ಕರಾವಳಿಯಲ್ಲಿ ಮುಂದುವರಿದ ಬಿರುಸಿನ ಮಳೆ, ಹಾನಿ
Team Udayavani, Jul 26, 2023, 12:48 AM IST
ಮಂಗಳೂರು/ ಉಡುಪಿ/ ಕಾಸರಗೋಡು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಾದ್ಯಂತ ಮಂಗಳವಾರವೂ ಬಿರುಸಿನ ಮಳೆಯಾಗಿದ್ದು, ಕೆಲವೆಡೆ ಹಾನಿಯಾಗಿದೆ. ಮುಂಜಾಗ್ರತಾ ದೃಷ್ಟಿಯಿಂದ ಜು. 26ರಂದು ಕೂಡ ದ.ಕ., ಉಡುಪಿಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಳೆಯ ಜತೆಗೆ ಗಾಳಿಯ ಆರ್ಭಟವೂ ಇತ್ತು. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ, ಬಂದಾರು, ಕಳಿಯ, ನಾಳ, ನೆರಿಯ, ರೆಖ್ಯ ಪ್ರದೇಶಗಳಲ್ಲಿ ಮರ ಬಿದ್ದು ಮನೆಗಳಿಗೆ ಹಾನಿಯಾಗಿದೆ. ಮಂಗಳೂರಿನ ಪಡೀಲಿನ ಬೋರುಗುಡ್ಡೆ ಬಳಿ ಮನೆಯೊಂದರ ಆವರಣ ಗೋಡೆ ಕುಸಿದಿದೆ.
ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದೆ. ವೀರನಗರ ಬಳಿ ಆವರಣ ಗೋಡೆ ಕುಸಿದಿದೆ. ಬಲ್ಲಾಳ್‌ಬಾಗ್ ರಾಜಮಹಲ್ ಅಪಾರ್ಟ್‌ಮೆಂಟ್ ಬಳಿ ಮರ ಬಿದ್ದಿದೆ. ಉಳ್ಳಾಲದ ನೇತ್ರಾವತಿ ನದೀ ತೀರ ಜಲಾವೃತಗೊಂಡಿದೆ. ಕಡಲ್ಕೊರೆತ ಮುಂದುವರಿದಿದೆ. ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸಹಿತ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸಂಚಾರ ಕಷ್ಟವಾಯಿತು.
ಬಂಟ್ವಾಳ, ಬಿ.ಸಿ.ರೋಡು, ವಿಟ್ಲ, ಕನ್ಯಾನ, ಮಂಜೇಶ್ವರ, ಬೆಳ್ತಂಗಡಿ, ಚಾರ್ಮಾಡಿ, ವೇಣೂರು, ಧರ್ಮಸ್ಥಳ, ಉಜಿರೆ, ಉಪ್ಪಿನಂಗಡಿ, ಇಳಂತಿಲ, ಕರಾಯ, ಕಲ್ಲೇರಿ, ಮಡಂತ್ಯಾರು, ಸುಳ್ಯ, ಐವರ್ನಾಡು, ಸುಬ್ರಹ್ಮಣ್ಯ, ಐನೆಕಿದು, ಕಡಬ, ಜಾಲೂÕರು, ಹರಿಹರ ಪಳ್ಳತ್ತಡ್ಕ, ಪುತ್ತೂರು, ಶಿಬಾಜೆ, ಮೂಡುಬಿದಿರೆ, ಸುರತ್ಕಲ್ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದೆ.
19 ಮನೆ, 177 ವಿದ್ಯುತ್ ಕಂಬಗಳಿಗೆ ಹಾನಿ
ದ.ಕ. ಜಿಲ್ಲೆಯಲ್ಲಿ 16 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 3 ಮನೆಗಳಿಗೆ ತೀವ್ರ ಹಾನಿಯಾಗಿದೆ. 177 ವಿದ್ಯುತ್ ಕಂಬ, 4 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. 7.85 ಕಿ.ಮೀ. ವಿದ್ಯುತ್ ಲೈನ್‌ಗೆ ಹಾನಿ ಉಂಟಾಗಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸನ್ನದ್ಧ
65 ಮಂದಿಯ ಎಸ್‌ಡಿಆರ್‌ಎಫ್ ಸಿಬಂದಿ ಇದ್ದು, 11 ಮಂದಿ ಸುಬ್ರಹ್ಮಣ್ಯದಲ್ಲಿ ಮತ್ತು 54 ಮಂದಿ ಮಂಗಳೂರಿನಲ್ಲಿ ನಿಗಾ ವಹಿಸುತ್ತಿದ್ದಾರೆ. 25 ಮಂದಿಯ ಎನ್‌ಡಿಆರ್‌ಎಫ್ ತಂಡ ಪುತ್ತೂರಿನಲ್ಲಿದೆ. 26 ಬೋಟ್‌ಗಳು ಸನ್ನದ್ಧವಾಗಿವೆ.
ಜಿಲ್ಲಾಡಳಿತ ಸೂಚನೆ
ಪ್ರವಾಸಿಗರು, ಸಾರ್ವಜನಿಕರು ನದಿ, ಸಮುದ್ರ ತೀರಕ್ಕೆ ತೆರಳದಂತೆ, ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಜಿಲ್ಲಾಡಳಿತದಿಂದ ಸೂಚಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಜಾಗ್ರತೆ ವಹಿಸಬೇಕು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆ ç ಮುಗಿಲನ್ ಅವರು ತಿಳಿಸಿದ್ದಾರೆ.
ಇಂದು ರೆಡ್-ಆರೆಂಜ್ ಅಲರ್ಟ್
ಕರಾವಳಿ ಭಾಗದಲ್ಲಿ ಜು. 26ರಂದು ಬೆಳಗ್ಗೆ 8 ಗಂಟೆಯವರೆಗೆ “ರೆಡ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ 204.5 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಜು.26ರಂದು ಬೆಳಗ್ಗೆ 8 ಗಂಟೆಯಿಂದ ಜು.27ವರೆಗೆ “ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದ್ದು, ಬಳಿಕ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಡುಪಿಯಲ್ಲಿ ಧಾರಾಕಾರ ಮಳೆ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ, ಮಂಗಳ ವಾರ ದಿನವಿಡೀ ನಿರಂತರ ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಕೋಟ, ಬ್ರಹ್ಮಾವರ, ಕಾಪು, ಹೆಬ್ರಿ, ಕಾರ್ಕಳ, ಮಾಳ, ಬೆಳ್ಮಣ್, ಪೆರ್ಡೂರು, ಹಿರಿಯಡಕ, ಸಿದ್ದಾಪುರ ಭಾಗದಲ್ಲಿ ದಿನವಿಡೀ ಮಳೆಯಾಗಿದೆ.
ಹಲವೆಡೆ ಗಾಳಿ ಮಳೆಗೆ ಮನೆಗಳಿಗೆ ಹಾನಿ ಸಂಭವಿಸಿದೆ. ಮರಗಳು ನೆಲಕ್ಕುರುಳಿ ವಿದ್ಯುತ್ ತಂತಿ, ಕಂಬಗಳಿಗೆ ಹಾನಿ ಸಂಭವಿಸಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
16 ಕೋಳಿ ಸಾವು
ಉದ್ಯಾವರ ಗ್ರಾಮದ ಹರಿಣಾಕ್ಷಿ ಅವರ ಮನೆಯ ಕೋಳಿಗೂಡಿಗೆ ನೀರು ನುಗ್ಗಿ 16 ಕೋಳಿಗಳು ಸಾವನ್ನಪ್ಪಿವೆ. ಬೆಳ್ವೆ, ಹಳ್ನಾಡು ಭಾಗದಲ್ಲಿ ಜಾನುವಾರು ಕೊಟ್ಟಿಗೆಗೆ ಹಾನಿ ಸಂಭವಿಸಿದೆ.
ಉಡುಪಿ 11, ಬೈಂದೂರು 6, ಬ್ರಹ್ಮಾವರ 3, ಕುಂದಾಪುರ 11, ಕಾರ್ಕಳ 2, ಹೆಬ್ರಿ 2, ಕಾಪು 1 ಮನೆಗಳಿಗೆ ಹಾನಿ ಸಂಭವಿಸಿದೆ. ಹೆಬ್ರಿ ಅಗಲಬಾಡಿಯಲ್ಲಿ ಅಡಿಕೆ ತೋಟಕ್ಕೆ ಹಾನಿ ಸಂಭವಿಸಿದೆ.
ಭಾರೀ ಮಳೆ: ಮನೆ, ಜಮೀನು ಹಾನಿ
ಉಪ್ಪುಂದ, ಜು. 25: ಮರವಂತೆ, ಉಪ್ಪುಂದ, ನಾವುಂದ, ನಾಗೂರು, ಹೇರೂರು, ಕಂಬದಕೋಣೆ ಭಾಗದಲ್ಲಿ ಮಂಗಳವಾರವೂ ಭಾರೀ ಗಾಳಿ-ಮಳೆ ಮುಂದುವರಿದಿದ್ದು ಕೃಷಿ ಜಮೀನು, ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆರ್ಗಾಲು ಗ್ರಾಮದ ಹೊಸಕೋಟೆ ಬಾಬು ಪೂಜಾರಿ ಅವರ ಮನೆ ಕುಸಿದು 3 ಲಕ್ಷ ರೂ. ನಷ್ಟ ಸಂಭವಿಸಿದೆ. ಕಂಬದಕೋಣೆಯಲ್ಲಿ ಎಡಮಾವಿನ ಹೊಳೆ ತುಂಬಿ ಹರಿದ ಪರಿಣಾಮ ಸನಿಹದ ಗದ್ದೆ ಹಾಗೂ ಕೃಷಿ ತೋಟಗಳಿಗೆ ನೀರು ನುಗ್ಗಿದೆ.
ಕಡಲ ಅಬ್ಬರ
ತ್ರಾಸಿ-ಮರವಂತೆ ಬೀಚ್‌ನಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು, ಹೆದ್ದೆರೆಗಳು ತಡೆಗೋಡೆಯ ಕಲ್ಲುಗಳಿಗೆ ಅಪ್ಪಳಿಸಿ ಹೆದ್ದಾರಿಯತ್ತ ಚಿಮ್ಮುತ್ತಿವೆ. ಬೀಚ್ ಪರಿಸರದಲ್ಲಿ ಗಾಳಿಯ ಅಬ್ಬರವೂ ಹೆಚ್ಚಾಗಿದ್ದು, ಹೆದ್ದಾರಿಯಲ್ಲಿ ಸಾಗುವ ದ್ವಿಚಕ್ರವಾಹನ ಸವಾರರು ಆತಂಕದಿಂದ ಮುಂದುವರಿಯುವಂತಾಗಿದೆ.
ನಾವುಂದ ಹಾಗೂ ಮರವಂತೆಯ ನದಿ ತೀರ ಪ್ರದೇಶಗಳು ಜಲಾ ಜಲಾವೃತ ವಾಗಿವೆ. ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಸೌಪರ್ಣಿಕಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಬಡಾಕೆರೆಯ ಮನೆಗಳ ಅಂಗಳದ ವರೆಗೂ ನೀರು ನುಗ್ಗಿದ್ದು, ತೋಟಗಳು ಸಂಪೂರ್ಣ ಮುಳುಗಡೆಯಾಗಿವೆ. ಗದ್ದೆ ಬಯಲುಗಳು ಹೊಳೆಯಂತಾಗಿವೆ. ನಾಡ, ಪಡುಕೋಣೆ, ತೆಂಗಿನಗುಂಡಿ, ತಪ್ಪು ಬಯಲುಗಳು ಸಂಪೂರ್ಣ ಜಲಾವೃತಗೊಂಡಿವೆ.
ದೋಣಿಯೇ ಆಧಾರ!
ಕೆಲವು ಮನೆಗಳು ಸಂಪರ್ಕವನ್ನೇ ಕಳೆದುಕೊಂಡು ಮನೆಮಂದಿ ಅಗತ್ಯ ವಸ್ತುಗಳಿಗಾಗಿ ದೋಣಿಯನ್ನು ಆಶ್ರಯಿಸುವಂತಾಗಿದೆ. ರಾತ್ರಿಯ ಸಮಯದಲ್ಲಿ ದಿಢೀರ್ ಆಗಿ ನೀರಿನ ಮಟ್ಟ ಏರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆಯಾಗಿ ಸ್ಥಳೀಯ ಯುವಕರ ತಂಡ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿದೆ. ಚಿಗುರೊಡೆದ ಭತ್ತದ ಕೃಷಿ ಹಾನಿಯಾಗುವ ಸಾಧ್ಯತೆ ಇದೆ.
ಕಾಸರಗೋಡಿನಲ್ಲಿ ಕಟ್ಟೆಚ್ಚರ
ಕಾಸರಗೋಡು: ಜುಲೈ 28ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಡಲ್ಕೊರೆತದಿಂದ ತೃಕ್ಕನ್ನಾಡ್ ಸಮುದ್ರ ಕಿನಾರೆಯಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಕೋಟಿಕುಳಂ ಕುರುಅಂಬಾ ಭಗವತೀ ಕ್ಷೇತ್ರದಲ್ಲಿ 11 ವರ್ಷಗಳ ಹಿಂದೆ ನಿರ್ಮಿಸಿದ ಕಾಂಕ್ರೀಟ್ ಕಟ್ಟಡ ಕುಸಿದಿದೆ.
ತೃಕ್ಕನ್ನಾಡ್ ಸಮುದ್ರ ಕಿನಾರೆಯಲ್ಲಿ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಕಾಸರ ಗೋಡಿನ ಚೇರಂಗೈ, ಉಪ್ಪಳ ಮತ್ತು ಮಂಜೇಶ್ವರದಲ್ಲಿ ಕಡಲ್ಕೊರೆತ ಭೀತಿ ಎದುರಾಗಿದೆ. ಭಾರೀ ಬಿರುಗಾಳಿ ಬೀಸುತ್ತಿರುವುದರಿಂದ ಯಾರೂ ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆ
ತೃಕ್ಕನ್ನಾಡಿನ ತ್ರಯಂಬಕೇಶ್ವರ ದೇವಸ್ಥಾನದ ಎದುರು ಕಡಲ್ಕೊರೆತ ತೀವ್ರಗೊಳ್ಳುತ್ತಿದ್ದರೂ ತಡೆಗಟ್ಟಲು ಸರಕಾರ ಸಮರ್ಪಕ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಬೆಸ್ತರು ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬೆಸ್ತರ ನಡುವೆ ಹೊಕೈ ನಡೆಯಿತು.
ಆಗುಂಬೆ ಘಾಟಿಯಲ್ಲಿ ತಡೆಗೋಡೆ ಕುಸಿತ
ಹೆಬ್ರಿ: ಕರಾವಳಿ-ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ತಡೆಗೋಡೆಗಳಲ್ಲಿ ಕುಸಿತ ಕಂಡು ಬರುತ್ತಿದ್ದು ಘಾಟಿಯಲ್ಲಿ ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 6ನೇ ಸುತ್ತು ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 8ನೇ ಸುತ್ತಿನ ತಡೆಗೋಡೆ ಕುಸಿದಿದೆ. ವಾಹನ
ಗಳು ರಸ್ತೆಯ ಬದಿಯಲ್ಲಿ ಚಲಿಸಿದರೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.
ಕಳೆದ ಬಾರಿ 4ನೇ ಸುತ್ತಿನಲ್ಲಿ ಘಾಟಿ ಕುಸಿದು ಸಂಚಾರ ಬಂದ್ ಆಗಿತ್ತು. ಮಳೆಗಾಲದ ಮೊದಲೇ ಅಪಾಯಕಾರಿ ಮರಗಳನ್ನು ತೆರವು ಗೊಳಿಸದಿರುವುದು ಹಾಗೂ ಮೊದಲೇ ಕುಸಿದಿದ್ದ ತೆಗೋಡೆಗಳನ್ನು ದುರಸ್ತಿ ಮಾಡದಿರುವುದು ಘಾಟಿ ಕುಸಿಯಲು ಕಾರಣ. ಮುಖ್ಯವಾಗಿ ಶಿವಮೊಗ್ಗ, ಚಿಕ್ಕಮಗಳೂರಿನ ರೋಗಿಗಳು ಮಣಿಪಾಲ ಆಸ್ಪತ್ರೆಗೆ ಬರುತ್ತಿರುವುದರಿಂದ ಘಾಟಿ ಬಂದ್ ಆದರೆ ಸಮಸ್ಯೆಯಾಗಲಿದೆ.
ಜಿಲ್ಲಾಡಳಿತಗಳು ಮರೆತವೇ ?
ಪ್ರತೀ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಉಡುಪಿ ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಜಿಲ್ಲಾಡಳಿತಗಳು ಘನವಾಹನಗಳ ಸಂಚಾರಕ್ಕೆ ನಿಷೇಧ ಹೇರುತ್ತಿದ್ದವು. ಆದರೆ ಈ ಬಾರಿ ಘನ ವಾಹನಗಳು, ಜಲ್ಲಿ, ಕಲ್ಲು ತುಂಬಿದ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಘನ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರುವುದರ ಜತೆಗೆ ಕುಸಿದಿರುವ ಸ್ಥಳದಲ್ಲಿ ಭದ್ರತೆಯನ್ನು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಪಾಯಕಾರಿ ಮರಗಳು
ಘಾಟಿಯ ಇಕ್ಕೆಲೆಗಳಲ್ಲಿ ಅಪಾಯಕಾರಿ ಮರಗಳಿದ್ದು ಧರೆಗುರುಳುವ ಭೀತಿ ಇದೆ. ಕೆಲವು ಕಡೆ ಈಗಾಗಲೇ ಬಿದ್ದಿರುವ ಮರಗಳನ್ನು ತೆರವುಗೊಳಿಸಿಲ್ಲ. ರಸ್ತೆಗೆ ಪೊದೆಗಳು ರಸ್ತೆಗೆ ತಾಗಿ ಕೊಂಡಿರುವಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತಗಳು ಸಂಭವಿಸುತ್ತಿವೆ. ಭಾರೀ ಮಳೆಯ ನಡುವೆ ಮಂಜು ಆವರಿಸಿ ರಸ್ತೆ ಕಾಣದಾಗುತ್ತದೆ. ಆಗ ವಾಹನ ಚಾಲನೆ ಕಷ್ಟ. ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕು ಎಂದು ಘಾಟಿಯಲ್ಲಿ ಸಂಚರಿಸುವ ವಿ.ಜಿ. ಗುರುಪ್ರಸಾದ್ ಹೆಗ್ಡೆ ಹೇಳಿದ್ದಾರೆ.
ಆಗುಂಬೆ ಘಾಟಿಯ ಅರ್ಧಭಾಗ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಜಿಲ್ಲಾಧಿಕಾರಿ ಜತೆ ಮಾತನಾಡಿ ಈ ಬಗ್ಗೆ ಪರಿಶೀಲನೆ ನಡೆಸಿ ಘನವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು.
– ಡಾ| ಕೆ. ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.