ಗ್ರಾಮಸ್ಥರ ಒತ್ತಾಸೆಯಿಂದ ಕಣಿಯೂರು-ಪದ್ಮುಂಜ ರಸ್ತೆ ನಿರ್ಮಾಣ
Team Udayavani, Mar 2, 2018, 1:06 PM IST
ಬೆಳ್ತಂಗಡಿ: ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಬಳ್ಳ ಎಂಬ ಮಾತಿನಂತೆ ಗ್ರಾಮದ ಜನರು ಸೇರಿಕೊಂಡು ಸಂಪರ್ಕ ರಸ್ತೆ ನಿರ್ಮಾಣ ಮಾಡುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. ಕಣಿಯೂರು ಗ್ರಾಮದ ಜನತೆ ಸ್ವಯಂ ಪ್ರೇರಿತರಾಗಿ ಖಾಸಗಿ ಜಾಗ ಖರೀದಿಸಿ ಸಂಪರ್ಕ ರಸ್ತೆ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.
ಒಂದೇ ಊರು ಎರಡು ರಾಜಧಾನಿ ಎಂಬಂತಿದೆ ಕಣಿಯೂರು ಹಾಗೂ ಪದ್ಮುಂಜದ ಸ್ಥಿತಿ. ಎರಡೂ ಊರುಗಳಲ್ಲಿ ಸೌಲಭ್ಯವಿದ್ದರೂ ಪಡೆಯಲು ಅಡ್ಡಿಯಾಗಿದ್ದು ಸಂಪರ್ಕ ರಸ್ತೆ. ಶಾಲೆಗಳು, ಗ್ರಾಮ ಓರಣಿಕರ ಕಚೇರಿ, ಅಂಚೆ ಇಲಾಖೆ, ಆಯುರ್ವೇದ ಆಸ್ಪತ್ರೆ, ದೇವಸ್ಥಾನ, ಮಸೀದಿ ಕಣಿಯೂರು – ಪಿಲಿಗೂಡಿನಲ್ಲಿ ಇದೆ.
ಪದ್ಮುಂಜದಲ್ಲಿ ಪ.ಪೂ. ಶಿಕ್ಷಣ ಸಂಸ್ಥೆಗಳು, ಶಾಲೆ, ಗ್ರಾ.ಪಂ. ಕಚೇರಿ, ಬ್ಯಾಂಕ್‌ಗಳು, ಪ್ರಾ. ಆರೋಗ್ಯ ಕೇಂದ್ರ, ಹಿಂದುಳಿದ ಮತ್ತು ಅಲ್ಪಸಂಖ್ಯಾಕರ ವಿದ್ಯಾರ್ಥಿನಿ ನಿಲಯಗಳಿವೆ. ಜನರು ಬೆಟ್ಟ, ಗುಡ್ಡ ಬಯಲುಗಳನ್ನು ಅಲೆದು ನಿರ್ಜನ ಪ್ರದೇಶದ ಮೂಲಕ ಪದ್ಮುಂಜಕ್ಕೆ ತೆರಳಬೇಕಿತ್ತು, ಜತೆಗೆ ಪದ್ಮುಂಜದಿಂದ ಮುಖ್ಯ ರಸ್ತೆ ತಲುಪಲು ಕಣಿಯೂರು ಮೂಲಕ ಪಿಲಿಗೂಡು ತಲುಪಬೇಕಿತ್ತು.
ಸೌಲಭ್ಯಕ್ಕೆ ಸುತ್ತಾಟ, ಪಡಿತರಕ್ಕೆ ಒದ್ದಾಟ
ಕಣಿಯೂರಿನಿಂದ ಪ್ರತಿ ತಿಂಗಳು ಪದ್ಮುಂಜದಲ್ಲಿ ಪಡಿತರ ಪಡೆಯಲು ಆಟೋ ಅಥವಾ ಬಸ್‌ಗಳಲ್ಲಿ ಪಿಲಿಗೂಡು, ಕುಪ್ಪೆಟ್ಟಿ ಮುಖೇನ 13 ಕಿ.ಮೀ.ಗಳಷ್ಟು ಸುತ್ತಾಡಿ ತೆರಳಬೇಕಿತ್ತು. ಸಾಕಷ್ಟು ಶ್ರಮ, ಸಮಯವೂ ಬೇಕಾಗಿತ್ತು. ರಸ್ತೆ ನಿರ್ಮಾಣವಾದ ಮೇಲೆ ಕೇರಿಕಟ್ಟೆ ಮೂಲಕ ಕೇವಲ 5 ಕಿ.ಮೀ.ಗಳಲ್ಲಿ ಪದ್ಮುಂಜ ತಲುಪಬಹುದು. ಸುಮಾರು 8 ಕಿ.ಮೀ. ದೂರ ಕಡಿಮೆಯಾಗಲಿದೆ.
3 ವರ್ಷಗಳಲ್ಲೇ ಸಾಕಾರ
ಬಂಡಸಾಲೆ, ಪಿಲಿಕುಡೇಲು, ತಾರಿದಡಿ ಎಂಬ ಮೂರು ಕಾಲುದಾರಿಗಳ ಮೂಲಕ ಕಣಿಯೂರು -ಪದ್ಮುಂಜ ಜನತೆ ಸಂಪರ್ಕ ಸಾಧಿಸುತ್ತಿದ್ದರು. ಸುಮಾರು 60 ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಹಲವರು ಶ್ರಮಿಸಿದ್ದರೂ ಅಂತಿಮವಾಗಿ ಕನಸು ನನಸಾಗಿದೆ. ಚುನಾವಣೆಗೂ ಮುನ್ನ ಉದ್ಘಾಟನೆ ನಡೆಸಲು ಕಾಮಗಾರಿ ಭರದಿಂದ ಸಾಗಿದೆ.
ಸರಕಾರದ ಸಾಥ್
ರಸ್ತೆ ನಿರ್ಮಾಣಕ್ಕೆ ಸರಕಾರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಣಿಯೂರಿನಿಂದ ನೆಕ್ಕಿಲುವರೆಗಿನ 2.5 ಕಿ.ಮೀ.ಗೆ 1.99 ಕೋ.ರೂ. ಅನುದಾನ ಬಿಡುಗಡೆ ಮಾಡಿದ್ದು ಡಾಮರು ಕಾಮಗಾರಿ ಆಗಬೇಕಿದೆ. ನೆಕ್ಕಿಲಿನಿಂದ ಪದ್ಮುಂಜ ವರೆಗಿನ 2 ಕಿ.ಮೀ. ರಸ್ತೆ ಡಾಮರು ಕಾಮಗಾರಿಯೂ ಬಾಕಿ ಇದೆ. ಅನುದಾನ ಬಿಡುಗಡೆಗೆ ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಹಾಗೂ ಗ್ರಾ.ಪಂ. ಸದಸ್ಯ ಯಶೋಧರ ಶೆಟ್ಟಿ ಶಿಫಾರಸು ಮಾಡಿದ್ದರು. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ರಸ್ತೆ ನಿರ್ಮಿಸಿದ್ದು, ಸೌಲಭ್ಯವಿಲ್ಲವೆಂದು ಕೈಕಟ್ಟಿ ಕೂತು ಜನಪ್ರತಿನಿಧಿಗಳನ್ನು ದೂರುವ ಮಂದಿಗೆ ಮಾದರಿಯಾಗಿದ್ದಾರೆ.
ಎಲ್ಲರಿಗೂ ಅನುಕೂಲ
ಶೇ. 80ರಷ್ಟು ಕೆಲಸಗಳಿಗೆ ಕಾಲುದಾರಿಯನ್ನು ಅವಲಂಬಿ ಸಿದ್ದೆವು. ರಸ್ತೆ ನಿರ್ಮಾಣದಿಂದ ತುಂಬಾ ಅನುಕೂಲವಾಗಿದ್ದು, ವಿದ್ಯಾರ್ಥಿಗಳಿಗೂ ಶಾಲೆ, ಕಾಲೇಜು ಗಳಿಗೆ ತೆರಳಲು ಸಹಾಯಕವಾಗಿದೆ ಎಂದು ಸ್ಥಳೀಯರಾದ ಚಂದಪ್ಪ ಗೌಡ ಅಲೆಕ್ಕಿ ಅವರು ತಿಳಿಸಿದ್ದಾರೆ.
ಪಕ್ಷಾತೀತ ಸಂಘಟನೆ
300ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ಪಕ್ಷಾತೀತವಾಗಿ 2014 ನವೆಂಬರ್‌ನಲ್ಲಿ ಸಮಾಲೋಚನ ಸಭೆ ನಡೆಸಿದ್ದು, ಉದ್ಯಮಿ ಶಿವಶಂಕರ್ ನಾಯಕ್, ಮುಗೆರೋಡಿ ಪುರಂದರ ಶೆಟ್ಟಿ, ಯಶೋಧರ ಶೆಟ್ಟಿ, ರಾಮಕೃಷ್ಣ ನಾಯ್ಕ, ಸುಮಾರು 100 ಮಂದಿ ಸದಸ್ಯರು ಹಾಗೂ ಗ್ರಾಮಸ್ಥರ ಮುಂದಾಳತ್ವದಲ್ಲಿ ಕಣಿಯೂರು – ಪದ್ಮುಂಜ ಸಂಪರ್ಕ ರಸ್ತೆ ರಚನ ಸಮಿತಿ ರಚಿಸಿ ಯೋಜನೆ ಕಾರ್ಯರೂಪಕ್ಕೆ ತಂದಿದ್ದಾರೆ.
ಖಾಸಗಿ ಜಮೀನಿಗೆ ಹಣ
ರಸ್ತೆ ನಿರ್ಮಾಣಕ್ಕೆ ಮುಖ್ಯವಾಗಿ ವಿವಿಧೆಡೆ ಜಾಗ ಗುರುತಿಸಿದ್ದರೂ ಖಾಸಗಿ ಜಮೀನು ಅಡ್ಡಿಯಾಗಿತ್ತು. ಅಂತಿಮವಾಗಿ ಜಯಸೇನ ಜಾಜಿಬೆಟ್ಟು ಹಾಗೂ ಪುತ್ತು ನಾಯ್ಕ ಅವರ ಅಡಿಕೆ ತೋಟದ ನಡುವೆ ಜಾಗ ನೀಡಲು ಒಪ್ಪಿದ್ದರಿಂದ ಸುಮಾರು 15.50 ಲಕ್ಷ ರೂ. ನೀಡಿ ಗ್ರಾಮಸ್ಥರು ಜಮೀನು ಖರೀದಿಸಿದ್ದಾರೆ. ಈ ವೇಳೆ ಕೆಲವರು 1 ಲಕ್ಷ ರೂ.ವರೆಗೂ ಧನ ಸಹಾಯ ಮಾಡಿರುವುದು ವಿಶೇಷ.
ಸಾರ್ವಜನಿಕರೇ ಜಾಗ ಖರೀದಿಸಿ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿರುವುದು ರಾಜ್ಯಕ್ಕೇ ಮಾದರಿಯಾಗಿದೆ. ಸುಮಾರು 16 ಲಕ್ಷ ರೂ.ಗಳನ್ನು ಗ್ರಾಮಸ್ಥರೇ ನೀಡಿದ್ದಾರೆ. ಜತೆಗೆ ಸ್ಥಳೀಯರ ಬಹುವರ್ಷಗಳ ಕನಸು ಈಡೇರಿದಂತಾಗಿದೆ.
-ಶಿವಶಂಕರ್ ನಾಯಕ್
ಗೌರವಾಧ್ಯಕ್ಷರು, ಸಂಪರ್ಕ ರಸ್ತೆ ರಚನ ಸಮಿತಿ
ಹರ್ಷಿತ್ ಪಿಂಡಿವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.