ನಿಮ್ಮ ಮನೆ ಬಾಗಿಲಿಗೆ ಬರಲಿದೆ ಇನ್ನು ಅಡುಗೆ ಅನಿಲ
Team Udayavani, Mar 29, 2018, 10:07 AM IST
ಮಹಾನಗರ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿ ಆಯ್ತು ಅಂದರೆ, ಅದೊಂದು ದೊಡ್ಡ ತಲೆನೋವು. ಆದರೆ ಇನ್ನು ನಗರದಲ್ಲಿ ಅಂತಹ ಸಮಸ್ಯೆ ಇಲ್ಲ. ನಳ್ಳಿಯಲ್ಲಿ ನೀರು ಬರುವಂತೆ ಅಡುಗೆ ಕೋಣೆಗೆ ಅಡುಗೆ ಅನಿಲ ಬರಲಿದೆ.
ಹೊಸ ಸಿಲಿಂಡರ್ ಬುಕ್ ಮಾಡುವುದು; ಅಡುಗೆ ಅನಿಲ ವಿತರಕರು ಯಾವಾಗ ಬರುತ್ತಾರೆ ಎಂದು ಕಾದು ಕುಳಿತುಕೊಳ್ಳುವುದು. ವಿತರಕರು ಮನೆಗೆ ಬರುವಾಗ, ಹೊರಗಡೆ ಹೋಗಿದ್ದರೆ ಅಥವಾ ಬುಕ್ಕಿಂಗ್ ವೇಳೆ ಇನ್ನೇನಾದರೂ ತೊಂದರೆ ಆಗಿದ್ದರೆ, ಸಿಲಿಂಡರ್ ಬರುವುದು ಮತ್ತಷ್ಟು ವಿಳಂಬವಾಗುತ್ತದೆ. ಈ ಎಲ್ಲ ಕಿರಿಕಿರಿಯಿಂದ ಇನ್ನು ಮುಕ್ತಿ ದೊರೆಯಲಿದೆ.
ಸ್ಮಾರ್ಟ್ ಸಿಟಿಯತ್ತ ಹೆಜ್ಜೆ ಇಡುತ್ತಿರುವ ಮಂಗಳೂರಿನ ನಾಗರಿಕರಿಗೆ ಈ ವರ್ಷಾಂತ್ಯಕ್ಕೆ ಸರಕಾರದ ಕಡೆಯಿಂದ
ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಆಗಲಿದೆ. ಆ ಮೂಲಕ, ಬೆಂಗಳೂರು ಅನಂತರ ರಾಜ್ಯದಲ್ಲಿ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ‘ಗೇಲ್’ ಸಂಸ್ಥೆಯಿಂದ ಮನೆ ಬಾಗಿಲಿಗೆ ಅಡುಗೆ ಅನಿಲ ಪಡೆಯಲಿರುವ 2ನೇ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ಪಾತ್ರವಾಗಲಿದೆ.
ನಗರವಾಸಿಗಳಿಗೆ ಮನೆ ಬಾಗಿಲಿಗೇ ಅಡುಗೆ ಅನಿಲ ಸಂಪರ್ಕ ಒದಗಿಸುವ ಯೋಜನೆಯಡಿ ಕೊಚ್ಚಿಯಿಂದ ಮಂಗಳೂರಿನವರೆಗೆ ಗೇಲ್ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾರ್ಯ ಈಗಾಗಲೇ ಕೇರಳ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದೆ.
ಕೇರಳದ ಕೊಚ್ಚಿಯಿಂದ ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಸುವ ನಿಟ್ಟಿನಲ್ಲಿ ಪೈಪ್‌ಲೈನ್
ಸಾಗಿ ಬರಲಿದ್ದು, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಸುಮಾರು 16 ಹಳ್ಳಿಗಳ ವ್ಯಾಪ್ತಿಯಲ್ಲಿ 35 ಕಿ.ಮೀ.
ಉದ್ದದಲ್ಲಿ ಸಾಗಲಿದೆ. ಇದೇ ಅನಿಲವನ್ನು ಮಂಗಳೂರಿನ ಜನರಿಗೂ ನಳ್ಳಿಗಳ ಮೂಲಕ ನೀಡಲು ಈಗ ಯೋಜನೆ
ರೂಪಿಸಲಾಗುತ್ತಿದೆ.
ಮಂಗಳೂರಿನಲ್ಲಿ ಇತ್ತೀಚೆಗೆ ಮಾಹಿತಿ ನೀಡಿದ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಕೊಚ್ಚಿಯಿಂದ ಮಂಗಳೂರಿಗೆ ಅಡುಗೆ ಅನಿಲ ಸರಬರಾಜು ಪೈಪ್ ಲೈನ್ ಅಳವಡಿಕೆ 2018ರ ಅಕ್ಟೋಬರ್ ವೇಳೆಗೆ ನಡೆಯಲಿದ್ದು, ಆ ಬಳಿಕ ಮಂಗಳೂರಿನ ಮನೆ ಮನೆಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಳ್ಳಿಗಳಲ್ಲೂ ಗ್ಯಾಸ್ ದೊರೆಯಲಿದೆ ಎಂಬ ಸುಳಿವು ದೊರೆತಂತಾಗಿದೆ.
ಪ್ರತ್ಯೇಕ ಟೆಂಡರ್
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ಮೂಲಗಳು ‘ಉದಯ ವಾಣಿ’ಗೆ ತಿಳಿಸಿದ ಪ್ರಕಾರ, ಸದ್ಯ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರ ಜತೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅನಿಲ ಪೂರೈಕೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಟೆಂಡರ್ ಕೂಡ ಕರೆಯಲಾಗಿದೆ. ಇದು ಅಂತಿಮಗೊಂಡ
ಬಳಿಕ ಆಯ್ಕೆಗೊಂಡ ಕಂಪೆನಿಯವರು ಮನೆ ಮನೆಗೆ ಅನಿಲ ಪೂರೈಕೆ ಕುರಿತ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಜಾರಿಯಲ್ಲಿದೆ
ಈಗ ಬೆಂಗಳೂರಿನಲ್ಲಿ ಮನೆ ಮನೆಗೆ ಗ್ಯಾಸ್ ಕಲ್ಪಿಸಿಕೊಡುವ ಯೋಜನೆ ಚಾಲ್ತಿಯಲ್ಲಿದೆ. 2017 ಜೂನ್‌ನಲ್ಲಿ ಈ ಯೋಜನೆಗೆ ಚಾಲನೆ ಕೂಡ ನೀಡಲಾಗಿತ್ತು. ಸದ್ಯ 20,000 ದಷ್ಟು ಮನೆಗಳಿಗೆ ಅಡುಗೆ ಅನಿಲವನ್ನು ಕಲ್ಪಿಸಲಾಗಿದೆ. ಗೇಲ್ ಗ್ಯಾಸ್ ಲಿಮಿಟೆಡ್ ಮೂಲಕ 6,283 ಕೋ. ರೂ.ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಿಸಿತ್ತು.
ಒಟ್ಟು 66 ಕಿ.ಮೀ. ಉದ್ದದ ಸ್ಟೀಲ್ ಹಾಗೂ 452 ಕಿ.ಮೀ. ಉದ್ದದ ಎಂಡಿಪಿಇ ಪೈಪ್ ಗಳನ್ನು ಅಳವಡಿಸಲಾಗಿದೆ.
ಮನೆಯಲ್ಲಿ ಬಳಕೆ ಮಾಡುವ ಅನಿಲದ ಆಧಾರದ ಮೇಲೆ ಎರಡು ತಿಂಗಳಿಗೊಮ್ಮೆ ಬಿಲ್ ಬರುತ್ತದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಪಿಎನ್‌ಜಿ ಸಂಪರ್ಕಕ್ಕೆ 5,800 ರೂ. ಎಂದು ನಿಗದಿಪಡಿಸಲಾಗಿತ್ತು.
ದ.ಕ. ಜಿಲ್ಲೆಯ 5ನೇ ಪೈಪ್‌ಲೈನ್
ಮಂಗಳೂರು-ಪಾದೂರು ಮಧ್ಯೆ ಐಎಸ್‌ಪಿಆರ್‌ಎಲ್ ಪೈಪ್‌ಲೈನ್ ದ.ಕ. ಜಿಲ್ಲೆಯ 30 ಕಿ.ಮೀ.ವ್ಯಾಪ್ತಿಯಲ್ಲಿ
ಹಾದುಹೋಗಿದೆ. ಮಂಗಳೂರು-ಹಾಸನ -ಮೈಸೂರು-ಸೋಲೂರು ಮಧ್ಯೆ ಎಚ್ ಪಿಸಿಎಲ್ ಗ್ಯಾಸ್ ಪೈಪ್‌ಲೈನ್ 100 ಕಿ.ಮೀ. ವ್ಯಾಪ್ತಿಯಲ್ಲಿ ಹಾದುಹೋಗಿದೆ.
ಉಳಿದಂತೆ ಮಂಗಳೂರು -ಹಾಸನ- ಬೆಂಗಳೂರು ಮಧ್ಯೆ 100 ಕಿ.ಮೀ. ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಪೆಟ್ರೋನೆಟ್ ಪೈಪ್ ಲೈನ್ ಹಾದು ಹೋಗಿದೆ. ಇದೀಗ ಕೊಚ್ಚಿ- ಮಂಗಳೂರು ಮಧ್ಯೆ ಗ್ಯಾಸ್ ಪೈಪ್‌ಲೈನ್ ಕೂಡ 35 ಕಿ.ಮೀ. ಉದ್ದ ಜಿಲ್ಲೆಯಲ್ಲಿ ಸಾಗಲಿದೆ. ಇದು ಮಂಗಳೂರು ತಾಲೂಕಿನ ಮಳ ವೂರು, ಅದ್ಯಪಾಡಿ, ಕಂದಾವರ, ಮುಳೂರು, ಅಡ್ಡೂರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳ ಮೂಲಕ ಗ್ಯಾಸ್ ಪೈಪ್‌ಲೈನ್ ಹಾದುಹೋಗಲಿದೆ. ಇನ್ನು ಗೈಲ್ ಗ್ಯಾಸ್‌ಪೈಪ್ ಮಂಗಳೂರಿ ನಿಂದ ನಗರ ವ್ಯಾಪ್ತಿಯ ಮನೆಗಳಿಗೆ ಸಂಪರ್ಕಿಸಬೇಕಾದರೆ ನಗರದೊಳಗೆ ಮತ್ತೆ ಹೆಚ್ಚುವರಿ ಪೈಪ್‌ಲೈನ್ ಅಳವಡಿಕೆ ಮಾಡ ಬೇಕಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ 5ನೇ ಪೈಪ್‌ಲೈನ್ ಹಾದು ಹೋಗುವುದು ನಿಶ್ಚಿತ ಎಂಬಂತಾಗಿದೆ.
ಮಂಗಳೂರಿನ ಪೈಪ್‌ನಲ್ಲಿ ಅನಿಲ ಸಾಗಾಟ ಹೇಗೆ?
ಬೆಂಗಳೂರಿನಲ್ಲಿರುವಂತೆ ಗ್ಯಾಸ್ ಪೈಪ್‌ಲೈನ್‌ನ ಮುಖ್ಯ ಕೊಳವೆಯಿಂದ ಮುಖ್ಯನಗರದಲ್ಲಿ ಸಬ್ ಸ್ಟೇಷನ್ ಮಾಡಿ ಅಲ್ಲಿಂದ ಸಣ್ಣ ಪೈಪ್‌ಗ್ಳ ಮೂಲಕ ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಮಂಗಳೂರಿನ ಮೂಲಕ ಎಂಸಿಎಫ್‌ಗೆ ತೆರಳುವ ಗ್ಯಾಸ್ ಪೈಪ್‌ಲೈನ್ ಗೆ ನಗರ ವ್ಯಾಪ್ತಿ ಯೊಳಗೆ ಸಬ್‌ಸ್ಟೇಷನ್ ಮಾಡಲು ಯೋಚಿಸಲಾಗಿದೆ. ಅಗತ್ಯವಿರುವ ಮನೆಯವರು ಇಲ್ಲಿಂದ ಪೈಪ್‌ಲೈನ್ ಮೂಲಕ ಅನಿಲ ಪಡೆದುಕೊಳ್ಳಬಹುದು. ಎಲ್‌ಪಿಜಿಯಿಂದ ಪಿಎನ್‌ಜಿಗೆ ಸುಲಭದಲ್ಲಿ ಬದಲಾಗಬಹುದು. ಎಲ್‌ಪಿಜಿಗೆ ಬಳಸುವ ಸ್ಟೌ ಅನ್ನೇ ಇದಕ್ಕೂ ಬಳಸಬಹುದು. ಪಿಎನ್‌ಜಿ ವಿತರಕ ಸಂಸ್ಥೆಯವರು ಇದನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.
ನಳ್ಳಿ ಅನಿಲದಿಂದ ಲಾಭವೇನು?
ಪಿಎನ್‌ಜಿಯಲ್ಲಿ ಪರಿಸರಕ್ಕೆ ಇಂಗಾಲ ಬಿಡುಗಡೆ ಪ್ರಮಾಣ ಎಲ್ ಪಿಜಿಗಿಂತ ಶೇ.50ರಷ್ಟು ಕಡಿಮೆ. ಸೋರಿಕೆ ಆದರೂ, ಆವಿಯಾಗುವ ಗುಣವಿದೆ. ಗ್ರಾಹಕರು ಬಳಕೆ ಮಾಡುವ ಅನಿಲಕಷ್ಟೇ ಹಣ ಪಾವತಿ ಮಾಡಬೇಕಾಗುತ್ತದೆ. ಸಿಲಿಂಡರ್‌ಗೆ ಮರುಪೂರಣ ಹಾಗೂ ಬುಕಿಂಗ್ ಮಾಡುವ ತಲೆಬಿಸಿಯಿಲ್ಲ. ಸಿಲಿಂಡರ್‌ನಷ್ಟೇ ಪ್ರಮಾಣದ ಅನಿಲ ಶೇ. 20ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ. ಎಲ್‌ಪಿಜಿ ಸ್ಟೌ ಅನ್ನೇ ಇದಕ್ಕೂ ಬಳಸಬಹುದು. ಬರ್ನರ್ ಬದಲಿಸಬೇಕು. ಅನಿಲ ಸೋರಿಕೆಗೆ ಆಸ್ಪದ ಇಲ್ಲದಂತೆ ಕೊಳವೆ ಅನಿಲ ಸಂಪರ್ಕ ಮಾರ್ಗ ನಿರ್ಮಿಸಲಾಗುತ್ತದೆ. ಆಕಸ್ಮಿಕವಾಗಿ ಏನಾದರೂ ಹಾನಿಯಾದರೆ ಗ್ರಾಹಕರು ಮೀಟರ್ ಭಾಗದಲ್ಲಿರಿವ ವಾಲ್ಟ್ ಅನ್ನು ಬಂದ್ ಮಾಡಿ ವಿತರಣ ಕೇಂದ್ರವನ್ನು ಸಂಪರ್ಕಿಸಬಹುದು.
ವಾಹನಗಳಿಗೆ ಸಿಎನ್‌ಜಿ ಇಂಧನ
ನೈಸರ್ಗಿಕ ಅನಿಲ ಪೂರೈಕೆಯನ್ನು 4 ರೀತಿಯಲ್ಲಿ ವಿಂಗಡಿಸಲಾಗುತ್ತದೆ. ವಾಹನಗಳಿಗಾಗಿ ಪೂರೈಕೆ (ಸಿಎನ್‌ಜಿ), ಗೃಹ ಬಳಕೆ (ಪಿಎನ್‌ಜಿ) ವಾಣಿಜ್ಯ ಬಳಕೆ ಹಾಗೂ ಕೈಗಾರಿಕೆಗಳ ಬಳಕೆ ಎಂಬುದಾಗಿ ಬೇರ್ಪಡಿಸಿ ಗೇಲ್ ಸಂಸ್ಥೆಯು ಅನಿಲ ಪೂರೈಕೆ ಮಾಡಲಾಗುತ್ತದೆ. ವಾಹನಗಳಲ್ಲಿ ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಇಂಧನ ಬಳಕೆಗೆ ಪ್ರಸ್ತುತ ಒತ್ತು ನೀಡಲಾಗುತ್ತದೆ. ಇದಕ್ಕಾಗಿ ಸಿಎನ್‌ಜಿ ಬಂಕ್‌ಗಳನ್ನು ಸ್ಥಾಪಿಸಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಇದೇ ನೆಲೆಯಲ್ಲಿ ಅನಿಲ ಪೂರೈಕೆ ಮಾಡಲಾಗುತ್ತದೆ. ಇದೇ ಮಾದರಿಯು ಮಂಗಳೂರಿಗೂ ಪರಿಚಿತವಾಗಲಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.