ಗೊಂದಲ- ಗದ್ದಲದಲ್ಲಿ ಮುಗಿದ ಪಾಲಿಕೆ ಸಭೆ
Team Udayavani, Mar 1, 2018, 11:01 AM IST
ಮಹಾನಗರ: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಯೋಜನೆಯಲ್ಲಿ ಕೆಲವು ಫಲಾನುಭವಿಗಳನ್ನು ಕೈಬಿಡಲಾಗಿದ್ದು, ರಾಜಕೀಯ ನಡೆಸಲಾಗುತ್ತಿದೆ ಎಂಬ ಆರೋಪ ಒಂದೆಡೆಯಾದರೆ, ಹಂಪನಕಟ್ಟೆಯಲ್ಲಿ ನೂತನ ಕ್ಲಾಕ್ ಟವರ್ ಯೋಜನೆಗೆ ಸೂಕ್ತ ಅನುದಾನ ಮೀಸಲಿಡದೆ ತರಾತುರಿಯಿಂದ ಮೇಯರ್ ಅವರು ಕಾಮಗಾರಿ ಆರಂಭಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಬುಧವಾರ ನಡೆದ ಮಹಾ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಎತ್ತಿದ ಪರಿಣಾಮ ಚರ್ಚೆ, ಗೊಂದಲ- ಗದ್ದಲಗಳಿಗೆ ಸಾಕ್ಷಿಯಾಯಿತು.
ಆಶ್ರಯ ವಸತಿ ಯೋಜನೆಯ ಬಗ್ಗೆ ವಿಷಯ ಪ್ರಸ್ತಾವಿಸಿದ ಬಿಜೆಪಿ ಸದಸ್ಯ ಪ್ರೇಮಾನಂದ ಶೆಟ್ಟಿ, ಕೇಂದ್ರ, ರಾಜ್ಯ ಹಾಗೂ ಮನಪಾ ಅನುದಾನದಲ್ಲಿ ವಸತಿ ಯೋಜನೆ ನಿರ್ಮಿಸಲಾಗುತ್ತಿದೆಯಾದರೂ ಮಂಗಳೂರು ದಕ್ಷಿಣದ ಶಾಸಕರು ತಮ್ಮದೇ ಸಾಧನೆ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸಿಪಿಐಎಂನ ಸದಸ್ಯ ದಯಾನಂದ ಶೆಟ್ಟಿ ಮಾತನಾಡಿ, ಇದು ಚುನಾವಣೆಯ ಗಿಮಿಕ್ ಆಗಿದೆ ಎಂದು ದೂರಿದರು.
ಕಾಂಗ್ರೆಸ್‌ನ ಮಹಾಬಲ ಮಾರ್ಲ ಮಾತನಾಡಿ, ಆಶ್ರಯ ಮನೆ ಪಕ್ಷಾತೀತವಾಗಿ ನೀಡುವ ಕಾರ್ಯಕ್ರಮ. ಬಡವರಿಗಾಗಿ ಈ
ಯೋಜನೆ ಜಾರಿಯಾಗುತ್ತಿರುವುದರಿಂದ ಇದಕ್ಕೆ ಸದಸ್ಯರು ಒಮ್ಮತದಿಂದ ಬೆಂಬಲ ಸೂಚಿಸುವುದು ಅಗತ್ಯ ಎಂದರು. ಇದಕ್ಕೆ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ, ಆಶ್ರಯ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯವಾಗಿದೆ. ಕೆಲವರನ್ನು ಕೈಬಿಡಲಾಗಿದೆ ಎಂದರು.
ಯೋಜನೆಗೆ ಸಂಬಂಧಿಸಿ ಸ್ಥಳದ ಸಮತಟ್ಟು, ಗಡಿ ಗುರುತು ಆಗದೆ ಟೆಂಡರ್ ಕರೆಯಲಾಗಿದೆ. 16 ತಿಂಗಳಲ್ಲಿ ಮನೆ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿಕೊಂಡಿದ್ದಾರೆ. ಸರಕಾರಿ ಆದೇಶಗಳನ್ನು ಗಾಳಿಗೆ ತೂರಿ ಯೋಜನೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಆಕ್ಷೇಪ ಸರಿಯಲ್ಲ
ಕಾಂಗ್ರೆಸ್ ಸದಸ್ಯ ಎ.ಸಿ.ವಿನಯ್‌ರಾಜ್ ಮಾತನಾಡಿ, 8 ವರ್ಷಗಳಿಂದ ಸಾವಿರಾರು ಮಂದಿ ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದು, ಫಲಾನುಭವಿಗಳ ಆಯ್ಕೆ ಶಾಸಕರ ಕಚೇರಿಯಲ್ಲಿ ನಡೆದಿದೆಯೇ ಹೊರತು ಪಕ್ಷದ ಕಚೇರಿಯಲ್ಲಿ ಅಲ್ಲ. ಮಾತ್ರವಲ್ಲದೆ, ಈ ಆಯ್ಕೆ ಸಭೆಯಲ್ಲಿ ಬಿಜೆಪಿಯ ವಿಜಯ ಕುಮಾರ್, ನವೀನ್ ಚಂದ್ರ ಹಾಗೂ ಸುಧೀರ್ ಶೆಟ್ಟಿ ಹೊರತುಪಡಿಸಿ ಇತರ ಸದಸ್ಯರು ಭಾಗವಹಿಸಿ ತಮ್ಮ ಕ್ಷೇತ್ರದ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆಮಾಡಿದ್ದಾರೆ. ಹಾಗಿರುವಾಗ ಈ ರೀತಿ ಬಡವರಿಗೆ ರೂಪಿಸಲಾದ ಯೋಜನೆಗೆ ಆಕ್ಷೇಪ ಮಾಡುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು, ಬಿಜೆಪಿ ಸದಸ್ಯರು ಮೇಯರ್ ಪೀಠದೆದುರು ಆಗಮಿಸಿ ವಾಗ್ವಾದದಲ್ಲಿ ತೊಡಗಿದರು. ಕೆಲ ಹೊತ್ತು ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪ ನಡೆಯಿತು. ಕಾಂಗ್ರೆಸ್ ಸದಸ್ಯರಾದ ಅಪ್ಪಿ ಹಾಗೂ ದೀಪಕ್ ಪೂಜಾರಿ ಅವರು ಮಾತನಾಡಿ, 25 ವರ್ಷಗಳ ಕಾಲ ಬಿಜೆಪಿಯ ಶಾಸಕರಿದ್ದರೂ ಬಡವರಿಗೆ ಮನೆ ನೀಡಲಾಗಿಲ್ಲ. ಹಾಗಿರುವಾಗ ಈಗಿನ ಶಾಸಕರು ಮುತುವರ್ಜಿಯಲ್ಲಿ ಬಡವರಿಗೆ ಮನೆ ನೀಡಲು ಪ್ರಯತ್ನಿಸುವುದನ್ನು ವಿರೋಧಿಸುವುದು ಯಾಕೆ ಎಂದು ಪ್ರಶ್ನಿಸಿದರು.
‘ತಡೆ ಹಿಡಿದದ್ದೇ ಹೊರತು, ರದ್ದುಪಡಿಸಿಲ್ಲ’
ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಆಶ್ರಯ ಯೋಜನೆ ಬಗ್ಗೆ ಮಾಹಿತಿ ನೀಡಿ, ಮಂಗಳೂರು ದಕ್ಷಿಣಕ್ಕೆ ಜಿ+3 ಮಾದರಿಯಲ್ಲಿ ವಸತಿ ನಿರ್ಮಾಣಕ್ಕೆ 1,100 ಮನೆಗಳ ಪ್ರಸ್ತಾಪ ಆರಂಭದಲ್ಲಿತ್ತು. ಇದರಲ್ಲಿ ಪಿಎಂವೈ ಯೋಜನೆಯ ಅನುದಾನವೂ ಇರುವುದರಿಂದ ಆರಂಭದಲ್ಲಿ 950 ಫಲಾನುಭವಿಗಳಿಗೆ ವಸತಿಗೆ ಡಿಪಿಆರ್ ತಯಾರಿಸಲಾಗಿತ್ತು. 170 ಅರ್ಜಿಗಳಿಗೆ ಸಂಬಂಧಿಸಿ ಕೆಲ ರೀತಿಯ ಆಕ್ಷೇಪದ ಕಾರಣ ಆ ಅರ್ಜಿಗಳನ್ನು ತಡೆಹಿಡಿಯಲಾಗಿದೆಯೇ ಹೊರತು ರದ್ದು ಪಡಿಸಲಾಗಿಲ್ಲ. ಪ್ರಸ್ತುತ ಗುರುತಿಸಲಾಗಿರುವ ಸ್ಥಳದಲ್ಲಿ ಲಭ್ಯವಿರುವ 3 ಎಕರೆ ಜಮೀನಿನಲ್ಲಿ ಈ 170 ಅರ್ಜಿಗಳ ಲೋಪದೋಷಗಳನ್ನು ಸರಿಪಡಿಸಿ ಆ ಫಲಾನುಭವಿಗಳೂ ಮುಂದಿನ ಹಂತದಲ್ಲಿ ಮನೆ ನಿರ್ಮಿಸುವ ಪ್ರಸ್ತಾವನೆ ಇದೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ 792 ಅರ್ಜಿಗಳಿಗೆ ಅನುಮೋದನೆ ಆಗಿ ರಾಜ್ಯ ಸರಕಾರದ ಅನುಮೋದನೆ ಆಗಿ ಕೇಂದ್ರಕ್ಕೆ ಹೋಗಿದ್ದು, 15 ದಿನಗಳಲ್ಲಿ ಅಲ್ಲಿಂದ ಮಂಜೂರಾತಿ ದೊರಕಲಿದೆ. ಮತ್ತೆ 300 ಅರ್ಜಿಗಳಿಗೆ ವಾಮಂಜೂರಿನಲ್ಲಿ ಮನೆ ನಿರ್ಮಿಸುವ ಪ್ರಸ್ತಾಪವಿದೆ. ವಸತಿ ಯೋಜನೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳು ಜಿಲ್ಲಾಧಿಕಾರಿಯ ಅಧಿಕೃತ ಸಮಿತಿಯಿಂದ ಅಂಗೀಕಾರಗೊಂಡು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಸದಸ್ಯ ತಿಲಕ್ ರಾಜ್ ಮಾತನಾಡಿ, ಉತ್ತರ ಕ್ಷೇತ್ರದಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಸ್ಥಳೀಯ ಶಾಸಕರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆಕ್ಷೇಪಿಸಿದಾಗ, ಇತರ ಕೆಲ ಸದಸ್ಯರು ಇದೇ ವಿಚಾರದಲ್ಲಿ ಮಾತನಾಡಿದರು.
ಕ್ಲಾಕ್ ಟವರ್‌ಗೆ ಎಲ್ಲಿಂದ ಅನುದಾನ?
ಬಿಜೆಪಿ ಸದಸ್ಯರಾದ ರಾಜೇಂದ್ರ ಹಾಗೂ ವಿಜಯ್ ಕುಮಾರ್ ಮಾತನಾಡಿ, ಪ್ರಸಕ್ತ ಮೇಯರ್ ಅವರು ತನ್ನ ಕನಸಿನ ಯೋಜನೆ ಎನ್ನುತ್ತಿರುವ ಹಂಪನಕಟ್ಟೆಯ ಕ್ಲಾಕ್ ಟವರ್ ನಿರ್ಮಾಣ ಯಾವ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಮೇಯರ್ ಉತ್ತರಿಸಿ, ಸದ್ಯ ಯೋಜನೆಯನ್ನು ಸ್ಮಾರ್ಟ್ ಸಿಟಿಯಲ್ಲಿ ಕೈಗೆತ್ತಿಕೊಳ್ಳಲು ಮನಪಾ ಆಯುಕ್ತರು ಸಲಹೆ ನೀಡಿದ್ದಾರೆ. ಮಾ. 2ರಂದು ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಬಗ್ಗೆ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ.
ಮಂಗಳೂರು ಕ್ಲಾಕ್ ಟವರ್ ಇತಿಹಾಸದ ದ್ಯೋತಕವಾಗಿತ್ತು. ಅದನ್ನೀಗ ಕೆಡವಲಾಗಿದೆ. ಅದನ್ನು ಪುನರ್ ನಿರ್ಮಿಸಿ ನಗರದ ಇತಿಹಾಸವನ್ನು ನೆನಪಿಸುವ ಉದ್ದೇಶದಿಂದ ಕನಸಿನ ಯೋಜನೆಯಾಗಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ. ನಾನು ಮನಪಾದ ಸಾಮಾನ್ಯ ನಿಧಿಯಲ್ಲಿ ಮಾಡುವ ಪ್ರಸ್ತಾಪ ಮಾಡಿದ್ದೆ. ಆದರೆ ಈಗಾಗಲೇ ಆ ಭಾಗದಲ್ಲಿ ಸ್ಮಾರ್ಟ್ ಸಿಟಿಯಡಿ ರಸ್ತೆಗಳ ಅಭಿವೃದ್ಧಿಯಾಗುತ್ತಿರುವುದರಿಂದ ಅದರಡಿಯಲ್ಲೇ ಈ ಯೋಜನೆಯನ್ನು ಸೇರಿಸಲು ಸಾಧ್ಯವಿದೆ ಎಂದು ಆಯುಕ್ತರು ನೀಡಿದ ಸಲಹೆಯಂತೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ ಎಂದರು.
ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಾಮಗಾರಿಯೆಲ್ಲ ಆರಂಭಿಸಿದ ಬಳಿಕ ಹಣ ಎಲ್ಲಿಂದ ಎಂಬುದನ್ನು ಅನಂತರ ಯೋಚಿಸುವುದೇ? ಒಂದು ವೇಳೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇದು ಸೇರದಿದ್ದರೆ, ಪಾಲಿಕೆ ವತಿಯಿಂದಲೇ ಹಣ ಖರ್ಚು ಮಾಡಬೇಕಾ? ಎಂದು ಪ್ರಶ್ನಿಸಿದರು. ಆಯಕ್ತರು ಉತ್ತರಿಸಿ, ಕ್ಲಾಕ್ ಟವರ್‌ಗೆ 90 ಲಕ್ಷ ರೂ.ಗಳ ಅಂದಾಜು ಪಟ್ಟಿ ಸಿದ್ಧಗೊಂಡಿದೆ. ಈ ಪ್ರದೇಶದ 100 ಎಕರೆ ಸ್ಮಾರ್ಟ್ ಸಿಟಿಯಡಿ ಅಭಿವೃದ್ದಿಯಾಗಲಿದೆ. ಮಾ. 2ರ ಸಭೆಯಲ್ಲಿ ಈ ಬಗ್ಗೆ ಅನುಮತಿ ದೊರದಿದ್ದರೆ ಮನಪಾ ನಿಧಿಯಿಂದ ನಡೆಸಲಾಗುವುದು ಎಂದರು.
ಸದಸ್ಯೆ ರೂಪಾ ಡಿ. ಬಂಗೇರಾ ಅವರು ಕ್ಲಾಕ್ ಟವರ್ ಬಗ್ಗೆ ಆಕ್ಷೇಪಿಸುತ್ತಾ, ಮೇಯರ್ ಅವರ ಕನಸಿನ ಯೋಜನೆ 93 ಲಕ್ಷ ರೂ.ಗಳಲ್ಲಿ ಸಿದ್ಧಗೊಳ್ಳುತ್ತಿದೆ. ಮುಖ್ಯಮಂತ್ರಿಗಳ ವಾಚ್‌ಗಿಂತ ಕಡಿಮೆ ವೆಚ್ಚ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್, ಪ್ರಧಾನ ಮಂತ್ರಿ ಸೂಟ್ ವೆಚ್ಚಕ್ಕಿಂತಲೂ ಕಡಿಮೆ ಎಂದು ತಿರುಗೇಟು ನೀಡಿದರು. ಉಪಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ನಾಗವೇಣಿ, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಸದಸ್ಯರಿಂದಲೇ ವಿರೋಧ..!
‘ಕ್ಲಾಕ್ ಟವರ್ ಯೋಜನೆಯ ಮೂಲಕ ಮೇಯರ್ ಅವರು ಅಧಿಕಾರದ ದುರುಪಯೋಗ ಮಾಡುತ್ತಿದ್ದಾರೆ. ಸೂಕ್ತ ಅನುದಾನವನ್ನು ಗೊತ್ತುಪಡಿಸದೆ ಯೋಜನೆ ಆರಂಭಿಸಲಾಗುತ್ತಿದೆ’ ಎಂದು ಬಿಜೆಪಿ ಸದಸ್ಯರು ಆರೋಪಿಸಿದಾಗ, ಮಾಜಿ ಮೇಯರ್ ಕಾಂಗ್ರೆಸ್‌ನ ಮಹಾಬಲ ಮಾರ್ಲ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಪೂರಕವಾಗಿ ಮಾತನಾಡಿದ ಕಾಂಗ್ರೆಸ್‌ನ ದೀಪಕ್ ಪೂಜಾರಿ ಅವರು, ಸ್ಮಾರ್ಟ್ ಸಿಟಿಯ ಯೋಜನೆಗಳ ಬಗ್ಗೆ ಮನಪಾ ಸದಸ್ಯರಿಗೆ ಯಾವುದೇ ಮಾಹಿತಿ ಇಲ್ಲ. ಎಲ್ಲರನ್ನು ಕತ್ತಲಲ್ಲಿಟ್ಟು ಯೋಜನೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭ ಆಡಳಿತ ಪಕ್ಷದ ಕೆಲವು ಸದಸ್ಯರು ಹಾಗೂ ಮೇಯರ್ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಅಬ್ದುಲ್ ಲತೀಫ್ ‘ಹ್ಯಾಮಿಲ್ಟನ್ ಸರ್ಕಲ್‌ನಿಂದ ಹಳೆ ಬಂದರು ಯುಜಿಡಿಗೆ ಸಂಬಂಧಿಸಿ ಮೂಲಸೌಕರ್ಯ ಕಾಮಗಾರಿ ಮಾಡಲಾಗದಿದ್ದರೂ ಕ್ಲಾಕ್‌ಟವರ್‌ಗೆ ಮೇಯರ್ ಮುತುವರ್ಜಿ ವಹಿಸಿ ನಡೆಸುತ್ತಿದ್ದಾರೆ. ಮೂರು ತಿಂಗಳಿನಿಂದ ಈ ಬಗ್ಗೆ ಹೇಳುತ್ತಿದ್ದೇನೆ’ ಎಂದು ಆರೋಪಿಸಿದರು. ಮೇಯರ್ ಉತ್ತರಿಸಿ, ‘ತನಗೆ ಈ ಬಗ್ಗೆ ಇಂದೇ ತಿಳಿದಿರುವುದು. ನೀವು ಯಾಕೆ ಈ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ’ ಎಂದು ಪ್ರಶ್ನಿಸಿದರು. ‘ನಾನು ಆಯುಕ್ತರ ಬಳಿ ಪ್ರಶ್ನಿಸುತ್ತಿದ್ದೇನೆ’ ಎಂದು ಲತೀಫ್ ಹೇಳಿದಾಗ, ಆಯುಕ್ತರ ಬಳಿ ಹೇಳುವುದಿದ್ದರೆ ಅವರ ಕೊಠಡಿಯಲ್ಲೇ ಹೇಳಬಹುದು. ಇಲ್ಲಿ ಯಾಕೆ ಪ್ರಶ್ನಿಸಿದ್ದು. ಅಲ್ಲೇ ಮಾತನಾಡಿಕೊಳ್ಳಿ’ ಎಂದು ಮೇಯರ್ ಪ್ರತಿಕ್ರಿಯಿಸಿದರು. ಇದರಿಂದ ಕೋಪಗೊಂಡ ಸದಸ್ಯ ಲತೀಫ್ ಅವರು ಕೆಲವು ನಿಮಿಷ ಮೇಯರ್ ಪೀಠದೆದುರು ತೆರಳಿ ಪ್ರತಿಭಟನೆ ನಡೆಸಿದರು.
ಚರ್ಚೆ ಹುಟ್ಟುಹಾಕಿದ ಮೇಯರ್ ವಿದ್ಯಾಭ್ಯಾಸ..!
ಸಭೆಯ ಪ್ರಾರಂಭದಲ್ಲಿ ಮೇಯರ್ ಕವಿತಾ ಸನಿಲ್ ಮಾತನಾಡಿ, ಇದು ನನ್ನ ಅಧಿಕಾರಾವಧಿಯ ಕೊನೆಯ ಸಭೆಯಾಗಿದೆ. ಒಂದು ವರ್ಷದ ಸಮಯದಲ್ಲಿ ನನಗೆ ಸಹಕಾರ, ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸುತ್ತಿದ್ದಾಗ, ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಮಾತನಾಡಿ, ಮೇಯರ್ ಅವರು ಎಸೆಸೆಲ್ಸಿ ಅನುತ್ತೀರ್ಣರಾಗಿದ್ದು, ಅವರು ತಮ್ಮ ಅಫಿದಾವಿತ್‌ನಲ್ಲಿ ಪದವಿ ಪಡೆದಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಇದು ಖಂಡನೀಯ ಎಂದರು. ಈ ಕುರಿತು ವಿಪಕ್ಷ ಸದಸ್ಯರಿಂದ ಮೇಯರ್ ವಿರುದ್ದ ಆಕ್ಷೇಪಗಳು ವ್ಯಕ್ತವಾಯಿತು.
ಆಡಳಿತ ಪಕ್ಷದ ಸದಸ್ಯರಾದ ಹರಿನಾಥ್, ವಿನಯ್‌ರಾಜ್, ಪ್ರವೀಣ್ ಚಂದ್ರ ಆಳ್ವ ಅವರು ಮಾತನಾಡಿ, ಮೇಯರ್ ರವರ ವಿದ್ಯಾಭ್ಯಾಸದ ವೈಯಕ್ತಿಕ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದರು. ಬಳಿಕ ಮೇಯರ್ ಮಾತನಾಡಿ, ‘ನನ್ನ ಮೇಲಿನ ಈ ಆರೋಪ ಸತ್ಯಕ್ಕೆ ದೂರವಾದುದು. ಮೇಯರ್ ಸ್ಥಾನದಲ್ಲಿರಲು ಪದವಿ ಆಗಬೇಕೆಂಬ ಯಾವುದೇ ಕಾನೂನು ಇಲ್ಲ. ಹಾಗಿದ್ದರೂ ವೈಯಕ್ತಿಕ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಾಗಿದೆ. ನನ್ನ ಶಿಕ್ಷಣದ ದಾಖಲೆಯನ್ನು ತಾನು ಸಂಬಂಧಪಟ್ಟ ಸದಸ್ಯರಿಗೆ ಒದಗಿಸುತ್ತೇನೆ. ಸಾರ್ವಜನಿಕರ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಬೇಕಾದಲ್ಲಿ ಈ ರೀತಿ ವೈಯಕ್ತಿಕ ಚರ್ಚೆ ಅಗತ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.