ನೀತಿಪಾಠ ಬೋಧಿಸುವ ಅಧ್ಯಾಪಕರಿಗೆ ನೀತಿಪಾಠ
Team Udayavani, Jan 31, 2018, 2:52 PM IST
ಮಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ನೀತಿಪಾಠ ಬೋಧಿಸುವ ಅಧ್ಯಾಪಕರೇ ಇನ್ನು ಮುಂದೆ ತಾವು ಧೂಮಪಾನ, ಮದ್ಯಪಾನದಂತಹ ದುಶ್ಚಟ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬುದಾಗಿ ವಿದ್ಯಾರ್ಥಿಗಳ ಎದುರಿಗೆ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು. ಈ ಮೂಲಕ “ಗುರು ದೇವೋಭವ’ ಎಂಬ ಧ್ಯೇಯವಾಕ್ಯವನ್ನು ಅಕ್ಷರಶಃ ನಿಜವಾಗಿಸುವಂತೆ
ಅಧ್ಯಾಪಕರಲ್ಲಿ ತಮ್ಮ ವೃತ್ತಿ ಧರ್ಮದ ಬಗ್ಗೆ ಬದ್ಧತೆ ಮೈಗೂಡಿಸುವುದಕ್ಕೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು ಬೆಳಗ್ಗಿನ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳ ಸಮ್ಮುಖ ತಮ್ಮ ಗುಣ-ನಡತೆ ಹಾಗೂ ಗುರುಗಳಾಗಿ ಸಮಾಜದಲ್ಲಿ ತಾವು ಹೇಗೆ ಮಾದರಿಯಾಗಿರಬೇಕು ಎಂಬ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ಅಷ್ಟೇ ಅಲ್ಲ, ಪ್ರತಿ ಮೂರು ತಿಂಗಳಿಗೊಮ್ಮೆ ಈ ಪ್ರತಿಜ್ಞಾವಿಧಿ ಸ್ವೀಕಾರವನ್ನು ಪುನರಾವರ್ತಿಸಬೇಕು. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಾ.ಶಿ. ಇಲಾಖೆಯ ಸುತ್ತೋಲೆ
ಸುತ್ತೋಲೆಯಲ್ಲಿ “ದೇಶದಲ್ಲಿ ಹಾಗೂ ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಅದರದ್ದೆ ಆದ ಘನತೆಯಿದೆ. ಆದರೆ ಕೆಲವೇ ಕೆಲವು ರೋಗಗ್ರಸ್ತ ಮನಸ್ಸುಳ್ಳ ವ್ಯಕ್ತಿಗಳು ಪವಿತ್ರವಾದ ಶಿಕ್ಷಕ ವೃತ್ತಿಗೆ ಬಂದು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿ ಶಾಲೆಗೆ, ಇಲಾಖೆಗೆ ಮತ್ತು ತಮ್ಮ ಅಸ್ತಿತ್ವಕ್ಕೆ ಕಾರಣವಾದ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಕಾರ್ಯವೆಸಗಿರುವುದು ಶೋಭೆ ತರುವಂಥದಲ್ಲ. ತಮ್ಮ ವೃತ್ತಿ ಗೌರವದಿಂದ, ಉತ್ತಮ ಸಂಸ್ಕಾರದಿಂದ ಮೌಲ್ಯಗಳನ್ನು ಉಳಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಸ್ವಯಂ ಅಂಕೆಯಿಲ್ಲದೆ, ನೈತಿಕ ಜವಾಬ್ದಾರಿಯನ್ನು ಮರೆತು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವ ಕೆಲವು ಶಿಕ್ಷಕರಿಗೆ ಕಾನೂನಿನ ಚಾಟಿಯ ಮೂಲಕ ತಿಳಿಹೇಳುವ ಆವಶ್ಯಕತೆ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ /ಇಲಾಖೆಯ
ನಿಯಮಗಳ ಸಂಕೋಲೆಯ ಮೂಲಕ ಅರಿವು ಮೂಡಿಸುವ ಅನಿವಾರ್ಯತೆ ಇರುವುದರಿಂದ ಕೆಲವು ಅಂಶಗಳನ್ನು ಅಳವಡಿಸಲು ಇಲಾಖೆ ಸೂಚಿಸಿದೆ’ ಎಂದು ತಿಳಿಸಲಾಗಿದೆ.
ಶಿಕ್ಷಕರು ಇನ್ನು ಹೇಗಿರಬೇಕು: ಶಾಲಾ ಅವಧಿಯಲ್ಲಿ ಯಾವುದೇ ಶಿಕ್ಷಕರು ಧೂಮಪಾನ/ಮದ್ಯಪಾನ ಸೇರಿದಂತೆ ಯಾವುದೇ ದುಶ್ಚಟ ಅಥವಾ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಶಾಲಾ ಕೆಲಸದ ಅವಧಿಯ ಅನಂತರವೂ ಶಿಕ್ಷಕರು ಸ್ವಪ್ರೇರಣೆಯಿಂದ ತಮ್ಮನ್ನು ನಿಯಂತ್ರಣಕ್ಕೊಳಪಡಿಸಿಕೊಂಡು ಧೂಮಪಾನ/ಮದ್ಯಪಾನ ಅಥವಾ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಒಂದು ವೇಳೆ ಇಂತಹ ವ್ಯಸನಕ್ಕೆ ಒಳಗಾಗಿದ್ದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಹಾಗೂ ಅಧ್ಯಾತ್ಮ ಮಾರ್ಗಗಳ
ಮೂಲಕ ಇಂತಹ ಚಟಗಳಿಂದ ಮುಕ್ತರಾಗಬೇಕು. ತಮ್ಮ ಸಹದ್ಯೋಗಿಗಳಲ್ಲಿ ಯಾರಾದರೂ ಇಂತಹ ಚಟಕ್ಕೆ ಒಳಗಾಗಿದ್ದಲ್ಲಿ ಅವರನ್ನು ಗುರುತಿಸಿ ಚಟಮುಕ್ತರನ್ನಾಗಿಸಿ ಸರಿದಾರಿಗೆ ತರಲು ಯತ್ನಿಸಬೇಕು ಮತ್ತು ಈ ಬಗ್ಗೆ ಅವರ ಕುಟುಂಬಕ್ಕೆ / ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಸನ್ನಡತೆ -ಸದಾಚಾರದ ಅರಿವು ಮೂಡಿಸಬೇಕು. ಶಿಕ್ಷಕರ ಸೇವಾವಧಿಯಲ್ಲಿ ನೀಡಲಾಗುವ ಸೇವಾನಿರತ ತರಬೇತಿ
ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಕಡ್ಡಾಯವಾಗಿ ಜಾಗೃತಿ ಮೂಡಿಸಬೇಕು. ಅಧಿಕಾರಿ/ಶಿಕ್ಷಕರಲ್ಲಿ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಒಂದು ಪ್ರತಿಜ್ಞಾ ವಿಧಿಯನ್ನು ಕೂಡ ಸಿದ್ಧಪಡಿಸಿ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಶಿಕ್ಷಕರು (ಶಾಲಾ ಪ್ರಾರ್ಥನಾ ಸಮಯದಲ್ಲಿ) ಮತ್ತು ಇಲಾಖಾ ಕಚೇರಿಗಳಲ್ಲಿ ಸಿಬಂದಿ/ ಅಧಿಕಾರಿಗಳು ಈ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು. ಜತೆಗೆ ಆ ಪ್ರಕಾರವಾಗಿ ನಡೆದುಕೊಳ್ಳಬೇಕು. ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಕಾರ್ಯವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪುನರಾವರ್ತಿಸಬೇಕು. ಹೊಸದಾಗಿ ಶಿಕ್ಷಕ ವೃತ್ತಿಗೆ ನೇಮಕ ಹೊಂದಿರುವ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅದಾಗಿಯೂ ಯಾವುದೇ ಶಿಕ್ಷಕರು, ಅಧಿಕಾರಿ/ಸಿಬಂದಿ ವರ್ಗದವರು ಕರ್ತವ್ಯದ ಅವಧಿಯಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸುಕ್ರಮಕ್ಕೆ ಒಳಪಡಿಸಬೇಕು ಮತ್ತು ಶಿಕ್ಷಕರು /ಸಿಆರ್‌ಪಿ/ಬಿಆರ್‌ಪಿ/ಶಿಕ್ಷಣ ಸಂಯೋಜಕರು/ ಬಿಆರ್‌ಸಿ/ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರ ಎಲ್ಲ ಅಧಿಕಾರಿ/ಸಿಬಂದಿ ವರ್ಗದವರು ಕೂಡ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ಮೊಬೈಲ್ ಬಳಕೆಯೂ ನಿಷಿದ್ಧ
ಶಾಲಾ ಅವಧಿಯಲ್ಲಿ ಶಿಕ್ಷಕರು ಮೊಬೈಲ್ ಬಳಸದಂತೆ ಕೂಡ ಶಿಕ್ಷಣ ಇಲಾಖೆ ಆಯುಕ್ತರು ಮತ್ತೂಮ್ಮೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಶಾಲಾ ಅವಧಿಯಲ್ಲಿ ಮೊಬೈಲ್ ಬಳಸದಂತೆ ಈಗಾಗಲೇ 2007ರ ಸೆ.5ರಂದು ಹಾಗೂ 2010ರ ಮಾರ್ಚ್ 4ರಂದು ಸುತ್ತೋಲೆ ಹೊರಡಿಸಲಾಗಿತ್ತು.
ಪ್ರತಿಜ್ಞಾ ವಿಧಿ
“ನಮ್ಮ ದೇಶದಲ್ಲಿ ಹಾಗೂ ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ಅದರದೇ ಆದ ಘನತೆ ಗೌರವ ಮತ್ತು ಮೌಲ್ಯಗಳ ಆಯಾಮವಿದೆ. ಪ್ರಾಥಮಿಕ ಶಿಕ್ಷಣವನ್ನು ಒದಗಿಸಿದ ಶಿಕ್ಷಕರು ಎದುರು ಬಂದರೆ ವಿನಮ್ರತೆಯಿಂದ ಗೌರವ ಸೂಚಿಸುವುದನ್ನು ಇಂದಿಗೂ ಕಾಣಬಹುದು. ಶಿಕ್ಷಕರು ಪೋಷಕರಲ್ಲಿ ನೈತಿಕತೆ ಹಾಗೂ ಮೌಲ್ಯಗಳನ್ನು ಬಿತ್ತಿ ಬೆಳೆಸುವ ಮುಖ್ಯ ಪಾತ್ರಧಾರಿಗಳಾಗಿರುತ್ತಾರೆ ಹಾಗೂ ಸಮಾಜವನ್ನು
ತಿದ್ದಿ ತೀಡಿ ಉತ್ತಮ ದಾರಿಯಲ್ಲಿ ನಡೆಸಲು ಅವರ ಪಾತ್ರ ಮುಖ್ಯವಾದುದು. ತರಗತಿ ಕೋಣೆಗಳಲ್ಲಿ ಭಾರತದ ಭಾವೀ ಪ್ರಜೆಗಳಾದ ವಿದ್ಯಾರ್ಥಿಗಳ ಭವಿಷ್ಯವನ್ನು ಬರೆದು ಮಾರ್ಗದರ್ಶನ ನೀಡಿ ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಮುಖ್ಯ ಪಾತ್ರ ವಹಿಸಿರುತ್ತಾರೆ.
ಇಂತಹ ಗೌರವಾನ್ವಿತ ಶಿಕ್ಷಕ ಹುದ್ದೆಯಲ್ಲಿರುವವರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬಂದಿಗಳು ತಮ್ಮ ನೈತಿಕತೆ ಮತ್ತು ವೃತ್ತಿಧರ್ಮವನ್ನು ಕಾಪಾಡಿಕೊಂಡು ದುಶ್ಚಟಗಳಿಗೆ ಬಲಿಯಾಗದಂತೆ ಸಮಾಜಕ್ಕೆ, ಶಿಕ್ಷಕವೃಂದಕ್ಕೆ ಮತ್ತು ಇಲಾಖೆಗೆ ಕಳಂಕ
ತರುವಂತಹ ಯಾವುದೇ ಕಾರ್ಯವೆಸಗದಿರುವಂತೆ ಈ ಮೂಲಕ ಪ್ರಮಾಣೀಕರಿಸುತ್ತೇವೆ’ ಎಂದು ಪ್ರತಿಯೊಬ್ಬ ಶಿಕ್ಷಕರು ಕೂಡ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.