ಜೆಡಿಎಸ್‌ನಿಂದ ರೈತರಿಗೆ ಮನ್ನಣೆ: ಮಹ್ಮದ್ ಕುಂಞೆ
Team Udayavani, Apr 10, 2017, 3:11 PM IST
ಕಡಬ: ಕಾಂಗ್ರೆಸ್ ಹಾಗೂ ಬಿಜೆಪಿಯ ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಜನ ಜೆಡಿಎಸ್ ಪಕ್ಷದತ್ತ ನಿರೀಕ್ಷೆಯಿಂದ ನೋಡುತ್ತಿದ್ದಾರೆ. ದೇಶದಲ್ಲಿ ರೈತರಿಗೆ ಮನ್ನಣೆ ನೀಡುವ ಪಕ್ಷ ಇದ್ದರೆ ಅದು ಜೆಡಿಎಸ್ ಮಾತ್ರ ಎಂದು ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮಹ್ಮದ್‌ಕುಂಞೆ ಅವರು ಅಭಿಪ್ರಾಯಪಟ್ಟರು.
ಅವರು ರವಿವಾರ ಕಡಬದ ಅಡ್ಡಗದ್ದೆಯಲ್ಲಿರುವ ಸೈಯದ್ ಮಂಜಿಲ್ ಮಿನಿಹಾಲ್‌ನಲ್ಲಿ ಜರಗಿದ ಜಾತ್ಯತೀತ ಜನತಾದಳ (ಜೆಡಿಎಸ್)ದ ಕಡಬ ತಾಲೂಕು ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಪಕ್ಷಗಳಿಂದ ಜೆಡಿಎಸ್‌ಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಪಕ್ಷದ ಶಾಲು ಹಾಕಿ ಬರಮಾಡಿಕೊಂಡು ಅವರು ಮಾತನಾಡಿದರು.
ಪಕ್ಷದ ಸಾಧನೆ ಜನರ ಮುಂದಿಡಿ
ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದರೆ ಕಾರ್ಯಕರ್ತರಾದ ನಾವೆಲ್ಲರೂ ಇಂದಿನಿಂದಲೇ ಪಕ್ಷದ ಸಾಧನೆಗಳನ್ನು ಜನರ ಮುಂದಿರಿಸುವ ಕೆಲಸವನ್ನು ಮಾಡಬೇಕಿದೆ. ಸಂಘಟಿತ ಪ್ರಯತ್ನದಿಂದ ಮಾತ್ರ ನಾವು ಜಿಲ್ಲೆಯಲ್ಲಿ ಪಕ್ಷವನ್ನು ಮುಂಚೂಣಿಗೆ ತರಲು ಸಾಧ್ಯ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಬಿ. ಸದಾಶಿವ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ನೇರವಾಗಿ ಯುವಕರನ್ನು ಧರ್ಮದ ಹೆಸರಿನಲ್ಲಿ ಪ್ರಚೋದಿಸಿ ರಾಜಕೀಯ ಲಾಭ ಪಡೆದರೆ, ಬಿಜೆಪಿಯ ಗುಮ್ಮವನ್ನು ತೋರಿಸಿ ಅಲ್ಪಸಂಖ್ಯಾಕರನ್ನು ಹೆದರಿಸಿ ಅಧಿಕಾರಕ್ಕೇರುವ ಯತ್ನ ಮಾಡುತ್ತಿರುವ ಕಾಂಗ್ರೆಸ್ ಮೃದು ಹಿಂದುತ್ವದ ಕೋಮುವಾದಿ ಪಕ್ಷ ಎಂದು ಜರೆದರು.
ಜೆಡಿಎಸ್ ಕಾರಣ
ಕಡಬ ತಾಲೂಕಾಗಲು ಕಾಂಗ್ರೆಸ್ ಅಥವಾ ಬಿಜೆಪಿ ಮುಖಂಡರು ಕಾರಣರಲ್ಲ. 1983ರಲ್ಲಿ ಮುಖ್ಯಮಂತ್ರಿಯಾಗಿದ್ದ ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ನೇಮಕವಾದ ಹುಂಡೇಕರ್ ಸಮಿತಿ ಕಡಬವನ್ನು ತಾಲೂಕಾಗಿ ಸೂಚಿಸುವ ಮೂಲಕ ಕಡಬ ತಾಲೂಕಿನ ಕನಸಿಗೆ ಭದ್ರ ಬುನಾದಿಯನ್ನು ಹಾಕಿತ್ತು. ಆದ್ದರಿಂದ ಇಂದು ಕಡಬ ತಾಲೂಕಾಗಿದ್ದರೆ ಆದರೆ ಜನತಾ ಪಕ್ಷಕ್ಕೆ ಮತ್ತು ಜನತಾ ಪಕ್ಷದ ಇಂದಿನ ರೂಪವಾದ ಜೆಡಿಎಸ್‌ಗೆ ಸಲ್ಲಬೇಕು ಎಂದು ಅವರು ಹೇಳಿದರು.
ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ,ಜೇಡಿಎಸ್ ತಾಲೂಕು ಅಧ್ಯಕ್ಷ ಐ.ಸಿ. ಕೈಲಾಸ್, ಸುಳ್ಯ ತಾಲೂಕು ಅಧ್ಯಕ್ಷ ದಯಾಕರ ಆಳ್ವ, ಕಡಬ ಜೆಡಿಎಸ್ ಮುಖಂಡರಾದ ಚಂದ್ರಶೇಖರ ಗೌಡ ಕೋಡಿಬೈಲು, ವಿಕ್ಟರ್ ಮಾರ್ಟಿಸ್ ಅವರು ಮಾತನಾಡಿದರು. ಪಕ್ಷದ ಮುಖಂಡರಾದ ಇಕ್ಬಾಲ್ ಎಲಿಮಲೆ, ಸುಂದರ ಗೌಡ ಬಳ್ಳೇರಿ, ಮೋಹನ್ ಗೌಡ ಪಂಜೋಡಿ, ಯುವ ಜೆಡಿಎಸ್ ಮುಖಂಡ ಹರಿಪ್ರಸಾದ್ ಎನ್ಕಾಜೆ, ಮಹಿಳಾ ವಿಭಾಗದ ಲೂಸಿ ಮುಂತಾದವರು ಉಪಸ್ಥಿತರಿದ್ದರು. ಕಾಂಗ್ರೆಸ್‌ನ ಪಂಜೋಡಿ ಗಣಪಯ್ಯ ಗೌಡ ಸಹಿತ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸೈಯದ್ ಮೀರಾ ಸಾಹೇಬ್ ಅವರು ಸ್ವಾಗತಿಸಿ, ವಂದಿಸಿದರು. ಸನು ಕಲ್ಲುಗುಡ್ಡೆ ನಿರೂಪಿಸಿದರು.
ಹೊಸ ಹುರುಪು
ಪಕ್ಷದ ಜಿಲ್ಲಾ ಸಂಚಾಲಕ ಹೈದರ್ ಪರ್ತಿಪ್ಪಾಡಿ ಅವರು, ಕಡಬ ಭಾಗದಲ್ಲಿ ಹಿರಿಯ ರಾಜಕೀಯ ಮುಖಂಡ ಸಯ್ಯದ್ ಮೀರಾ ಸಾಹೇಬ್ ಅವರು ಪಕ್ಷದ ನೇತೃತ್ವ ವಹಿಸುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತಂದಿದೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗಳನ್ನು ಗುರಿ ಯಾಗಿರಿಸಿಕೊಂಡು ತಳಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ನಡೆಯಬೇಕಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.