ಕಾಂಗ್ರೆಸ್-ಜೆಡಿಎಸ್ ಸ್ಥಾನ ಹಂಚಿಕೆ ಫೆ.10ರ ಬಳಿಕ: ವೇಣು
Team Udayavani, Feb 4, 2019, 4:30 AM IST
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಫೆ.10ರ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಯಲಿದ್ದು, ಕ್ಷೇತ್ರಗಳ ಬಗ್ಗೆ ನಿರ್ಧಾರವಾಗಲಿದೆ ಎಂದು ಎಐಸಿಸಿ ಪ್ರ. ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದರು.
ನಗರದ ಸಕೀಟ್ ಹೌಸ್‌ನಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸೀಟು ಹಂಚಿಕೆ ಕುರಿತು ಈವರೆಗೆ ಚರ್ಚೆ ನಡೆದಿಲ್ಲ. ಎರಡೂ ಪಕ್ಷಗಳ ನಾಯಕರು ಸಭೆ ಸೇರಿ ಸ್ಥಾœನ ಹಾಗೂ ಕ್ಷೇತ್ರಗಳ ಹಂಚಿಕೆ ಕುರಿತು ಒಮ್ಮತದ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಎಚ್‌ಡಿಕೆ ಮೇಲೆ ಪೂರ್ಣ ವಿಶ್ವಾಸ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ ಎಂಬ ವರದಿ ಗಳು ಆಧಾರರಹಿತ. ನಮಗೆ ಅವರ ಮೇಲೆ ಪೂರ್ಣ ವಿಶ್ವಾಸವಿದೆ. ಅವರೇ ಸಿಎಂ ಆಗಿರುತ್ತಾರೆ ಮತ್ತು ಸಮ್ಮಿಶ್ರ ಸರಕಾರ ಗೊಂದಲಗಳಿಲ್ಲದೆ ಮುಂದುವರಿಯುತ್ತದೆ ಎಂದು ವೇಣುಗೋಪಾಲ್ ಸ್ಪಷ್ಟ ಪಡಿಸಿದರು.
ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದು, ಯಾವುದೇ ಬಣಗಳಿಲ್ಲ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಆದೇಶವನ್ನು ಎಲ್ಲರೂ ಪಾಲನೆ ಮಾಡುತ್ತಾರೆ. ನಮ್ಮ ಶಾಸಕರ ಮೇಲೆ ನಮಗೆ ವಿಶ್ವಾಸವಿದೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.
ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ನ ಕೆಲವು ಶಾಸಕರು ಹಾಗೂ ನಾಯಕರು ಬಹಿರಂಗವಾಗಿ ಅಸಮಾಧಾನ ಪ್ರಕಟಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸಮ್ಮಿಶ್ರ ಸರಕಾರ ಮತ್ತು ನಾಯಕರ ವಿರುದ್ಧ ಯಾರೂ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂಬುದಾಗಿ ಈಗಾಗಲೇ ಸ್ಪಷ್ಟವಾಗಿ ತಿಳಿಸಲಾಗಿದೆ. ಈಗಾಗಲೇ ಬಹಿರಂಗ ಹೇಳಿಕೆ ನೀಡಿರುವ ಶಾಸಕರಿಗೆ ನೋಟಿಸ್ ನೀಡಲಾಗಿದ್ದು, ಉತ್ತರಿಸಿದ್ದಾರೆ ಎಂದರು.
ಅಧಿಕಾರಕ್ಕೆ ಬಂದ ದಿನದಿಂದಲೂ ಸಮ್ಮಿಶ್ರ ಸರಕಾರ ಹೆಚ್ಚುದಿನ ಬಾಳುವುದಿಲ್ಲ ಎಂಬ ವದಂತಿಗಳನ್ನು ಬಿಜೆಪಿಯವರು ಹರಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷ ಒಡ್ಡುತ್ತ ಆಪರೇಶನ್ ಕಮಲ ನಡೆಸಲು ಯತ್ನ ಮಾಡುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವಾಸಮತ ಯಾಚನೆಗೆ ಮುನ್ನ ಯಾವ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕ ರಿಗೆ ಆಮಿಷಗಳನ್ನು ಒಡ್ಡಿದ್ದಾರೆ ಎಂಬುದು ಬಹಿರಂಗ ಗೊಂಡಿರುವ ವಿಚಾರ. ಬಿಜೆಪಿಯವರು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ ಎಂದವರು ಹೇಳಿದರು.
ರಾಜಕೀಯದಲ್ಲಿ ನೈತಿಕತೆಯ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬೇರೆ ಪಕ್ಷಗಳ ಶಾಸಕರಿಗೆ ಆಮಿಷ ತೋರಿಸುತ್ತಾ ಅಗ್ಗದ ರಾಜಕೀಯ ಮಾಡುತ್ತಿದ್ದಾರೆ. ಇದು ಅವರ ನಿಜ ಬಣ್ಣವನ್ನು ಬಯಲು ಮಾಡಿದೆ ಎಂದು ಕೆ.ಸಿ. ವೇಣುಗೋಪಾಲ್ ಟೀಕಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಯು.ಟಿ. ಖಾದರ್, ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಮಾಜಿ ಸಚಿವ ಬಿ. ರಮಾನಾಥ ರೈ, ಮೇಯರ್ ಭಾಸ್ಕರ್ ಕೆ., ಮಾಜಿ ಶಾಸಕ ಮೊದಿನ್ ಬಾವಾ, ವಿಜಯಕುಮಾರ್ ಶೆಟ್ಟಿ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮಹಮ್ಮದ್ ಮಸೂದ್, ಯು.ಕೆ. ಮೋನು, ಮಿಥುನ್ ರೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.