ಬೈಕಂಪಾಡಿ ಎಪಿಎಂಸಿಯಲ್ಲಿ ಆಧುನಿಕ-ಸ್ಮಾರ್ಟ್ ಸಗಟು ಮಾರುಕಟ್ಟೆ ನಿರ್ಮಾಣ
Team Udayavani, Jul 9, 2021, 5:20 AM IST
ಮಹಾನಗರ: ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿಗೆ ಅತ್ಯಾಧುನಿಕ ಸ್ಮಾರ್ಟ್, ಸಗಟು ಮಾರುಕಟ್ಟೆಯೊಂದು ಬೈಕಂಪಾಡಿ ಎ.ಪಿ.ಎಂ.ಸಿ. ಯಾರ್ಡ್‌ನಲ್ಲಿ ನಿರ್ಮಾಣವಾಗಲಿದೆ.
ಇದು ತರಕಾರಿ-ಹಣ್ಣು ಹಂಪಲುಗಳ ಮತ್ತು ಸಾಂಬಾರು ಪದಾರ್ಥಗಳ ಸಗಟು ಮಾರು ಕಟ್ಟೆಯಾಗಿದ್ದು, ಬೈಕಂಪಾಡಿಯ ಎ.ಪಿ.ಎಂ.ಸಿ. ಯಾರ್ಡ್‌ನ 3.75 ಎಕರೆ ಜಾಗದಲ್ಲಿ 12 ಕೋ.ರೂ. ವೆಚ್ಚದಲ್ಲಿ ಮುಂದಿನ 6 ತಿಂಗಳುಗಳಲ್ಲಿ ತಲೆ ಎತ್ತಲಿದೆ. ಈ ಅತ್ಯಾಧುನಿಕ ಮಾರುಕಟ್ಟೆ ಯೋಜನೆಗೆ ಈಗಾಗಲೇ ಸರಕಾರದ ಅನುಮೋದನೆ ಲಭಿಸಿದ್ದು, ಇದೇ ಜುಲೈ 14 ರಂದು ಇದರ ಭೂಮಿ ಪೂಜೆ ನಡೆಸಲು ಎ.ಪಿ.ಎಂ.ಸಿ. ವತಿಯಿಂದ ಸಿದ್ಧತೆ ನಡೆದಿದೆ.
ನೂತನ ಸಗಟು ಮಾರ್ಕೆಟ್ ನಿರ್ಮಾಣದ ಬಗ್ಗೆ ಪ್ರಸ್ತಾವವನ್ನು 2 ತಿಂಗಳ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಸರಕಾರಕ್ಕೆ ಸಲ್ಲಿಸಿತ್ತು. ಇದೀಗ ಈ ಪ್ರಸ್ತಾವನೆಗೆ ಸರಕಾರದ ಅನುಮತಿ ಲಭಿಸಿದೆ ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಇಲಾಖೆಯ ಎಂಜಿನಿಯರ್‌ಗಳ ಜತೆಗೆ ಸ್ಥಳೀಯವಾಗಿ ಮಂಗಳೂರಿನ ಎಂಜಿನಿಯರ್ ಕುಮಾರ ಚಂದ್ರ ಅವರನ್ನು ತಾಂತ್ರಿಕ ಸಲಹೆ ಮತ್ತು ವಿನ್ಯಾಸಕ್ಕಾಗಿ ನೇಮಕ ಮಾಡಲಾಗಿದ್ದು, ಅವರ ನೇತೃತ್ವದ ತಂಡ ಬೆಳಗಾವಿ ಮತ್ತಿತರ ವಿವಿಧ ಎ.ಪಿ.ಎಂ.ಸಿ. ಮಾರುಕಟ್ಟೆಗಳ ಅಧ್ಯಯನ ನಡೆಸಿ ಬೈಕಂಪಾಡಿಯ ಈ ಉದ್ದೇಶಿತ ಮಾರುಕಟ್ಟೆಯ ವಿನ್ಯಾಸವನ್ನು ತಯಾರಿಸಿದೆ.
ಬೈಕಂಪಾಡಿ ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ 81 ಎಕರೆ ಜಾಗ ಇದ್ದು, ಇದರಲ್ಲಿ ಒಂದು ಬದಿಯಲ್ಲಿ ನಿವೇಶನಗಳು ಹಾಗೂ ಇನ್ನೊಂದು ಕಡೆ ಸುಮಾರು 300 ಗೋದಾಮುಗಳಿವೆ. 2020 ಎಪ್ರಿಲ್‌ನಲ್ಲಿ ಜಿಲ್ಲಾಡಳಿತವು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನ್ನು ಕೊರೊನಾ ಸೋಂಕು ಹರಡುವ ಭೀತಿಯಿಂದ ಹಾಗೂ ಹೊಸ ಮಾರ್ಕೆಟ್ ಕಟ್ಟಡವನ್ನು ಕಟ್ಟಿಸುವ ಹಿನ್ನೆಲೆಯಲ್ಲಿ ಮುಚ್ಚಿ ಅಲ್ಲಿದ್ದ ಸಗಟು ವ್ಯಾಪಾರಸ್ಥರನ್ನು ಬೈಕಂಪಾಡಿ ಎ.ಪಿ.ಎಂ.ಸಿ. ಯಾರ್ಡ್ ಗೆ ಸ್ಥಳಾಂತರಿಸಿತ್ತು. ಆದರೆ ಬೈಕಂಪಾಡಿ ಯಾರ್ಡ್ ನಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ವ್ಯಾಪಾರಸ್ಥರಿಗೆ ಸಮಸ್ಯೆಯಾಗಿತ್ತು. ಹಾಗಾಗಿ ಹಲವು ಬಾರಿ ವ್ಯಾಪಾರಸ್ಥರು ಅಲ್ಲಿಂದ ಬೇರೆ ಕಡೆಗೆ ವ್ಯಾಪಾರವನ್ನು ಸ್ಥಳಾಂತರಕ್ಕೆ ಯತ್ನಿಸಿದ್ದರು. ಕ್ರಮೇಣ ಎಪಿಎಂಸಿಯು ಗೋದಾಮುಗಳನ್ನು ನಿಯಮಾನುಸಾರ ಹಿರಿತನದ ಆಧಾರದಲ್ಲಿ ಹಂಚಿಕೆ ಮಾಡಿದ್ದು, ಪ್ರಸ್ತುತ 216 ಮಂದಿ ಸಗಟು ವ್ಯಾಪಾರಿಗಳು ವ್ಯವಹಾರ ನಡೆಸುತ್ತಿದ್ದಾರೆ.
ಇಲ್ಲಿ ವ್ಯವಹಾರಕ್ಕೆ ಮೂಲ ಸೌಲಭ್ಯಗಳು ಇಲ್ಲ ಎಂಬುದಾಗಿ ಸಗಟು ವ್ಯಾಪಾರಿಗಳು ಪದೇ ಪದೇ ದೂರು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ ಕುಮಾರ್ ಕಟೀಲು ಮತ್ತು ಶಾಸಕರು ಜಿಲ್ಲಾಧಿಕಾರಿಗಳನ್ನು ಸೇರಿಸಿಕೊಂಡು ಸಭೆ ನಡೆಸಿ ಸಗಟು ವ್ಯಾಪಾರಿಗಳಿಗೆ ಸುಸಜ್ಜಿತ ಮಾರ್ಕೆಟ್‌ನ್ನು ನಿರ್ಮಿಸಿ ಕೊಡಬೇಕೆಂದು ಅಭಿಪ್ರಾಯಪಟ್ಟಿದ್ದರು.
ಇದೇ ವೇಳೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಂಗಳೂರಿಗೆ ಭೇಟಿ ಸಂದರ್ಭದಲ್ಲಿ ಬೈಕಂಪಾಡಿ ಎಪಿಎಂಸಿಗೂ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸಗಟು ವ್ಯಾಪಾರಿ ಗಳಿಗಾಗಿ ಎಪಿಎಂಸಿ ಯಾರ್ಡ್‌ನಲ್ಲಿ ಮಾರ್ಕೆಟ್ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿ ದ್ದರು. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಮಾರ್ಕೆಟ್ ನಿರ್ಮಾಣದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಉಪ ಸಮಿತಿ ರಚನೆ :
ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆ, ವಿಮಾನ ನಿಲ್ದಾಣ, ಬಂದರು, ರೈಲು ನಿಲ್ದಾಣ ಸಹಿತ ಎಲ್ಲ ಸಂಪರ್ಕ ವ್ಯವಸ್ಥೆಗಳೂ ಇರುವ ತಾಣ ಮಂಗಳೂರು. ಹಾಗಾಗಿ ಇಲ್ಲಿನ ಎ.ಪಿ.ಎಂ.ಸಿ.ಯನ್ನು ದಕ್ಷಿಣ ಭಾರತಕ್ಕೇ ಮಾದರಿಯಾಗಿ ಅಭಿವೃದ್ಧಿಪಡಿಸಲು ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಶಾಸಕರಾದ ವೇದ ವ್ಯಾಸ ಕಾಮತ್, ಭರತ್ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕೃಷ್ಣ ರಾಜ್ ಹೆಗ್ಡೆ, ನಿವೃತ್ತ ಅಧಿಕಾರಿ ಚಂದ್ರಮೋಹನ್, ಪ್ರವೀಣ್ ಕುಮಾರ್ ಅವರಿರುವ ಈ ಉಪ ಸಮಿತಿಯು ಎ.ಪಿ.ಎಂ.ಸಿ. ಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವರದಿ ತಯಾರಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್‌ಮೆಂಟ್ (ಐಐಪಿಎಂ)ಗೆ ವಹಿಸಿ ಕೊಟ್ಟಿದೆ. ಐಐಪಿಎಂ ತನ್ನ ವರದಿ ತಯಾರಿಯ ಅಂತಿಮ ಹಂತದಲ್ಲಿದ್ದು, ಶೀಘ್ರ ಸಲ್ಲಿಸುವ ನಿರೀಕ್ಷೆ ಇದೆ.
ಹೊಸ ಮಾರ್ಕೆಟ್‌ನಲ್ಲಿ ಏನೇನಿದೆ? :
- ಈ ಅತ್ಯಾಧುನಿಕ ಮಾರ್ಕೆಟ್ ವರ್ತಕರಿಗೆ ವ್ಯವಹಾರ ನಡೆಸಲು ಬೇಕಾಗಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ.
- ನೆಲ ಮಹಡಿಯಲ್ಲಿ ತರಕಾರಿ, ಹಣ್ಣುಗಳನ್ನು ಅನ್‌ಲೋಡ್ ಮತ್ತು ಲೋಡ್ ಮಾಡಲು ಸೂಕ್ತ ವ್ಯವಸ್ಥೆ ಹಾಗೂ ಮೇಲ್ಗಡೆ ಕಚೇರಿ ಸೌಲಭ್ಯ.
- ಎ ಮತ್ತು ಬಿ ಎಂಬ 2 ಬ್ಲಾಕ್‌ಗಳನ್ನು ಹೊಂದಿದ್ದು, ಒಟ್ಟು ಸುಮಾರು 100 ಮಳಿಗೆಗಳಿರುತ್ತವೆ
- ಹಣ್ಣು ಮತ್ತು ತರಕಾರಿಗಳು ಕೆಡದಂತೆ ಸಂರಕ್ಷಿಸಿ ಇಡಲು ಕೋಲ್ಡ್ ಸ್ಟೋರೇಜ್
- ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಗಾಳಿ ಮತ್ತು ಬೆಳಕಿಗೆ ಸೂಕ್ತ ಅವಕಾಶ
- ರೂಫ್ ಟಾಪ್‌ನಲ್ಲಿ ಸೌರ ವಿದ್ಯುತ್ ಪ್ಯಾನೆಲ್
- ವಾಹನಗಳ ಸಂಚಾರಕ್ಕೆ 80 ಅಡಿ ಅಗಲದ ರಸ್ತೆ
- 110 ವಾಹನಗಳಿಗೆ ಪಾರ್ಕಿಂಗ್ ಸವಲತ್ತು
- ತ್ಯಾಜ್ಯ ರಹಿತ ವಾತಾವರಣ: ತ್ಯಾಜ್ಯಗಳ ತ್ವರಿತ ನಿರ್ವಹಣೆ/ವಿಲೇವಾರಿ ವ್ಯವಸ್ಥೆ
- ಮಳೆ ನೀರು ಕೊಯ್ಲು ಸೌಕರ್ಯ
ಎ.ಪಿ.ಎಂ.ಸಿ.ಗಳಿಗೆ ಸರಕಾರದಿಂದ ಯಾವುದೇ ಅನುದಾನ ಲಭಿಸುವುದಿಲ್ಲ. ಎ.ಪಿ.ಎಮ.ಸಿ.ಗಳೇ ಶುಲ್ಕ ಸಂಗ್ರಹಿಸಿ ಸರಕಾರಕ್ಕೆ ಒದಗಿಸುತ್ತವೆ. ನಿರ್ವಹಣೆ, ನಿಯಂತ್ರಣ, ಅಭಿವೃದ್ಧಿ ಸಹಿತ ಎಲ್ಲ ಚಟುವಟಿಕೆಗಳನ್ನು ಎ.ಪಿ.ಎಂ.ಸಿ. ಸ್ವಯಂ ಹಣಕಾಸಿನಿಂದ ನಡೆಸಬೇಕಾಗಿದೆ. ಪ್ರಸ್ತುತ ಈ ಹೊಸ ಮಾರ್ಕೆಟ್ ಕಟ್ಟಡವನ್ನು ಎಪಿಎಂಸಿ ಯ ಸ್ವಂತ ನಿಧಿಯನ್ನು ಬಳಸಿ ನಿರ್ಮಾಣ ಮಾಡಲಾಗುವುದು. -ಕೃಷ್ಣ ರಾಜ ಹೆಗ್ಡೆ,ಮಂಗಳೂರು ಎ.ಪಿ.ಎಂ.ಸಿ. ಅಧ್ಯಕ್ಷ
-ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ
MUST WATCH
ಹೊಸ ಸೇರ್ಪಡೆ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.