ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯುವ ಸಂಕಲ್ಪ
Team Udayavani, Jul 8, 2017, 3:35 AM IST
ಮಂಗಳೂರು: ರಾಜ್ಯದ ಮತ್ತು ದೇಶದ ಹಿತದೃಷ್ಟಿಯಿಂದ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂಬ ದೃಢ ಸಂಕಲ್ಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಕಾಂಗ್ರೆಸ್ ಶುಕ್ರವಾರ ಆಯೋಜಿಸಿದ್ದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಪಕ್ಷದ ಚುನಾಯಿತ ಪ್ರತಿನಿಧಿಗಳು, ಕಳೆದ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಜಿತರಾದ ಅಭ್ಯರ್ಥಿಗಳು, ಕಾರ್ಯಕರ್ತರನ್ನು ಒಳಗೊಂಡ ವಿಭಾಗೀಯ ಮಟ್ಟದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಾರೆವು ಎಂದು ಮನಗಂಡಿರುವ ಬಿಜೆಪಿ ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ತಿಸುತ್ತಿದೆ. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಸೋಲುಣಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಹಾಗೂ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವ ಗುರಿಯ ಸಾಕಾರಕ್ಕೆ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದು ಸಾಕಾರಗೊಳಿಸಬೇಕು ಎಂದರು.
ಕಾಂಗ್ರೆಸ್ ಅನಿವಾರ್ಯ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ. 95ರಷ್ಟು ಈಡೇರಿಸಿದೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿದೆ ಎಂದರು.
ಮತ್ತೆ ಅಧಿಕಾರಕ್ಕೆ : ವೇಣುಗೋಪಾಲ್
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಆಗಿರುವ ಸಮೃದ್ಧಿಯ ಪರ್ವ ಮುಂದುವರಿಯಬೇಕಾದರೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಈ ಕಾರ್ಯದಲ್ಲಿ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಅವಿರತವಾಗಿ ಕೆಲಸ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕರೆ ನೀಡಿದರು.
ಪಕ್ಷದ ಜಿಲ್ಲಾ ಮತ್ತು ಬ್ಲಾಕ್‌ಮಟ್ಟದ ಘಟಕಗಳ ಕಾರ್ಯವೈಖರಿಯನ್ನು ತೀವ್ರ ನಿಗಾ ವಹಿಸಿ ಗಮನಿಸಲಾಗುವುದು. ಜು. 30ರೊಳಗೆ ಎಲ್ಲ ಬೂತ್ ಸಮಿತಿಗಳ ರಚನೆ ಮತ್ತು ಬೂತ್ ಏಜೆಂಟರ ನೇಮಕ ಕಾರ್ಯ ಪೂರ್ತಿಗೊಳ್ಳಬೇಕು ಎಂದವರು ಸೂಚಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯಿಲಿ ಅವರು ಮಾತನಾಡಿದರು.
ಪ್ರಸ್ತಾವನೆಗೈದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲೆಯ ಮತೀಯ ಶಕ್ತಿಗಳ ಮತೀಯವಾದವನ್ನು ಕಾಂಗ್ರೆಸ್ ಸಮರ್ಥ ವಾಗಿ ಎದುರಿಸಿ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. ಮುಂದಿನ ಚುನಾವಣೆಯಲ್ಲೂ ಇನ್ನಷ್ಟು ಹೆಚ್ಚು ಸಾಧನೆಗೆ ಶ್ರಮ ಹಿಸಬೇಕು ಎಂದರು.
ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ , ಸಚಿವರಾದ ಯು.ಟಿ. ಖಾದರ್, ಎಐಸಿಸಿ ಉಸ್ತುವಾರಿ ವಿಷ್ಣುನಾಥನ್, ಶಾಸಕರಾದ ಅಭಯಚಂದ್ರ ಜೈನ್, ಕೆ. ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಮೊದೀನ್ ಬಾವಾ, ಜೆ.ಆರ್. ಲೋಬೋ, ವಿನಯ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕ ಗೋಪಾಲ ಪೂಜಾರಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಮಾದಪ್ಪ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ , ವೀಣಾ ಅಚ್ಚಯ್ಯ, ಮುಖಂಡರಾದ ಗೋಪಾಲ ಭಂಡಾರಿ, ಡಾ| ರಘು, ಯು.ಆರ್. ಸಭಾಪತಿ, ಸುರೇಶ್ ಬಲ್ಲಾಳ್, ಬಿ. ಇಬ್ರಾಹಿಂ, ಬಿ.ಎಚ್. ಖಾದರ್, ಎಂ.ಎ. ಗಫೂರ್, ವಿಜಯಕುಮಾರ್ ಶೆಟ್ಟಿ, ಮಂಜು ನಾಥ ಭಂಡಾರಿ, ಕೆ.ಎಂ. ಇಬ್ರಾಹಿಂ, ಬಿ. ನಾರಾಯಣ ರಾವ್, ಇಬ್ರಾಹಿಂ ಕೋಡಿಜಾಲ್, ಪಿ.ವಿ. ಮೋಹನ್ ಉಪಸ್ಥಿತರಿದ್ದರು. ರೈತರ ಸಾಲ ಮನ್ನಾ ಮಾಡಿದ ಸಿದ್ದರಾಮಯ್ಯ ಅವರನ್ನು ಪಕ್ಷದ ಕಿಸಾನ್ ಘಟಕದ ಪರವಾಗಿ ಅಭಿನಂದಿಸಿ ಸಮ್ಮಾನಿಸಲಾಯಿತು. ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಶಾಹುಲ್ ಹಮೀದ್, ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಿಜೆಪಿ ಸವಾಲು ಸ್ವೀಕರಿಸಲಿ
ಕಳೆದ ಅವಧಿಯ 5 ವರ್ಷಗಳಲ್ಲಿ ಬಿಜೆಪಿ ಯಾವುದೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ರಾಜ್ಯದ ಜನರ ಮುಂದಿಡಲಿ. ನಾವು ಈ 5 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಡುತ್ತೇವೆ. ಜನರು ಈ ಬಗ್ಗೆ ತೀರ್ಮಾನಿಸಲಿ. ನನ್ನ ಈ ಸವಾಲನ್ನು ಬಿಜೆಪಿ ಸ್ವೀಕರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಹೇಳಿದರು. ಮುಂದಿನ ಚುನಾವಣೆಯಲ್ಲಿ ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಗಳಲ್ಲೂ ಜಯ ಸಾಧಿಸುವ ಪಣತೊಟ್ಟು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದರು.
ರೈತರ ಸಾಲ ಮನ್ನಾಕ್ಕೆ ಸಂಸತ್‌ನಲ್ಲಿ ಪಟ್ಟು
ರಾಜ್ಯದ ಕಾಂಗ್ರೆಸ್ ಸರಕಾರ ಸಹಕಾರಿ ಸಂಸ್ಥೆಗಳಲ್ಲಿನ ರೈತರ ಸಾಲ ಮನ್ನಾ ಮಾಡಿದೆ. ಇದೇ ರೀತಿಯಾಗಿ ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಇದಕ್ಕೆ ಕೇಂದ್ರ ಸರಕಾರ ಸಮ್ಮತಿಸದಿದ್ದರೆ ಮುಂದಿನ ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sushasana Day: ಕಾಂಗ್ರೆಸ್ ಆಡಳಿತದಲ್ಲಿ ಜಂಗಲ್ ರಾಜ್ ಸೃಷ್ಟಿ: ಬಿ.ಎಲ್.ಸಂತೋಷ್
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.