ಅಭಿವೃದ್ಧಿಯಲ್ಲಿ ಹಿಂದಿದ್ದರೂ ಮತದಾನದಲ್ಲಿ ಮುಂದು !
ಚುನಾವಣೆ ಣ ಬಂಜಾರಿನಲ್ಲಿ ಶೇ. 95.28 ಮತದಾನ
Team Udayavani, Apr 21, 2019, 6:00 AM IST
ಬಂಜಾರಿನ ಸಮುದಾಯ ಭವನ ಮತಗಟ್ಟೆ.
ಬೆಳ್ತಂಗಡಿ: ಮೂಲ ಸೌಕರ್ಯಗಳಿಂದ ವಂಚಿತವಾಗಿ ದ.ಕ. ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶವಾಗಿ ಗುರುತಿಸಲ್ಪಟ್ಟಿರುವ ಬೆಳ್ತಂಗಡಿ ತಾ|ನ ಬಂಜಾರು ಪ್ರದೇಶವು ದೇಶದ ಪ್ರಜಾ ಪ್ರಭುತ್ವ ಹಬ್ಬದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದೆ. ಮೂಲ ಸೌಕರ್ಯದಲ್ಲಿ ಇದು ಹಿಂದೆ ಬಿದ್ದರೂ ಚುನಾವಣೆಯಲ್ಲಿ ಇಲ್ಲಿ ಅತಿ ಹೆಚ್ಚಿನ ಮತದಾನವಾಗಿದೆ.
ಎ. 18ರಂದು ನಡೆದ ಲೋಕಸಭಾ ಚುನಾವಣೆ ಮತದಾನದಲ್ಲಿ ಬಂಜಾರು ಮತಗಟ್ಟೆಯಲ್ಲಿ ಕೇವಲ 5 ಮಂದಿ ಮಾತ್ರ ಮತ ಚಲಾಯಿಸಿಲ್ಲ ! ಹೀಗಾಗಿ ಇಲ್ಲಿನ ಮತದಾನ ಪ್ರಮಾಣ ಶೇ. 95.28. ನೆರಿಯ ಗ್ರಾ.ಪಂ. ವ್ಯಾಪ್ತಿಯ ಬಂಜಾರು ಪ್ರದೇಶದ ಮತದಾರರಿಗೆ ಅಲ್ಲಿನ ಸಮುದಾಯ ಭವನದಲ್ಲಿ ಮತಗಟ್ಟೆಯ (ಮತಗಟ್ಟೆ ಸಂಖ್ಯೆ 86) ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿ 52 ಪುರುಷರು ಹಾಗೂ 54 ಮಹಿಳೆಯರು ಸಹಿತ ಒಟ್ಟು 106 ಮಂದಿ ಮತದಾರರಿದ್ದಾರೆ. ಇವರಲ್ಲಿ ಒಟ್ಟು 101 ಮಂದಿ ಮತ ಚಲಾಯಿಸಿ ದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾದ ಮತಗಟ್ಟೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ಮೂಲಕ ಇಲ್ಲಿನ ಮತದಾರರು ಮಾದರಿಯಾಗಿದ್ದಾರೆ.
ತಮ್ಮೂರಿನ ಸಣ್ಣಪುಟ್ಟ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರದ ಬೆದರಿಕೆ ಹಾಕುವವರು ಇವರ ಅಭಿಮಾನವನ್ನು ಗಮನಿಸಲೇ ಬೇಕು. ಬಂಜಾರಿನ ಅಭಿವೃದ್ಧಿಯನ್ನು ಗಮನಿಸಿದರೆ ಇವರು ಮತದಾನದಲ್ಲಿ ಪಾಲ್ಗೊಳ್ಳುವುದೇ ವಿಶೇಷ ಎನಿಸ ಬಹುದು. ಅಂದರೆ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಹೀಗೆ ಎಲ್ಲ ಮೂಲ ಸೌಕರ್ಯಗಳಿಂದಲೂ ಈ ಭಾಗದ ಮಂದಿ ವಂಚಿತರಾಗಿದ್ದಾರೆ.
ಸರಕಾರದ ಇಬ್ಬಗೆಯ ನೀತಿಯಿಂ ದಾಗಿ ತಮ್ಮ ಭೂಮಿ ಕಳೆದುಕೊಳ್ಳುವ ಭೀತಿಯೂ ಇವರಿಗಿದೆ. ಆದರೆ ಇವೆಲ್ಲ ವನ್ನೂ ಮೀರಿ ನಿಂತ ಇಲ್ಲಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೆಳ್ತಂಗಡಿ ಕ್ಷೇತ್ರದ 241 ಮತಗಟ್ಟೆಗಳಲ್ಲಿ ಒಟ್ಟು ಶೇ. 80.92 ಮತದಾನವಾಗಿದ್ದು, 3 ಮತಗಟ್ಟೆಗಳು ಶೇ. 90 ಗಡಿ ದಾಟಿದೆ. ಬಂಜಾರು ಸಹಿತ ಬಾರ್ಯ ಪೆರಿಯೊಟ್ಟು ಮತಗಟ್ಟೆ ಸಂಖ್ಯೆ 225 (ಒಟ್ಟು ಶೇ. 91.60), ಇಂದಬೆಟ್ಟು ದೇವನಾರಿ ಮತಗಟ್ಟೆ ಸಂಖ್ಯೆ 31 ( ಶೇ. 90.11)ರಲ್ಲಿ ಮತದಾನ ಪ್ರಮಾಣ ಶೇ. 90 ದಾಟಿದೆ.
ಲೆಕ್ಕಾಚಾರದಲ್ಲಿ ಶೇ. 99.06
ಬಂಜಾರು ಮತಗಟ್ಟೆಯಲ್ಲಿ ಒಟ್ಟು 106 ಮಂದಿ ಮತದಾರರಿದ್ದು, ಒಟ್ಟು 101 ಮಂದಿ ಮತ ಚಲಾಯಿಸಿದ್ದಾರೆ. ಇವರ ಜತೆಗೆ 4 ಮಂದಿ ಚುನಾವಣ ಸಿಬಂದಿಯೂ ಅದೇ ಮತಗಟ್ಟೆಯಲ್ಲಿ ಮತ ಹಾಕಿದ್ದು, ಹೀಗಾಗಿ ಅಲ್ಲಿ ಒಟ್ಟು 105 ಮಂದಿ ಮತಹಾಕಿದ್ದು, ಇದರಿಂದ ಇಲ್ಲಿನ ಮತದಾನ ಶೇ. 99.06ಕ್ಕೇರಿದೆ ಎಂದು ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಚ್.ಆರ್. ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.