ಇನ್ನು ಪತ್ತೆಯಾದರೆ ಭಾರೀ ದಂಡ?
ಮುಂದುವರಿದ ಅನರ್ಹ ಬಿಪಿಎಲ್ ಕಾರ್ಡ್‌ದಾರರ ಬೇಟೆ
Team Udayavani, Feb 29, 2020, 7:15 AM IST
ಮಂಗಳೂರು: ಅನುಕೂಲಸ್ಥರಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಎಪಿಎಲ್‌ಗೆ
ಬದಲಾಯಿಸಿಕೊಳ್ಳಲು ಸರಕಾರ ಗಡುವು ವಿಧಿಸುತ್ತಲೇ ಇದ್ದರೂ ಬಹುತೇಕ ಕುಟುಂಬಗಳು ಇನ್ನೂ ಬಿಪಿಎಲ್ ಫಲಾನುಭವಿಗಳಾಗಿಯೇ ಮುಂದುವರಿಯುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಇಲಾಖೆಯು ಅನರ್ಹರು ಇಲ್ಲಿವರೆಗೆ ಪಡಿತರ ವ್ಯವಸ್ಥೆಯಡಿ ಪಡೆದಿರುವ ಆಹಾರ ಧಾನ್ಯಗಳ ಮೌಲ್ಯ ಆಧರಿಸಿ ಭಾರೀ ಮೊತ್ತದ ದಂಡ ವಿಧಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಐದು ತಿಂಗಳಲ್ಲಿ ಸುಮಾರು 43 ಸಾವಿರ ಕುಟುಂಬಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಿಕೊಂಡಿವೆ, ಸುಮಾರು 63 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಆರಂಭಿಕ ಹಂತದಲ್ಲಿ ದಂಡ ವಿಧಿಸಲಾಗುತ್ತಿತ್ತಾದರೂ ಬಳಿಕ ಸಾರ್ವಜನಿಕರ ದೂರಿನ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಅನುಕೂಲಸ್ಥರು ಎಪಿಎಲ್‌ಗೆ ವರ್ಗಾಯಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ದಂಡ ಪ್ರಯೋಗವನ್ನು ಆರಂಭಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ತೆರಬೇಕಾದೀತು ಭಾರೀ ದಂಡ!
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಲ್ಲಿ ಈ ಬಗ್ಗೆ ಆಹಾರ ಸಚಿವರು ಈಗಾಗಲೇ ಮಾತುಕತೆ ನಡೆಸಿದ್ದು, ಗಡುವು ದಿನಾಂಕವನ್ನು ನಿಗದಿಗೊಳಿಸುವಂತೆ ಸೂಚಿಸಿದ್ದಾರೆ. ಗಡುವಿನೊಳಗೆ ಅನರ್ಹರು ಎಪಿಎಲ್‌ಗೆ ಪರಿವರ್ತನೆ ಮಾಡಿಕೊಳ್ಳದಿದ್ದಲ್ಲಿ ಅವರು ಪಡಿತರ ಖರೀದಿ ಆರಂಭಿಸಿದ್ದ ದಿನಾಂಕದಿಂದ ಇದುವರೆಗೆ ಪಡೆದ ಆಹಾರ ಸಾಮಗ್ರಿಗಳ ಹಣವನ್ನು ಪಾವತಿಸಬೇಕಾಗುತ್ತದೆ. ಇಲ್ಲವಾದಲ್ಲಿ ಪಡಿತರ ಚೀಟಿಯೇ ರದ್ದಾಗಲಿದೆ.
30 ಜಿಲ್ಲೆಗಳಲ್ಲಿ ಚರ್ಚೆ
ಎಪಿಎಲ್ ಚೀಟಿ ಹೊಂದಿರುವ ಅನರ್ಹರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ 30 ಜಿಲ್ಲೆಗಳಿಗೂ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಸಾರ್ವಜನಿಕರ ದೂರುಗಳನ್ನು ಆಲಿಸಿ ಪರಿಶೀಲಿಸಲಾಗುವುದು. ಬಳಿಕ ಮಾಧ್ಯಮಗಳ ಮುಖಾಂತರ ಗಡುವು ಪ್ರಕಟಿಸಿ ಈ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ. ಗೋಪಾಲಯ್ಯ “ಉದಯವಾಣಿ’ಗೆ ತಿಳಿಸಿದ್ದಾರೆ.
ಅನುಕೂಲಸ್ಥ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅವರಾಗಿಯೇ ಎಪಿಎಲ್‌ಗೆ ವರ್ಗಾಯಿಸಿಕೊಳ್ಳಬೇಕು. ಮುಂದೆ ಗಡುವು ವಿಧಿಸುವ ಬಗ್ಗೆ ಆಯುಕ್ತರೊಂದಿಗೆ ಮಾತುಕತೆ ನಡೆಸಲಾಗಿದೆ. ಅದರೊಳಗೆ ಬದಲಾಯಿಸಿಕೊಳ್ಳದೆ ಇದ್ದಲ್ಲಿ ಮತ್ತು ತಪಾಸಣೆ ವೇಳೆ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದು ಗೊತ್ತಾದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.
-ಕೆ. ಗೋಪಾಲಯ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.