ಕೊರೋನಾ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ
Team Udayavani, Mar 4, 2020, 8:54 PM IST
ಮಂಗಳೂರು: ಜಿಲ್ಲೆಯ ಕೆಲವು ಖಾಸಗೀ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ವರ ಬಂದರೂ, ಕೊರೋನಾ ಪರೀಕ್ಷೆ ನಡೆಸುವಂತೆ ಶಿಕ್ಷಕರು ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ನಿಲ್ಲಿಸಲು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋರೋನಾ ರೋಗ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಕಾಲೇಜುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು. ಪರೀಕ್ಷೆ ಹತ್ತಿರ ಇರುವುದರಿಂದ ಯಾವುದೇ ಅನಗತ್ಯ ತಪಾಸಣೆಯಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸದಂತೆ ಅವರು ತಿಳಿಸಿದರು.
ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸುವ ಮಂಗಳೂರು ವಿಮಾನನಿಲ್ದಾಣದಲ್ಲಿ ಈಗಾಗಲೇ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಸಂಶಯಾಸ್ಪದ ರೋಗಿಗಳನ್ನು ನೇರವಾಗಿ ವೆನ್‍ಲಾಕ್‍ಗೆ ಅಲ್ಲಿಂದಲೇ ಅಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೊರೋನಾ ತಪಾಸಣೆ ಹಾಗೂ ಚಿಕಿತ್ಸೆಯ ಬಗ್ಗೆ ಆಸ್ಪತ್ರೆ ಹಾಗೂ ವೈದ್ಯರು ಸಮಾನವಾದ ಚಿಕಿತ್ಸೆ ಹಾಗೂ ಪರಿಶೀಲನೆ ನಡೆಸಲು ತರಬೇತಿ ನೀಡಲು ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ನಿರ್ದೇಶಿಸಿದರು. ಅಲ್ಲದೇ, ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ವಿವಿಧ ಜ್ವರಗಳ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಗೆ ಪ್ರತೀ ನಿತ್ಯ ವರದಿ ನೀಡಬೇಕೆಂದು ಅವರು ಸೂಚಿಸಿದರು.
ಎನ್.ಎಂ.ಪಿ.ಟಿ. ಗೆ ಪ್ರವಾಸಿ ಹಡಗುಗಳಲ್ಲಿ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಲು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಎನ್.ಎಂ.ಪಿ.ಟಿ. ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಮುಖ ಕವಚ(ಮಾಸ್ಕ್)ಕ್ಕೆ ಕೊರತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇವುಗಳ ಕೊರತೆಯಾಗದಂತೆ ಗಮನಹರಿಸಲು ಅವರು ಔಷಧ ನಿಯಂತ್ರಕರಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಡಿ.ಎಫ್.ಓ. ಕರಿಕಾಲನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಿಖಂದರ್ ಪಾಶಾ, ಉಪವಿಭಾಗಾಧಿಕಾರಿ ಮದನ್ ಮೋಹನ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ವೈದ್ಯಕೀಯ ಕಾಲೇಜು ಹಾಗೂ ಐ.ಎಂ.ಎ ಪ್ರತಿನಿಧಿಗಳು, ಎನ್.ಎಂ.ಪಿ.ಟಿ. ವಿಮಾನ ನಿಲ್ದಾಣ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.