು ಬೆಳೆಗಾರನಿಗೆ ಮಾರುಕಟ್ಟೆಯಲ್ಲಿ ತೆಂಗಿಗೆ ದಾಖಲೆಯ
ಬೆಲೆ ಲಭಿಸುತ್ತಿರುವುದು ಆಶಾಭಾವನೆ ಮೂಡಿಸಿದೆ. ಬೆಲೆ ಏರಿಕೆ ಗ್ರಾಹಕರಿಗೆ ಮಾತ್ರ ಬಿಸಿ ತುಪ್ಪವಾಗಿದೆ. ಪುತ್ತೂರಿನಲ್ಲಿ ತೆಂಗಿನಕಾಯಿ ಕೆ.ಜಿ.ಗೆ 42 – 43 ರೂ. ರಖಂ ಮಾರುಕಟ್ಟೆ ದರವಿದೆ. ವ್ಯಾಪಾರಿಗಳು 48 -50 ರೂ.ಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. 2015 - 16ರಲ್ಲಿ 50 ರೂ.ಗಿಂತ ಕೆಳಗಿದ್ದ ಕೊಬ್ಬರಿ ಕೆ.ಜಿ.ಗೆ 130 -140 ರೂ. ತನಕ ಖರೀದಿಯಾಗುತ್ತಿದ್ದು, ತೆಂಗಿನ ಎಣ್ಣೆ ಲೀಟರ್‌ಗೆ 200 -220 ರೂ. ಆಗಿದೆ.
ಇಳುವರಿ ಇಳಿಕೆ
ಕೀಟಬಾಧೆ, ರೋಗ, ಕೋತಿಗಳ ಕಾಟದಿಂದ ತೆಂಗಿನ ಇಳುವರಿ ಸಾಕಷ್ಟು ಕುಸಿದಿದೆ. ಒಣಗಿದ ತೆಂಗಿನಕಾಯಿ ಆವಕದಲ್ಲಿ ಶೇ. 40ರಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. 2015 -16ನೇ ಸಾಲಿನಲ್ಲಿ ತೆಂಗಿನಕಾಯಿ ಬೆಲೆ ಕಡಿಮೆಯಾಗಿದ್ದರೂ ಅಲ್ಪ ಪ್ರಮಾಣದ ಏರಿಕೆ ಇಳುವರಿಯಲ್ಲಿ ಕಂಡುಬಂದಿತ್ತು. 2017ರಲ್ಲಿ ಮಳೆ ಜಾಸ್ತಿಯಿತ್ತು. ಹೀಗಾಗಿ, ಇಳುವರಿಯಲ್ಲಿ ಪ್ರಗತಿಯಾಗಿ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ತೆಂಗಿನಕಾಯಿ ಮಾರುಕಟ್ಟೆಗೆ ಆವಕವಾಗುವ ನಿರೀಕ್ಷೆ ಇದೆ.
ಜನರಲ್ಲಿ ಆರೋಗ್ಯದ ಜಾಗೃತಿ ಮೂಡುತ್ತಿರುವುದರಿಂದ ಹಾಗೂ ಅಧಿಕ ಉಷ್ಣತೆಯ ವಾತಾವರಣದಲ್ಲಿ ಸೀಯಾಳ ಆರೋಗ್ಯಕರ ಪೇಯವಾಗಿದ್ದು, ಸ್ಥಳೀಯವಾಗಿ ಬೆಳೆದ ಸೀಯಾಳಕ್ಕೆ ಅಂಗಡಿ ಮುಂಗಟ್ಟು, ರಸ್ತೆ ಬದಿ ವ್ಯಾಪಾರಿಗಳಿಂದ ಹೆಚ್ಚಿನ ಬೇಡಿಕೆ ವ್ಯಕ್ತ ವಾಗಿದೆ. ಘಟ್ಟದ ಹಾಗೂ ಊರಿನ ಎಳನೀರಿಗೆ ಏಕರೀತಿಯ ದರವಿದ್ದರೂ, ಊರಿನ ಸೀಯಾಳವನ್ನು ಗ್ರಾಹಕರು ಕೇಳಿ ಪಡೆಯುತ್ತಿದ್ದಾರೆ. ಸೀಯಾಳ 35-40 ರೂ.ಗೆ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ 20 -25 ರೂ. ತನಕ ಸಿಗುತ್ತಿದೆ. ಸಹಜವಾಗಿಯೇ ತೆಂಗಿಗಿಂತ ಸೀಯಾಳ ಮಾರಾಟಕ್ಕೆ ಸ್ಥಳೀಯ ಬೆಳೆಗಾರರು ಆದ್ಯತೆ ನೀಡುತ್ತಿದ್ದಾರೆ.
ಪೌಡರ್‌ನಲ್ಲಿ ಬಳಕೆ
ಕೊಬ್ಬರಿ ಮೂಲಕ ಎಣ್ಣೆಗೆ ಬಳಕೆಯಾಗುತ್ತಿದ್ದ ತೆಂಗು ಶುಷ್ಕ ಪೌಡರ್ ತಯಾರಿಕೆಗೆ ಶೇ. 20ರಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಉತ್ತರ ಭಾರತದಲ್ಲಿ ಅಡುಗೆಗೂ ಬಳಸಲಾಗುತ್ತಿದೆ. ಈ ಉತ್ಪನ್ನಕ್ಕೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಇದೆ.
ಸೀಯಾಳಕ್ಕೆ ಆದ್ಯತೆ
ಕರಾವಳಿ ಭಾಗದಲ್ಲಿ ಕೋತಿಗಳ ಕಾಟದಿಂದ ವ್ಯಾಪಕ ಪ್ರಮಾಣದ ತೆಂಗು ಫಸಲು ನಷ್ಟಕ್ಕೆ ಒಳಗಾಗುತ್ತಿದೆ. ಜಾಗೃತ ಜನರು ಬೇಸಿಗೆಯಲ್ಲಿ ಸ್ಥಳೀಯ ಎಳನೀರಿಗೆ ಆದ್ಯತೆ ನೀಡುತ್ತಿರುವುದರಿಂದ ಸ್ಥಳೀಯ ತೆಂಗು ಬೆಳೆಗಾರರು ಸೀಯಾಳ ಮಾರುಕಟ್ಟೆಯನ್ನು ಹಿಡಿಯುವಲ್ಲಿ ಮನಸ್ಸು ಮಾಡಿದ್ದಾರೆ. ಇಳುವರಿ ಕುಸಿತವೂ ತೆಂಗಿನ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.
– ಡಾ| ವಿಘ್ನೇಶ್ವರ ವರ್ಮುಡಿ
ಕೃಷಿ ಮಾರುಕಟ್ಟೆ ತಜ್ಞರು, ಪುತ್ತೂರು
ಇಲ್ಲಿ ಇಳುವರಿ ಕಡಿಮೆ
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 3600 ಹೆಕ್ಟೇರ್ ತೆಂಗು ಕೃಷಿ ಇದೆ. ಒಂದು ತೆಂಗಿನ ಮರದಿಂದ ಅವಧಿಯಲ್ಲಿ 80 -100 ಕಾಯಿ ಫಸಲು ಲಭಿಸಬೇಕು. ಈ ಭಾಗದಲ್ಲಿ ಇಳುವರಿ ಕಡಿಮೆ ಇರುವುದರಿಂದ ಸರಾಸರಿ 50-60 ತೆಂಗಿನಕಾಯಿ ಇಳುವರಿಯಷ್ಟೇ ಲಭಿಸುತ್ತದೆ. ಎಳನೀರಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಳೆಗಾರರು ಎಳನೀರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ.
– ದಿನೇಶ್, ತೋಟಗಾರಿಕಾ
ನಿರ್ದೇಶಕರು, ಪುತ್ತೂರು
ದಾಖಲೆಯ ಏರಿಕೆ
2015- 16 ಮತ್ತು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ 20 ರೂ.ಗಿಂತ ಕಡಿಮೆ ಇದ್ದ ತೆಂಗಿನ ಬೆಲೆ 2016 17ರಲ್ಲಿ ಏರಿಕೆಯ ಹಾದಿಯನ್ನು ಕಂಡಿದೆ. ಕೆ.ಜಿ.ಗೆ 30 ರೂ.
ಆಸುಪಾಸಿನಲ್ಲಿದ್ದ ತೆಂಗಿನ ಬೆಲೆ 2018ರ ಆರಂಭದಿಂದ 40 ರೂ. ಗಡಿಯನ್ನು ದಾಟಿದೆ. ಮಕರ ಸಂಕ್ರಮಣದ ಹೊತ್ತಿಗೆ ಶಬರಿಮಲೆ ಯಾತ್ರೆಗೆ ಹೋಗುವವರಿಗೆ ತೆಂಗಿನಕಾಯಿ ಅಗತ್ಯವಿರುವುದರಿಂದ ತೆಂಗಿನ ಬೆಲೆಯಲ್ಲಿ ಇನ್ನಷ್ಟು ಏರಿಕೆಯ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.