ನೇರಂಕಿ ಮಲೆಯಿಂದ ನಿರಂತರ ಮರಗಳ್ಳತನ
Team Udayavani, Dec 20, 2018, 10:21 AM IST
ಉಪ್ಪಿನಂಗಡಿ: ವಲಯ ಅರಣ್ಯ ವ್ಯಾಪ್ತಿಯ ಬಜತ್ತೂರು ಗ್ರಾಮದ ನೇರೆಂಕಿಮಲೆ ರಕ್ಷಿತಾರಣ್ಯದ ಸಾಗುವಾನಿ ನೆಡುತೋಪಿನಿಂದ ಭಾರೀ ಪ್ರಮಾಣದಲ್ಲಿ ಸಾಗುವಾನಿ ಮರ ಲೂಟಿ ಆಗುತ್ತಿರುವ ಕುರುಹುಗಳು ಕಾಣಿಸಿವೆ.
ನೇರೇಂಕಿಮಲೆ ರಕ್ಷಿತಾರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸಾಗುವಾನಿ ಮರಗಳು ಇದ್ದು, ಇವುಗಳು ನದಿ ತಟದ ತನಕ ವಿಸ್ತರಿಸಿವೆ. ಇದೇ ಮರಗಳ್ಳರ ಪಾಲಿಗೆ ವರದಾನವಾಗಿದೆ. ಈ ಭಾಗದ ಕೆಲವರು ಇಲ್ಲಿನ ಮರಗಳನ್ನು ಕಡಿದು ಸಾಗಾಟ ಮಾಡುವುದನ್ನೇ ಕಸುಬು ಆಗಿ ಮಾಡಿಕೊಂಡಿದ್ದಾರೆ. ರಕ್ಷಿತಾರಣ್ಯ ಪ್ರದೇಶ ಹೊಂದಿರುವ ಬಜತ್ತೂರು ಗ್ರಾಮದ ಬೀಬಿಮಜಲು ರಸ್ತೆಯಲ್ಲಿ ಹಾದು ಹೋಗುವ ನೇತ್ರಾವತಿ ನದಿ ತಟದಲ್ಲಿ, ಕಾಡಿನ ಅಂಚಿನಲ್ಲಿ ಎಲ್ಲೆಡೆಯಲ್ಲಿ ಮರಗಳನ್ನು ಕಡಿದಿರುವ ಕುರುಹುಗಳು ಪತ್ತೆ ಆಗಿದ್ದು, ರಾತ್ರಿ ಬೆಳಗಾಗುವಷ್ಟರಲ್ಲಿ ಕಡಿದ ಮರಗಳು ಕಾಡಿನ ದಾರಿಯಲ್ಲೇ ಸಾಗಾಟ ಆಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತೆಪ್ಪದಲ್ಲಿ ಸಾಗಾಟ
ಕಾಡಿನ ಅಂಚಿನಲ್ಲಿ ಮನೆ ಹೊಂದಿರುವ ಒಬ್ಬರು ಮರ ಕಳ್ಳತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪವಿದ್ದು, ರಾತ್ರಿಯೇ ಮರಗಳನ್ನು ಕಾಡಿನ ದಾರಿಯಲ್ಲಿ ಮನೆ ಸಮೀಪ ತಂದು ಹಾಕುತ್ತಾರೆ. ಇದಲ್ಲದೆ ನದಿ ನೀರಿನಲ್ಲಿ ತೆಪ್ಪದ ಮೂಲಕ ಸಾಗಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ನೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಕೆಲವು ಮರಗಳು ಹೆಮ್ಮರಗಳಾಗಿ ಬೆಳೆದಿವೆ. ಇಂತಹ ನೂರಾರು ಮರಗಳು ಈ ಮರಗಳ್ಳರ ಪಾಲಿಗೆ ಅಕ್ರಮ ಸಂಪತ್ತಾಗಿವೆ. ಬೀಳುವ ಹಂತದಲ್ಲಿರುವ ಮರಗಳನ್ನು ಹುಡುಕಿ, ತಮಗೆ ಬೇಕಾದ ಭಾಗಗಳನ್ನು ಬೇರ್ಪಡಿಸಿ, ಬೇರು ಹಾಗೂ ಟೊಂಗೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಗಸ್ತು ತಿರುಗುವ ಅರಣ್ಯ ಸಿಬಂದಿಗೆ ಯಾವುದೋ ಹಳೆಯ ಮರ ಬಿದ್ದು ಹೋಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲೂ ಯತ್ನಿಸುತ್ತಿದ್ದಾರೆ ಎಂಬುವುದು ಗ್ರಾಮಸ್ಥರ ಆರೋಪ.
ಸಾಗಾಟ ಪತ್ತೆ
ಕಾಡಿನಿಂದ ಮರಗಳು ಸಾಗಾಟ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ನೀಡಿರುವ ಮಾಹಿತಿ ಆಧಾರದಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ನಾಲ್ಕು ದಿನಗಳ ಹಿಂದೆ ಬಾರಿಕೆ ಎಂಬಲ್ಲಿ ಜೀಪ್‌ನಲ್ಲಿ ಸಾಗುವಾನಿ ಮರದ ದಿಮ್ಮಿಗಳು ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿತ್ತು. ಕಾಡಿನ ಅಂಚಿನಲ್ಲಿರುವ ಆರೋಪಿಯೊಬ್ಬರ ಮನೆ ಮೇಲೂ ದಾಳಿ ಮಾಡಿ, ಇನ್ನಷ್ಟು ಮರಗಳು ಹಾಗೂ ಮರ ಕೊಯ್ಯುವ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಪ್ರಕರಣ ದಾಖಲಿಸುವಾಗ ಈ ವಿಚಾರವನ್ನು ಅಧಿಕಾರಿಗಳು ಮರೆ ಮಾಚಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಆರೋಪಿಗಳು ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಿದ್ದು, ಮರಗಳ್ಳತನ ಮುಂದುವರಿ ಯುವ ಸಾಧ್ಯತೆ ಹೆಚ್ಚುತ್ತಿದೆ. ಕಾಡಿನಲ್ಲಿ ಬೆಲೆಬಾಳುವ ಮರಗಳಿದ್ದು, ಅವುಗಳ ಆಯುಷ್ಯ ಮುಗಿಯುತ್ತಿದೆ. ಈ ಮರಗಳ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅದನ್ನು ಕಡಿದು ಸಂಗ್ರಹಿಸುವ ಕೆಲಸ ತ್ವರಿತವಾಗಿ ಆಗಬೇಕಿದೆ.
ಇದರೊಂದಿಗೆ ವನ್ಯ ಸಂಪತ್ತಿನ ರಕ್ಷಣೆಗೆ ಅರಣ್ಯ ಸಿಬಂದಿಯ ಗಸ್ತು ಹೆಚ್ಚಿಸಬೇಕು. ಕಾಡಿನ ದಾರಿಗಳಲ್ಲಿ ನಿರಂತರ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮರಗಳ್ಳತನ ತಡೆಗೆ ಸೂಕ್ತ ಕ್ರಮ
ನೇರಂಕಿ ಮಲೆ ರಕ್ಷಿತಾರಣ್ಯದಲ್ಲಿ ಕಳ್ಳಕಾಕರು, ಮರಕಳ್ಳತನಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ನಿಯಮ ಪ್ರಕಾರ ಒಣಗಿದ ಮರಗಳನ್ನು ಹಾಗೂ ಇತರ ಯಾವುದೇ ಆಯುಷ್ಯ ಮುಗಿದ ಮರಗಳನ್ನು ಕಡಿಯಲು ಇಲಾಖೆಯ ಅನುಮತಿ ಅಗತ್ಯ. ಈ ಬಗ್ಗೆ ಕಾರ್ಯಸೂಚಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
– ಸುಬ್ರಹ್ಮಣ್ಯೇಶ್ವರ ರಾವ್
ಸಹಾಯಕ ಅರಣ್ಯಾಧಿಕಾರಿ, ಪುತ್ತೂರು
ಎಂ.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.