ಕಾಂಗ್ರೆಸ್, ಬಿಜೆಪಿಯಲ್ಲಿ ಗರಿಗೆದರಿದ ಟಿಕೆಟ್ ಆಸೆ
Team Udayavani, Jan 22, 2019, 12:50 AM IST
ಮಂಗಳೂರು:ಲೋಕಸಭಾ ಚುನಾವಣೆ ಘೋಷಣೆಗೆ ಒಂದೆರಡು ತಿಂಗಳಷ್ಟೇ ಇದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿ ಗಳು ಸದ್ದಿಲ್ಲದೇ ಚಟುವಟಿಕೆ ತೀವ್ರಗೊಳಿಸಿದ್ದಾರೆ.
ಸದ್ಯದ ಲೆಕ್ಕಾಚಾರದಂತೆ ಎಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರ ಚುನಾವಣೆ ನಡೆಯಬಹುದು. ಅಂದರೆ ಫೆಬ್ರವರಿ-ಮಾರ್ಚ್‌ನಲ್ಲಿ ದಿನಾಂಕ ಘೋಷಣೆ
ಯಾಗಬೇಕು. ಈ ಮಧ್ಯೆ ಯಾರಿಗೆ ಟಿಕೆಟ್, ಯಾರೆಲ್ಲ ಲಾಬಿ ನಡೆಸುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಎರಡೂ ಪ್ರಮುಖ ಪಕ್ಷಗಳಲ್ಲಿ ಸಂಘಟನೆ ಚುರುಕುಗೊಂಡಿದ್ದು, ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮತ್ತು ಬಿಜೆಪಿ ಭದ್ರಕೋಟೆ ಬಳ್ಳಾರಿಯಲ್ಲಿ ಗಳಿಸಿರುವ ಭಾರೀ
ಜಯ ಕಾಂಗ್ರೆಸ್‌ನಲ್ಲಿ ಉತ್ಸಾಹ ಹೆಚ್ಚಿಸಿದೆ. ರಮಾನಾಥ ರೈ, ಬಿ.ಕೆ. ಹರಿಪ್ರಸಾದ್, ಐವನ್ ಡಿ’ಸೋಜಾ, ಮಿಥುನ್ ರೈ, ವಿನಯ ಕುಮಾರ್ ಸೊರಕೆ, ಉದ್ಯಮಿ ರಾಜಶೇಖರ ಕೋಟ್ಯಾನ್ ಸದ್ಯ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಹಿರಿ ತಲೆ ಜನಾರ್ದನ ಪೂಜಾರಿ ಟಿಕೆಟ್ ಸಿಕ್ಕರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಅವಕಾಶ ತನಗಿರಲಿ ಎಂಬ ಬೇಡಿಕೆ ದಕ್ಷಿಣಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯ ದಿಂದ ಬಲವಾಗಿದೆ.
ಕರಾವಳಿಯಲ್ಲಿ ಅಭ್ಯರ್ಥಿಯನ್ನು ನಿರ್ಧರಿಸುವಾಗ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ದೃಷ್ಟಿಯ ಲ್ಲಿಟ್ಟುಕೊಳ್ಳುವುದು ರೂಢಿ. ಜಾತಿ ಲೆಕ್ಕಾಚಾರವೂ ಉಂಟು. ಬಿಲ್ಲವ ಸಮುದಾಯದಿಂದ ಹರಿಪ್ರಸಾದ್, ಸೊರಕೆ, ರಾಜಶೇಖರ ಕೋಟ್ಯಾನ್ ಆಕಾಂಕ್ಷಿಗಳು. ಸೊರಕೆಯವರು ಉಡುಪಿಯಿಂದಲೂ ಆಕಾಂಕ್ಷಿ. ಹರಿಪ್ರಸಾದ್ ಎರಡೂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ನಾಯಕರು, ಕಾರ್ಯಕರ್ತರ ಭೇಟಿ ಆರಂಭಿಸಿ ದ್ದಾರೆ. ಅಂತಿಮವಾಗಿ ಹೈಕಮಾಂಡ್ ಸೂಚಿಸಿದಂತೆ ಒಂದನ್ನು ಆಯ್ದುಕೊಳ್ಳುವ ಲೆಕ್ಕಾಚಾರ ಅವರದ್ದು ಎನ್ನುತ್ತವೆ ಮೂಲಗಳು. ಬಂಟ ಸಮುದಾಯದಿಂದ ರಮಾನಾಥ ರೈ ಹಾಗೂ ಮಿಥುನ್ ರೈ ಉತ್ಸುಕ ರಾಗಿದ್ದಾರೆ. ಐವನ್ ಡಿ’ಸೋಜಾ ಅಲ್ಪಸಂಖ್ಯಾಕರ ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಸಂಚಲನ ಮೂಡಿಸಿದ ಪೂಜಾರಿ ಹೇಳಿಕೆ
ವರಿಷ್ಠ ಮಂಡಳಿ ಬಯಸಿದರೆ ಸ್ಪರ್ಧಿಸಲು ಸಿದ್ಧ. ಟಿಕೆಟ್‌ಗಾಗಿ ಹೈಕಮಾಂಡ್‌ಅನ್ನು ಭೇಟಿ ಮಾಡು ವುದಾಗಿ ಕಳೆದ ಬಾರಿಯ ಅಭ್ಯರ್ಥಿ ಜನಾರ್ದನ ಪೂಜಾರಿ ಹೇಳಿರುವುದು ಕುತೂಹಲ ಮೂಡಿ ಸಿದೆ.ಅವರು 9 ಬಾರಿ ಸ್ಪರ್ಧಿಸಿ 4 ಬಾರಿ ಗೆದ್ದಿ ದ್ದಾರೆ. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.
ಬಿಜೆಪಿಯಲ್ಲಿ ಭರದ ಸಿದ್ಧತೆ
ಬಿಜೆಪಿಯಿಂದ ಹಾಲಿ ಸಂಸದ ನಳಿನ್ ಕುಮಾರ್ ಮತ್ತೆ ಸ್ಪರ್ಧಿಸಲು ಮುಂದಾಗಿದ್ದು ಮೇಲ್ನೋಟಕ್ಕೆ ಸಮಸ್ಯೆ ಗೋಚರಿಸುತ್ತಿಲ್ಲ. ನಳಿನ್ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಹಾಗೂ ಕೇರಳ ರಾಜ್ಯ ಬಿಜೆಪಿ ಘಟಕದ ಸಹ ಪ್ರಭಾರಿ ಯಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಾಧಿಸಿದ ಗೆಲುವು ಅವರ ಬೆಂಬಲಕ್ಕಿದೆ. ಆದರೆ ಇತರೆ ಆಕಾಂಕ್ಷಿಗಳಿಲ್ಲ ಎಂದೇನಿಲ್ಲ. ಡಾ| ಸುಧೀರ್ ಹೆಗ್ಡೆ, ಕ್ಯಾ| ಬೃಜೇಶ್ ಚೌಟ ಮತ್ತಿತರ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್‌ನಲ್ಲಿ ಕಾಂಗ್ರೆಸ್ ಜತೆಗಿನ ಹೊಂದಾಣಿಕೆ ತೀರ್ಮಾನವಾದ ಬಳಿಕವಷ್ಟೇ ಆಕಾಂಕ್ಷಿಗಳ ಅಥವಾ ಅಭ್ಯರ್ಥಿಯ ಅಂತಿಮ ಚಿತ್ರಣ ಸಿಗಲಿದೆ.
ಪಕ್ಷ ಸಂಘಟನೆ ಬಲಪಡಿಸುವತ್ತ ತಳಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಶಾಸಕರು ಎಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ, ಬೂತ್ ಸಮಿತಿಗಳು ಜನ ಸಂಪರ್ಕದಲ್ಲಿ ನಿರತವಾಗಿವೆ.
- ಸಂಜೀವ ಮಠಂದೂರು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ
ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯ ನಡೆದಿದೆ. ಈಗಾಗಲೇ ಬ್ಲಾಕ್ ಸಮಿತಿಗಳ ಸಭೆ ನಡೆಸಲಾಗಿದೆ. ಅಭ್ಯರ್ಥಿಗಳ ಕುರಿತು ಈವರೆಗೆ ಪಕ್ಷದ ಮಟ್ಟದಲ್ಲಿ ಚರ್ಚೆ ನಡೆದಿಲ್ಲ.
- ಕೆ. ಹರೀಶ್ ಕುಮಾರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಜಿಲ್ಲಾಮಟ್ಟದಲ್ಲಿ ಪಕ್ಷ ಸಂಘಟನೆ ನಡೆದಿದೆ. ಸ್ಪರ್ಧೆಯ ಬಗ್ಗೆ ವರಿಷ್ಠ ಮಂಡಳಿ ನಿರ್ಧಾರ ಕೈಗೊಳ್ಳಲಿದೆ.
- ಮಹಮ್ಮದ್ ಕುಂಞಿ ದ.ಕ. ಜಿಲ್ಲಾ ಜೆಡಿಎಸ್ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.