ಗುಂಪಲಡ್ಕ-ಸರೊಳಿಮೂಲೆ ರಸ್ತೆ ಅಭಿವೃದ್ಧಿ ಅನಿವಾರ್ಯ
Team Udayavani, May 23, 2018, 1:30 PM IST
ವಿಟ್ಲ : ವಿಟ್ಲಕಸಬಾ, ವಿಟ್ಲ ಮುಟ್ನೂರು, ಕೇಪು, ಪುಣಚ ಗ್ರಾಮಗಳನ್ನು ಸಂಪರ್ಕಿಸುವ ಒಳ ರಸ್ತೆಗೆ ಕಾಯಕಲ್ಪವಾಗ ಬೇಕಾಗಿದೆ. ಗುಂಪಲಡ್ಕದಿಂದ ಸರೊಳಿಮೂಲೆ ವರೆಗಿನ ಸುಮಾರು 4 ಕಿ.ಮೀ. ದೂರದ ಈ ರಸ್ತೆಯ ಮುಕ್ಕಾಲುಭಾಗ ಸಂಪೂರ್ಣ ಹದಗೆಟ್ಟಿದೆ. ಇದನ್ನು ಅಭಿವೃದ್ಧಿಪಡಿಸ ಬೇಕೆಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.
ಎಲ್ಲಿದೆ ಈ ರಸ್ತೆ ?
ವಿಟ್ಲ ಗ್ರಾಮದ ಉಕ್ಕುಡ ದರ್ಬೆಯಿಂದ ಕೇಪು-ಪುಣಚ-ಪುತ್ತೂರು ರಸ್ತೆಯಲ್ಲಿ 2 ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಬೇಕು. ಅದೇ ಗುಂಪಲಡ್ಕ. ಇಲ್ಲಿ ಮೇಲಕ್ಕೇರಿದ ಈ ರಸ್ತೆ ಸರೊಳಿಮೂಲೆಯ ತನಕ ಸಾಗುತ್ತದೆ. ಗುಂಪಲಡ್ಕದಲ್ಲಿ ಸ್ವಲ್ಪ ಭಾಗ ವಿಟ್ಲಕಸಬಾ ಗ್ರಾಮಕ್ಕೆ ಸಂಬಂಧಪಟ್ಟಿದೆ. ಬಳಿಕ ಕೇಪು ಗ್ರಾಮದಲ್ಲಿ ಹಾದುಹೋಗುತ್ತದೆ. ವಿಟ್ಲ ಗ್ರಾಮದ ಚಂದಳಿಕೆ – ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಮತ್ತು ಪುಣಚ ಗ್ರಾಮದ ಅಜ್ಜಿನಡ್ಜ ಸಂಪರ್ಕ ರಸ್ತೆಗೆ ದಡ್ಡಲಡ್ಕ ಎಂಬಲ್ಲಿ ಗುಂಪಲಡ್ಕ-ಸರೊಳಿಮೂಲೆ ರಸ್ತೆ ಸೇರಿಕೊಳ್ಳುತ್ತದೆ. ಇದು ಜಿಲ್ಲಾ ಪಂಚಾಯತ್ ರಸ್ತೆ. ಕೇವಲ ನಾಲ್ಕು ಕಿ.ಮೀ. ದೂರದ ರಸ್ತೆಯಾಗಿದ್ದರೂ ಇತರ ಗ್ರಾಮಗಳಿಗೆ ಸುಲಭ ಸಂಪರ್ಕ ಮಾರ್ಗವಾಗಿರುವುದರಿಂದ ಅಭಿವೃದ್ಧಿ ಯಾಗಬೇಕಾಗಿರುವುದು ಅನಿವಾರ್ಯ.
ಉಪಯುಕ್ತ ಯಾರಿಗೆ ?
ಈ ರಸ್ತೆ ವಿಟ್ಲ ಮತ್ತು ಕೇಪು ಗ್ರಾಮದ ಜನತೆಗೆ ಹೆಚ್ಚು ಪ್ರಯೋಜನ ಸಿಗುವುದಿಲ್ಲ. ಆದರೆ ಈ ಭಾಗದಿಂದ ಬೇರೆ ಗ್ರಾಮಗಳನ್ನು ಸಂಪರ್ಕಿಸುವುದಕ್ಕೆ ಈ ರಸ್ತೆಯನ್ನು ಅವಲಂಬಿಸುವವರಿದ್ದಾರೆ.
ಪ.ಜಾ. ಮತ್ತು ಪ.ಪಂ.ದ ಅನೇಕ ಕುಟುಂಬಗಳೂ ಈ ರಸ್ತೆಯನ್ನೇ ಅವಲಂಬಿಸಬೇಕು. ವಿಟ್ಲಮುಟ್ನೂರು ಗ್ರಾಮದ ಜನತೆಗೆ ಅತೀ ಉಪಯುಕ್ತ. ನೂರಾರು ಮನೆಗಳಿಗೆ ಅವಶ್ಯವಾಗಿರುವ ಈ ರಸ್ತೆಯ ಮೂಲಕ ಆಲಂಗಾರು ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಧಾರ್ಮಿಕ ಕೇಂದ್ರಗಳನ್ನು ಹತ್ತಿರದಿಂದ ತಲುಪುವುದಕ್ಕೆ ಸಾಧ್ಯವಿದೆ. ಈ ರಸ್ತೆಯ ಹಿಂದೆ ಮತ್ತು ಮುಂದೆ ಉತ್ತಮ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ರಸ್ತೆ ಪೂರ್ತಿ ಅಭಿವೃದ್ಧಿಯಾಗಲೇಬೇಕಾಗಿದೆ.
ಅನುದಾನ ಬಂದಿದೆಯೇ?
ಪಕ್ಷ ಬೇಧವಿಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಈ ರಸ್ತೆಗೆ ಅನುದಾನ ಬಂದಿದೆ. ಜಿ.ಪಂ. ರಸ್ತೆಗೆ ಅನುದಾನ ಹೆಚ್ಚಿರುವುದಿಲ್ಲ. ಅರ್ಧಂಬರ್ಧ ಅನುದಾನ ಸಿಕ್ಕಿರುವುದರಿಂದ ಅಲ್ಲಲ್ಲಿ ಅಭಿವೃದ್ಧಿಯಾಗಿದೆ. ನೂರಿನ್ನೂರು ಮೀಟರ್ ದೂರ ಕಾಂಕ್ರೀಟ್ ರಸ್ತೆಯೂ ನಿರ್ಮಾಣವಾಗಿದೆ. ಈ ರಸ್ತೆ ಸುಸಜ್ಜಿತವಾಗಿ, ಸರ್ವಋತು ರಸ್ತೆಯನ್ನಾಗಿಸಬೇಕೆಂದು ಇಲ್ಲಿನ ಜನತೆ ಆಗ್ರಹಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಈ ರಸ್ತೆಗೆ ಸುಮಾರು 58 ಲಕ್ಷ ರೂ. ಅನುದಾನ ಬಂದಿದೆ. ಆದರೆ ಅದು ಸಾಲದೆ, ರಸ್ತೆ ಪೂರ್ತಿಯಾಗಬೇಕಾದರೆ ಸುಮಾರು 1 ಕೋಟಿ ರೂ. ಬೃಹತ್ ಯೋಜನೆ ಅತೀ ಅಗತ್ಯ.
ಇನ್ನಷ್ಟು ಅನುದಾನಕ್ಕೆ ಪ್ರಯತ್ನ
ಈ ರಸ್ತೆಗೆ ಪ್ರಥಮವಾಗಿ 5 ಲಕ್ಷ ರೂ. ಅನುದಾನ ಬಂದಿತ್ತು. ಬಳಿಕ ಶೋಭಾ ಕರಂದ್ಲಾಜೆ ಅವರು ಗ್ರಾಮೀಣಾಭಿವೃದ್ಧಿ
ಸಚಿವರಾಗಿದ್ದಾಗ 20 ಲಕ್ಷ ರೂ. ಅನುದಾನ, ಸಂಸದ ನಳಿನ್ ಅವರ 5 ಲಕ್ಷ ರೂ. ಅನುದಾನ, ಮಲ್ಲಿಕಾಪ್ರಸಾದ್ ಶಾಸಕತ್ವದ ಅವಧಿಯಲ್ಲಿ 10 ಲಕ್ಷ ರೂ. ಮತ್ತು ಶಕುಂತಳಾ ಟಿ. ಶೆಟ್ಟಿ ಅವರ ಮೂಲಕ ಪ.ಪಂ./ಪ.ಜಾ. ರಸ್ತೆ ಕಾಂಕ್ರೀಟ್ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಮೂಲಕ 17 ಲಕ್ಷ ರೂ. ಅನುದಾನ ಬಂದಿದೆ. ಇನ್ನಷ್ಟು ಅನುದಾನಕ್ಕೆ ಪ್ರಯತ್ನವಾಗುತ್ತಿದೆ. ಆ ರಸ್ತೆ ಅಭಿವೃದ್ಧಿಯಾಗಬೇಕೆಂಬ ಬೇಡಿಕೆಯೂ ಇದೆ.
– ಮಹಾಬಲೇಶ್ವರ ಭಟ್ ಆಲಂಗಾರು
ಗ್ರಾ.ಪಂ. ಸದಸ್ಯರು
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.