‘ಕಾಂಗ್ರೆಸ್ ಸೇವಾದಳ ಪಕ್ಷದ ಆಧಾರಸ್ತಂಭ’
ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳ ಪದಗ್ರಹಣ
Team Udayavani, Mar 28, 2022, 11:21 AM IST
ಮಲ್ಲಿಕಟ್ಟೆ: ಹರ್ಡೀಕರ್ ಅವರಿಂದ ಸ್ಥಾಪಿತವಾಗಿ ಜವಾಹರಲಾಲ್ ನೆಹರೂ ಮುನ್ನಡೆಸಿದ ಕಾಂಗ್ರೆಸ್ ಸೇವಾ ದಳವು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಶಿಸ್ತು ಸಂಯಮ ಸಂಘಟನ ಕೌಶಲ ರೂಪಿಸುವ ಮೂಲಕ ಪಕ್ಷದ ಬೆನ್ನೆಲುಬಾಗಿ ಕಾರ್ಯನಿರ್ವವಹಿಸುತ್ತಿದೆ ಎಂದು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದ ಮಲ್ಲಿಕಟ್ಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಸೇವಾದಳ ಕಾರ್ಯಕರ್ತರು ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು, ದಕ್ಷತೆ ಹೆಚ್ಚಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಸೇವಾದಳದ ವಲಯವಾರು ಐದು ದಿನಗಳ ತರಬೇತಿ ಶಿಬಿರ ಮೇ ತಿಂಗಳಲ್ಲಿ ನಡೆಯಲಿದ್ದು, ಆಸಕ್ತರು ಭಾಗವಹಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ರಾಮಚಂದ್ರ ತಿಳಿಸಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿ’ಸೋಜಾ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳ ಹೊಸ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸೇವಾದಳ ಜಿಲ್ಲಾ ಸಮಿತಿಯ ನೇತೃತ್ವ ವಹಿಸಿದ್ದ ದಿ| ಸುರೇಶ್ ಶೆಟ್ಟಿ ಅವರ ಪ್ರಾಮಾಣಿಕತೆ, ಸೇವಾ ಮನೋಭಾವ, ಸೇವಾದಳದೊಂದಿಗೆ ಅವರ ಸಂಬಂಧವನ್ನು ಸ್ಮರಿಸಲಾಯಿತು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶುಭೋದಯ ಆಳ್ವ, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸಕುಮಾರ್ ದಾಸ್, ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಬಿಎಂ. ಅಬ್ಟಾಸ್ ಆಲಿ, ವೈದ್ಯಕೀಯ ಘಟಕದ ಅಧ್ಯಕ್ಷ ಡಾ| ಶೇಖರ್ ಪೂಜಾರಿ ಶುಭ ಹಾರೈಸಿದರು. ಕೆಪಿಸಿಸಿ ಸೇವಾದಳದ ಪದಾಧಿಕಾರಿ ಸಮೀರ್ ಪಜೀರ್, ತರಬೇತುದಾರರಾದ ವಿಶ್ವನಾಥ ಬಜಾಲ್, ಫಜಲ್ ರಹೀಂ ಪುತ್ತೂರು, ಗಿರಿಜಾ ಹೂಗಾರ್ ಮತ್ತಿತರರು ಉಪಸ್ಥಿತರಿದ್ದರು.